Sunday 3 June 2012

ಶ್ರೀ ಬಿ ವಿ ಕಕ್ಕಿಲ್ಲಾಯ ಇನ್ನಿಲ್ಲ


ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರೂ, ಭಾರತ ಕಮ್ಯೂನಿಸ್ಟ್ ಪಕ್ಷ (ಸಿ.ಪಿ.ಐ) ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಗಳ ಹಿರಿಯ ನಾಯಕರೂ, ರಾಜ್ಯ ಸಭೆ ಹಾಗೂ ಕರ್ನಾಟಕ ವಿಧಾನ ಸಭೆಗಳ ಮಾಜಿ ಸದಸ್ಯರೂ, ಕರ್ನಾಟಕ ಭೂಸುಧಾರಣಾ ಮಸೂದೆಯ ರೂವಾರಿಗಳೂ, ಪ್ರಶಸ್ತಿ ವಿಜೇತ ಲೇಖಕರೂ, ಚಿಂತಕರೂ ಆದ ಶ್ರೀ ಬಿ.ವಿ. ಕಕ್ಕಿಲ್ಲಾಯರು ಜೂನ್ 4ರಂದು ಬೆಳಗ್ಗೆ 2 ಗಂಟೆಗೆ ಮಂಗಳೂರಿನಲ್ಲಿ ನಿಧನರಾದರು. ಕಕ್ಕಿಲ್ಲಾಯರು ಮೇ 23ರಂದು ಬೆಳಗ್ಗೆ ಮಿದುಳಿನ ರಕ್ತಸ್ರಾವಕ್ಕೆ ತುತ್ತಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ರೈತ ಕಾರ್ಮಿಕರ ಹಕ್ಕುಗಳೇನೆಂಬುದೇ ತಿಳಿಯದಿದ್ದ 1940ರ ದಶಕದಲ್ಲಿ ದಕ ಜಿಲ್ಲೆಯ ರೈತ ಕಾರ್ಮಿಕರನ್ನು ಸಂಘಟಿಸಿ, ಎಲ್ಲಾ ದಬ್ಬಾಳಿಕೆಗಳನ್ನೂ ಎದುರಿಸಿ, ಅವರ ಮೂಲಭೂತ ಹಕ್ಕುಗಳಿಗಾಗಿ ಅನೇಕ ಹೋರಾಟಗಳನ್ನು ಸಂಘಟಿಸುವ ಮೂಲಕ ದಕ ಜಿಲ್ಲೆಯಲ್ಲೂ, ಕರ್ನಾಟಕದ ಹಲವೆಡೆಗಳ ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್   ಗಳನ್ನು ಪ್ರಬಲವಾಗಿ ಬೆಳೆಸಿದ ಶ್ರೇಯ ಕಕ್ಕಿಲ್ಲಾಯರಿಗೂ, ಅವರ ಸಂಗಾತಿಗಳಿಗೂ ಸೇರುತ್ತದೆ.

ಅದೇ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯೂ ಸೇರಿದಂತೆ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹಲವು ಹೋರಾಟಗಳಲ್ಲಿಯೂ ಅತ್ಯಂತ ಸಕ್ರಿಯವಾಗಿ ತೊಡಗಿಕೊಂಡಿದ್ದ ಕಕ್ಕಿಲ್ಲಾಯರು ಅದಕ್ಕಾಗಿ ಸೆರೆವಾಸವನ್ನೂ ಅನುಭವಿಸಿದ್ದರು.

ಸ್ವಾತಂತ್ರ್ಯಾನಂತರದ ದಿನಗಳಲ್ಲೂ ರೈತಕಾರ್ಮಿಕರ ಮೇಲೆ ಮುಂದುವರೆದಿದ್ದ ದಬ್ಬಾಳಿಕೆಗಳನ್ನೂ, ತೀವ್ರ ಶೋಷಣೆಯನ್ನೂ ಎದುರಿಸಿ ಅವರನ್ನು ಸಂಘಟಿತ ಹೋರಾಟಗಳಿಗೆ ಅಣಿನೆರೆಸುವ ಕಾರ್ಯವನ್ನು ಕಕ್ಕಿಲ್ಲಾಯರೂ, ಅವರ ಸಂಗಾತಿಗಳೂ ಮುಂದುವರೆಸಿದ್ದರು.

ಮೊತ್ತ ಮೊದಲ ರಾಜ್ಯಸಭೆಗೆ 1952-1954ರವರೆಗೆ ಮದ್ರಾಸ್ ಅಸೆಂಬ್ಲಿಯಿಂದ ಆಯ್ಕೆಗೊಂಡಿದ್ದ ಕಕ್ಕಿಲ್ಲಾಯರು ಅಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಕಕ್ಕಿಲ್ಲಾಯರು ಮಹತ್ವದ ಪಾತ್ರವನ್ನು ವಹಿಸಿದ್ದರು.
ಬಂಟ್ವಾಳ ಹಾಗೂ ವಿಟ್ಲ ಕ್ಷೇತ್ರಗಳಿಂದ 1972 ಹಾಗೂ 1978ರಲ್ಲಿ ಕರ್ನಾಟಕ ವಿಧಾನಸಭೆಗೆ ಭಾರೀ ಮತಗಳಿಂದ ಆಯ್ಕೆಯಾಗಿದ್ದ ಕಕ್ಕಿಲ್ಲಾಯರು ಅತ್ಯಂತ ಸಮರ್ಥ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಭೂಸುಧಾರಣಾ ಮಸೂದೆಯ  ರಚನೆಯಲ್ಲಿ ಅವರು ವಹಿಸಿದ್ದ ಪಾತ್ರವು ಮಹತ್ತರವಾದುದು.

ತಮ್ಮ ತೀಕ್ಷ್ಣ ಬುದ್ದಿಮತ್ತೆ, ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುವ ಭಾಷಣ ಶೈಲಿ, ಅಗಾಧವಾದ ಓದು ಮತ್ತು ಪಾಂಡಿತ್ಯ, ಸರಳತೆ, ಸಚ್ಛಾರಿತ್ರ್ಯ ಹಾಗೂ ಸಜ್ಜನಿಕೆಗಳಿಗೆ ಹೆಸರಾಗಿದ್ದ ಕಕ್ಕಿಲ್ಲಾಯರು, ಜಾತ್ಯಾತೀತವಾದ, ಕೋಮು ನಿರಪೇಕ್ಷವಾದ, ಸರ್ವರಿಗೂ ಸಮಬಾಳನ್ನು ನೀಡಬಲ್ಲ ಪ್ರಗತಿಪರ, ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು, ಕೊನೆ ತನಕ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು.
See bvkakkilaya.in | ನೋಡಿ bvkakkilaya.in

ಜೂನ್ 16, ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಕಕ್ಕಿಲ್ಲಾಯ ಸ್ಮರಣ ಸಭೆಯನ್ನು ಆಯೋಜಿಸಲಾಗಿತ್ತು. ಭಾರತ  ಕಮ್ಯೂನಿಸ್ಟ್ ಪಕ್ಷದ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕಾಂ. ಸುಧಾಕರ ರೆಡ್ಡಿ, ಚಿಂತಕ ಡಾ. ಜಿ. ರಾಮಕೃಷ್ಣ, ನಿವೃತ್ತ ನ್ಯಾಯಾಧೀಶರಾದ ಕೋ. ಚೆನ್ನಬಸಪ್ಪ, ಮಾಜಿ ಸಚಿವ ಬಿ ಎ ಮೊಹಿದ್ದೀನ್, ಸಿಪಿಎಂ ನಾಯಕರಾದ ಜಿ ಎನ್ ನಾಗರಾಜ್, ನವಕರ್ನಾಟಕದ ವ್ಯವಸ್ಥಾಪಕ ನಿರ್ದೇಶಕರಾದ ಆರ್ ಎಸ್ ರಾಜಾರಾಂ, ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರುಗಳು ಕಕ್ಕಿಲ್ಲಾಯರು ಮತ್ತವರ ಜೀವನ-ದಸಾಧನೆಗಳ ಬಗೆ ಮಾತನಾಡಿ ನುಡಿನಮನಗಳನ್ನು ಸಲ್ಲಿಸಿದರು.  ಭಾರತ  ಕಮ್ಯೂನಿಸ್ಟ್ ಪಕ್ಷದ  ರಾಜ್ಯ ಮಂಡಲಿಯ ಪ್ರಧಾನ ಕಾರ್ಯದರ್ಶಃಇಗಳಾದ ಪಿ ವಿ ಲೋಕೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ವರದಿಗಳು: ಪ್ರಜಾವಾಣಿ | The Hindu


ಬಿ ವಿ ಕಕ್ಕಿಲ್ಲಾಯರ ಸ್ಫೂರ್ತಿಯಿಂದ ಶಾಲಾ ಮಕ್ಕಳಿಗೆ ಚೀಲ | Inspired by BV Kakkilaya, school bags for kids [Deccan Herald | Times of Inida | Mangalorean.com | Mangalore Today
  • ಜೂನ್ 9 ರ ಉದಯವಾಣಿಯಲ್ಲಿ ನಾರಾಯಣ ಎ ಬರೆದ ಅಂಕಣ ಕಾಲಕಾರಣ: ಬರೆಯದ ದಿನಚರಿಯ ಕೊನೆಯ ಪುಟ ಮುಗಿಸಿದ ಬಿ.ವಿ. ಕಕ್ಕಿಲ್ಲಾಯ: ಎಲ್ಲ ತತ್ವದೆಲ್ಲೆ ಮೀರಿದ ರಾಜಕಾರಣಿ [ನೋಡಿ (ಪುಟ 6), ನೋಡಿ]
  • ತೀರದ ಕಕ್ಕುಲತೆಯ ಕಣಜ ಕಕ್ಕಿಲ್ಲಾಯ! ಹಲೀಮತ್ ಸಾದಿಯಾ, ಕನ್ನಡಪ್ರಭ, ಜೂನ್ 10, 2012 [ನೋಡಿ ಪುಟ 16 | ನೋಡಿ]
  • ಕಳಚಿದ ಕೆಂಪುನಕ್ಷತ್ರ ಬಿ.ವಿ.ಕಕ್ಕಿಲ್ಲಾಯ - ಬಾಲಕೃಷ್ಣ ಪುತ್ತಿಗೆ ಪ್ರಜಾವಾಣಿ ಜೂನ್ 10, 2012 [ನೋಡಿ]
  • ಸಮತಾ ಸಮಾಜದ ಕನಸುಗಾರವಾರ್ತಾಭಾರತಿ ಜೂನ್ 10, 2012 [ನೋಡಿ]
  • ಜನನಾಯಕನೊಬ್ಬನ ನಿರ್ಗಮನ - ಸನತ್ ಕುಮರ್ ಬೆಳಗಲಿ - ವಾರ್ತಾಭಾರತಿ ಜೂನ್ 11, 2012 [ನೋಡಿ]
  • ಅಗಲಿದ ಕಾಮ್ರೆಡ್‌ಗೆ ವಿದಾಯ-ಒಂದು ವಾಗ್ವಾದದೊಂದಿಗೆ : ಜೆ ರಾಜಶೇಖರ್ - ವಾರ್ತಾಭಾರತಿ ಮಂಗಳವಾರ - ಜೂನ್ -19-2012 [ನೋಡಿ]
ಪತ್ರಿಕಾ ವರದಿಗಳು:

Tuesday 29 May 2012

ಮೊದಲ ಪಾರ್ಲಿಮೆಂಟಿನ ಸದಸ್ಯನಾಗಿ ನನ್ನ ಅನುಭವಗಳು


(ಕೃಪೆ: ಹೊಸತು ಮಾಸ ಪತ್ರಿಕೆ, ಜೂನ್ 2012) (ಬರೆದದ್ದು: ಮೇ 18, 2012; ಇದು ಬಿ ವಿ ಕಕ್ಕಿಲ್ಲಾಯರ ಕೊನೆಯ ಲೇಖ್ಹನ)

ಭಾರತ ಕಮ್ಯೂನಿಸ್ಟ್ ಪಕ್ಷದ, ದ.ಕ. ಜಿಲ್ಲೆಯ ಓರ್ವ ಕಾರ್ಯಕರ್ತನೆಂಬ ನೆಲೆಯಲ್ಲಿ ಪಕ್ಷದ ಕೇಂದ್ರದ ನಿರ್ದೇಶನದಂತೆ ನನ್ನನ್ನು ಮದ್ರಾಸ್ ಎಸೆಂಬ್ಲಿಯಿಂದ 1952ರಲ್ಲಿ ಮೊದಲ ರಾಜ್ಯ ಸಭೆಗೆ ಆಯ್ಕೆಗೊಳಿಸಲಾಗಿತ್ತು. ಆಗ ನನ್ನ ವಯಸ್ಸು ಮೂವತ್ತ ಮೂರು ವರ್ಷಗಳು. ಪ್ರಗತಿಪರ ವಿಚಾರಧಾರೆಯನ್ನು ಹೊಂದಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ದೃಢವಾದ ನಂಬಿಕೆಯಿದ್ದ ಪಂಡಿತ್ ಜವಾಹರಲಾಲ್ ನೆಹರೂರವರು ಪ್ರಧಾನಿಯಾಗಿಯೂ, ಮಹಾನ್ ವಿದ್ವಾಂಸರಾಗಿದ್ದ ಸರ್ವೇಪಲ್ಲಿ ರಾಧಾಕೃಷ್ಣನ್ ಉಪರಾಷ್ಟ್ರಪತಿಗಳೂ, ರಾಜ್ಯಸಭೆಯ ಸಭಾಪತಿಗಳೂ ಆಗಿದ್ದ ಆ ಸಂದರ್ಭದಲ್ಲಿ ಆ ಸದನದ ಸದಸ್ಯನಾದುದು ಯುವಕನಾಗಿದ್ದ ನನ್ನಂತಹವನೊಬ್ಬನಿಗೆ ಪಕ್ಷವು ಒದಗಿಸಿದ ಸದವಕಾಶವೇ ಆಗಿತ್ತು. ದ.ಕ. ಜಿಲ್ಲೆಯ ಓರ್ವ ಕಾರ್ಯಕರ್ತನೆಂಬ ನೆಲೆಯಲ್ಲಿ ನನಗೆ ರಾಜ್ಯ ಸಭೆಯ ಸದಸ್ಯತ್ವವನ್ನು ನೀಡಲಾಗಿದ್ದುದರಿಂದ ನಾನು ರಾಜ್ಯ ಸಭೆಯಲ್ಲಿ ಓರ್ವ ಕನ್ನಡಿಗನಾಗಿ ಆ 2 ವರ್ಷಗಳ ಕಾಲಾವಧಿಯನ್ನು ಸದುಪಯೋಗ ಪಡಿಸಿಕೊಂಡಿರುವೆನೆಂಬ ತೃಪ್ತಿಯು ನನಗಿದೆ. ಆ ಎರಡು ವರ್ಷಗಳಲ್ಲಿ ರಾಜ್ಯದ ಬರಗಾಲದ ಬಗ್ಗೆ, ಆಹಾರದ ಕೊರತೆಯ ಸಮಸ್ಯೆಗಳ ಬಗ್ಗೆ, ಕೋಲಾರ ಚಿನ್ನದ ಗಣಿಗಳ ರಾಷ್ಟ್ರೀಕರಣದ ಬಗ್ಗೆ, ಹಾಸನ-ಮಂಗಳೂರು ರೈಲು ಮಾರ್ಗದ ಬಗ್ಗೆ ಹಾಗೂ ಕರ್ನಾಟಕ ಏಕೀಕರಣದ ಬಗ್ಗೆ ಒತ್ತಾಯಿಸಿ ವಿವಿಧ ಚರ್ಚೆಗಳಲ್ಲಿ ನಾನು ಭಾಗವಹಿಸಿದ್ದೆ. ರಾಜ್ಯದ ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕಾಗಿಯೂ, ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದಲೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೆ; ಬರ ಪರಿಹಾರವನ್ನು ಒತ್ತಾಯಿಸುವುದಕ್ಕಾಗಿ, ಆಹಾರ ಪೂರೈಕೆಯನ್ನು ಉತ್ತಮ ಪಡಿಸಬೇಕೆಂದು ಒತ್ತಾಯಿಸುವುದಕ್ಕಾಗಿ ರಾಜ್ಯದ ವಿವಿಧೆಡೆಗಳಲ್ಲಿ ಪಕ್ಷವು ಸಂಘಟಿಸಿದ್ದ ಚಳುವಳಿಗಳಲ್ಲೂ ನಾನು ಭಾಗವಹಿಸಿದ್ದೆ. ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಎನ್ ಕೆ ಉಪಾಧ್ಯಾಯ ಮತ್ತು ಸಂಗಡಿಗರೊಂದಿಗೆ ರಾಜ್ಯದಾದ್ಯಂತ ಪ್ರವಾಸಗೈದ ಆ ಅನುಭವವು ಮರೆಯಲಾಗದ್ದು.

ಹಿಂದಿಯ ಮತ್ತು ಆಂಗ್ಲಭಾಷೆಯ ಜ್ಞಾನವಿರದ, ಮಲೆಯಾಳಿ ಭಾಷೆಯನ್ನು ಮಾತ್ರ ಮಾತನಾಡಬಲ್ಲ ನಮ್ಮ ಪಕ್ಷದ ಸದಸ್ಯರೊಬ್ಬರು ಮದ್ರಾಸ್ ಎಸೆಂಬ್ಲಿಯಿಂದಲೇ ಚುನಾಯಿತರಾಗಿ ರಾಜ್ಯ ಸಭೆಯಲ್ಲಿದ್ದರು. ಅಧ್ಯಕ್ಷರ ಅನುಮತಿಯನ್ನು ಕೋರಿ, ತನ್ನ ವಿಷಯಗಳನ್ನು ಮಂಡಿಸುತ್ತಾ ಮಲೆಯಾಳಿ ಭಾಷೆಯಲ್ಲಿ ಅವರು ಮಾಡಿದ್ದ ಭಾಷಣವನ್ನು ನಾನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ರಾಜ್ಯ ಸಭೆಯಲ್ಲಿ ಮಂಡಿಸಿದ್ದೆನು. ಆ ಸಂದರ್ಭದಲ್ಲಿ ಡಾ.ರಾಧಾಕೃಷ್ಣನ್‘ರವರು ಸಭಾಧ್ಯಕ್ಷರಾಗಿಯೂ, ಪಂಡಿತ್ ಜವಾಹರಲಾಲ್ ನೆಹರೂರವರು ಸಭಾನಾಯಕರಾಗಿಯೂ ಸಭೆಯಲ್ಲಿ ಉಪಸ್ಥಿತರಾಗಿದ್ದರು. ನೆಹರೂರವರು ನನ್ನ ಆಂಗ್ಲ ಭಾಷಣದ ಧಾಟಿಯನ್ನೂ, ಮಂಡಿಸಿದ ಬೇಡಿಕೆಗಳ ವಿವರಣೆಗಳ ಕ್ರಮವನ್ನೂ ಕೇಳಿ ಅವರ ಭಾಷಣದಲ್ಲಿ ನನ್ನ ಕೃತ್ಯಕ್ಕೆ ಮುಕ್ತ ಕಂಠದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿ ನಮ್ಮ ಕೋರಿಕೆಗೆ ಅವರ ಒಪ್ಪಿಗೆಯನ್ನು ಸೂಚಿಸಿದ್ದರು. ಇದು ನನಗೆ ದೊರೆತ ಅಪೂರ್ವ ಸುಸಂಧರ್ಭವೆಂದು ನಾನು ಭಾವಿಸುತ್ತೇನೆ.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ನಾನು ಕಾಂಗ್ರೆಸೇತರರು ಸಂಘಟಿಸಿದ್ದ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ (ಅಕರಾನಿಪ) ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವೆನು. ಹುಬ್ಬಳ್ಳಿಯಲ್ಲಿ ಅಕರಾನಿಪ ಸದಸ್ಯರು ಹಮ್ಮಿ ಕೊಂಡಿದ್ದ ಒಂದು ಚಳುವಳಿಯನ್ನು ಅಲ್ಲಿನ ಕಾರ್ಯಕರ್ತರು ಬೃಹತ್ ಚಳುವಳಿಯಾಗಿ ನಡೆಸಿದ ಸಂದರ್ಭದಲ್ಲಿ,  ಸಮಿತಿಯ ಮುಖ್ಯ ಸಂಘಟಕರಾಗಿದ್ದ ಸಿಪಿಐ ನಾಯಕ ಎ ಜೆ ಮುಧೋಳ್ ಮತ್ತಿತರ  ಹಲವಾರು ಸದಸ್ಯರನ್ನು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ನಾನು ರಾಜ್ಯಸಭೆಯಲ್ಲಿ ಗಮನ ಸೆಳೆಯುವ ಸೂಚನೆಯ ಮೂಲಕ ವಿಷಯವನ್ನು  ಮಂಡಿಸಿ ಬಂಧಿತರಾಗಿದ್ದ ಎಲ್ಲರ ಬಿಡುಗಡೆ ಮತ್ತು ಕರ್ನಾಟಕ ಏಕೀಕರಣಕ್ಕೆ ಸಹಾನುಭೂತಿಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದೆನು. ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಭಾಗವಹಿಸುತ್ತಾ ಕೇರಳದವನಾಗಿ ಪರಿಚಯಿಸಿಕೊಳ್ಳುವ ಅಭಿಲಾಷೆಯನ್ನು ನಾನು ಎಂದೂ ಪ್ರಕಟಿಸಿರಲಿಲ್ಲ. ನನ್ನ ಪಕ್ಷವು ಸಹಾ ನನ್ನನ್ನು ಒಬ್ಬ ಕರ್ನಾಟಕದ ಕಾರ್ಯಕರ್ತನೆಂದು ಪರಿಗಣಿಸಿತ್ತಲ್ಲದೆ ಬೇರಾವುದೇ ಭಾಷೆ, ಯಾ ಪ್ರಾಂತ್ಯಕ್ಕೆ ಸೇರಿದವನೆಂದು ಪರಿಗಣಿಸಿರಲಿಲ್ಲವಾದ್ದರಿಂದ ನಾನು ಇಂದಿಗೂ ಕರ್ನಾಟಕದವನಾಗಿಯೇ ಉಳಿದಿದ್ದೇನೆ.

Monday 28 May 2012

ವಿಠಲ ಮಲೆಕುಡಿಯ ಬಿಡುಗಡೆಗೆ ಆಗ್ರಹಿಸಿ ಸಿಪಿಐ ಪ್ರತಿಭಟನೆ

ವಿಠಲ ಹಾಗೂ ಲಿಂಗಪ್ಪ ಮಲೆಕುಡಿಯರ ಬಿಡುಗಡೆಯನ್ನು ಆಗ್ರಹಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಂಸದ ಬಿ.ವಿ. ಕಕ್ಕಿಲ್ಲಾಯರ ಭಾಷಣ (ಇದು ಕಕ್ಕಿಲ್ಲಾಯರ ಕೊನೆಯ ಭಾಷಣ)

ಮೇ 18, 2012; ದಕ ಜಿಲ್ಲಾಧಿಕಾರಿಯವರ ಕಛೇರಿಯ ಮುಂದೆ ನಡೇದ ಪ್ರತಿಭಟನೆಯಲ್ಲಿ ಬಿ ವಿ ಕಕ್ಕಿಲ್ಲಾಯ, ವಿಶ್ವನಾಥ ನಾಯಕ್ ಮತ್ತಿತರರು

ಪತ್ರಿಕಾ ವರದಿಗಳು

ಪ್ರತಿಭಟನೆಗೆ ಪೂರ್ವಭಾವಿಯಾಗಿ ಭಾರತ ಕಮ್ಯೂನಿಸ್ಟ್ ಪಕ್ಷದ ಹೇಳಿಕೆ

ಬೆಳ್ತಂಗಡಿಯ ಕುತ್ಲೂರಿಗೆ ಸೇರಿದ, ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದಲ್ಲಿ ಮೊದಲ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಪ್ಪ ಮಲೆಕುಡಿಯ ಅವರನ್ನು ದೇಶದ್ರೋಹದಂತಹ ಗಂಭೀರವಾದ, ಮರಣದಂಡನೆಗೂ ಕಾರಣವಾಗಬಲ್ಲ ಆರೋಪಗಳಡಿ ಬಂಧಿಸಿ ಜಾಮೀನನ್ನು ನಿರಾಕರಿಸಿ ಜೈಲಲ್ಲಿಟ್ಟಿರುವ ಸರಕಾರದ ಕ್ರಮವನ್ನು ಉಗ್ರವಾಗಿ ಖಂಡಿಸುವುದಕ್ಕಾಗಿ ಭಾರತ ಕಮ್ಯೂನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಮಿತಿಗಳ ಆಶ್ರಯದಲ್ಲಿ, ಪಕ್ಷದ ಅತಿ ಹಿರಿಯ ನಾಯಕರಲ್ಲೊಬ್ಬರೂ, ಸ್ವಾತಂತ್ರ್ಯ ಹೋರಾಟಗಾರರೂ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಮಾಜಿ ಸದಸ್ಯರೂ ಆಗಿರುವ ಶ್ರೀ ಬಿ.ವಿ. ಕಕ್ಕಿಲ್ಲಾಯರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಇದೇ ತಾ. ಮೇ 18ರಂದು ಶುಕ್ರವಾರ ಬೆಳಗ್ಗೆ 10.30ರಿಂದ 11.30ರವರೆಗೆ ದ.ಕ. ಜಿಲ್ಲಾಧಿಕಾರಿಯವರ ಕಛೇರಿಯೆದುರು ಹಮ್ಮಿಕೊಳ್ಳಲಾಗಿದೆ.

ನಮ್ಮ ದೇಶದ ಹಲವೆಡೆ, ಅದರಲ್ಲೂ ಮುಖ್ಯವಾಗಿ ಜಾರ್ಖಂಡ್, ಛತ್ತೀಸಗಢ, ಬಿಹಾರ್, ಒರಿಸ್ಸಾ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿರುವ, ನೈಸರ್ಗಿಕ ಸಂಪತ್ತಿನ ಖನಿಜಗಳಿಂದ ತುಂಬಿರುವ ದಂಡಕಾರಣ್ಯದಂತಹ ದಟ್ಟ ಅರಣ್ಯ ಪ್ರದೇಶಗಳಲ್ಲಿ ಸಹಸ್ರಾರು ವರ್ಷಗಳಿಂದ ವಾಸಿಸುತ್ತಿರುವ ನಮ್ಮ ದೇಶದ ಆದಿವಾಸಿಗಳನ್ನೂ, ಮೂಲನಿವಾಸಿಗಳನ್ನೂ, ಬುಡಕಟ್ಟುಗಳಿಗೆ ಸೇರಿದ ಜನರನ್ನೂ ಒಕ್ಕಲೆಬ್ಬಿಸಿ, ಆ ಪ್ರದೇಶಗಳಲ್ಲಿ ಗಣಿಗಾರಿಕೆ, ಮರಗಳನ್ನು ಕಡಿದು ಸಾಗಿಸುವುದು, ಬೃಹತ್ ಉದ್ದಿಮೆಗಳ ಸ್ಥಾಪನೆ, ವಿದ್ಯುತ್ ಉತ್ಪಾದನೆ, ಪ್ರವಾಸಿ ಧಾಮಗಳ ನಿರ್ಮಾಣ ಇವೇ ಮುಂತಾದ ನಿಸರ್ಗ ವಿರೋಧಿ ಚಟುವಟಿಕೆಗಳಿಗಾಗಿ ನಮ್ಮ ದೇಶದೊಳಗಿನ ಹಾಗೂ ಇತರ ಬಹುರಾಷ್ಟ್ರೀಯ ಕಂಪೆನಿಗಳ ಸ್ವಾಧೀನಕ್ಕೆ ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳು ಒಪ್ಪಿಸುತ್ತಿರುವುದನ್ನು ಹೆಚ್ಚು ಹೆಚ್ಚಾಗಿ ಕಾಣುತ್ತಿದ್ದೇವೆ. ಇದರಿಂದಾಗಿಸಹಸ್ರಾರು ವರ್ಶಃಅಗಳಿಂದ ನಿಸರ್ಗದ ಸಂಪತ್ತನ್ನು ಕಾಯುತ್ತಿದ್ದು, ಕಡು ಬಡತನದಿಂದ ಅಲ್ಲೇ ಜೀವಿಸುತ್ತಿರುವ ನಮ್ಮ ಕೋಟಿಗಟ್ಟಲೆ ಜನರು ದಿಕ್ಕು ಪಾಲಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ. ಪೋಲೀಸರು ಹಾಗೂ ಅರೆ ಸೇನಾ ತುಕಡಿಗಳನ್ನೂ, ಸಲ್ವಾ ಜುಡುಂನಂತಹ ನ್ಯಾಯಬಾಹಿರವಾದ ಸಂಘಟನೆಗಳನ್ನೂ ಬಳಸಿಕೊಂಡು ಅಮಾಯಕ ಅರಣ್ಯವಾಸಿಗಳನ್ನು ಬೆದರಿಸಿ ಅವರ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅವರನ್ನು ಒಕ್ಕಲೆಬ್ಬಿಸುವ ದೌರ್ಜನ್ಯವನ್ನು ಸರಕಾರಗಳೇ ನಡೆಸುತ್ತಿದ್ದು, ಅಂತಹದನ್ನು ಎದುರಿಸುವ ಧೈರ್ಯ ತೋರುವ ಹಲವರನ್ನು ನಕ್ಸಲ್ ಗಳೆಂಬ ಹಣೆಪಟ್ಟಿ ಹಚ್ಚಿ ದೇಶದ್ರೋಹದ ಆರೋಪದಲ್ಲಿ ಕಾರಾಗೃಹಕ್ಕೆ ತಳ್ಳುತ್ತಿರುವುದನ್ನೂ ನಾವಿಂದು ಕಾಣುತ್ತಿದ್ದೇವೆ.

ಕುದುರೆಮುಖ ಅರಣ್ಯ ಪ್ರದೇಶದಿಂದಲೂ ಅಲ್ಲಿ ಶತಮಾನಗಳಿಂದಲೂ ವಾಸಿಸುತ್ತಿರುವ ಮಲೆಕುಡಿಯರಂತಹ ಬುಡಕಟ್ಟುಗಳವರನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ನಮ್ಮ ರಾಜ್ಯ ಸರಕಾರವು ಕೈ ಹಾಕಿರುವುದು ಸರ್ವವೇದ್ಯವಾಗಿದೆ. ಇದನ್ನು ವಿರೋಧಿಸುವವರ ಮೇಲೆ ನಕ್ಸಲ್ ನಿಗ್ರಹ ದಳದ ಹೆಸರಿನಲ್ಲಿ ಅವ್ಯಾಹತವಾಗಿ ದೌರ್ಜನ್ಯಗಳಾಗುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಪ್ಪ ಮಲೆಕುಡಿಯರನ್ನೂ ಕೂಡ ಇದೇ ಕಾರಣಕ್ಕೆ ಬಂಧಿಸಿ ಅವರ ಮೇಲೆಯೂ ದೇಶದ್ರೋಹದ ಆರೋಪವನ್ನು ಹೊರಿಸಿ ಜೈಲಲ್ಲಿರಿಸಲಾಗಿದ್ದು, ಕೇವಲ ಕ್ಷುಲ್ಲಕವಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದರೂ ಬಹಿರಂಗ ಪಡಿಸಲಾಗದಂತಹ ಭಯಂಕರವಾದ ಸಾಕ್ಷ್ಯಗಳು ಇನ್ನೂ ಇವೆ ಎಂದೆಲ್ಲ ಹೇಳುವ ಮೂಲಕ ಸಾರ್ವಜನಿಕರನ್ನು ದಿಕ್ಕು ತಪ್ಪಿಸಲಾಗುತ್ತಿದೆ.

ಇಷ್ಟೇ ಅಲ್ಲದೆ, ಪರಿಶಿಷ್ಟ ವರ್ಗದಿಂದ ಬಂದಿರುವ ವಿಠಲನಂತಹ ಪ್ರತಿಭಾವಂತ ವಿದ್ಯಾರ್ಥಿಗಳು ಪತ್ರಿಕೋದ್ಯಮದಂತಹ ಅತ್ಯಂತ ಪ್ರಮುಖವಾದ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡುವುದು ಸಾಕಷ್ಟು ವಿರಳವೇ ಆಗಿದ್ದು, ಅದನ್ನು ಕೂಡಾ ಮಟ್ಟ ಹಾಕುವ ಹುನ್ನಾರವು ಈ ಬಂಧನದ ಹಿಂದೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಒಟ್ಟಿನಲ್ಲಿ ಮಲೆಕುಡಿಯರಂತಹ ಬಡಜನರನ್ನು ಒಕ್ಕಲೆಬ್ಬಿಸಿ ಇನ್ನಷ್ಟು ನಿರ್ಗತಿಕರನ್ನಾಗಿ ಮಾಡುವುದಲ್ಲದೆ, ಅವರಲ್ಲೊಬ್ಬ ಪ್ರತಿಭಾವಂತ ವಿದ್ಯಾರ್ಥಿಯು ಉನ್ನತ ವಿದ್ಯಾಭ್ಯಾಸವನ್ನು ಮಾಡದಂತೆ ತಡೆಯುವ ಈ ಸರಕಾರಿ ಷಡ್ಯಂತ್ರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆದ್ದರಿಂದ ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಪ್ಪ ಮಲೆಕುಡಿಯರ ಮೇಲೆ ಹೊರಿಸಲಾಗಿರುವ ದೇಶದ್ರೋಹದ ಆರೋಪಗಳನ್ನು ಈ ಕೂಡಲೇ ಹಿಂಪಡೆದು, ಅವರಿಬ್ಬರನ್ನೂ ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ನಾವು ಬಲವಾಗಿ ಆಗ್ರಹಿಸುತ್ತೇವೆ. ಸರಕಾರದ ದುರ್ವರ್ತನೆಯು ವಿಠಲ ಮಲೆಕುಡಿಯರ ಶಿಕ್ಷಣಕ್ಕೆ ಕುತ್ತಾಗಿ ಪರಿಣಮಿಸಿರುವುದರಿಂದ ಅವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಂಡು, ಅವರು ಪೂರ್ವ ನಿಗದಿತ ಸಮಯದೊಳಗೇ ತಮ್ಮ ಸ್ನಾತಕೋತ್ತರ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸುವುದಕ್ಕೆ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಬೇಕೆಂದು ಒತ್ತಾಯಿಸುತ್ತೇವೆ.

ಅದೇ ರೀತಿ, ಅಭಿವೃದ್ಧಿಯ ಹೆಸರಲ್ಲಿ ಅಮಾಯಕ ಬಡಜನರ ಚೂರೊಪಾರು ಅಸ್ತಿಗಳನ್ನೂ, ಅವರು ಜೀವಿಸುವ ಹಕ್ಕನ್ನೂ ಕಸಿದುಕೊಳ್ಳುವ ಎಲ್ಲ ಕ್ರಮಗಳನ್ನು ಈ ಕೂಡಲೇ ಸ್ಥಗಿತಗೊಳಿಸ ಬೇಕೆಂದು ನಾವು ಆಗ್ರಹಿಸುತ್ತೇವೆ.

17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಶುಭಕಾಮನೆಗಳು


(ಬರೆದದ್ದು ಜನವರಿ 10, 2012)

ಮಾನ್ಯ ಜಿಲಾಧಿಕಾರಿಗಳು,
ದ ಕ ಜಿಲ್ಲೆ, ಮಂಗಳೂರು.
ಇವರಿಗೆ


ಮಾನ್ಯರೇ,

ವಿಷಯ: 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಶುಭಕಾಮನೆಗಳು

ತಮ್ಮ ಆಶ್ರಯದಲ್ಲಿ ಇದೇ ತಿಂಗಳ ದಿ.12 ರಿಂದ 16 ರವರೆಗೆ ಜರುಗುವ 17ನೇಯ ರಾಷ್ಟ್ರೀಯ ಯುವಜನೋತ್ಸದಲ್ಲಿ ಪಾಲ್ಗೊಳ್ಳಲು ತಾವು ನನಗೆ ಕಳುಹಿಸಿದ ಆಮಂತ್ರಣವನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸುತ್ತೇನೆ. ಅನಾರೋಗ್ಯದ ನಿಮಿತ್ತ ಸದರಿ ಉತ್ಸವಕ್ಕೆ ಖುದ್ದಾಗಿ ಹಾಜರಾಗಲು ಅಸಮರ್ಥನಾದುದರಿಂದ ತಮ್ಮ ಕಾರ್ಯಕ್ಕೆ ಈ ಶುಭಕಾಮನೆಗಳನ್ನು ಕಳುಹಿಸುತ್ತಿದ್ದೇನೆ.

ನಮ್ಮ ಯುವಜನರು ದೇಶದ ಪ್ರಗತಿಪರ, ರಚನಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಮೂಢನಂಬಿಕೆ, ಜಾತಿಬೇಧ, ಕೋಮು ವೈಷಮ್ಯ, ಪ್ರಾಂತೀಯ ಸಂಕುಚಿತ ಭಾವನೆಗಳೆಲ್ಲವುಗಳನ್ನು ಹಿಮ್ಮಟ್ಟಿ, ಜಾತ್ಯಾತೀತ, ವರ್ಗಬೇಧ, ಶೋಷಣೆ  ಭ್ರಷ್ಟಾಚಾರ ರಹಿತ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಲು ಈ ಉತ್ಸವವು ಪ್ರೇರೇಪಣೆಯಾಗಲಿ ಎಂಬ ಹೆಬ್ಬಯಕೆಯಿಂದ ಉತ್ಸವಕ್ಕೆ ನನ್ನ ಶುಭಕಾಮನೆಗಳನ್ನು ಕೋರುತ್ತೇನೆ.

ವಂದನೆಗಳೊಂದಿಗೆ, 
ತಮ್ಮ ವಿಶ್ವಾಸಿ, 
ಬಿ ವಿ ಕಕ್ಕಿಲ್ಲಾಯ.

ರಷ್ಯಾದಲ್ಲಿ ಭಗವದ್ಗೀತೆಯ ವಿವಾದ

(ಬರೆದದ್ದು: ದಿಸೆಂಬರ್ 27, 2011)

ಭಗವದ್ಗೀತೆಯ ಬಗ್ಗೆ ಎದ್ದಿರುವ ವಿವಾದದ ಕುರಿತು 2 ಮಾತುಗಳು:

ರಷ್ಯದಲ್ಲಿ ಭಗವದ್ಗೀತೆ  ರಷ್ಯನ್ ಭಾಷೆಯಲ್ಲಿ ಅನುವಾದಿಸಿ ಪ್ರಕಟಗೊಂಡಿದ್ದು, ಅದರಲ್ಲಿ  ಹೇಳಲ್ಪಟ್ಟ ಕೆಲವು ಅಪ್ರಿಯ ಬೋಧನೆ, ಹಿಂಸೆ ಮತ್ತು ಜಾತೀಯತೆಯ ಪ್ರತಿಪಾದನೆ ಇತ್ಯಾದಿಗಳಿಗಾಗಿ ಅದನ್ನು ನಿಷೇಧಿಸಲು ಅಲ್ಲಿನ ನ್ಯಾಯಾಲಯದಲ್ಲಿ ಕೆಲವು ನಾಗರಿಕರು ದಾವೆಯನ್ನು ಹೂಡಿದ್ದಾರೆ. ನ್ಯಾಯಾಲಯದ ತೀರ್ಮಾನವನ್ನು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕೆಲವು ಬಲ ಪಂಥೀಯ ಮತ್ತು ಧರ್ಮಾಂಧ ಸಂಸದರು ಸಂಸತ್ತಿನಲ್ಲಿ ಒಂದು ಸುಳಿಗಾಳಿಯನ್ನೇ ಎಬ್ಬಿಸಿದ್ದಾರೆ. ಪ್ರಾಮುಖ್ಯವಾದ ಲೋಕಪಾಲ ಮಸೂದೆ, ಆಹಾರ ಭದ್ರತಾ ಮಸೂದೆ ಮತ್ತಿತರ ಪ್ರಸ್ತುತ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದ  ಪ್ರಮುಖ ವಿಧೇಯಕಗಳು ಚರ್ಚೆಗೆ ಬರುತ್ತಿರುವಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಹುನ್ನಾರವಿದೆಂದು ತಿಳಿಯಬೇಕಾಗಿದೆ. ಎದುರಾಳಿಗಳನ್ನು ದಮನಿಸಲು ತಮ್ಮ ಬತ್ತಳಿಕೆಯಲ್ಲಿರುವ ಆಯುಧಗಳು ಬರಿದಾದಾಗ ಪ್ರತಿಗಾಮಿ ಶಕ್ತಿಗಳು ತಮ್ಮ ಕೊನೆಯ ಅಸ್ತ್ರವನ್ನಾಗಿ ಭಗವದ್ಗೀತೆಯನ್ನು ಉಪಯೋಗಿಸಿ ದಾರಿ ತಪ್ಪಿಸುವುದು ಸಾಮಾನ್ಯವಾಗಿದೆ. ಅದೇ ತಂತ್ರವನ್ನು ಈಗಲೂ ಉಪಯೋಗಿಸಿದಂತಿದೆ. ರಷ್ಯಾದ ಹಿಂದುಳಿದ ಸೈಬೀರಿಯ ಪ್ರದೇಶದ ಒಂದು ಸಣ್ಣ ಊರಲ್ಲಿ ಇಸ್ಕಾನ್ ಎಂಬ ಸಂಸ್ಥೆಯೊಂದು ನಡೆಸುತ್ತಿರುವ ಕಾರ್ಯಾಚರಣೆಯ ಅಂಗವಾಗಿ ಅಲ್ಲಿನ ನ್ಯಾಯಾಲಯದಲ್ಲಿ ಹೂಡಲಾಗಿದ್ದ ದಾವೆಯ ಚರ್ಚೆಯಲ್ಲಿ ನಮ್ಮ ಸರಕಾರ ಮತ್ತು ಸಂಸತ್ತು ಮುಳುಗಬೇಕೇ? ಅಲ್ಲಿಯ ಜನರು ಮತ್ತು ನ್ಯಾಯಾಲಯಗಳು ನಮ್ಮ ಗ್ರಂಥಗಳಿಗೆ ನಿಷ್ಠರಾಗಿರಬೇಕೆಂದು ನಾವು ನಿರೀಕ್ಷಿಸಬಹುದೇ?

ಇಷ್ಟಕ್ಕೂ ಭಗವದ್ಗೀತೆಯಲ್ಲಿ ಭೋಧಿಸಲ್ಪಟ್ಟ ಕೆಲವು ಬೋಧನೆಗಳನ್ನು ಗಮನಿಸಿದರೆ ಅದು ಎಷ್ಟು ಹಿಂಸಾತ್ಮಕ, ಅಮಾನವೀಯ ಮತ್ತು ಪ್ರಸ್ತುತ ಜನಜೀವನಕ್ಕೆ ಮಾರಕವೆಂದು ಮನಗಾಣಬಹುದು.  ಅರ್ಜುನನು ಯುದ್ಧದಿಂದ ವಿಮುಖನಾದಾಗ ಶ್ರೀಕೃಷ್ಣನು ಅವನನ್ನು ಯುದ್ಧಕ್ಕೆ ಪ್ರಚೋದಿಸುತ್ತಾ "ಯುದ್ಧವನ್ನು ನೀನು ಮಾಡದೇ ಹೋದರೆ ಸ್ವಧರ್ಮವನ್ನೂ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನು ಗಳಿಸುತ್ತೀಯಾ; ಚಾತುರ್ವಣ್ಯವೆಂಬ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವೆಂಬ ನಾಲ್ಕು ವರ್ಗಗಳನ್ನು  ಸೃಷ್ಟಿಸಿದವನು ನಾನು; ಯಾವಾಗಲೆಲ್ಲಾ (ಚಾತುರ್ವಣ್ಯ) ಧರ್ಮಕ್ಕೆ ಹಾನಿಯುಂಟಾಗುವುದೋ ಅವಾಗಲೆಲ್ಲಾ, ದುಷ್ಕರ್ಮಿಗಳನ್ನು ನಾಶಗೊಳಿಸಲು ಮತ್ತು  ಚಾತುರ್ವಣ್ಯ ಧರ್ಮವನ್ನು  ರಕ್ಷಿಸಲು ನಾನು ಕಾಲಕಾಲಕ್ಕೆ ಹುಟ್ಟಿಬರುತ್ತೇನೆ" ಎಂದ ಉಕ್ತಿಗಳು ಜಾತ್ಯಾತೀತ, ಧರ್ಮ ನಿರಪೇಕ್ಷಿತ, ವರ್ಗರಹಿತ ಸಮಾಜ ನಿರ್ಮಾಣದ ನಮ್ಮ ಸಂವಿಧಾನದ ಮೂಲ ಆಶಯಕ್ಕೇ ತದ್ವಿರುದ್ಧವಾಗಿದೆ.  ಚಾತುರ್ವಣ್ಯವನ್ನು ವಿರೋಧಿಸುವ ಅಹಿಂದುಗಳನ್ನು ದುಷ್ಕರ್ಮಿಗಳೆಂದೂ ಮತ್ತು ಅವರನ್ನು ನಾಶ ಮಾಡಲು ಶ್ರೀಕೃಷ್ಣನು ಹುಟ್ಟಿಬರುವ ಕಾಲ ಸನ್ನಿಹಿತವಾಗಿದೆ ಎಂದು ಅರ್ಥೈಸಬೇಕಲ್ಲವೇ? ಹಾಗಿರುವಾಗ ಬೇರಾವುದೋ ದೇಶದಲ್ಲಿ ಅಲ್ಲಿಯ ಸಂವಿಧಾನಕ್ಕೆ ಅನುಗುಣವಾಗಿ ಹಿಂಸೆ, ಅನೀತಿ, ಅಮಾನವೀಯತೆಯನ್ನು ವೈಭವೀಕರಿಸುತ್ತಿರುವ ಭಗವದ್ಗೀತೆಯನ್ನು ಅಲ್ಲಿಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದುದ್ದನ್ನು ನಾವಿಲ್ಲಿ ಪ್ರತಿಭಟಿಸುವುದು  ಸಮಂಜಸವೇ? ನಮ್ಮಲ್ಲಾದರೂ ಇಷ್ಟ ಇದ್ದವರು ಅದನ್ನು ಪಠಿಸಲಿ. ಆದರೆ ಅದರಲ್ಲಡಗಿರುವ ಹಿಂಸೆಯನ್ನು ಮತ್ತು ಚಾತುರ್ವಣ್ಯ ಜಾತಿ ಪದ್ಧತಿಯನ್ನು ಬೋಧಿಸುವುದು ಮತ್ತು ಆಚರಿಸುವುದು ಸಂವಿಧಾನ ಬಾಹಿರವಾದುದು ಎಂದು ಮನಗಾಣಬೇಕು.

Tuesday 27 September 2011

ಚುನಾವಣಾ ನಿಯಮಗಳ ಪರಿಷ್ಕರಣೆಯಾಗಲಿ


ಭ್ರಷ್ಟಾಚಾರದ ವಿರುದ್ಧ ದೇಶದಾದ್ಯಂತ ಜನರು ರೊಚ್ಚಿಗೆದ್ದಿದ್ದಾರೆ ಮತ್ತು ಅದಕ್ಕೆ ಮೂಲ ಕಾರಣ ನಮ್ಮ ಚುನಾವಣಾ ನಿಯಮಗಳು ಎಂಬುದು ದೃಡಪಟ್ಟಿದೆ. ದೇಶದ  ಸಂಪತ್ತನ್ನು ಕೆಲವೇ ವ್ಯಕ್ತಿಗಳು ಭ್ರಷ್ಟಾಚಾರದ ಮೂಲಕ ಕೊಳ್ಳೆ ಹೊಡೆದು ಅದರ ಪ್ರಭಾವದಿಂದ ನಮ್ಮ  ಸರಕಾರ ಹಾಗೂ ಸಮಸ್ತ ಅಧಿಕಾರವನ್ನು ವಶಪಡಿಸಿ ದೇಶದ ಬಹುಪಾಲು ಜನರ ಬದುಕನ್ನೇ ದುಸ್ತರಗೊಳಿಸಿ ಅವರು ಕನಿಷ್ಟ ಜೀವನಾವಶ್ಯಕತೆಗಳಿಗೂ ಪರದಾಡುವ  ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡವಾಳಶಾಹಿಗಳು ಕೋಟ್ಯಾಂತರ ರೂಪಾಯಿಗಳನ್ನು ಭ್ರಷ್ಟಾಚಾರದ ರೂಪದಲ್ಲಿ ಚುನಾವಣೆಗಳಲ್ಲಿ ಖರ್ಚುಮಾಡಿ, ಅವರ ಪ್ರತಿನಿಧಿಗಳೇ ಚುನಾಯಿತರಾಗಿ ಬರುವಂತೆ ಮಾಡಲು ಸಮರ್ಥರಾಗುತ್ತಾರೆ. ಅವರ ಎದುರು ಸಭ್ಯ ಉಮೇದುವಾರನಿಗೆ ಗೆಲ್ಲುವ ಸಾಧ್ಯತೆಗಳು ನಗಣ್ಯ. ನಮ್ಮ ರಾಜ್ಯದ ಭ್ರಷ್ಟ ರಾಜಕಾರಣಿಗಳು ಹೇಗೆ ದೇಶದ ಸಂಪತ್ತನ್ನು ದರೋಡೆ ಮಾಡಿ  ಅದನ್ನು ದೇಶ ವಿದೇಶಗಳಲ್ಲಿ  ಬಚ್ಚಿಟ್ಟು  ನಮ್ಮ ರಾಜ್ಯದ ರಾಜಕೀಯದಲ್ಲಿ ಅದರ ಪ್ರಭಾವ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ನಾವು ಪ್ರತ್ಯಕ್ಷ ಕಾಣುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿಭಿನ್ನ ಪಕ್ಷಗಳ ತಿಕ್ಕಾಟ, ಜಗ್ಗಾಟದಿಂದಾಗಿ ಮಾತ್ರ ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಯ್ತು ಎಂಬುದನ್ನು ನಾವು ಗಮನಿಸಬೇಕು.  ಅಪರೇಷನ್ ಕಮಲದ ಮೂಲಕ ಅನ್ಯ ಪಕ್ಷಗಳ ಸದಸ್ಯರನ್ನು ಸೆಳೆದು ಮರು ಚುನಾವಣೆಗೆ ನಿಲ್ಲಿಸಿ ಅವರನ್ನು ಗೆಲ್ಲಿಸಲು ಬೇಕಾಬಿಟ್ಟಿ ಭ್ರಷ್ಟಾಚಾರದ ಹಣವನ್ನು ಚೆಲ್ಲಿ ರಾಜ್ಯ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ್ದ ಪ್ರಹಸನವು ನಮ್ಮ ಮುಂದಿದೆ. ಓಟಿಗಾಗಿ ನೋಟಿನ ಪ್ರಹಸನದ ಕಂತೆ ಕಂತೆ ನೋಟುಗಳ ಪ್ರದರ್ಶನವು ಲೋಕಸಭಾ ಸದನದಲ್ಲೇ ಏರ್ಪಟ್ಟಿದ್ದನ್ನು ನಾವು ಕಂಡಿದ್ದೇವೆ. 2-ಜಿ ಸ್ಪೆಕ್ಟಂ ಗುತ್ತಿಗೆ ನೀಡುವ  ಕಾಮಗಾರಿ ಒಂದರಲ್ಲೇ 1,76,000 ಕೋಟಿ ರೂಪಾಯಿಗಳ ಅವ್ಯವಹಾರ ಗೈದ ಮಂತ್ರಿವರ್ಯರು ಜೈಲು ಸೇರಿದ ಪ್ರಸಂಗವೂ ಹಸಿರಾಗಿಯೇ ಇದೆ. ಇವುಗಳು ಬೆಳಕಿಗೆ ಬರುವುದೇ ಅಪರೂಪಕ್ಕೊಂದೆರಡು. ನಮ್ಮ ಪ್ರಸ್ತುತ ಸಂಸತ್ತಿನ ಸದಸ್ಯರಲ್ಲಿ ಬಹುತೇಕ ಮಂದಿ ಕೋಟ್ಯಾಧಿಪತಿಗಳೇ ಆಗಿರಲು ಕಾರಣ ಇದುವೇ ಅಗಿರುತ್ತದೆ.  ಆದುದರಿಂದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರು ಚುನಾವಣಾ ನೀತಿ ಸಂಹಿತೆಯಲ್ಲಿನ ನಿಯಮಗಳ ಸುಧಾರಣೆಗೆ ಪ್ರಥಮ ಆಧ್ಯತೆಯನ್ನು ನೀಡಬೇಕಾಗಿದೆ. ಅಣ್ಣಾ ಹಜಾರೆಯವರ ತಂಡದವರೂ ಇದನ್ನು ತಿಳಿದು ಅದನ್ನು ಕೈಗೆತ್ತಿಕ್ಕೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದನ್ನು ಹೇಗೆ ಮತ್ತು ಯಾವ ರೂಪದಲ್ಲಿ  ರ್ಕಾರ್ಯಗತಗೋಳಿಸಬೇಕೆಂಬ ಬಗ್ಗೆ ಬಹಳಷ್ಟು ವಿಚಾರ ಗೋಷ್ಠಿಗಳು ಮತ್ತು ಸಾರ್ವಜನಿಕ ಚರ್ಚೆಗಳು ನಡೆಸಿ ಸಲಹೆ ಸೂಚನೆಗಳನ್ನು ಆಹ್ವಾನಿಸುವ  ಅವಶ್ಯಕತೆ ಇದೆ. 

ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ವಿವಿಧ ಚುನಾವಣಾ ವ್ಯವಸ್ಥೆಗಳು ಜಾರಿಯಲ್ಲಿದ್ದು ಅವುಗಳಲ್ಲಿ ಅನುಪಾತ ವ್ಯವಸ್ಥೆಯು ಪ್ರಮುಖವಾಗಿದೆ.  93 ರಾಷ್ಟ್ರಗಳಲ್ಲಿ ಅದು ಜಾರಿಯಲ್ಲಿದ್ದು  ಕೆಲವು ರಾಷ್ಟಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಹೊಂದಿದೆ. ಒಟ್ಟು ಸದಸ್ಯರ ಪೈಕಿ ಅರ್ಧಾಂಶ ಸದಸ್ಯರನ್ನು ಅನುಪಾತ ಮತದ ಪ್ರಕಾರ ಪಕ್ಷಗಳು ನೇಮಿಸಿ ಉಳಿದ ಅರ್ಧಾಂಶ ಸದಸ್ಯರನ್ನು ನೇರ ಬಹುಮತದಿಂದ ಚುನಾಯಿಸುವ ವ್ಯವಸ್ಥೆ ಸಹಾ ಜಾರಿಯಲ್ಲಿದೆ. ಫ್ರಾನ್ಸ್ ಇದಕ್ಕೆ ಒಂದು ಉತ್ತಮ ಮಾದರಿಯಾಗಿದೆ. ದ್ವಿತಿಯ ಮಹಾಯುದ್ಧದ ನಂತರ ಬ್ರಿಟನ್ ಹಾಗೂ ಇನ್ನಿತರ ದೇಶಗಳಲ್ಲಿರುವಂತೆ ನೇರ ಮತದಾನದ ಮೂಲಕ ಸಂಸತ್ತನ್ನು ಚುನಾಯಿಸುವ ಕ್ರಮವು ಅಲ್ಲಿ ಬಳಕೆಯಲ್ಲಿತ್ತು. ಅನೇಕ ವರ್ಷಗಳ ಕಾಲದ ಅಸ್ಥಿರತೆಯಿಂದಾಗಿ ದೇಶದ ರಾಜಕೀಯವು ದುರ್ಬಲಗೊಂಡು ಬಳಿಕ ಅನುಪಾತ ಮಾದರಿಯ ಚುನಾವಣಾ ವ್ಯವಸ್ಥೆ ಜಾರಿಗೊಂಡಿತು. ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿ ತಮಗೆ ದೊರೆತ ಮತಗಳ ದಾಮಾಶಯದಲ್ಲಿ ಸಂಸತ್ತಿನಲ್ಲಿ ಸದಸ್ಯರನ್ನು ಹೊಂದಿ ಸರಕಾರದಲ್ಲಿಯೂ ಸಹಭಾಗಿಯಾಗುವ ಅವಕಾಶವನ್ನು ಪಡೆದು ಪ್ರಜಾಪ್ರಭುತ್ವವನ್ನು ಯತಾರ್ಥಗೊಳಿಸುವ ಸ್ಥಿತಿ  ನಿರ್ಮಾಣವಾಯಿತು. ನಮ್ಮ ದೇಶದಲ್ಲೂ ಈ ಅನುಪಾತ ವ್ಯವಸ್ಥೆಯನ್ನು ಜಾರಿಗೊಳಿಸಲು ಕಮ್ಯುನಿಷ್ಟ್ ಪಕ್ಷಗಳು ಮುಂಚಿನಿಂದಲೂ ಒತ್ತಾಯಿಸುತ್ತಿದ್ದು ವಾಜಪಾಯಿ ಸರ್ಕಾರವು 1996ರಲ್ಲಿ ಅದಕ್ಕೆ ಬೆಂಬಲ ಸೂಚಿಸಿತ್ತು ಮತ್ತು ಭಾರತದ ಕಾನೂನು ಆಯೋಗವು ಅದನ್ನು1999ರಲ್ಲಿ ಶಿಫಾರಸು ಮಾಡಿತು. ಅಲ್ಲದೆ ಅಕಾಲಿದಳ, ಶಿವಸೇನೆ, ಡಿಯಂಕೆ ಪಕ್ಷಗಳೂ ಅದಕ್ಕೆ ಬೆಂಬಲ ಸೂಚಿಸಿವೆ ಎಂಬುವುದನ್ನು ನಾವು ಇಲ್ಲಿ ಸ್ಮರಿಸಬಹುದು.

1930 ರ ದಶಕದಲ್ಲಿ ಯುರೋಪಿನಲ್ಲಿ ಫ್ರಾನ್ಸ್, ಇಟೆಲಿ, ಜರ್ಮನಿ ಮುಂತಾದ ಕಡೆಗಳಲ್ಲಿ ಮುಖ್ಯವಾಗಿ ಕಮ್ಯುನಿಸ್ಟ್ ಮತ್ತು ಪ್ರಜಾಪ್ರಭುತ್ವವಾದಿ ಸಮಾಜವಾದಿ ಪಕ್ಷಗಳು ಪ್ರಭಲವಾಗಿದ್ದ ಸಂದರ್ಭದಲ್ಲಿ ಅವರೊಳಗಿನ ಕಚ್ಚಾಟದಿಂದ ಪ್ರಜಾಪ್ರಭುತ್ವವನ್ನೇ ಧಿಕ್ಕರಿಸಿ ಫಾಸಿಸ್ಟ್ ಸರ್ವಾಧಿಕಾರವನ್ನು ಹೇರಲು ಸಾಧ್ಯವಾಯಿತು ಎನ್ನುವುದನ್ನು ನಾವು ಮನಗಾಣಬೇಕು. ಅಂಥಾ ಕರಾಳ ಯುಗದ ಅನುಭವವನ್ನು ನಾವು ಪರಿಗಣಿಸಿ ಅದು ಮತ್ತೆಲ್ಲಿಯೂ ತಲೆ ಎತ್ತದಂತೆ ನೋಡಿಕೊಳ್ಳುವ ಅಗತ್ಯವಿದೆ.  ನಮ್ಮ ರಾಜ್ಯದಲ್ಲಿಯೂ ಜೆಡಿಯಸ್ ಮತ್ತು ಬಿಜೆಪಿ ಪಕ್ಷಗಳ 20:20 ರ ಒಡಂಬಡಿಕೆ  ಹೆಚ್ಚು ಕಡಿಮೆ ಯುರೋಪಿನ ಫಾಸಿಸ್ಟ್ ವಿಧಾನವನ್ನೇ ಹೋಲುತ್ತಿದ್ದು ಅಂತೆಯೇ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದಿರುವುದನ್ನೂ ಕಾಣಬಹುದು. ಬಂಡವಾಳಶಾಹಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರವನ್ನು ಕಬಳಿಸಲು ಪೈಪೋಟಿ ನಡೆಸುತ್ತಿರುವ ಈ ಸಂಧರ್ಭದಲ್ಲಿ ನಮ್ಮ ದೇಶದ ಎಲ್ಲಾ ಎಡ ಮತ್ತು ಪ್ರಜಾಪ್ರಭುತ್ವವಾದಿ ಸಮಾಜವಾದಿ ಪಕ್ಷಗಳು ಸಂದರ್ಭವಾದಿ ಸಾಧ್ಯತೆಗಳನ್ನು ತೊರೆದು ಅನುಪಾತ ವ್ಯವಸ್ಥೆಯ ಚುನಾವಣಾ ರೀತಿಯನ್ನು ಜಾರಿಗೊಳ್ಳುವಂತೆ ಮಾಡಿದರೆ ಪ್ರಜಾಪ್ರಭುತ್ವವನ್ನು ಈ ದೇಶದಲ್ಲಿ ಸುಸ್ಥಿರಗೊಳಿಸಬಹುದು ಮತ್ತು ಬಹುಪಾಲು ಜನರನ್ನು ನಿರ್ಗತಿಕರನ್ನಾಗಿ ಮಾಡಿ ಲಕ್ಷಾಂತರ ರೈತರು  ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಬಂಡವಾಳಶಾಹಿ ಧೋರಣೆಯನ್ನು ತೊಡೆದು ದೇಶವನ್ನು ಕೊಳ್ಳೆಹೊಡೆಯಲು ಅನುಕೂಲ ಮಾಡಿಕೊಡುತ್ತಿರುವ ಜಾಗತೀಕರಣ ವ್ಯವಷ್ಥೆಯನ್ನು ಹದ್ದು ಬಸ್ತಿನಲ್ಲಿ ಇಡಬಹುದು. ಅದಕ್ಕಾಗಿ ಅನುಪಾತ ವ್ಯವಸ್ಥೆಯ ಚುನಾವಣಾ  ರೀತಿಯು ಜಾರಿಗೊಳ್ಳುವಂತೆ  ಕೆಲವು ಸೂಚನೆಗಳನ್ನು ನೀಡಬಯಸುತ್ತೇವೆ.
  1. ಕ್ಷೇತ್ರಗಳಲ್ಲಿ ಪಡೆದ ಮತಗಳ ದಾಮಾಶಯಗಳ ಅಧಾರದಲ್ಲಿ ಪಕ್ಷಗಳೇ ಚುನಾವಣೆಯ ಬಳಿಕ ತಮ್ಮ ಅಭ್ಯರ್ಥಿಯನ್ನು ಸೂಚಿಸುವಂತಾಗಬೇಕು.
  2. ಪಕ್ಷಾತೀತ ಅಭ್ಯರ್ಥಿಗಳು ಚುನಾವಣೆಯ ಬಳಿಕ ಯಾವುದೇ ಪಕ್ಷಕ್ಕೂ ಸೇರಲಿಕ್ಕೆ ಅವಕಾಶವಿರಬಾರದು.
  3. ಪ್ರಾನ್ಸ್ ಹಾಗೂ ಮತ್ತಿತರ  ಕೆಲವು ದೇಶಗಳಲ್ಲಿ ಇರುವಂತೆ ಅಭ್ಯರ್ಥಿಯು ಆತನನ್ನು ಬೆಂಬಲಿಸುವ ಪಕ್ಷದ ಶಿಸ್ತಿಗೆ ಒಳಪಡುವಂತಿರಬೇಕು
  4. ಪಕ್ಷಾಂತರ ಮಾಡುವವರು ಮತ್ತು ಅದಕ್ಕೆ ಪ್ರೇರೇಪಣೆ ನೀಡುವ, ಹಣ ಒದಗಿಸುವ ಎಲ್ಲರೂ ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆಗೆ ಒಳಪಟ್ಟು ಮುಂದೆ ಚುನಾವಣೆಗೆ ಅನರ್ಹರಾಗುವಂತಾಗಬೇಕು.     
  5. ದಂಡ ಸಂಹಿತೆಯಲ್ಲಿ ಅಪರಾಧಿ ಎಂದೆಣಿಸಲ್ಪಟ್ಟವರು ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಬೇಕು
  6. ಅಭ್ಯರ್ಥಿಗಳು ತಮ್ಮ ಮತ್ತು ಕುಟುಂಬಿಕರ ಆಸ್ತಿ ಪಾಸ್ತಿಗಳ ದೃಢೀಕೃತ ವಿವರಗಳನ್ನು ಸ್ಪರ್ಧಿಸುವಾಗ ಮತ್ತು  ಗೆದ್ದ ಬಳಿಕ  ವರ್ಷಂಪ್ರತಿ ನೀಡುವುದನ್ನು ಕಡ್ಡಾಯಗೊಳಿಸಬೇಕು. ನೀಡದೇ ಇದ್ದರೆ ಅವರ ಸದಸ್ಯತ್ವವನ್ನು ರದ್ದುಗೊಳಿಸುವ ಅಧಿಕಾರವು ಸಂಬಂಧಪಟ್ಟ ಅಧಿಕಾರಿಗೆ ಇರಬೇಕು.
  7. ಪ್ರಸ್ತುತ ಕರ್ನಾಟಕದ ವಿಧಾನ ಪರಿಷತ್ತಿನ ಆಯ್ಕೆಯ ನಿಯಮಗಳನ್ನು ಶಾಸನ ಸಭೆಗೂ, ಸಂಸತ್ ಸಭೆಗೂ ಅನ್ವಯಗೊಳಿಸಬಹುದು.

Friday 16 September 2011

ಅದ್ವಾನಿಯ ರಥಯಾತ್ರೆಯ ಪ್ರಹಸನ


ಆಪರೇಶನ್ ಕಮಲದ ಮೂಲಕ ಅಧಿಕಾರದ ಪೀಠವನ್ನೇರಿದ ಮಾನ್ಯ ಯೆಡ್ಯೂರಪ್ಪನವರು ಏರಿದ್ದ ಪೀಠವನ್ನು ಉಳಿಸಿಕೊಳ್ಳುವುದು ತಮ್ಮ ಹಕ್ಕು ಎಂಬಂತೆ ವರ್ತಿಸುತ್ತಾ ರಾಜ್ಯಪಾಲರು, ಲೋಕಾಯುಕ್ತರು, ನ್ಯಾಯಾಲಯಗಳು ಮುಂತಾದವರನ್ನೆಲ್ಲಾ ಕಡೆಗಣಿಸಿ, ತಮ್ಮ ಅಧಿಕಾರಕ್ಕೆ ಏನೆಲ್ಲಾ ಒಳಪಟ್ಟಿದೆಯೋ ಆ ಎಲ್ಲ ಕ್ರಮಗಳನ್ನು ಕೈಗೊಂಡರೂ ಸಹಾ ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಇದೀಗ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ತನ್ನ ವರ್ತನೆಗೆ ತಕ್ಕ ಉತ್ತರ ನೀಡಬೇಕಾಗಿದೆ. ಅವರ ಜೊತೆಯಲ್ಲೇ ಅವರ ಮಂತ್ರಿಮಂಡಲದಲ್ಲಿ ಮುಖ್ಯ ಖಾತೆಗಳನ್ನು ವಹಿಸಿಕೊಂಡಿದ್ದ  ಜನಾರ್ಧನ ರೆಡ್ಡಿ ಮತ್ತವರ ಸಂಬಂಧಿ ಶ್ರೀನಿವಾಸ ರೆಡ್ಡಿಯವರು ಕರ್ನಾಟಕದಲ್ಲಿ ಎಷ್ಟು ಹಾರಾಡಿ ಕಣ್ಣ ಮುಚ್ಚಾಲೆ ಆಡಿದರೂ ಆಂಧ್ರ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಅವ್ಯವ್ಯವಹಾರಗಳ ತನಿಖೆಗೆ ನೇಮಿಸಲ್ಪಟ್ಟ ಸಿಬಿಐ ತನಿಖಾ ತಂಡದ ಕ್ಷಿಪ್ರ ಕಾರ್ಯಾಚರಣೆಯಿಂದ ಅಕ್ರಮಗಳನ್ನು ಅಡಗಿಸಲಾಗದೆ ಬಂದನಕ್ಕೆ ಒಳಗಾಗಬೇಕಾಯ್ತು. ಅವರ  ಮೇಲಿರುವ ಆರೋಪಗಳು ಗಂಬೀರ ಸ್ವರೂಪದವುಗಳೂ, ಅಪಾರ ಮೊತ್ತದ ಅಂತರರಾಷ್ಟ್ರೀಯ ಅವ್ಯವಹಾರ, ಹವಾಲ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಭಂದಪಟ್ಟವುಗಳೂ ಆದುದರಿಂದ ಜಾಮೀನು ಕೂಡಾ ನಿರಾಕರಿಸಲ್ಪಟ್ಟು ಜೈಲಲ್ಲೇ ಬಹುಕಾಲ  ಬಂದನದಲ್ಲಿರಬೇಕಾಗಿ ಬಂದಿದೆ. ದೇಶದ ಸಂಪತ್ತನ್ನು ದರೋಡೆ ಮಾಡಿ ಚೈನಾ, ಪಾಕಿಸ್ಥಾನ, ಮುಂತಾದ ವಿದೇಶಗಳಿಗೆ ವಿವಿಧ ಬಂದರುಗಳ ಮೂಲಕ ರಫ್ತು ಮಾಡಿ ಆ ಹಣವನ್ನು ವಿವಿಧ ದೇಶಗಳಲ್ಲಿ ಬಚ್ಚಿಡಲಾಗಿದೆ. ಮಾರಿಷಸ್ ಹಾಗೂ ವರ್ಜಿನ್ ದ್ವೀಪ ಸಹಿತ 6 ವಿದೇಶಿ ಕಂಪೆನಿಗಳನ್ನು ಹೊಂದಿರುವುದು ತಿಳಿದುಬಂದಿದೆ. ಕರ್ನಾಟಕದಲ್ಲೂ ಅಪಾರ ಮೊತ್ತದ ನೈಸರ್ಗಿಕ ಸಂಪತ್ತಿನ ಲೂಟಿ, ಅಕ್ರಮ ಗಣಿಗಾರಿಕೆ, ಅರಣ್ಯ ಕಬಳಿಕೆ, ಜಲ ಸಂಪನ್ಮೂಲದ ದುರುಪಯೋಗ, ಬಡವರ ಆಸ್ತಿಗಳ ಕೊಳ್ಳೆ ಇತ್ಯಾದಿಗಳು ನಡೆದಿರುವುದು ಬೆಳಕಿಗೆ ಬಂದಿದೆ. ಬಳ್ಳಾರಿಯಲ್ಲಿ ನಿರ್ಮಿಸಲ್ಪಟ್ಟ ಅರಮನೆಯಂಥಾ ಭವ್ಯ ಬಂಗಲೆ ಮತ್ತು ಅದರೊಳಗೆ ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವ ಸ್ವರ್ಣ ಖಚಿತ ಆಸನಗಳು, ಚಿನ್ನ ಬೆಳ್ಳಿ ಒಡವೆ, ಪಾತ್ರೆ ಪಗಡಿಗಳು, ಅನೇಕ ವಿದೇಶಿ ನಿರ್ಮಿತ ಐಷರಾಮೀ ಹೆಲಿಕಾಪ್ಟರು, ಕಾರುಗಳು ಇದ್ದವುಗಳನ್ನು ಸ್ವಾಧೀನಪಡಿಸಲಾಗಿವೆ. ಒಬ್ಬ ಸಾದಾ ಪೋಲೀಸ್ ಪೇದೆಯ ಮಗನಾಗಿದ್ದು ಸೈಕಲಿನಲ್ಲಿ ಓಡಾಡುತ್ತಿದ್ದ ಮತ್ತು ಕೇವಲ ಹೈಸ್ಕೂಲ್ ವಿದ್ಯೆಯನ್ನಷ್ಟೇ ಹೊಂದಿದ ಜನಾರ್ಧನ ರೆಡ್ಡಿ ಮತ್ತು ಅವನ ಸಹೋದರರು ಆರೇಳು ವರ್ಷಗಳ ಅವಧಿಯೊಳಗೆ ಇಷ್ಟೊಂದು ಸಂಪತ್ತನ್ನು ಸಂಪಾದಿಸಿದ್ದುದ್ದಾದರೂ ಹೇಗೆ ಎನ್ನುವುದರ ವಿವರಣೆಯನ್ನು ಅವರು ಕೊಡಬೇಕಿದೆ. ಮಾಜೀ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡುರವರು ಮತ್ತು ಅವರ ಸುಪುತ್ರ ಕಟ್ಟಾ ಜಗದೀಶ್ ಕೂಡಾ ಭೂ ಹಗರಣದಲ್ಲಿ ಸದ್ಯಕ್ಕೆ ಜೈಲಲ್ಲೇ ನೆಲೆಯೂರ ಬೇಕಾಗಿದೆ. ಅರಣ್ಯ ಸಚಿವ ಯೋಗೇಶ್ವರ್ ರವರು ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ. ಯೆಡ್ಯೂರಪ್ಪನವರೂ ಬಂಧನದ ಸರದಿಯಲ್ಲಿದ್ದಾರೆ. ಇಷ್ಟೆಲ್ಲಾ ಅವ್ಯವಹಾರಗಳು ಬೆಳಕಿಗೆ ಬಂದರೂ ಅವರ ರಕ್ಷಣೆಗೆ ಬಿಜೆಪಿಯ ವರಿಷ್ಠರು ಮುಂದಾಗುತ್ತಿರುವುದು  ಆ ಪಕ್ಷದ ನೀತಿ ನಿಯಮಗಳಿಗೆ ಹಿಡಿದ ಕನ್ನಡಿಯಾಗಿದೆ.

ರಾಂ ದೇವ್‘ರವರನ್ನು ಮುಂದಿರಿಸಿ ವಿದೇಶಿ ಬೇಂಕುಗಳಲ್ಲಿರುವ ಹಣವನ್ನು ವಶ ಪಡಿಸಿಕೊಳ್ಳುವ ನೆಪದಲ್ಲಿ ದೇಶದಾದ್ಯಂತ ಅಶಾಂತಿ ಹುಟ್ಟಿಸಿ ಜನಜೀವನ ಅಸ್ತವ್ಯಸ್ತಗೊಳಿಸಿ ಅಧಿಕಾರವನ್ನು ಕಬಳಿಸುವ ಹುನ್ನಾರವನ್ನು ಬಿಜೆಪಿ ಹೊಂದಿತ್ತು ಎಂಬುದು ಅವರನ್ನು ಬಂಧಿಸಿದ ಪ್ರಹಸನದಲ್ಲಿ ಬಹಿರಂಗವಾಗಿತ್ತು. ಆ ಬಳಿಕ ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ದದ ಚಳುವಳಿಯಲ್ಲಿ ನುಸುಳಿಕೊಂಡು ಅವಕಾಶಕ್ಕಾಗಿ ಹವಣಿಸುತ್ತಿದ್ದುದೂ ಬೆಳಕಿಗೆ ಬಂತು. ಅಧಿಕಾರವಿರುವಲ್ಲೆಲ್ಲ ಮಂತ್ರಿವರ್ಯರ ಮತ್ತು  ಅಧಿಕಾರಿಗಳ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ಪಕ್ಷ ಇದೀಗ ಭ್ರಷ್ಟಾಚಾರವನ್ನು ತೊಲಗಿಸುವ ನೆಪದಲ್ಲಿ ಅಧ್ವಾನಿಯವರ ನೇತೃತ್ವದಲ್ಲಿ ರಥಯಾತ್ರೆ ಪ್ರಾರಂಭಿಸುವುದಾಗಿ ಹೇಳುತ್ತಿದೆ. ಅಣ್ಣಾ ಹಜಾರೆಯವರು ಈ ಯಾತ್ರೆಯನ್ನು ಬರೇ ರಾಜಕೀಯ ಗಿಮಿಕ್ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹೊರತು ಪಡಿಸಿ ಇತರ ಯಾವುದೇ ಭ್ರಷ್ಟಾಚಾರ ರಹಿತ ಪಕ್ಷಗಳಿಗೆ ತಾನು ಬೆಂಬಲ ನೀಡುವೆನು ಎಂಬ ಅಣ್ಣಾ ಹಜಾರೆಯವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಅವರಿಗೆ ಕಮ್ಯುನಿಷ್ಟ್ ಪಕ್ಷಗಳು ಮತ್ತು ಎಡ ಪಕ್ಷಗಳು ಸಹಕರಿಸಿ ಜನಜಾಗೃತಿಯನ್ನು ಉಂಟುಮಾಡುವ ಅಗತ್ಯವಿದೆ. ಜನಜಾಗೃತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡು ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಾ ನಮ್ಮ ದೇಶವನ್ನು ಇಂದು ಕಾಡುತ್ತಿರುವ ಭ್ರಷ್ಟಾಚಾರ ಮತ್ತು ಕೋಮುವಾದ ಪ್ರೇರಿತ ಬಲ ಪಂಥೀಯ ದಾಳಿ ದಬ್ಬಾಳಿಕೆಗಳನ್ನು ವಿಫಲಗೊಳಿಸಲು ಮುಂದಾಗಬೇಕೆಂದು ಅಪೇಕ್ಷಿಸುತ್ತೇವೆ.