Thursday 30 June 2011

ಲೋಕಾಯುಕ್ತವನ್ನು ಬಲಪಡಿಸಲು ಸರಕಾರಕ್ಕೆ ಒತ್ತಾಯ

ಕರ್ನಾಟಕ ಲೋಕಾಯುಕ್ತರ ಬಗ್ಗೆ ಜೂನ್ 15, 2010 ರಂದು ಬರೆದ ಲೇಖನ

ನಮ್ಮ ಪ್ರಸ್ತುತ ಸಂವಿಧಾನಬದ್ದವಾದ ಪ್ರಜಾಪ್ರಭುತ್ವದಲ್ಲಿ ಲೋಕಪಾಲ ಮತ್ತು ಲೋಕಾಯುಕ್ತಗಳು ಬಹಳ ಮುಖ್ಯ ಪಾತ್ರವನ್ನು ನಿರ್ವಹಿಸುವಂತೆ ನಿಯೋಜಿಸಲಾಗಿದೆ. ಆದರೆ ಕೇಂದ್ರಕ್ಕೆ ಸಂಭಂದಿಸಿದ ಲೋಕಪಾಲವು ನಿಜವಾಗಿ 63 ವರ್ಷಗಳಲ್ಲಿಯೂ ಅಸ್ತಿತ್ವಕ್ಕೆ ಬಂದಿಲ್ಲ. ಅದಕ್ಕೆ ಒಂದೇ ಒಂದು ಕಾರಣ ಲೋಕಪಾಲದ ವ್ಯಾಪ್ತಿಯಿಂದ ಪ್ರಧಾನ ಮಂತ್ರಿಯವರನ್ನು ಹೊರಗೆ ಇರಿಸಬೇಕೆಂಬ ಕೇಂದ್ರ ಸರಕಾರದ ನಿಲುವು. ಕೆಲವು ರಾಜ್ಯಗಳಲ್ಲಿ ಲೋಕಾಯುಕ್ತಗಳು ಇವೆ. ಆದರೆ ಅವುಗಳ ವ್ಯಾಪ್ತಿಯಿಂದ ರಾಜ್ಯಗಳ ಮುಖ್ಯ ಮಂತ್ರಿಗಳನ್ನು ಹೊರಗೆ ಇಡಲಾಗಿದೆ. ಎಂದರೆ ಕೇಂದ್ರ ಸರಕಾರವು ನಿಜವಾದ ಅರ್ಥದಲ್ಲಿ ಲೋಕಪಾಲ ಎಂಬ ಸಂಸ್ಥೆಯ ವ್ಯಾಪ್ತಿಯಿಂದ ಸಂಪೂರ್ಣ ಅಬಾಧಿತವಾಗಿದೆ ಹಾಗೂ ರಾಜ್ಯ ಸರಕಾರಗಳೂ ಆಯಾ ರಾಜ್ಯಗಳ ಲೋಕಾಯುಕ್ತರಿಂದ ಅಬಾಧಿತವಾಗಿವೆ. ಈ ಕೊರತೆಯನ್ನು ನೀಗಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲವೆಂದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಒಳ ನುಸುಳಿ ಕೆಲಸ ಮಾಡಲು ಸಾಕಷ್ಟು ಅವಕಾಶವನ್ನು ನಮ್ಮ ದೇಶವನ್ನು ಆಳಿರುವ ಪಕ್ಷಗಳು ಉದ್ದೇಶಪೂರ್ವಕವಾಗಿಯೇ ಉಳಿಸಿಕೊಂಡಿವೆ. ಈ ಕೊರತೆಯು ಕಳೆದ 63 ವರ್ಷಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಮ್ಮನ್ನು ಆಳಿರುವ ಎಲ್ಲ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಣ್ಣು ಮುಚ್ಚಾಲೆಯಿಂದ ನಡೆದಿವೆ ಎನ್ನುವುದು ಸ್ಪಷ್ಟವಾಗುತ್ತಿದೆ. ಸರಕಾರದ ಉನ್ನತ ಅಧಿಕಾರಿಗಳು ಅವರ ಬಲೆಗೆ ಬಿದ್ದು ಪ್ರಾಥಮಿಕ ತನಿಖೆಯಿಂದ  ಪೂರ್ಣ ನ್ಯಾಯಾಂಗ ವಿಚಾರಣೆಗೆ ಗುರಿಪಡಿಸಲು ಸಾಕಷ್ಟು ಪುರಾವೆಗಳು ದೊರೆತ ಸಂಧರ್ಭಗಳಲ್ಲಿ ಸಹಾ ಸರಕಾರದ ಕೃಪಾಕಟಾಕ್ಷದಿಂದ ಭೃಷ್ಟ ಅಧಿಕಾರಿಗಳು ತಪ್ಪಿಸಿಕೊಂಡಿರುವಂಥಾ ಉದಾಹರಣೆಗಳು ಸಾಕಷ್ಟಿವೆ.  ಈ ಮುಖ್ಯ ಪ್ರಶ್ನೆಯನ್ನು ಒಂದು ವೇಳೆ ಬದಿಗಿರಿಸಿದರೂ ಸಹಾ ಇದ್ದ ವ್ಯವಸ್ಥೆಯಲ್ಲಿಯೇ ರಾಜ್ಯಗಳ ಲೋಕಾಯುಕ್ತಗಳು ಉತ್ತಮ ಕಾರ್ಯ ನಿರ್ವಹಿಸಿವೆ ಎನ್ನುವುದು ಗಮನಾರ್ಹವಾಗಿದೆ.

ನನ್ನ ಸ್ವ ಅನುಭವದಿಂದ ಹೇಳಬಹುದಾದ ಒಂದು ಉದಾಹರಣೆಯನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ಸರಕಾರಿ ರಸ್ತೆ ಸಾರಿಗೆ ಸಂಸ್ಥೆಗೆ  ನಷ್ಟ ಉಂಟಾಗುವಂತೆ ಹಾಗೂ ಅದರ ಕಾರ್ಯವ್ಯಾಪ್ತಿಯ ಮೇಲೆ ಅಕ್ರಮವಾಗಿ ಒಳ ನುಸುಳಿ ಆತಂಕ ಉಂಟು ಮಾಡುವಂತೆ ವರ್ತಿಸುತ್ತಿದ್ದ ಖಾಸಗಿ ರಸ್ತೆ ಸಂಸ್ಥೆಗಳಿಗೆ ಕಾಂಟ್ರಾಕ್ಟ್ ಕಾನೂನನ್ನು ದುರ್ಬಳಕೆ ಮಾಡಿ ಸಾರಿಗೆ ಇಲಾಖೆಯ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಪರವಾನಿಗೆ ನೀಡುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಕಾರ್ಮಿಕ ಮತ್ತು ನೌಕರರ AITUC ಸಂಘಟಣೆಯ ಆಧ್ಯಕ್ಷ ಎಂಬ ನೆಲೆಯಲ್ಲಿ ಪ್ರಶ್ನಾತೀತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಲೋಕಾಯುಕ್ತರಿಗೆ ನಾನೊಮ್ಮೆ ಮನವಿ ಸಲ್ಲಿಸಿದ್ದೆ. ಆ ಮನವಿಯನ್ನು ಸ್ವೀಕರಿಸಿ ಖಾಸಗಿಯವರಿಗೆ ಈ ರೀತಿ ಅವಕಾಶ ನೀಡುವುದನ್ನು 15 ದಿನಗಳೊಳಗೆ ತಡೆಗಟ್ಟದಿದ್ದರೆ ಅದಕ್ಕೆ ಕಾರಣರಾದ ಸಾರಿಗೆ ಇಲಾಖೆಯ ಅಧಿಕಾರಿಗಳ ಮೇಲೆ ಕೋರ್ಟು ನಿಂದನೆ ಕ್ರಮವನ್ನು ಜರುಗಿಸಬೇಕೆಂಬ ಆದೇಶವನ್ನು ಲೋಕಾಯುಕ್ತರು ನೀಡಿದ್ದು ಒಂದು ಶ್ಲಾಘನೀಯ ಉದಾಹರಣೆ.

ಅಲ್ಲದೆ ಲೋಕಾಯುಕ್ತರ ಇತ್ತೀಚಿಗಿನ ಕಾರ್ಯವಿಧಾನಗಳು ಅತ್ಯಂತ ಪ್ರಸಂಶನೀಯವಾಗಿವೆ. ನ್ಯಾಯಮೂರ್ತಿ.UL ಭಟ್ ಅವರಿಗೆ ಗಣಿಗಾರಿಕೆಗೆ ಸಂಭಂಧಿಸಿದ ಅಕ್ರಮಗಳ ತನಿಖೆಯನ್ನು ರಾಜ್ಯಸರಕಾರ ಒಪ್ಪಿಸಿತ್ತು. ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ್ದ ಆರೋಪಗಳ ತನಿಖೆಯನ್ನು CBI ಗೆ ಒಪ್ಪಿಸಬೇಕೆಂಬ ನ್ಯಾ.ಮೂ.ಗಳ ಆದೇಶವನ್ನು ಕೇಂದ್ರ ಸರಕಾರ ಜಾರಿಗೆ ತರುವುದರ ಬದಲು ನ್ಯಾ.ಮೂ.ಗಳೇ ರಾಜಿನಾಮೆ ನೀಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಆ ವಿಷಯವೀಗ  ನ್ಯಾ.ಮೂರ್ತಿ.ಸಂತೋಷ್ ಹೆಗ್ಡೆಯವರ ಲೋಕಾಯುಕ್ತದ ಮುಂದಿದ್ದು  ಅವರು ಗಣಿಗಾರಿಕೆಯ ಬಗ್ಗೆ ತನಿಖೆ ಮುಂದುವರಿಸಿ ವರದಿಯನ್ನು ಪೂರ್ಣಗೊಳಿಸಿ ಸರಕಾರಕ್ಕೆ ರವಾನಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಗಣಿ ದೊರೆಗಳ ಪ್ರಭಾವದಿಂದಲೋ ಮಾಜೀ ಅಥವಾ ಹಾಲೀ ಮು.ಮಂತ್ರಿಗಳ ಕೈವಾಡದಿಂದಲೋ ಗಣಿ ಹಗರಣದ ವರದಿಯನ್ನು ಸರಕಾರವು ಇನ್ನೂ ವಿಚಾರಣೆಗೆ ಒಪ್ಪಿಸಲಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ.

ಹಾಗೆಯೇ ಅರಣ್ಯ ನಾಶದ ಬಗ್ಗೆ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆದಿರುವಂಥಾ ಭೂಹಗರಣಗಳ ಬಗ್ಗೆ ನಡೆಸಿರುವ ತನಿಖೆಗಳು ಎಲ್ಲಿಗೆ ತಲುಪಿವೆ ಮತ್ತು ಅವುಗಳ ಫಲಿತಾಂಶವೇನು ಎಂಬ ಸುದ್ದಿ ಕೂಡಾ ಹೊರಗೆ ಬಾರದಂತೆ ತಡೆ ಹಿಡಿಯಲಾಗಿದೆ ಎಂಬುದು ಸಂಶಯಕ್ಕೆ ಎಡೆಯಾಗಿದೆ.

ಇಂತಹ ಸಂದರ್ಭದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಚುರುಕಾಗಿದೆ ಹಾಗೂ ಜನರ ಸೊತ್ತುಗಳ ಅಪಹರಣಗಳ ವಿರುದ್ದ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು  ಅಯೋಗಗಳು ತಯಾರಾಗಿವೆ ಎಂಬ ಭರವಸೆ ಜನರಿಗೆ ಬೇಕಾಗಿದೆ. ಅದಕ್ಕೆ ಪೂರಕವಾಗಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಿರುವ ನ್ಯಾ.ಮೂರ್ತಿ.ಸಂತೋಷ್ ಹೆಗ್ಡೆಯವರ ಮುಂದಾಳುತನದಲ್ಲಿರುವ ಲೋಕಾಯುಕ್ತವು ಸಲ್ಲಿಸಿರುವ ವರದಿಗಳೆಲ್ಲವೂ ಬಹಿರಂಗಗೊಳ್ಳಬೇಕು ಮತ್ತು ಅಂಗೀಕೃತವಾಗಬೇಕು ಹಾಗೂ ಮುಂದಿನ ಕ್ರಮ ಜರುಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಲೋಕಾಯುಕ್ತವು ಇನ್ನಷ್ಟು ಹೆಚ್ಹು ಕಾಲ ಅಧಿಕಾರದಲ್ಲಿ ಮುಂದುವರಿದು ಭ್ರಷ್ಟಾಚಾರದ ನಿರ್ಮೂಲನೆಗೆ ಭದ್ರವಾದ ಬುನಾದಿಯನ್ನು ನಿರ್ಮಿಸಬೇಕೆಂಬ ಸಾರ್ವಾಜನಿಕರ ಅಪೇಕ್ಷೆಯನ್ನು ಅವರ ಚಟುವಟಿಕೆಗಳನ್ನು ಕಂಡು ತಿಳಿದಿರುವ ನಾನು ಹಾರೈಸುತ್ತೇನೆ.

ಲೋಕಾಯುಕ್ತರನ್ನು ಬಲಪಡಿಸುವ ದೃಷ್ಟಿಯಿಂದ ಅವರ ವರದಿಗಳಲ್ಲಿ ತಪ್ಪಿತಸ್ಥರೆಂದು ಉಲ್ಲೇಖಿಸಲಾಗಿರುವ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ಅಪಾದಿತರನ್ನಾಗಿ ವಿಚಾರಣೆಗೆ ಒಳಪಡಿಸುವ ಕ್ರಮವನ್ನು ಕಾನೂನು ತಿದ್ದುಪಡಿ ಮಾಡುವ ಮೂಲಕ ಸರಕಾರ ಜಾರಿಗೆ ತರಬೇಕು ಅಲ್ಲದೆ ಆಪಾದಿತರನ್ನು ಲೋಕಾಯುಕ್ತದ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಿ ಪ್ರಾಥಮಿಕ ತೀರ್ಪು ನೀಡುವ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಬೇಕು. ಈ ಕ್ರಮಗಳನ್ನು ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿಯೇ ಅಂಗೀಕರಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇನೆ.

ಗುಲ್ಬರ್ಗ ಚಳುವಳಿ


ಗುಲ್ಬರ್ಗ ಪೌರ ಕಾರ್ಮಿಕರ ಚಳುವಳಿಯ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಮೇ 27, 2010)

ಗುಲ್ಬರ್ಗ ಪೌರ ಆಡಳಿತ ಕಛೇರಿಯ ಮುಂದೆ ಇಂದಿಗೆ 27 ದಿನಗಳಿಂದ ನಗರದ ಪೌರ ಕಾರ್ಮಿಕರು ಉಪವಾಸ ಸತ್ಯಾಗ್ರಹ ಹೂಡಿದ್ದಾರೆ ಯಾಕೆ?  2 ವರ್ಷಗಳಿಂದ ಕಾನೂನಿನ ಪ್ರಕಾರ ನೀಡಬೇಕಿದ್ದ ಯಾವ ಸವಲತ್ತುಗಳನ್ನೂ ಅವರಿಗೆ ನೀಡದೆ, ದುಡಿಸಿ ಸಂಬಳವನ್ನೂ ಕೊಡದೆ, ಉಪವಾಸ ಕೆಡವಿರುವ ನಗರ ಸಭಾ ಆಡಳಿತದ ವಿರುದ್ಧ ಅವರು ತಮ್ಮ ಜೀವವನ್ನೇ ಪಣವಿಟ್ಟು ಉಪವಾಸ ಹೂಡಿದ್ದಾರೆ. ಸರಕಾರವೇ ಅವರನ್ನು ಆತ್ಮಹತ್ಯೆಗೆ ತಳ್ಳಿದೆ. ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳು, ಮುಖ್ಯ ಮಂತ್ರಿಗಳು ಸಹಾ ಆತ್ಮಹತ್ಯೆಗೆ ಪ್ರೇರಣೆ ಮತ್ತು ಒತ್ತಡ ಹೇರಿದ ಅಪರಾಧಕ್ಕೆ ಹೊಣೆಗಾರರಾಗಿದ್ದಾರೆ.  ಶಿಕ್ಷಾರ್ಹರೂ ಆಗುತ್ತಾರೆ. ಕೇಂದ್ರ ಸರಕಾರದ ಕಾರ್ಮಿಕ ಸಚಿವರು ಗುಲ್ಬರ್ಗ ಜಿಲ್ಲೆಯವರೇ ಆಗಿದ್ದು ಕಾನೂನು ಪ್ರಕಾರ ಮಧ್ಯ ಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಉಪವಾಸ ಸತ್ಯಾಗ್ರಹದ ನಡುವೆ ಮರಣ ಹೊಂದಿರುವ ದಲಿತ ಕಾರ್ಮಿಕ ಮಹಿಳೆಯ ವಿಚಾರವನ್ನು ಕೇಂದ್ರ ಸರಕಾರ ತನಿಖೆಗೆ ಒಳಪಡಿಸಿ ಅದಕ್ಕೆ ಕಾರಣರಾಗಿರುವರ ಅಸಡ್ಡೆ ಇನ್ನು ಮರುಕಳಿಸದಂತೆ ಕಾನೂನನ್ನು ಚುರುಕುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಾರೆ. ಕಾರ್ಮಿಕರನ್ನು ದುಡಿಸಿ ನ್ಯಾಯವಾದ ವೇತನ ಮತ್ತಿತರ ಸವಲತ್ತುಗಳನ್ನು ಕೊಡದೆ ಸಾಯಿಸುವ ಮಂದಿ ಕರ್ನಾಟಕದಲ್ಲಿ ಅಧಿಕಾರದ ಮರೆಯಲ್ಲಿ ಸಾಕಷ್ಟು ಇದ್ದಾರೆ ಎಂಬ ವಿಚಾರ ಬಯಲಾಗಿದೆ. ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಅಂಬವ್ವ ಎಂಬ ದಲಿತ  ಮಹಿಳೆ ಸತ್ಯಾಗ್ರಹದ ಮೊದಲನೆಯ ಹುತಾತ್ಮರಾಗಿದ್ದಾರೆ. ಅವರನ್ನು ಬೆಂಬಲಿಸಿದ ಮತ್ತು ನ್ಯಾಯಕ್ಕಾಗಿ ಶಾಂತಿಯುತ ಸುಸಂಘಟಿತ ನ್ಯಾಯಬದ್ದ ಹೋರಾಟ ನಡೆಸಿದವರಿಗೆ ಬೆಂಬಲ ನೀಡಿದ್ದ ಮಾಜಿ ಕಾರ್ಮಿಕ ಸಚಿವ ಹಿರಿಯ ರಾಜಕಾರಿಣಿ ಎಸ್. ಕೆ. ಕಾಂತಾ ಅವರು ಮತ್ತು ಅವರ ಬೆಂಬಲಿಗರು ಬಂಧನಕ್ಕೆ ಒಳಗಾಗಿದ್ದಾರೆ. ಕರ್ನಾಟಕದ ಆದ್ಯಂತವಾಗಿ ಎಲ್ಲ ಕಾರ್ಮಿಕ ಸಂಘಟಣೆಗಳು, ಎಲ್ಲ ಜನಪರ ಸಂಘ ಸಂಸ್ಥೆಗಳು, ಎಡ ಪಂಥೀಯ ವಿಚಾರವಂತರು, ಕಾರ್ಯಕರ್ತರು ಈ ಕಡೆಗೆ ಕಾಲ ವಿಳಂಬವಿಲ್ಲದೆ ದೃಷ್ಟಿ ಹರಿಸಬೇಕೆಂದು ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ. 

ಕರ್ನಾಟಕದಲ್ಲಿ ಕಾರ್ಮಿಕ ಚಳುವಳಿಯ ಆರಂಭದ ಕಾಲದಲ್ಲಿಯೇ ಗುಲ್ಬರ್ಗ, ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ. ದಾರವಾಡ, ಉಡುಪಿ ಹಾಗೂ ಇತರ ಅನೇಕ ಕೇಂದ್ರಗಳಲ್ಲಿ ಪೌರ ಕಾರ್ಮಿಕರು ಕೆಂಬಾವುಟದ ಕೆಳಗೆ ಸಂಘಟಿತರಾಗಿ ಹೋರಾಟ ನಡೆಸಿ ಪಡೆದಿದ್ದ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಹಾಗೂ ತಲೆಯ ಮೇಲೆ ಮಲ ಹೊರಿಸುವ ಅಮಾನುಷ ಕ್ರಮಗಳ ನಿಷೇಧವನ್ನು ಜಾರಿ ಗೊಳಿಸಿದ್ದು ನಮಗೆ ಇನ್ನೂ ಮರೆತಿಲ್ಲ. ಕರ್ನಾಟಕ ಸರಕಾರವು ಅಮಾನುಷವಾದ ಕಾರ್ಮಿಕ ವಿರೋಧಿ ಮತ್ತು ದಲಿತ ವಿರೋಧಿ ಮಾರ್ಗವನ್ನು ಕೈ ಬಿಟ್ಟು ದುಡಿಯುವವರ ಹಕ್ಕು ಭಾದ್ಯತೆಗಳನ್ನು ಕಾನೂನು ಕ್ರಮಗಳಿಂದ ಸಂರಕ್ಷಿಸಬೇಕು. ಅಂಬವ್ವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಕರ್ನಾಟಕದ ಕಾರ್ಮಿಕ ಸಂಘಟಣೆಗಳು ಈ ವಿಚಾರದಲ್ಲಿ ರಾಜ್ಯವ್ಯಾಪಕ ಚಳುವಳಿಯನ್ನು ನಡೆಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ವಾರ್ತಾಭಾರತಿ ಈ ಬಗ್ಗೆ ತನ್ನ ದಿ.26.5.10 ರ ಸಂಪಾದಕೀಯದ ಮೂಲಕ  ಅಭಿಪ್ರಾಯ ವ್ಯಕ್ತಪಡಿಸಿರುವುದು ಸ್ತುತ್ಯರ್ಹ. 

ಈ ಪ್ರಕರಣಕ್ಕೆ ಸಂಭದಿಸಿ  ಸರಕಾರ ಹೂಡಿರುವ ಎಲ್ಲ ಮೊಕ್ಕದ್ದಮೆಗಳನ್ನು ಹಿಂದೆಗೆದುಕೊಳ್ಳಬೇಕೆಂದೂ, ಬಂಧನದಲ್ಲಿರಿಸಿರುವ ಎಲ್ಲರನ್ನೂ  ಬಿಡುಗಡೆ ಮಾಡಬೇಕೆಂದೂ, ಕಾರ್ಮಿಕರಿಗೆ ಸಲ್ಲಬೇಕಾಗಿರುವ ಎಲ್ಲವನ್ನೂ ಸಲ್ಲಿಸಬೇಕೆಂದೂ ಈ ಮೂಲಕ ಒತ್ತಾಯಿಸುತ್ತೇನೆ. 

ಮೇ ದಿನಾಚರಣೆ

ಮೇ ದಿನಾಚರಣೆಯ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಎಪ್ರಿಲ್ 27, 2010)

ಮೇ ದಿನಾಚರಣೆಯನ್ನು ಇಂದು ಜಗತ್ತಿನ ಎಲ್ಲ ದೇಶಗಳಲ್ಲಿಯೂ ಕಾರ್ಮಿಕ ವರ್ಗದ ಕ್ರಾಂತಿಕಾರಿ ಹೋರಾಟದ ವಾರ್ಷಿಕ ಜಾಗತಿಕ ದಿನವನ್ನಾಗಿ ಆಚರಿಸಲಾಗುತ್ತದೆ. ಇದಕ್ಕೆ ಕಾರಣವಾಗಿರುವ ಐತಿಹಾಸಿಕ ಘಟಣೆಯು ಘಟಿಸಿದ್ದು ಮೇ ತಿಂಗಳ ತಾ.1, 1786 ರಂದು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಶಿಕಾಗೊ ನಗರದ ಹೇ ಚೌಕ ಎಂಬಲ್ಲಿ. ಸಾಮ್ರಾಜ್ಯಶಾಹಿ ಅಮೆರಿಕದ ಒಂದು ಪ್ರಮುಖ ನಗರದಲ್ಲಿ ನಡೆದ ಕಾರ್ಮಿಕ ದಮನದ ಈ ಘಟನೆಯು ಅಂತಹ ಮೊತ್ತ ಮೊದಲನೆಯ ಕ್ರೌರ್ಯವಾಗಿತ್ತು,  ಶ್ರಮಜೀವಿಗಳ ಮರ್ದನ, ದೌರ್ಜನ್ಯ ಹಾಗೂ ಮಾನವೀಯ ಮೌಲ್ಯಗಳ ದಮನ ಇತ್ಯಾದಿಗಳ ಆ ಆರಂಭದ ಹೆಜ್ಜೆಯ ಕರಿ ಛಾಯೆಯುಇಂದಿಗೂ ಪ್ರಕಟಗೊಳ್ಳುತ್ತಿರುವುದನ್ನು ಕಾಣಬಹುದು. ಸಾಮ್ರಾಜ್ಯವಾದದ ತುತ್ತ ತುದಿಗೆ ಏರಿ ಜಗತ್ತಿನ ಮೇಲೆ ಪರಮಾಣು ಆಯುಧದಂತಹ ವಿನಾಶಕಾರಿ ಸಾರ್ವಭೌಮ ಅಧಿಕಾರ ಹೊಂದಿರುವ ಸಾಮ್ರಾಜ್ಯವಾದವು ಖಾಸಗಿ ಲಾಭದ ಗಳಿಕೆ ಮತ್ತು ಅಧಿಕಾರ ಒಂದೇ ಪರಮ ಗುರಿಯಾಗಿ ಇರುವಂತಹ ನೆಲೆಗೆ ಬಂದು ತಲುಪಿದೆ. ಅಂದಿನ ಸಾಮ್ರಾಜ್ಯವಾದಕ್ಕೂ ಇಂದಿನ ಒಬಾಮ ನಿರ್ದೇಶಿತ ವಿಶ್ವರಾಜಕಾರಣದ ಪ್ರದರ್ಶನಕ್ಕೂ ಬಹಳ ವ್ಯತ್ಯಾಸವಿದೆ. ಅಂದು ಸಾಮ್ರಾಜ್ಯವಾದದ ಗುರುತು ಇನ್ನೂ ಸ್ಪಷ್ಟ ಸ್ವರೂಪ ಹೊಂದಿರಲಿಲ್ಲ. ಪ್ರಜಾಪ್ರಭುತ್ವದ ಮೊಸಳೆ ಕಣ್ಣೀರಿನ ವಿಷ ಎಂತಹುದೆಂಬುದು ಅಂದು ಪ್ರತ್ಯಕ್ಷವಾಗಿರಲಿಲ್ಲ. ಆದರೆ ಬಂಡವಾಳಶಾಹಿಯೆಂಬ ಒಂದು ಮನುಷ್ಯ ನಿರ್ಮಿತ ಸಮಾಜದ ಸ್ವರೂಪ ಹಾಗೂ ಉತ್ಪಾದನಾ ವಿಧಾನಗಳ ಅಮಾನುಷ ಸ್ವರೂಪ  ಸಾಕಷ್ಟು ಬೆಳಕಿಗೆ ಬಂದಿತ್ತು. ಇಂದು ಎಲ್ಲ ದೇಶಗಳ ಪ್ರಭುತ್ವಗಳು ಸಹಾ ಕಾರ್ಮಿಕರಿಗೆ ಮಾನವೀಯ ಮೌಲ್ಯಗಳ ಅಧಿಕಾರ ಇದೆ ಎಂಬುದಕ್ಕೆ ಬರೇ ಮಾತಿನ ಅಂಗೀಕಾರ ದೊರಕಿರುವುದೇನೋ ನಿಜ. ಆದರೆ ಕಾರ್ಯದಲ್ಲಿ ವಿಶ್ವದ ಮಾನವ ಕೋಟಿಯ ಬದುಕನ್ನು ಸಾಮ್ರಾಜ್ಯವಾದವೆಂಬ ಆಡಳಿತ ಕ್ರಮವು, ರಾಜಕೀಯ ವಿಚಾರವು, ಸಂವಿಧಾನಿಕ ಪ್ರಭುತ್ವಗಳ ಸ್ವರೂಪಗಳು ಎಂತೆಂತಹ ಅಂದ-ಚೆಂದದ ವೇಷಗಳನ್ನು ಧರಿಸಿ ಈ ಧರೆಯಲ್ಲಿ ತಾಂಡವ ನೃತ್ಯ ಆಡುತ್ತಿದೆ. ಭಾರತದ ಮಟ್ಟಿಗಂತೂ ಒಂದೇ ಒಂದು ಪ್ರತ್ಯಕ್ಷ ನಿದರ್ಶನದಿಂದಲೇ  ಅದರ ನಿಜ ಬಣ್ಣವನ್ನು ಬಯಲುಗೊಳಿಸುವುದು ಸಾಧ್ಯವಾಗುತ್ತದೆ.

ಅತೀ ಹಿರಿಯ ಹಾಗೂ ಅತ್ಯಂತ ಉತ್ಕೃಷ್ಟವಾದ ಪ್ರಜಾಪ್ರಭುತ್ವ ಎಂದುಕೊಳ್ಳುವ ಈ ನಾಡಿನಲ್ಲಿ ಒಟ್ಟು ಜನ ಸಂಖ್ಯೆಯ ಶೇ.80 ಮಂದಿ ಪ್ರಜೆಗಳು ತಮ್ಮ ಮತದಾನದಿಂದಲೇ ತಮ್ಮ ಮೇಲೆ ಹೇರಿಕೊಂಡಿರುವ ವ್ಯವಸ್ಥೆಯಲ್ಲಿ ದಿನಕ್ಕೆ 20 ರೂ.ಗಳಲ್ಲಿ ಇಡೀ ದಿನದ ಕಷ್ಟಕಾರ್ಪಣ್ಯಗಳನ್ನು ತುಂಬಿದ ಬದುಕನ್ನು ನಿಭಾಯಿಸಬೇಕಾದ ಶಾಪವನ್ನು ಸುತ್ತಿಕೊಂಡಿದ್ದಾರೆ. ಅದೇ ಸಮಯದಲ್ಲಿ ದಿನಕ್ಕೆ 20 ಕೋಟಿ ರೂ.ಗಳನ್ನೂ ಮೀರಿದ ಆದಾಯ ಮತ್ತು ಐಶಾರಾಮಿ ಜೀವನ ನಡೆಸುವ ಮನುಷ್ಯ ಪ್ರಾಣಿಗಳ ಅಧಿಕಾರದ ಅಡಿಯಲ್ಲಿ ಈ ಜನರು ನರಳುತ್ತಿರುವುದು ಕಂಡುಬರುತ್ತಿದೆ. ಇದು ವಿಶ್ವದ ಬಂಡವಾಳಶಾಹಿ ವ್ಯವಸ್ಥೆಯ ಒಟ್ಟು ಫಲಿತಾಂಶ ಎನ್ನುವಾಗ ಈ ವ್ಯವಸ್ಥೆಯನ್ನು ಕಿತ್ತೊಗೆದು ಸಮಾಜವಾದಿ ಪಥದಲ್ಲಿ ಶೋಷಣೆ ಮರ್ದನೆಗಳನ್ನೆಲ್ಲಾ ಅಳಿಸಿ  ಮಾನವ ಸಂಕುಲದ ಅತ್ಯಂತ ಸುಂದರವಾದ ಕನಸುಗಳನ್ನು ನನಸಾಗಿಸುವ ಪಥದಲ್ಲಿ ಮುಂದೆ ಹೆಜ್ಜೆ ಹಾಕುವುದಕ್ಕೆ ಶ್ರಮಜೀವಿ ವರ್ಗ ಸನ್ನದ್ಧರಾಗಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ನಿಚ್ಚಳವಾಗುತ್ತದೆ. ಕಾಲವೇನೋ ಇಂತಹ ಅನೇಕ ಸನ್ನಿಹಿತ ಸಂಧಿ ಘಟ್ಟಗಳನ್ನು ದಾಟಿ ದಾಟಿ ಸಫಲತೆ ಕಾಣದ ಹೆಜ್ಜೆ ಗುರುತುಗಳನ್ನಷ್ಟೇ ಬಿಟ್ಟು ಹೋಗಿದೆ. ಇಂದಿನ ಪರಿಸ್ಥಿತಿಯನ್ನು ಅಂತಹ ಒಂದು ಹೆಜ್ಜೆ ಗುರುತೆಂದು ಹೇಳಬಹುದೆಂದಾದರೂ ಸಹಾ ಅದು ಮಾನವ ಸಂಕುಲದ ಕ್ರಾಂತಿಕಾರಿ ಯುಗ ಪರಿವರ್ತನೆಯ  ಯಶಸ್ಸನ್ನು ಕಾಣುತ್ತದೆಯೋ ಅಥವಾ ಬರಿ ಗುಲ್ಲುಗಳ ಮತ್ತು ಹೊಸ ಸಂಕೋಲೆಗಳ ಸೃಷ್ಟಿಯಾಗಿ ಇನ್ನೂ ದೀರ್ಘ ಕಾಲ ಮನುಷ್ಯನನ್ನು ಪೀಡಿಸುತ್ತಿದೆಯೋ ಎನ್ನುವುದರ ಬಗ್ಗೆ ಆಳವಾಗಿ ಮತ್ತು ವ್ಯಾಪಕವಾಗಿ ಸಮಸ್ತ ಮಾನವ ಸಂಕುಲದ ಇರವು ಅರಿವು ಗಳ ಅವಲೋಕನದಿಂದಷ್ಟೇ ಊಹಿಸಲು ಸಾಧ್ಯವಾಗಬಹುದಾದ ಸ್ಥಿತಿಯಲ್ಲಿ ನಾವಿದ್ದೇವೆ. ಇದು ಇಂದಿನ ದುರಂತಗಳಲ್ಲಿ ಒಂದು ಎಂದರೆ ತಪ್ಪಾಗದು, ಮನುಷ್ಯ ಸಂಕುಲವು ಕ್ರಾಂತಿಕಾರಿ ಪರಿವರ್ತನೆಯ ಹಲವಾರು ಮಜಲುಗಳನ್ನು ದಾಟಿ ಬಂದಿದೆ. ಆದರೆ ಮನುಷ್ಯನು ತನ್ನ ಒಡಲೊಳಗಿನ ಚೇತನದ ಚೇತನ ಎನ್ನಬಹುದಾದ ಉತ್ಕೃಷ್ಟ ಉತ್ಪಾದನಾ ಸಾಮರ್ಥ್ಯ ಮತ್ತು ಶ್ರಮ ಶಕ್ತಿಯನ್ನು ಒಂದು ಅಗ್ಗದ ಸರಕಾಗಿ 3 ಕಾಸಿಗೆ ವಿಕ್ರಯಿಸಿ ಬದುಕಬೇಕಾದಂತಹ ದಾಸ್ಯ ಸಂಕೋಲೆಗಳಿಂದ ಪಾರಾಗುವುದಕ್ಕೆ ಅನೇಕ ಪ್ರಯತ್ನಗಳನ್ನು ನಡೆಸಿ ಜಯಗಳಿಸಿ ದೀರ್ಘ ಕಾಲ ಉಳಿಸಿ ಬೆಳೆಸಿ ಭವ್ಯವಾದ ಸಮಾಜವಾದಿ ವ್ಯವಸ್ಥೆಯೊಂದನ್ನು ಕಟ್ಟಿ ಬೆಳೆಸಿ ಹಿಟ್ಲರ್ ನಂಥಹ ಪಿಶಾಚಿಯೊಂದನ್ನು ನಿರ್ಮೂಲನಗೊಳಿಸಿ ಜಾಗತಿಕ ಜಯದ ಹಂತಕ್ಕೆ ತಲುಪಿದ್ದನ್ನು ಇಂದು ನಾವು ನೆನಪಿಸಿಕೊಳ್ಳಬೇಕು. ವಿಶ್ವಕಾರ್ಮಿಕರು ಒಗ್ಗಟ್ಟಾಗಿ ಸಮಾಜವಾದಿ ವ್ಯವಸ್ಥೆಯನ್ನು ಸಂರಕ್ಷಿಸುವ ಕರ್ತವ್ಯದಲ್ಲಿ ಒಂದಾಗಿ ಮಾನವನ ಇರವು ಅರಿವುಗಳು  ಹೋರಾಟದ ಕೆಂಬಾವುಟವಾಗಿ ನಭೋಮಂಡಳದಲ್ಲಿ ಎಂದೆಂದಿಗೂ ಹಾರಾಡುತ್ತಿರುವಂತೆ ಮಾಡುವ ಗುರಿಯನ್ನು ನಮ್ಮದಾಗಿಸೋಣವೇ ಎಂಬ ಪ್ರಶ್ನೆಗೆ ಇಂದು ಸ್ಪಷ್ಟ ಉತ್ತರ ಬೇಕಾಗಿದೆ. ನಮ್ಮೊಳಗಿನ ಕಚ್ಚಾಟದಿಂದ ಕೈ ಕೊಡವಿ ದಾಸ್ಯ ಸಂಕೋಲೆಗೆ ಹತ್ತು ಹಲವು ನಾಮಗಳ ಪಟ್ಟಿಗಳನ್ನು ಬೆಸೆಯುವುದರಲ್ಲಿ ತೃಪ್ತಿ ಗೊಂಡು ಸಾಗುತ್ತಿರುವ ದುರವಸ್ಥೆಯನ್ನು ನಾವಿಂದು ಕಾಣುತ್ತಿದ್ದೇವೆ. ಯಾವುದು 224 ನೆಯ ಶಿಕಾಗೋ ಹೋರಾಟದ ಸಂಸ್ಮರಣೆಯ ದಿನಾಚರಣೆಯ ಆಯ್ಕೆ ಎಂಬ ಪ್ರಶ್ನೆ ಇಂದು ನಮ್ಮನ್ನು ದಿಟ್ಟಿಸಿ ನೋಡುತ್ತಿದೆ. ಈ ಕಿರು ಬರಹದಲ್ಲಿ ಅದನ್ನು ಸಮರ್ಪಕವಾಗಿ ಮತ್ತು ಸವಿಸ್ತಾರವಾಗಿ ನಿರೂಪಣೆ  ಮಾಡುವ ಸಾಹಸ ಇದು ಆಗಲಾರದು. ಅದರ ಒಂದು ಕಿರು ಇಣುಕು ನೋಟ ಮಾತ್ರ ಇದಾಗಬಹುದೇನೋ.

2010 ರ ಈ ವರ್ಷದ ಮೇ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಸಂಘಟಿತ ಕಾರ್ಮಿಕ ವರ್ಗವು ಬೆಲೆ ಏರಿಕೆಯ ವಿರುದ್ದ ಮತ್ತು ಬೆಲೆ ಏರಿಕೆಯನ್ನು ಸರಿದೂಗಿಸುವ ಕನಿಷ್ಠ ವೇತನ ಸಹಿತ ತುಟ್ಟಿ ಭತ್ತೆಯ ಹಕ್ಕನ್ನು ಎಲ್ಲ ಶ್ರಮಜೀವಿಗಳು ಪಡೆಯುವಂತೆ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕಾರ್ಯ ತಂತ್ರ ರೂಪಿಸೋಣ. ಅಸಂಘಟಿತ ಕಾರ್ಮಿಕ ವಲಯದಲ್ಲಿ ಎಲ್ಲ ಹಕ್ಕುಗಳನ್ನು, ಸೌಲಭ್ಯಗಳನ್ನು ಕಾರ್ಯತ: ಇನ್ನೂ ಪಡೆಯದ ವಿಭಾಗದ ಜನರನ್ನು ಸಂಘಟಿತ ಕಾರ್ಮಿಕ ವಲಯವನ್ನಾಗಿ ಹೋರಾಟಕ್ಕೆ ಇಳಿಸುವುದು ಇಂದಿನ ರಾಷ್ಟೀಯ ಕಾರ್ಮಿಕ ಸಂಘಟಣೆಗಳ ಅಂಗೀಕೃತ ಕರ್ತವ್ಯವಾಗಿದೆ. ಶ್ರಮಜೀವಿಗಳಲ್ಲಿ ಪುರುಷರಷ್ಟೇ ಮಹಿಳೆಯರೂ ಇದ್ದಾರೆ. ಅವರು ಮಹಿಳೆಯಾಗಿ ಮಾತ್ರವಲ್ಲ ಶ್ರಮಜೀವಿಗಳಾಗಿಯೂ ಎಲ್ಲ ಬಗೆಯ ಮಾನವೀಯ ಹಕ್ಕುಗಳ ಸೌಲಭ್ಯಗಳ ಗಳಿಕೆಗೂ ಅರ್ಹರಾಗಿದ್ದಾರೆ. ಅವರ ಪೋಷಣೆ, ರಕ್ಷಣೆ, ಸಬಲೀಕರಣ ಇತ್ಯಾದಿಗಳು ಇಂದು ಕಾರ್ಮಿಕ ಸಂಘಟಣೆಗಳ ಚಳುವಳಿಗಳ ಆದ್ಯ ಕರ್ತವ್ಯವೆನಿಸುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಪೌಷ್ಟಿಕ ಹಾಗೂ ಸಾಕಷ್ಸ್ಟು ಪ್ರಮಾಣದ ಪೋಷಕಾಂಶಗಳನ್ನು ಒದಗಿಸುವ ಆಹಾರ ಪೂರೈಕೆಯ ಭದ್ರತೆಯು ಇಂದು ಸರಕಾರದ ಕೃತಕ ಬಿಪಿಯಲ್, ಯೆಪಿಯಲ್ ರೇಖೆಗಳಿಂದ ವಿರಹಿತವಾಗಿ ದುಡಿಯುವವರಿಗೆಲ್ಲರಿಗೂ ಕ್ರಮಬದ್ದವಾದ ಪೂರೈಕೆಯ ಹಕ್ಕನ್ನು ಇಂದಿನ ಆಡಳಿತಗಾರರು ಯಾವ ಸಬುಬೂ ನೀಡದೆ ಅನುಸರಿಸಬೇಕಾಗಿದೆ. ಕೊನೆಯದಾಗಿ ಶತಮಾನಗಳ ಹೋರಾಟದ ಪರಂಪರೆ ಹಾಗೂ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಹೋರಾಟಗಳ ಅನುಭವಗಳಿರುವ ನಮ್ಮ ನಾಡಿನ ಕಾರ್ಮಿಕ ವರ್ಗ ಬಂಡವಾಳಶಾಹಿಯಿಂದ ಸಮಾಜವಾದಕ್ಕೆ ಪರಿವರ್ತನೆಯನ್ನು ಸಾಧಿಸುವ ಮಾರ್ಗದಲ್ಲಿ ಮತ್ತೊಮ್ಮೆ ಚರಿತ್ರಾರ್ಹ ಜಯ ಸಾಧಿಸುವ ಪಣವನ್ನು ಈ ಸಂಧರ್ಭದಲ್ಲಿ ಅಂಗೀಕರಿಸಬೇಕಾಗಿದೆ. ಪ್ರಸ್ತುತ ಮೇ ದಿನ ಈ ದಿಸೆಯಲ್ಲಿ ನಮಗೆ ಸ್ಪೂರ್ತಿ ಮತ್ತು ಮಾರ್ಗದರ್ಶನ ನೀಡುವಂತಾಗಲಿ.

ಚೆಲುವ ಕನ್ನಡ ನಾಡು ಆರು ದಶಕಗಳಲ್ಲಿ ಎಲ್ಲಿಂದ ಎಲ್ಲಿಗೆ?

ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬರೆದ ಲೇಖನ  (ದಿನಾಂಕ ಫೆಬ್ರವರಿ 24, 2010)

ಕರ್ನಾಟಕದ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 1947 ರಲ್ಲಿ ತೆಂಕನಾಡು ಕಾಸರಗೋಡಿನಲ್ಲಿ ಅನೇಕ ನಿರೀಕ್ಷೆಗಳ ಮತ್ತು ಹೋರಾಟದ ಕೆಚ್ಚಿನ ನಡುವೆ ಜರಗಿತ್ತು. ಕಾಸರಗೋಡು ಈ ಬರಹಗಾರನ ಹುಟ್ಟೂರು. ಅಂದಿನ ಸಮ್ಮೇಳನದಲ್ಲಿ ನಾಡಿನ ಹಿರಿಯ ಸಾಹಿತಿಗಳ ಸ್ವಾಗತದ ವ್ಯವಸ್ಥೆ ನಡೆಸಿದ್ದ ಸ್ವಯಂ ಸೇವಕ ತಂಡದಲ್ಲಿ ಓರ್ವ ಕಾರ್ಯ ನಿರ್ವಾಹಕನಾಗಿ ಈತ ಆ ಸಮ್ಮೇಳನದಲ್ಲಿ ಭಾಗಿಯಾಗಿದ್ದ. "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬದುಕು ಬಲುಹಿನ ಬೀಡು, ಸದಭಿಮಾನದ ಗೂಡು" ಎಂಬುದು ಅಂದಿನ ಸಾಹಿತ್ಯ ಪರಿಷತ್ತಿನಲ್ಲಿ ಮೊಳಗಿದ್ದ ಕನ್ನಡ ನಾಡ ಗೀತೆಯಾಗಿತ್ತು. ಅದಾಗಿ 63 ವರ್ಷಗಳೇ ಸಂದು ಹೋಗಿವೆ. ಈ ಅವಧಿಯಲ್ಲಿ ಪರ್ಯಾಯವಾಗಿ ಭೂ ಸ್ವಾಮಿಗಳ, ಬಂಡವಾಳಗಾರರ, ಅರಸೊತ್ತಿಗೆಗಳ ಪ್ರತಿನಿಧಿಗಳನ್ನೊಳಗೊಂಡ ಎಲ್ಲ ರಾಜಕೀಯ ಪಕ್ಷಗಳು ಕರ್ನಾಟಕವನ್ನು ಆಳಿವೆ.  ಕರ್ನಾಟಕ ಏಕೀಕರಣವಾಗಿ 53 ವರ್ಷಗಳೇ ಆಗಿ ಹೋಗಿವೆ. ಜಾತ್ಯಾತೀತ ಜನತಾದಳ ಮತ್ತು ಹಿಂದುತ್ವವಾದಿ ಭಾಜಪ ಸಮ್ಮಿಳಿತವಾಗಿ 20 ತಿಂಗಳುಗಳ ಕಾಲ ಸರಸವಾಡುತ್ತಾ ಈ ನಾಡನ್ನು ಇತ್ತೀಚೆಗೆ ಆಳಿವೆ. ಕೊನೆಗೀಗ ಕಮಲ ಶಸ್ತ್ರ ಚಿಕಿತ್ಸೆ ಹಾಗೂ ಕುದುರೆಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರದ ಮೂಲಕ ಹಿಂದುತ್ವವಾದಿಗಳ ಎದುರಿಲ್ಲದ ಆದರೆ ಒಳಜಗಳ ಮುಗಿಯದ ಆಡಳಿತ ನಡೆಯುತ್ತಿದೆ. ಈ ಅವಧಿಯಲ್ಲಿ ಮೊನ್ನೆ ಗದುಗಿನ ಕುಮಾರವ್ಯಾಸನ ನಾಡಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮತ್ತೊಮ್ಮೆ ಜರಗಿದ್ದುದನ್ನು ನಾವು ಗಮನಿಸಿದ್ದೇವೆ. ಈ ಕಾಲಾವಧಿಯ ನಡುವೆ ಉದಯವಾದ ಕನ್ನಡ ನಾಡು ಎಲ್ಲಿಂದ ಎಲ್ಲಿಗೆ ತಲುಪಿದೆ ಎಂದು ನೋಡುವಾಗ ಜನರ ಬವಣೆಗಳ ನಡುವೆ ಆಳುವವರ ದುಂದುಗಾರಿಕೆಯ ಚಿತ್ರಣ ಕಣ್ಣ ಮುಂದೆ ಕುಣಿಯುತ್ತಿದೆ.  ಸಮ್ಮೇಳನದ ಅದ್ಯಕ್ಷೆ ನಾಡೋಜ ಪ್ರಶಸ್ತಿ ವಿಜೇತ ಡಾ.ಗೀತಾ ನಾಗಭೂಷಣ್ ಅವರು ನಮ್ಮ ಕನಸೆಲ್ಲಿ ನುಚ್ಹು ನೂರಾಗಿದೆ ಎಂಬ ಅಳಲನ್ನು ತೋಡಿಕೊಂಡರು. ಕರ್ನಾಟಕದ ನಾಡು ನುಡಿ ಜನ ಜೀವನ ಆರ್ಥಿಕ ಮತ್ತು ಸಾಂಸ್ಕ್ರತಿಕ ಅಭಿವೃದ್ಧಿಯ ಸಲುವಾಗಿ ಸಾಹಿತಿಗಳು ಹೋರಾಟಕ್ಕೆ ಇಳಿಯಬೇಕು,  ಜನರು ಜಾತಿ, ಮತ, ಲಿಂಗ, ಪ್ರಾದೇಶಿಕ ಭೇಧ ಭಾವಗಳನ್ನು ಬದಿಗಿಟ್ಟು ಭವ್ಯ ಕನ್ನಡ ನಾಡನ್ನು ಕಟ್ಟುವ ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದು ಕರೆ ಕೊಟ್ಟಿದ್ದಾರೆ.  ಕಾಸರಗೋಡಿನಿಂದ ಗದಗಿಗೆ ಕನ್ನಡದ ತೇರು ಸಾಗಿ ಬಂದಾಗ ಮುಂದಿನ ಹಾದಿ ಎಷ್ಟು ಕಠಿಣವಾದದ್ದು ಮತ್ತು ದೀರ್ಘವಾದದ್ದು ಎಂಬ ಚಿಂತೆ ನಮ್ಮನ್ನು ಕಾಡುತ್ತದೆ. ಆದರೆ ಅದೇ ಸಮಯದಲ್ಲಿ ಸಮ್ಮೇಳನದ ಅಧ್ಯಕ್ಷೆಯವರ ಮಾತಿಗೆ ದ್ವನಿ ಕೂಡಿಸುವ ಸಾಹಿತಿಗಳ ಭಾಷಣಗಳು ನಮ್ಮಲ್ಲಿ ಭರವಸೆಯನ್ನು ಮೂಡಿಸುತ್ತದೆ. 
ಕಾಸರಗೋಡನ್ನು ಕನ್ನಡನಾಡು ಕಳೆದುಕೊಂಡಿದೆ. ಆದರೆ ಕನ್ನಡ ಅಲ್ಲಿ ಜೀವಂತವಿದೆ. ತುಳು, ಕನ್ನಡ, ಮಲಯಾಳ ಮತ್ತು ಅವುಗಳ ಉಪಭಾಷೆಗಳು ಅಲ್ಲಿ ಸೌಹಾರ್ದತೆಯ ನೆಲೆಯಲ್ಲಿ ಸಮನ್ವಯತೆಯ ತಳಹದಿಯ ಮೇಲೆ ಜನಜೀವನವನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿ ನಿರತವಾಗಿವೆ ಎಂದರೆ ಕೇವಲ ಉಪಚಾರದ ಮಾತಲ್ಲ. ಕನ್ನಡ ಜನರ ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಮುದಾಯಿಕ ಜೀವಂತಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಅಲ್ಲಿ ಮುಂದುವರಿದಿದೆ. ವಿದ್ವೇಷಗಳಿಗೆ ಎಡೆಕೊಡದೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಜೀವನದ ದಿಗ್ಗಜಗಳು ಅಲ್ಲಿ ನೆಲೆಸಿದ್ದಾರೆ ಮತ್ತು ಚಟುವಟಿಕೆಯಲ್ಲಿದ್ದಾರೆ ಎನ್ನುವುದು ಸಂತೋಷದ ಸಂಗತಿ.

ಆದರೆ ಗಂಡು ಮೆಟ್ಟಿನ ಕನ್ನಡ ನೆಲ ಎಂದುಕೊಳ್ಳುವ ಉತ್ತರ.ಕರ್ನಾಟಕದಲ್ಲಿ ಕನ್ನಡನಾಡನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿರುವುದು ಹಾಗೂ ಕನ್ನಡದ ಸಂರಕ್ಷಣೆಯ ಹೆಸರಿನಲ್ಲಿ ಕರ್ನಾಟಕವನ್ನು ಹೋಳು, ಹೋಳುಗಳಾಗಿಸುವ ಚಳುವಳಿಗಳು ನಡೆಯುತ್ತಿರುವುದು ಆತಂಕದ ವಿಷಯವಾಗಿದೆ.  ನಮಗೊಂದು ಉಚ್ಛ ನ್ಯಾಯಾಲಯದ ಪೀಠ ಬೇಕು, ಗಡಿಗಳ ಪುನರ್ರಚನೆ ಈಗಿಂದೀಗಲೇ ನಡೆಯಬೇಕು ಇತ್ಯಾದಿ ಬೇಡಿಕೆಗಳು ಕರ್ನಾಟಕ ವಿಭಜನೆಗೊಳ್ಳಬೇಕೆಂಬ ರೂಪಕ್ಕೆ ಆಗಾಗ ತಿರುಗುತ್ತಿರುವುದು ಅಪಾಯದ ಸಂಕೇತವಾಗಿದೆ. ದೇಶದಲ್ಲಿ ಸಹಜವಾಗಿ ಇರುವಂತಹ ವೈವಿದ್ಯತೆಗಳೆಲ್ಲವನ್ನೂ ವೈರುಧ್ಯಗಳಾಗಿ ಹರಿತಗೊಳಿಸಿ ದೇಶವನ್ನೇ ಅಪಾಯಕ್ಕೆ ಗುರಿಪಡಿಸುವ ಪ್ರವೃತ್ತಿಗಳು ಕನ್ನಡ ನಾಡಿನಲ್ಲಿಯೂ ತೀವ್ರವಾಗಿಯೇ ಇವೆ. ಸಮ್ಮೇಳನದ ಅಧ್ಯಕ್ಷರು ಈ ಅಪಾಯವನ್ನು ಕುರಿತು ನೀಡಿರುವ ಎಚ್ಚರಿಕೆಯ ಮಾತನ್ನು ನಾಡಿನ ಮತ್ತು ದೇಶದ ಏಕತೆ, ಧೃಡತೆ ಮತ್ತು ಪ್ರಗತಿಯನ್ನು ಅಪೇಕ್ಷಿಸುವ ನಾವೆಲ್ಲರು ಸಹಾ ಬೆಂಬಲಿಸುತ್ತೇವೆ ಎಂದು ಹೇಳುವ ಅಗತ್ಯ ಇದೆ.

ನಮ್ಮ ಚೆಲುವ ಕನ್ನಡ ನಾಡಿನ ಇಂದಿನ ದುರವಸ್ಥೆಯ ಚಿತ್ರಣವನ್ನೊಮ್ಮೆ ಪಕ್ಷಿನೋಟದಂತೆ ಗಮನಿಸೋಣ.  ಹುಯಿಲಗೋಲ ನಾರಾಯಣರಾಯರು ರಚಿಸಿದ್ದ ಹಾಗೂ ಬೆಳಗಾವಿಯಲ್ಲಿ ಗಾಂಧಿಯವರ ಅಧ್ಯಕ್ಷತೆಯಲ್ಲಿ ಜರುಗಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ವಿದುಷಿ ಗಂಗೂಬಾಯಿ ಹಾನೆಗಲ್ ಅವರು ಹಾಡಿದ್ದ ಚೆಲುವ ಕನ್ನಡ ನಾಡಿನ ಗೀತೆ ಇಂದು ಎಲ್ಲರಿಗೂ ಮರೆತು ಹೋದಂತೆ ಕಾಣುತ್ತದೆ.  ಇಂದಿನ ಆಡಳಿತೆಗಾರರು ಶತಮಾನಗಳಷ್ಟು ಹಿಂದಿನ ಕಾಲದ ಅರಸುಗಳ ಕಾಲ್ಪನಿಕ ವೈಭವದ ಉತ್ಸವ ಒಂದರ ಹೆಸರಲ್ಲಿ 13 ಕೋಟಿ ರೂ.ಗಳನ್ನು ವೆಚ್ಹ ಮಾಡಲು ಒಪ್ಪಿಕೊಂಡು ನಿಜವಾಗಿ 75 ಕೋಟಿಗಳಷ್ಟು ಹಣವನ್ನು ಸಾರ್ವಜನಿಕ ಬೊಕ್ಕಸದಿಂದ ಖರ್ಚು ಮಾಡಿರುವ ವಾರ್ತೆ ಗದಗ ಸಮ್ಮೇಳನದ ಸಮಯದಲ್ಲೇ ಪ್ರಕಟವಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಉಜಿರೆಯಿಂದ ಹಂಪಿಯವರೆಗೆ ನಡೆದ ನಿತ್ಯೋತ್ಸವಗಳಿಗೆ ಸರಕಾರದ ಬೊಕ್ಕಸದಿಂದ ಕಡಿಮೆ ಎಂದರೆ 100 ಕೋಟಿ ರೂ.ಗಳಾದರೂ ವ್ಯಯವಾಗಿದೆ. ಸರಕಾರದ ಬೊಕ್ಕಸದ ಹಣವು ತಮ್ಮ ಮತ್ತು ತಮ್ಮ ಪಕ್ಷದ ಖಾಸಗಿ ಸೊತ್ತೆಂದು ಪರಿಗಣಿಸಿ ಬೇಕಾಬಿಟ್ಟಿಯಾಗಿ ದೋಚಿ ಎಲ್ಲಿಗೋ ತಲಪಿಸುವ ದುರ್ವ್ಯವಹಾರವು ಕರ್ನಾಟಕದಲ್ಲಿಂದು ರಾಜಾರೋಷವಾಗಿ ನಡೆಯುತ್ತಿದೆ.  2009-10 ನೆಯ ವರ್ಷದ ಮುಂಗಡ ಪತ್ರದಲ್ಲಿ ವಿಧಾನ ಮಂಡಳದ ಅನುಮತಿ ಪಡೆಯದೆ ಖರ್ಚು ಮಾಡಿ ಮುಂದಿನ ವರ್ಷ ಅದಕ್ಕೆ ಅಸ್ತು ಎಣಿಸುವ ಕ್ರಮ ಇಂದು ಮಿತಿ ಮೀರಿ ಹೋಗಿದೆ. ಈ ಹಣ ಎಲ್ಲಿಗೆ ಹೋಗುತ್ತದೆ,  ಯಾರ ಬೊಕ್ಕಸಕ್ಕೆ ಹಾಗೂ ಯಾವುದಕ್ಕಾಗಿ ವಿನಿಯೋಗವಾಗುತ್ತದೆ ಎಂದು ತಿಳಿಯಬೇಕಾಗಿದೆ.

ಇದು ರೊಕ್ಕದ ವಿಚಾರವಾಯ್ತು. ಕನ್ನಡ ನಾಡಿನ ಫಲವತ್ತಾದ ಭೂಮಿ ಅದರೊಳಗಿನ ಖನಿಜ ಸಂಪತ್ತು ಅರಣ್ಯ ಸಂಪತ್ತು, ಮಾನವ ಸಂಪನ್ಮೂಲ ಇವೆಲ್ಲವೂ ಸಹಾ ಇಂದು ಅಧಿಕಾರದಲ್ಲಿರುವವರ ಗುಳುಂಕಾರಕ್ಕೆ ಗುರಿಯಾಗುತ್ತಿದೆ ಎಂಬ ಚಿತ್ರಣ ಎಲ್ಲೆಲ್ಲೂ ಕಂಡು ಬರುತ್ತದೆ. ಹೆಚ್ಹು ಕಡಿಮೆ 10 ಲಕ್ಷ ಕೋಟಿ ರೂ.ಗಳ ಬೆಲೆ ಬಾಳುವ ಸರಕಾರಿ ಜಮೀನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಹಾ ಕಳೆದ ಅನೇಕ ವರ್ಷಗಳಲ್ಲಿ ಖಾಸಗಿಯವರ ಕಬಳಿಕೆಗೆ ಒಳಗಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.  ರಾಜ್ಯದಾದ್ಯಂತ ಕಡಿಮೆ ಎಂದರೆ 6 ಲಕ್ಷ ಎಕ್ರೆ ಭೂಮಿಯನ್ನು ಹೀಗೆ ಕಬಳಿಸಲಾಗಿದೆ ಎಂದು ಹೇಳಲಾಗಿದೆ. ಸರಕಾರಕ್ಕೆ ತಿಳಿಯದೆ ಇದು ನಡೆಯಿತೇ? ಅಥವಾ ತಿಳಿದೂ ಸದ್ದಿಲ್ಲದೆ ನಡೆಯಿತೇ ಎನ್ನುವಂತಹ ನಿಜಾಂಶ ತಿಳಿಯಬೇಕಿದೆ. ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯೊಂದನ್ನು ತನಿಖೆಗೆ ನೇಮಿಸಿ ಕೈ ತೊಳೆದರೆ ರಾಜ್ಯಕ್ಕಾದ ನಷ್ಟವನ್ನು ಭರ್ತಿ ಮಾಡಿದಂತಾಗುವುದಿಲ್ಲ.

ಅಭಿವೃದ್ದಿ ಕಾರ್ಯಗಳಿಗೆ ದೇಶವನ್ನು ಅಡವಿಟ್ಟು ಸಾಲ ತಂದು ಒದಗಿಸಿದರೆ ಆ ಹಣದ ಸದುಪಯೋಗವಾದರೂ ಆಗದೆ ರಸ್ತೆ ಅಪಘಾತಗಳು, ರೋಗರುಜಿನಗಳು, ಬೀದಿ ನಾಯಿಗಳ ಕಾಟ, ಮುಚ್ಚದ ಕೊಳವೆ ಬಾವಿಗಳೊಳಗೆ ಬಿದ್ದು ಮರಿ ಮಕ್ಕಳ ಸಾವು ಇತ್ಯಾದಿ ದಿನ ನಿತ್ಯ ನಡೆಯುತ್ತಿರುವಾಗ ನಮ್ಮ ಮಂತ್ರಿ ಮಹಾಶಯರು ಒಣ ಭರವಸೆಗಳನ್ನು ನೀಡುವ ನಿತ್ಯೋತ್ಸವಗಳಲ್ಲಿ ನಿರತರಾಗಿರುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಎಲ್ಲ ಕಡೆ ಇಂತಹವುಗಳ ವಿರುದ್ದ ಪ್ರತಿಭಟನೆಗಳು ನಡೆಯುತ್ತಿರುವ ವಿಚಾರ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿರುಪಾಗಲೇ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿದ್ದ ಜಮೀನಿನಲ್ಲಿ 80 ಎಕ್ರೆ ಜಮೀನನ್ನು ಯಾವುದೋ ಮಂದಿರವೋ, ಮಠವೋ, ಸ್ಮಾರಕವೋ ಕಟ್ಟುವ ಯೋಜನೆ ಇಟ್ಟುಕೊಂಡಿರುವ ಒಂದು ಖಾಸಗಿ ಪ್ರತಿಷ್ಠಾನಕ್ಕೆ ಸದ್ದಿಲ್ಲದೆ ಕೊಟ್ಟಿರುವ ಸುದ್ದಿ ಪ್ರಕಟವಾಗಿದೆ.  ಸಾಹಿತ್ಯ ಸಮ್ಮೇಳನವು ಇದರ ಬಗ್ಗೆಯೊ ಸಾರ್ವಜನಿಕ ಗಮನ ಸೆಳೆದಿದೆ.

ನಮ್ಮ ದೇಶಕ್ಕೊಂದು ಸಂವಿಧಾನವಿದೆ.  ಆಡಳಿತೆಗೆ ಸಂವಿಧಾನದಲ್ಲಿ ಮಾರ್ಗದರ್ಶಕ ಸೂತ್ರಗಳಿವೆ. ಗಣತಂತ್ರ ವ್ಯವಸ್ಥೆ ಸ್ಥಾಪಿತವಾದ ಬಳಿಕ ಎಷ್ಟೇ ಕುಂದು ಕೊರತೆಗಳಿದ್ದರೂ ಒಟ್ಟಿನಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಆಡಳಿತ ವ್ಯವಸ್ಥೆ ಇದೆ. ಅವುಗಳ ಓರೆ ಕೋರೆಗಳನ್ನು ಸರಿಪಡಿಸಿಕೊಂಡು ವರ್ಷದಿಂದ ವರ್ಷಕ್ಕೆ ಉತ್ತಮಗೊಳಿಸುತ್ತಾ ಮುಂದೆ ಸಾಗುವುದು ಇಂದಿನ ಅಗತ್ಯವಾಗಿದೆ. ಆದರೆ ಎಲ್ಲಿ ಒಡಕು ಹುಟ್ಟಿಸಲು, ಎಲ್ಲಿ ಒಳ  ಜಗಳ ಸೃಷ್ಟಿಸಿ ಅರಾಜಕತೆ ಉಂಟು ಮಾಡಲು, ಎಲ್ಲಿ ಯಾರ ಆಹಾರದ ಸ್ವಾತಂತ್ರ್ಯವನ್ನೇ ಒಂದು ಧರ್ಮದ ಅಪ್ಪಣೆಗನುಗುಣವಾಗಿ ನಿರ್ಬಂಧಿಸಲು ಸಾಧ್ಯವಾಗುತ್ತದೆ ಅಂತಹವುಗಳನ್ನೇ ತಮ್ಮ ಗೊತ್ತು ಗುರಿ ಗಳನ್ನಾಗಿ ಇಟ್ಟುಕೊಂಡಿರುವವರ ಆಡಳಿತವು ಇಂದು ನಮ್ಮ ದೇಶದಲ್ಲಿ ಕೆಲವೆಡೆ ಅಟ್ಟಹಾಸ ಗೈಯುತ್ತಿದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆಯಲ್ಲಿ ಪ್ರಕಟವಾಗಿರುವ ನಮ್ಮ ಸಾಂಸ್ಕ್ರತಿಕ ಪರಂಪರೆಯ ಉದಾತ್ತ ಧ್ಯೇಯಗಳನ್ನು ಆಧಾರವಾಗಿ ಇಟ್ಟುಕೊಂಡು ಸಾಹಿತಿಗಳು, ಕವಿಗಳು, ಸಾಂಸೃತಿಕ ರಂಗದ ಪ್ರಮುಖರು ಜಾತಿ, ಮತ, ಪ್ರದೇಶ ಹಾಗೂ ಇನ್ನಿತರ ಸಂಕುಚಿತ ವಿಚಾರಗಳನ್ನೆಲ್ಲಾ ಬದಿಗಿಟ್ಟು ಒಕ್ಕೊರಳಿನಿಂದ ಕರ್ನಾಟಕದ ಮತ್ತು ದೇಶದ ಏಕತೆ ಮತ್ತು ಅಭಿವೃದ್ಧಿಯನ್ನು ಸಾಧಿಸುವತ್ತ ಗಮನ ಹರಿಸಬೇಕಿದೆ. ರಾಷ್ಟಕವಿ ಕುವೆಂಪುರವರ ಭಾರತಮಾತೆಯ ತನುಜಾತೆ, ಕರ್ನಾಟಕಮಾತೆ ಎಂಬ ಪರಿಕಲ್ಪನೆಯನ್ನು ಪ್ರತಿಯೊಂದು ಹೆಜ್ಜೆಯಲ್ಲೂ ನೆನಪಿಸಿಕೊಂಡು ಅವರ ಹಾಗೂ ಅವರ ಜೊತೆಯವರಾದ ಕನ್ನಡ ನಾಡಿನ ರಾಷ್ಟ್ರಕವಿಗಳ ಧ್ವನಿಯೊಂದಿಗೆ ಧ್ವನಿ ಕೂಡಿಸಿ ವಿಶ್ವ ಮಾನವ ಧರ್ಮವನ್ನು ದೃಢಪಡಿಸುವ ಪಣವನ್ನು ಈ ಸಂಧರ್ಭದಲ್ಲಿ ನಾವೆಲ್ಲರೂ ಕೈಗೊಳ್ಳಬೇಕಿದೆ. ಕರ್ನಾಟಕದಲ್ಲೊಂದು ಸವಿಸ್ತಾರವಾದ ಧರ್ಮ, ಜಾತಿ, ಮತ, ಲಿಂಗ, ಪ್ರಾದೇಶಿಕ ಹಿತದ ಪ್ರಾಮುಖ್ಯತೆ ಮೊದಲಾದವುಗಳಿಗೆ ಪ್ರತಿಯಾಗಿ ನಾಡು ನುಡಿ ಜನಗಳ ಸರ್ವತೋಮುಖ ಪ್ರಗತಿ ಮತ್ತು ಕ್ಷೇಮ ಸಾಧಿಸುವತ್ತ ನಮ್ಮ ಪಾಲಿನ ಕರ್ತವ್ಯವನ್ನು ನೆರವೇರಿಸಲು ನಾವು ಸಿದ್ಧರಾಗೋಣ.

ಹಂಪಿ ವಿವಿಯ ಆಸ್ತಿಯನ್ನು ಮುಟ್ಟಬೇಡಿ

ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಭೂಮಿಯನ್ನು ಖಾಸಗಿ ಟ್ರಸ್ಟಿಗೆ ಹಸ್ತಾಂತರಿಸುವ ರಾಜ್ಯ ಸರಕಾರದ ನಿರ್ಣಯಕ್ಕೆ ಪ್ರತಿಕ್ರಿಯೆ (ದಿನಾಂಕ ಫೆಬ್ರವರಿ 22, 2010)

ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಉಪಯೋಗಕ್ಕೆ ಹಾಗೂ ಚಟುವಟಿಕೆಗಳ ವಿಸ್ತರಣೆಗೆ ಹಿಂದೆ ಸರಕಾರವು ನೀಡಿದ್ದ 700 ಎಕ್ರೆ ಭೂಮಿಯಿಂದ 80 ಎಕ್ರೆ ಯನ್ನು ಕತ್ತರಿಸಿ ಕೃಷ್ಣದೇವರಾಯರ ಹೆಸರಿನಲ್ಲಿ ರಚಿಸಲಾದ ಯಾವುದೋ ಒಂದು ಟ್ರಸ್ಟಿಗೆ ಕೊಡಲಾದುದು ಖಂಡನಾರ್ಹವಾಗಿದೆ.

ಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷದ ಉತ್ಸವಕ್ಕೆಂದು ಸರಕಾರದ ಬೊಕ್ಕಸದಿಂದ 13 ಕೋಟಿ ರೂ.ಗಳನ್ನು ವೆಚ್ಹ ಮಾಡುವುದಾಗಿ ಈಗ ಕೆಳದಿನಗಳ ಹಿಂದೆ ಸರಕಾರವು ಘೋಷಿಸಿತ್ತು. ಅದೇ ಅನಗತ್ಯ ಎಂದು ಟೀಕೆಗಳು ಬಂದಿರುವಾಗ ನಿಜವಾಗಿ 75 ಕೋಟಿ ರೂ.ಗಳಷ್ಟು ಹಣವನ್ನು ಅದಕ್ಕೋಸ್ಕರ ಖರ್ಚುಮಾಡಲಾಗಿದೆ ಎಂದು ಈಗ ಬಯಲಾಗಿದೆ. ಇದು ಸರಕಾರಿ ಬೊಕ್ಕಸವನ್ನು ದೋಚುವ ಯಾವುದೋ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವ ದುರ್ವ್ಯವಹಾರವೆಂದೇ ಹೇಳಬೇಕಾಗುತ್ತದೆ. ಅದರ ನಡುವೆ ಹಂಪಿಯಲ್ಲೇ ಇರುವ ವಿಶ್ವವಿದ್ಯಾಲಯದ ಆಸ್ತಿಯನ್ನು ಸಹಾ ಕಬಳಿಸಲು ಸರಕಾರವು ಹೊರಟಿರುವುದು ತೀರಾ ಅಕ್ಷೇಪಾರ್ಹವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರು ಮತ್ತು ವಿಚಾರವಂತ ಸಾಹಿತಿಗಳು ಈ ದುರ್ವ್ಯವಹಾರವನ್ನು  ಖಂಡಿಸಿರುವುದು ವರದಿಯಾಗಿದೆ. ರಾಜ್ಯದ ಯಾವ ವಿ.ವಿ.ನಿಲಯವಾಗಲಿ ಅನುದಾನಿತ ಭೂಮಿ ಹೊಂದಿರುವ ಸಂಸ್ಥೆಯಾಗಲಿ, ಇಂತಹ ಕಬಳಿಕೆಗೆ ಸರಕಾರ ಕೈ ಹಾಕಬಾರದು ಎಂದು ಈಗಾಗಲೆ ಒತ್ತಾಯ ಹೇರಲು ಆರಂಭಿಸಿವೆ. ಆದುದರಿಂದ ಈ ವ್ಯವಹಾರವನ್ನು ಈಗಿಂದೀಗಲೇ ಕೈ ಬಿಡಬೇಕೆಂದು ರಾಜ್ಯಸರಕಾರವನ್ನು ಒಬ್ಬ ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರ ಮತ್ತು ಪ್ರಜ್ಞಾವಂತ  ನಾಗರಿಕನೆಂಬ ನೆಲೆಯಲ್ಲಿ ನಾನು ಒತ್ತಾಯಿಸುತ್ತೇನೆ.

ಮಾನ್ಯ ಗೃಹ ಸಚಿವ ಆಚಾರ್ಯರವರಿಗೆ ಒಂದು ಕಿವಿ ಮಾತು.

ಮಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಜನವರಿ 29, 2010)

ಜನವರಿ 28, 2010 ರ ಪತ್ರಿಕೆಗಳಲ್ಲಿ ಪ್ರಕಟ ಆಗಿರುವ  ಕರ್ನಾಟಕ ಗೃಹ ಸಚಿವ ಮಾನ್ಯ ವಿ ಎಸ್ ಆಚಾರ್ಯರವರ ಹೇಳಿಕೆಯು ಹೊಣೆಗಾರಿಕೆಯಿಂದಲೂ ಪಕ್ಷಪಾತರಹಿತವಾಗಿಯೂ ವರ್ತಿಸುವ ತನ್ನ ಜವಾಬ್ದಾರಿಕೆಯಿಂದ ತಪ್ಪಿಸಿಕೊಳ್ಳುವಂಥಾದ್ದು ಎಂದು ತೋರುತ್ತದೆ. ಈ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಿಗೆ ಸದಾ ರಕ್ಷಣೆ ಮತ್ತು ಕಾನೂನು ಬದ್ಧ ನಿರ್ವಹಣೆಗೆ ಅನುಕೂಲ ಮಾಡಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ. ಗೊಂದಲ ಸೃಷ್ಟಿಸುವ  ಒಳ ಇಂಗಿತ ಇರುವವರು ಮಾತನಾಡುವಂತೆ ಗೃಹಸಚಿವರು ಮಾತನಾಡುವುದು ಖೇದಕರವಾಗಿದೆ. ಹಿಂದೂ ಸಮಾಜೋತ್ಸವ ಎಂಬ ಹೆಸರಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮಗಳಿಗೆ ಮೂರೂವರೆ ಸಾವಿರಕ್ಕಿಂತಲೂ ಹೆಚ್ಹು ಪೋಲಿಸು ಸಿಬ್ಬಂದಿಯ ರಕ್ಷಣೆಯನ್ನು ಒದಗಿಸಿದ ಆಚಾರ್ಯರು ಅನ್ಯ  ಧರ್ಮಗಳ ಕಾನೂನು ಬದ್ಧ ಪೂಜೆ, ಪ್ರಾರ್ಥನೆ, ಇತ್ಯಾದಿ ಚಟುವಟಿಕೆಗಳಿಗೆ ರಕ್ಷಣೆ ಒದಗಿಸುವ ಹೊಣೆಗಾರಿಕೆ ಮತ್ತು ಶಕ್ತಿ ಸರಕಾರಕ್ಕೆ ಇಲ್ಲ ಎಂದು ಬಹಿರಂಗವಾಗಿ ಹೇಳಿರುವುದು ಖಂಡನಾರ್ಹ. ಪಕ್ಷಪಾತ ಇಲ್ಲದೆ ಎಲ್ಲ ಜನ ವಿಭಾಗಗಳ ಸಾಂವಿಧಾನಿಕ ಕಾನೂನು ಬದ್ದ, ಶಾಂತಿಯುತ ಚಟುವಟಿಕೆಗಳಿಗೆ ರಕ್ಷಣೆ ಕೊಡಲು ಶಕ್ತಿ ಇಲ್ಲದ ಸರಕಾರ ಅಧಿಕಾರದಲ್ಲಿರಲಾಗದು.

ಇಂದು ನಮ್ಮ ದೇಶದ ಮೇಲೆ ನಡೆಯಬಹುದಾದ ಆಕ್ರಮಣ, ಪ್ರಚೋದನೆ, ಉಗ್ರಗಾಮಿ ಕೃತ್ಯಗಳೇ ಮೊದಲಾದವುಗಳ ಹಿನ್ನೆಲೆಯಲ್ಲಿ ಎಲ್ಲಾ ಪ್ರಮುಖ  ಸಾರ್ವಜನಿಕ ಸ್ಥಳಗಳಿಗೂ, ಕ್ಷೇತ್ರಗಳಿಗೂ ಅಪಾಯ ಬಾರದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಎಲ್ಲಾ ರಾಜ್ಯ ಸರಕಾರಗಳು ಸಹಾ ತೆಗೆದುಕೊಳ್ಳಬೇಕೆಂದು ಕೇಂದ್ರ ಸರಕಾರವು ಪದೇ ಪದೇ ನೀಡುತ್ತಿರುವ  ಎಚ್ಚರಿಕೆ ಮತ್ತು ಆದೇಶವನ್ನು ಆಚಾರ್ಯರು ಗಮನಿಸಬೇಕೆಂದು, ಜಾತಿ, ಮತ, ಧರ್ಮ ಇತ್ಯಾದಿಗಳಿಂದೆಲ್ಲ ಹೊರತಾಗಿ  ನಾವು ಸಾಮಾನ್ಯ ಪ್ರಜೆಗಳಾಗಿ ಗೃಹ ಸಚಿವರನ್ನು ಒತ್ತಾಯಿಸುತ್ತೇವೆ.  ಅಧಿಕಾರ ವಹಿಸಿ ಕೊಂಡಾಗ ಕೈಗೊಂಡಿರುವ ಪ್ರತಿಜ್ಞೆಗೆ ಭಂಗ ತರುವ ಆಚಾರ್ಯರಂತಹ ಸಚಿವರನ್ನು ಹದ್ದು ಬಸ್ತಿಗೆ ತರಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳನ್ನು ಕೇಳಿಕೊಳ್ಳುತೇವೆ. ಅವರಿಂದಲೂ ಅದು ಅಸಾದ್ಯವಾದರೆ ನ್ಯಾಯಾಲಯದ ಮೊರೆ ಹೋಗಲೂ ಕ್ರಮಕೈಗೊಳ್ಳಬೇಕಾಗಬಹುದೆಂದು ನಮ್ಮ ಜಿಲ್ಲೆಯವರೇ ಆದ ಆಚಾರ್ಯರಿಗೆ ಕಿವಿ ಮಾತು ಹೇಳಲು ಬಯಸುತ್ತೇವೆ.

Wednesday 29 June 2011

ಉತ್ಸವಗಳ ಅಬ್ಬರಕ್ಕಿಂತ ಅವಶ್ಯಕತೆಗಳ ಈಡೇರಿಕೆಗೆ ಸರಕಾರ ಗಮನ ಹರಿಸಲಿ: ಸರಕಾರಿ ಖಜಾನೆ ದೇಶದ ಆಸ್ತಿ, ಖಾಸಗಿ ಸೊತ್ತು ಅಲ್ಲ.

ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಹಿನ್ನೆಲೆಯಲ್ಲಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬರೆದ ಲೇಖನ
(ದಿನಾಂಕ: 28 ಜನವರಿ 2010)

ಇಂದು ಕರ್ನಾಟಕದಲ್ಲಿ ದಿನನಿತ್ಯ ಒಂದಲ್ಲ ಒಂದು ಊರಲ್ಲಿ ಒಂದಲ್ಲ ಒಂದು ಹೆಸರಲ್ಲಿ ಜನಮರುಳೋ ಜಾತ್ರೆ ಮರುಳೋ ಎಂಬಂಥ ನಿತ್ಯೋತ್ಸವಗಳು ನಡೆಯುತ್ತಿರುತ್ತವೆ. ಈ ಅಬ್ಬರಗಳು ನಿತ್ಯೋತ್ಸವ ತಾಯೇ ನಿತ್ಯೋತ್ಸವ ಎಂದು ನಿಸ್ಸಾರ್ ಅಹ್ಮ್‌ದ್‌ರವರು ಎದೆ ತುಂಬಿ ಹಾಡಿರುವ ಕನ್ನಡ ನಾಡಿನ ಸಹಜ ನಿತ್ಯೋತ್ಸವಗಳಲ್ಲ. ಈ ನಿತ್ಯೋತ್ಸವಗಳು ಅಧಿಕಾರ ಗಳಿಸಲಿಕ್ಕೆ ಮತ್ತು ತಮ್ಮ ಸ್ಥಾಪಿತ ಹಿತಾಸಕ್ತಿಗಳನ್ನು ಉಳಿಸಿಕೊಳ್ಳುವುದಕ್ಕೆ ಆಳುವವರು ಸರಕಾರಿ ವೆಚ್ಚದಲ್ಲಿ ನಡೆಸುವಂಥಹ ಕೃತಕ ಉತ್ಸವಗಳಾಗಿವೆ. ಈ ಉತ್ಸವಗಳು ನಿಜವಾಗಿ ಹಿಂದೆ ಎಂದೋ ಒಂದು ಕಾಲದಲ್ಲಿ ಇದ್ದಂತಹ ಗತ ವೈಭವಗಳೆಂಬ ಬರೇ ಕಲ್ಪನೆಗಳ ಕೃತಕ ಮನರಂಜನೆಯ ಆಡಂಬರಗಳಾಗಿವೆ. ಉಜಿರೆಯ ತುಳುವರ ಉತ್ಸವ ಎಂಬ ಹೆಸರಲ್ಲಿ ವರ್ಣಭೇಧ, ಜಾತಿ ಬೇಧ, ಶ್ರೀಮಂತಿಕೆಯ ಕಾಲ್ಪನಿಕ ವೈಭವ ಇವುಗಳ ಪ್ರದರ್ಶನ ನಡೆಯಿತು. ಅದಕ್ಕೆ ಸರಕಾರದ ಬೊಕ್ಕಸದಿಂದ ನಮಗೆ ಗೊತ್ತಿರುವಂತೆ ಒಂದು ಕೋಟಿ ರೂ. ದೇಣಿಗೆ ಸಂದಿತು. ಅದರ ಮರುದಿನವೇ ಉಡುಪಿಯಲ್ಲಿ ಹಿಂದೂ ಧರ್ಮದ ಒಂದು ಪಂಥದ ಪ್ರಚಾರಕ್ಕೋಸ್ಕರ ನಡೆಯುವ ಪರ್ಯಾಯ ಉತ್ಸವಕ್ಕೆ ಧರ್ಮ ನಿರಪೇಕ್ಷ ಪ್ರಭುತ್ವ ಎಂದುಕೊಳ್ಳುವ ಸರಕಾರದ ಖಜಾನೆಯಿಂದ ಐದು ಕೊಟಿಯಷ್ಟು ಸಂದಿತು ಮತ್ತು ಐವತ್ತು ಕೋಟಿಯ ದೇಣಿಗೆಯ ಭರವಸೆ ಪ್ರಕಟವಾಯ್ತು. ಅದು ಮುಗಿಯುವಷ್ಟರೊಳಗೆ ವಿಜಯನಗರ ಸಾಮ್ರಾಜ್ಯದ ಒಬ್ಬ ಧೀರ ಹಾಗೂ ಧೀಮಂತ ಅರಸನ ಪಟ್ಟಾಭಿಷೇಕದ 500 ವರ್ಷಗಳ ಪುನಾರಾವರ್ತನೆಯ ಉತ್ಸವಕ್ಕೆ ಪ್ರಕಟವಾಗಿರುವಂತೆ 13 ಕೋಟಿ ರೂ.ಗಳು ಸಂದಿವೆ. ಹಂಪಿಯ ಪುನರುಜ್ಜೀವನ ಮತ್ತು ಅಭಿವೃಧ್ದಿಗೆ ಮತ್ತು ಸ್ಮಾರಕಗಳ ಪುನರ್ನಿರ್ಮಾಣಕ್ಕೆ ಯೋಜನಾಬದ್ದವಾಗಿ ಆಗಬೇಕಾದ ಖರ್ಚು ಆಗುವುದರಲ್ಲಿ ಆಕ್ಷೇಪವಿಲ್ಲ. ಅವುಗಳು ಜನರ ಮತ್ತು ರಾಜ್ಯದ ಅಮೂಲ್ಯ ಸಾಂಸ್ಕೃತಿಕ ಸ್ಮರಣಿಕೆಗಳಾಗಿ ಉಳಿಯುತ್ತವೆ. ಆದರೆ ಶ್ರೀಕೃಷ್ಣ ದೇವರಾಯರು ಎಷ್ಟೇ ಸ್ಮರಣೀಯರಾದರೂ ಸಹಾ  ಅವರ ಪಟ್ಟಾಭಿಶೇಕದ ಮಹೋತ್ಸವದ ಹೆಸರಲ್ಲಿ ಜನ ಜಾತ್ರೆ ನಡೆಸುವುದು ದುರ್ವ್ಯಯ ಅಲ್ಲದೆ ಮತ್ತೇನಲ್ಲ. ಹಳೆಯ ಕಾಲದ ಅನೇಕ ಅರಸೊತ್ತಿಗೆಗಳು, ಅರಸೊತ್ತಿಗೆಗಳ ಮೇಲಿನ ಸಾಮ್ರಾಜ್ಯಾಧಿಪತಿಗಳು ಕರ್ನಾಟಕದಲ್ಲಿ ಆಗಿ ಹೋಗಿವೆ. ಕರ್ನಾಟಕದಲ್ಲಿ ಮಾತ್ರವಲ್ಲ ಯುರೋಪಿನ ವ್ಯಾಪಾರಿ ಬಂಡವಾಳಿಗರು ಭಾರತಕ್ಕೆ ಬಂದು ಇಲ್ಲಿನ ಆಳುವವರ ಒಳಜಗಳದಲ್ಲಿ ಒಳ ನುಸುಳಿ ಇಡೀ ದೇಶವನ್ನೇ ತಮ್ಮ ವಸಾಹತನ್ನಾಗಿ ಮಾರ್ಪಡಿಸಿದ್ದನ್ನು ಜ್ಞಾಪಿಸುವಾಗ ಗತಕಾಲದ ಸಾಮ್ರಾಜ್ಯಗಳ ವೈಭವವನ್ನು ಮೆರೆಸುವುದಕ್ಕಿಂತಲೂ ಅನ್ಯರ ಅಧಿಪತ್ಯಕ್ಕೆ ಈ ದೇಶವನ್ನು ಒಪ್ಪಿಸಿ ತಾವುಗಳು ಆಳರಸರಾಗಿ ರೂಪಾಂತರಗೊಂಡ ಕಥೆ ಆಡಂಬರದಿಂದ  ಆಚರಿಸಬೇಕಾದದ್ದೇನಲ್ಲ. ಅದರ ಬದಲು ಇಲ್ಲಿನ ಉಳುಮೆದಾರರು, ಕುಶಲಕರ್ಮಿಗಳು, ಅರಣ್ಯವಾಸಿಗಳು, ಮೂಲನಿವಾಸಿಗಳು ತಮ್ಮ ನೆಲ, ಜಲ, ನೈಸರ್ಗಿಕ ಸಂಪತ್ತು, ಬದುಕು, ಬಾಳ್ವೆಗಳ ರಕ್ಷಣೆಗೋಸ್ಕರ ಹೋರಾಡಿದಂಥಹ ವೀರಗಾಥೆಯನ್ನು ನೆನಪಿಗೆ ತರುವ ಮಹತ್ಕಾರ್ಯಕ್ಕೆ ಸರಕಾರ ಪ್ರೋತ್ಸಾಹಿಸಿದರೆ ಮತ್ತು ಜನಜಾತ್ರೆ ಗಳನ್ನಾಚರಿಸಿದರೆ ಒಂದು ವೇಳೆ ಸಮಂಜಸವೆನಿಸಬಹುದೇನೋ.

ಸ್ವಾತಂತ್ರ್ಯ ಪಡೆದು ಗಣತಂತ್ರವಾಗಿ ರೂಪು ತಳೆದ ನಮ್ಮ ದೇಶದಲ್ಲಿ ಪರಾಧೀನತೆಯ ಹಾಗೂ ವೈವಿಧ್ಯತೆಗಳನ್ನು ವೈರುಧ್ಯಗಳಾಗಿ ಮಾರ್ಪಡಿಸುವ ಉದ್ದೇಶದಿಂದ ನಡೆಯುವ ಯಾವುದೇ ಜನಮರುಳು ಕಾರ್ಯಕ್ರಮಗಳು ದೇಶಕ್ಕೆ ದಾಸ್ಯವನ್ನು ಪುನ: ತಂದುಕೊಳ್ಳುವ ದೊಂಬರಾಟವಾಗುತ್ತದೆ ಎಂಬುದು ಅಧಿಕಾರದ ಲಾಲಸೆಯ ಆಳುವ ಪಕ್ಷಗಳಿಗೆ ಗೊತ್ತಿರಬೇಕು.

ಪ್ರತ್ಯೇಕವಾಗಿ 2010 ನೇ ವರ್ಷದ ಗಣತಂತ್ರೋತ್ಸವದ ಸಂದರ್ಭದಲ್ಲಿ ಆಳುವವರಿಂದ ನಾವು ಸಾಮಾನ್ಯ ಜನರು ನಿಜವಾಗಿ ನಿರೀಕ್ಷಿಸುವುದೇನೆಂದರೆ ನೈಸರ್ಗಿಕ ವಿಕೋಪಗಳಿಗೆ, ಅತಿವೃಷ್ಟಿ, ಅನಾವೃಷ್ಟಿ ಗಳಿಗೆ ಮುಖ್ಯವಾಗಿ ಕರ್ನಾಟಕದಲ್ಲಿ ನೆರೆ ಹಾವಳಿಗೆ ಗುರಿಯಾಗಿ ಅನಾಥ ಸ್ಥಿತಿಯನ್ನು ಅನುಭವಿಸುತ್ತಿರುವ ಜನರ ಕಣ್ಣೀರು ಒರಸುವ ಮತ್ತು ಜೀವ ಉಳಿಸುವ ಹಾಗೂ ಸಂಕಷ್ಟಗಳನ್ನು ನಿವಾರಣೆ ಮಾಡುವ ಯೋಜನೆಗಳನ್ನು ಈಗ ಎಷ್ಟು ಬೇಗ ಪೂರ್ತಿ ಗೊಳಿಸಲಿದ್ದೀರಿ ಎಂಬ ವಿವರಗಳನ್ನು ಸಾರ್ವಜನಿಕರ ಮುಂದೆ ಸಾಕ್ಷಾಧಾರಗಳ ಮತ್ತು ಅಂಕೆ-ಸಂಖ್ಯೆಗಳ ಮೂಲಕ ಪ್ರಕಟಿಸುವುದು ಇಂದಿನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಲು ಇಚ್ಹಿಸುತ್ತೇವೆ. ಆದು ಕೈಲಾಗದಿದ್ದರೆ ತೊಲಗಬೇಕಾಗುತ್ತದೆ ಅಥವಾ ತೊಲಗಿಸಬೇಕಾಗುತ್ತದೆ ಎಂಬ ಎಚ್ಹರಿಕೆಯ ಮಾತುಗಳನ್ನು ಹೇಳಿದರೆ ಕೋಪಿಸಿಕೊಳ್ಳಬಾರದು.