Tuesday 26 July 2011

ಭಗವತ್ ಗೀತೆಯನ್ನು ಶಾಲಾಮಕ್ಕಳಿಗೆ ಬೋಧಿಸುತ್ತಿರುವ ಪ್ರಸ್ತಾಪದ ಕುರಿತು ಒಂದು ಅವಲೋಕನ


ಭಗವತ್ ಗೀತೆಯು ಒಂದು ಉತ್ತಮ ಸಾಹಿತ್ಯಿಕ ಕೃತಿ ಎನ್ನುವುದು ನಿಜ ಮತ್ತು ಅದು ಯಾರನ್ನಾದರೂ ಮನ ಮೆಚ್ಚಿಸುವ ಸಾಮರ್ಥ್ಯವಿರುವ ಒಂದು ಸುಂದರ ಕವನ ಗುಚ್ಛವಾಗಿದೆ. ಆದರೆ ಅದರಲ್ಲಿ ಪರಸ್ಪರ ವೈರುಧ್ಯದ ಹಲವು ಆಶಯಗಳು ಮತ್ತು ಉಪದೇಶಗಳು ಅಡಕವಾಗಿವೆ.  ಈ ಗೀತೆಯು ಒಂದು ಧರ್ಮದ ಸಲುವಾಗಿ ನಡೆದ ಧರ್ಮಯುದ್ಧದ ಭಾಗವಾಗಿದೆ ಎಂಬ ಭಾವನೆಯನ್ನು ಹುಟ್ಟಿಸುವುದಕ್ಕೆ ಆರಂಭದಿಂದಲೇ ತಂತ್ರಗಳು ನಡೆದಿದ್ದುದನ್ನು ನಾವು ಕಾಣಬಹುದು. ಇದರಲ್ಲಿ ನಮ್ಮ ನಿಮ್ಮೆಲ್ಲರನ್ನು ಆಕರ್ಷಿಸುವ ಕೃಷ್ಣನು ಬೋಧಿಸುವ ಧರ್ಮ ಯುದ್ಧವು ಅಧರ್ಮದ ವಿರುದ್ಧದ ಯುದ್ದ ಅಲ್ಲ, ಬದಲಿಗೆ ವರ್ಗ ಸಂಘರ್ಷಗಳನ್ನು ವರ್ಣ ಸಂಘರ್ಷಗಳನ್ನಾಗಿ ಚಿತ್ರಿಸಿ ಅದನ್ನು ತೊಡೆದು ಹಾಕುವುದು ಧರ್ಮವೆಂದು ಬೋಧಿಸುವುದು ಮತ್ತು ಒಂದು ವ್ಯವಸ್ಥೆಯನ್ನು ದೃಢಗೊಳಿಸುವ ತಂತ್ರವು ಅದರಲ್ಲಿ ಒಳಗೊಂಡಿರುವುದು ಎನ್ನುವುದನ್ನು  ವಿವೇಚನಾಶೀಲರು ಅರ್ಥೈಸಬಲ್ಲರು.

ತನ್ನ ರಥವು ಯುದ್ಧ ಭೂಮಿಯ ಮದ್ಯೆ ನಿಂತಿರಲು ಅರ್ಜುನನು, ತನ್ನ ಬಾಂಧವರನ್ನು, ಗುರು ಹಿರಿಯರನ್ನು, ಅಣ್ಣ ತಮ್ಮಂದಿರನ್ನು, ಸ್ವಜಾತಿಬಾಂಧವರನ್ನು ಕೊಂದು ರಾಜ್ಯವನ್ನು ಗೆಲ್ಲುವ ಯುದ್ದಕ್ಕೆ ಹೊರಟಿದ್ದೇವೆ, ಈ ಕೆಲಸ ನನ್ನಿಂದಾಗದು ಎನ್ನಲು ಕೃಷ್ಣನು ಅರ್ಜುನನನ್ನು ಯುದ್ದಕ್ಕೆ ಹುರಿದುಂಬಿಸುತ್ತಾನೆ ಮತ್ತು ಅದು ಅವನ ಕರ್ತವ್ಯವೆಂದು ತಿಳಿಸುತ್ತಾ ಅನೇಕ ಧರ್ಮ, ಅಧರ್ಮಗಳ ಬೋಧನೆಗಳನ್ನು ಮಾಡುತ್ತಾನೆ. ಅವುಗಳ ಕೆಲವು ಸಾಲುಗಳು ಇಂತಿವೆ:

ಅಥ ಚೇತ್ತ್ವಮಿಮಂ ದರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ |
ತತ: ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ||

ಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ: |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮೀ ಯುಗೇ ಯುಗೇ ||

ಶ್ರೇಯಾನ್ ಸ್ವಧರ್ಮೋ ವಿಗುಣ್: ಪರಧರ್ಮಾತ್ಸ್ವ್ನುಷ್ಠ್ತಾತಾತ್|
ಸ್ವಧರ್ಮೇ ನಿಧನಂ ಶ್ರೇಯ: ಪರಧರ್ಮೋ ಭಯಾವಹ: ||

ಕರ್ಮಣೈಯವ ಅಧಿಕಾರಸ್ಠೇ ಮಾಫಲೇಷು ಕದಾಚನ:
ಮಾ ಕರ್ಮ ಫಲ ಹೇತುರ್‘ಭು ಮಾತೇ ಸಂಗೋಪ ಕರ್ಮಣಿ ||

ಸರ್ವಧರ್ಮಾನ್ ಪರಿತ್ಯಜ ಮಾಮೇಕಂ ಶರಣಂವೃಜಾ
ಅಹಂ ತವ ಸರ್ವಪಾಪೇಬ್ಸೇ ಮೋಕ್ಷ‘ಇಷ್ಯಾಮಿ ಮಾಶುಜಾ ||

ಶ್ರೀ ಕೃಷ್ಣನು ಅರ್ಜುನನಿಗೆ ಹೇಳುವುದಿದು:

ಒಂದು ವೇಳೆ ನೀನು ಈ ಧರ್ಮಯುದ್ಧವನ್ನು ಮಾಡದೇ ಹೋದರೆ ನೀನು ಸ್ವಧರ್ಮವನ್ನೂ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನು ಗಳಿಸುತ್ತೀ.

ಚಾತುರ್ವರ್ಣ್ಯವೆಂಬ ವರ್ಗಗಳನ್ನು ಸೃಷ್ಠಿಸಿದವನು ನಾನು. ಗುಣ ಕರ್ಮಗಳನ್ನು ನೋಡಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವೆಂಬ ನಾಲ್ಕು ವರ್ಗಗಳಾಗಿ ಈ ಮನುಷ್ಯ ಕುಲವನ್ನು ವಿಂಗಡಿಸಿದವನು ನಾನು ಮತ್ತು ಅದರ ಒಂದು ವಿಭಾಗಕ್ಕೆ ಸೇರಿದವನು ನೀನು ಮತ್ತು ಯುದ್ಧವನ್ನು ಮಾಡುವುದು ನಿನ್ನ ಧರ್ಮ ಅಲ್ಲದೆ ಈಗ ಯುದ್ಧ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ ಮತ್ತು ಯಾವಾಗಲೆಲ್ಲ [ಚಾತುರ್ವರ್ಣ್ಯ] ಧರ್ಮಕ್ಕೆ ಹಾನಿ ಉಂಟಾಗಿ ಅಧರ್ಮವು ಮೇಲೇಳುವುದೋ ಆವಾಗಲೆಲ್ಲಾ ಅದಕ್ಕೆ ಬಲಿಯಾದವರನ್ನೆಲ್ಲಾ ರಕ್ಷಿಸಲಿಕ್ಕೆ ಮತ್ತು ದುಷ್ಕರ್ಮಿಗಳನ್ನು ನಾಶಗೊಳಿಸಲಿಕ್ಕೆ ನಾನು ಕಾಲ ಕಾಲಕ್ಕೆ ಹುಟ್ಟಿ ಬರುತ್ತೇನೆ ಎನ್ನುತ್ತಾನೆ.

ಅಂದರೆ ಶ್ರೀ ಕೃಷ್ಣನೇ ಸೃಷ್ಠಿಸಿದ ಚಾತುರ್ವರ್ಣ್ಯಗಳಲ್ಲಿರುವ ಅಸಮಾನತೆ ಮತ್ತು ಬೇಧಗಳನ್ನು ವಿರೋಧಿಸಿ ಸಮಾನತೆ,  ಸೌಹಾರ್ಧತೆಗಾಗಿ ಸಂಘರ್ಷಿಸುತ್ತಿರುವ ದಲಿತರು, ಹಿಂದುಳಿದವರು, ಅಹಿಂದುಗಳು ಮತ್ತಿತರರನ್ನು ನಾಶಗೊಳಿಸಲಿಕ್ಕೆ ಈಗ ಮತ್ತೆ ಹುಟ್ಟಿಬರಲು ಕಾಲ ಸನ್ನಿಹಿತವಾಗಿದೆ. ಮಹಾಭಾರತ ಯುದ್ಧ ನಡೆದದ್ದೇ ಚಾತುರ್ವರ್ಣ್ಯಗಳ ಧರ್ಮ ಆಧಾರಿತ ಸಮಾಜ ವ್ಯವಸ್ಥೆಯನ್ನು ಸಂರಕ್ಷಿಸುವುದಕ್ಕೇ ಎಂದು ಭಗವತ್ ಗೀತೆಯಲ್ಲಿನ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು.

ಎಲೇ ಅರ್ಜುನ ಎಲ್ಲಾ ಧರ್ಮಗಳನ್ನೂ ನಂಬಿಕೆಗಳನ್ನೂ, ಕರ್ತವ್ಯಗಳನ್ನೂ ಮರೆತು ನನಗೆ ಶರಣಾಗತನಾಗಿ ನಾನು ಬೋಧಿಸಿದಂತೆ ಮಾಡು, ನಾನು ನಿನ್ನನ್ನು ಎಲ್ಲಾ ಪಾಪಗಳಿಂದಲೂ, ಅಧರ್ಮ ವರ್ತನೆಗಳಿಂದಲೂ ವಿಮುಕ್ತಿಗೊಳಿಸುತ್ತೇನೆ ಎನ್ನುತ್ತಾ ಆತನನ್ನು ಕೇವಲ ತನ್ನ  ಆಜ್ಞಾನಿಷ್ಠನನ್ನಾಗಿಸಿಕೊಳ್ಳುತ್ತಾನೆ.

ಪರ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ, ಗುಣವಿಲ್ಲದ ತನ್ನ ಧರ್ಮವೇ ಶ್ರೇಷ್ಠ ಮತ್ತು ಅದರಲ್ಲಿಯೇ ಸಾಯುವುದೂ ಶ್ರೇಯಸ್ಕರ ಎಂಬ ಉಲ್ಲೇಖಗಳನ್ನು ಮತಾಂತರ ವಿರೋಧಿಗಳು, ಸಂಘಪರಿವಾರದವರು ಮನನ ಮಾಡಿಕೊಂಡರೆ ನಡೆಯುತ್ತಿರುವ ದೊಂಬಿ, ಘರ್ಷಣೆಗಳು ತಕ್ಕ ಮಟ್ಟಿಗಾದರೂ ಕಡಿಮೆಯಾಗಬಹುದು.

ಮಾತಿನ ಮೋಡಿಯಿಂದ ಕೃಷ್ಣನು ಮೂಢ ನಂಬಿಕೆಯನ್ನೇ ಅರ್ಜುನನಲ್ಲಿ ಸೃಷ್ಠಿಸುತ್ತಾನೆ. ಒಟ್ಟಿನಲ್ಲಿ ಭಗವತ್ ಗೀತೆಯು ಮೂಢರ ಅಂಧ ವಿಶ್ವಾಸಕ್ಕೆ ಮಾತ್ರ ಸೀಮಿತವಾಗಿದ್ದು,  ಕುರುಡು ನಂಬಿಕೆಯವರಿಗೆ ಮಾತಿನ ಮೋಡಿಯ ಬಲೆ ಬೀಸುತ್ತದೆ ಎನ್ನುವುದು ಕೃಷ್ಣನು ನೀಡುವ ನಾನಾ ತರದ ವಿವರಣೆಗಳಿಂದ ಸ್ಪಷ್ಟವಾಗುತ್ತದೆ  ಅಲ್ಲದೆ ವಿಚಾರವಂತರಿಗೆ ಯಾವುದೇ ಮಾರ್ಗದರ್ಶನ ನೀಡುವುದಿಲ್ಲ. ಬೇರೊಬ್ಬರು ಆಜ್ಞಾಪಿಸುವ ಕಾರ್ಯವನ್ನು ಜಾರಿ ಮಾಡುವ ಅರ್ಹತೆ ಮಾತ್ರವೇ  ಅವನಿಗಿದ್ದು ಅದಕ್ಕೆ ಫಲವನ್ನು ಅಪೇಕ್ಷಿಸುವ ಅಧಿಕಾರವೂ ಇಲ್ಲ ಎನ್ನುವುದರಲ್ಲಿ ಅಡಗಿದೆ ಗುಲಾಮಗಿರಿಯ ಪರಕಾಷ್ಟೆ.

ಭಗವತ್ ಗೀತೆಯು ರಾಷ್ಟೀಯ ಸ್ವಾತಂತ್ರ ಸಂಗ್ರಾಮದ ರಾಷ್ಟ್ರೀಯ ಐಕ್ಯತೆಯ ಸ್ಪೂರ್ತಿಯ ಸೆಲೆಯಾಗಿ ರಾಷ್ಟ್ರೀಯ ನಾಯಕರು ಅದನ್ನು ಬಳಸಿಕೊಂಡಿದ್ದಾರೆ ಎಂಬ ಗೀತಾ ಸಮರ್ಥಕರ ವಾದವು ಸತ್ಯಕ್ಕೆ ದೂರವಾದುದು ಮತ್ತು ಅಂತಹವರು ರಾಷ್ಟೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪೂರಕವಾಗಿದ್ದ ಕುವೆಂಪು, ರವಿಂದ್ರನಾಥ್ ಠಾಗೂರ್ ಮತ್ತಿತರ ಪ್ರಗತಿಪರರ ಕೃತಿಗಳನ್ನು ಮನನ ಮಾಡದಿರುವುದು ವಿಷಾದನೀಯ.

ಲೋಕಮಾನ್ಯ ತಿಲಕರ ಗೀತಾ ರಹಸ್ಯವೆಂಬ ಉತ್ಕೃಷ್ಟ ಕೃತಿಯು ಗೀತೆಯ ಭೋಧನೆಗಿಂತ ಭಿನ್ನವಾದ ರಾಷ್ಟ್ರೀಯ ಪರಿಕಲ್ಪನೆಯದ್ದಾಗಿದೆ. ಮಹತ್ಮಾಗಾಂಧಿಯವರು ಸ್ವಾತಂತ್ರ್ಯ ಮತ್ತು ಸಮಾನತೆಯ ಹಾಗೂ ಪ್ರತ್ಯೇಕವಾಗಿ ಚಾತುರ್ವಣ್ಯದ ಅಸ್ಪೃಶ್ಯತೆಯನ್ನು ಸಾರಾಸಗಟಾಗಿ ತಿರಸ್ಕರಿಸಿದವರು.  ಇಂದು  ನಮ್ಮ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ  ಸಾರ್ವಜನಿಕ ಭಾವೈಕ್ಯ ಸಾಧನೆ ಮುಖ್ಯವೇ ಹೊರತು ಭಗವತ್ ಗೀತೆಯನ್ನು ಭೋಧಿಸುವಂಥಾ ಪ್ರತ್ಯೇಕತಾವಾದವು ಅಪಾಯಕಾರಿಯಾಗಿದೆ. ಭಗವತ್ ಗೀತೆ ಮಾತ್ರವಲ್ಲ ಇತರ ಎಲ್ಲ ಧರ್ಮ ಗ್ರಂಥಗಳು ಸಹಾ ವೈಜ್ಞಾನಿಕ ವೈಚಾರಿಕತೆಗೆ ಮತ್ತು ಬೆಳವಣಿಗೆಗೆ ಸಲ್ಲದ ಅಂಶಗಳನ್ನೊಳಗೊಂಡಿವೆ ಎಂಬುದನ್ನು ಎಲ್ಲರೂ ಒಪ್ಪಬೇಕಾಗುತ್ತದೆ.

ಒಟ್ಟಿನಲ್ಲಿ ಇದು ಸ್ವಾತಂತ್ರ್ಯ ಅಪಹರಣದ, ವರ್ಣಭೇಧ, ಜಾತಿಭೇಧ, ಇತ್ಯಾದಿಗಳನ್ನು ಪ್ರತಿಪಾದಿಸುವ ಭಾಷೆಯನ್ನುಳ್ಳ, ಸಾಹಿತ್ಯದ ಮೆರಗನ್ನು ನೀಡಲ್ಪಟ್ತಿರುವ ವಿಷ ಲೇಪಿತ ಮಾತ್ರೆಯಾಗಿದೆ. ಇಂತಹ ಭಗವತ್ ಗೀತೆಯನ್ನು ಶಾಲಾಮಕ್ಕಳಿಗೆ ಬೋಧಿಸುವ ಪ್ರಯತ್ನವನ್ನು ದೇಶಪ್ರೇಮಿಗಳು, ಸಮಾನತೆ ಸೌಹಾರ್ದತೆ ಬಯಸುವ ಎಲ್ಲರೂ ವಿರೋಧಿಸಬೇಕು. ನಮ್ಮದು ಜನತಾಂತ್ರಿಕ ಜಾತ್ಯಾತೀತ ಆಡಳಿತೆಯ  ಸಂವಿಧಾನಬದ್ಧ ಪ್ರಭುತ್ವವುಳ್ಳ ದೇಶವಾಗಿದ್ದು, ನಮ್ಮ ಸಂವಿಧಾನದ ಪರಿಪಾಲನೆಯನ್ನು ಅನುಲ್ಲಂಘನೀಯ ನಿಯಮವನ್ನಾಗಿ ಅಂಗೀಕರಿಸಿದೆ. ಇಲ್ಲಿ ರಾಷ್ಟ್ರೀಯ ಐಕ್ಯತೆ ಉಳಿಯಬೇಕಾದರೆ ಧರ್ಮ ಬೋಧನೆ, ಧರ್ಮಾಚರಣೆಗಳನ್ನು ಸಾರ್ವಜನಿಕ ಜೀವನದಿಂದ ಮುಕ್ತಗೊಳಿಸಬೇಕಾಗಿದೆ ಮತ್ತು ವಿದ್ಯಾಲಯಗಳು, ಆರೋಗ್ಯ ಮತ್ತಿತರ ಸಾರ್ವಜನಿಕ ಸೇವಾ ಸಂಸ್ಥೆಗಳು ಎಲ್ಲವೂ ಸಂವಿಧಾನ ಬದ್ಧವಾಗಿ ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಲೇಬೇಕಾಗಿದೆ.

Tuesday 12 July 2011

ಕಮ್ಯುನಿಸಂ ಅನಿ ಪ್ರಜಾಪ್ರಭುತ್ವ್

ನಿರೂಪಣ್: ಮೈಕಲ್ ಡಿ ಸೋಜ, ಅಶೋಕನಗರ

ಮಾ|| ಬಿವಿ ಕಕ್ಕಿಲಾಯ ಭಾರತಚ್ಯಾ ಸ್ವಾತಂತ್ರ್ ಚಳುವಳಿಂತ್, ರೈತಾಂಕ್ ಆನಿ ಕಾಮೆಲಿಂಕ್ ಏಕ್ವೊಟಾವ್ನ್ ತಾಂಚೆ ಖಾತಿರ್ ೭೦ ವರ್ಸಾಂ ಸಕ್ರಿಯ್ ಜಾವ್ನ್ ಹೆಳ್`ಲ್ಲೊ ಕಮ್ಯುನಿಸ್ತ್ ಮುಖೆಲಿ. ತೊ ಸೈಂಟ್ ಎಲೋಸಿಯಸ್ ಕಾಲೇಜಿಂತ್ ೧೯೪೦ ಇಸ್ವಂತ್ ಶಿಕ್ಪಾವೆಳಿಂಚ್ ಕಮ್ಯುನಿಸ್ತ್ ಪಾಡ್ತಿಚೊ ಸದಸ್ಯ್ ಜಾವ್ನ್ ಭಾರತಚಾ ಸ್ವಾತಂತ್ರ್ ಚಳುವಳಿಂತ್ ಭಾಗ್ ಘೆವ್ನ್ ಜೈಲ್ ಶಿಕ್ಷೆಕ್ ಒಳಗ್ ಜಲ್ಲೊ. ಉಪ್ರಾಂತ್ ರಾಜ್ಯಸಭೆಚೊ ಅನಿ ಶಾಸಕ್ ಸಭೆಚೊ ಸದಸ್ಯ್ ಜಾವ್ನ್ ವಿಂಚೊವ್ನ್ ಲೋಕ ಮೊಗಾಳ್ ಮುಖೆಲಿ ತೊ ಜಾವ್ನ್ ಆಸ್`ಲ್ಲೊ. ಕಮ್ಯುನಿಸಂ ರಾಷ್ಟ್ರಾಂಕ್ ತಾಣೆಂ ಭೆಟ್ ದಿಲ್ಯಾ ಅನಿಂ ಸಬಾರ್ ಬೂಕ್ ತಾಣೆ ಬರೈಲ್ಯಾತ್. ಕಮ್ಯುನಿಸಂ ವಿಶಾಂತ್ ವಿಚಾರ್`ಲ್ಲ್ಯಾ ಥೊಡ್ಯಾ ಸವಾಲಾಂಕ್  ತಾಣೆ ದಿಲ್ಲೊ ಸಂಕ್ಷಿಪ್ತ್  ವಿವರ್: 
1) ಕಮ್ಯುನಿಸಂ ಮ್ಹಳ್ಯಾರ್ ಕಿತೆಂ? 

ಕಮ್ಯುನಿಸಂ ಏಕ್ ವೈಜ್ಞಾನಿಕ್ ಕಾಲ್ಪಾನಿಕ್ ಸ್ಥಿತ್. ತಿ ಖಂಚ್ಯಾಯಿ ರಾಷ್ಟ್ರಾಂತ್ ಎದೊಳ್ ನಿರ್ಮಾಣ್ ಜಾಂವ್ಕ್ ನಾ. ಕಮ್ಯೂನಿಸ್ಟ್ ಆಡಳಿತ  ಆಸ್`ಲ್ಲ್ಯಾ  ರಾಷ್ಟ್ರಾಂನಿ ತಿ ನಿರ್ಮಾಣ್ ಕರುಂಕ್ ಪ್ರಯತ್ನ್ ಕರಿತ್ತ್ ಆಸಾತ್. ತಾಕಾ ಅಮಿ ಆಶೆಂವ್ಚಾ ಆಮ್ಚಾ ಸರ್ಗಾಚಾ ಕಾಲ್ಪಾನಿಕ್ ಸ್ಥಿತ್ಯೆಕ್ ಸರಿ ಕರ್ಯೆತ್. ಕೊಣಾಂಕೀ ಕಿತೆಂಚ್ ಉಣೆಂಪಣ್ ನಾಸ್ತಾನಾ ಸಂಪೂರ್ಣ್ ಸಂತೊಸಾನ್ ಸಕ್ಕಡ್ ಲೋಕ್ ಜಿಯೆತೊಲೊ. ಕೋಣ್ ಕಿತೆಂ ಅಪೇಕ್ಶಿತಾ ತೆಂ ತಾಕಾ ಮೆಳ್ತೆಲೆಂ. ಎಕ್ಲೊ ಸಕ್ಡಾಂಕ್ ಆನಿ ಸಕ್ಕಡ್ ಎಕ್ಲ್ಯಾಕ್ ಮ್ಹಳ್ಳ್ಯಾ ನಿತೀನ್ ಸಾಮಾಜಿಕ್ ವೆವಸ್ಥಾ  ಆಸ್ತೆಲಿ. ಭೇದ್ ಭಾವ್ ಖಂಚ್ಯಾಚ್ ರೂಪಾರ್ ಆಸ್ಚೊ ನಾಂ. ಉತ್ಪನ್ನೆಚೊ ಸಗ್ಳೊ ವಾಂಟೊ ಮನ್ಶಾ ಕುಳಾಚ್ಯಾ ಅಭಿವೃದ್ಢೆಕ್ ವಿನಿಯೊಗ್ ಜಾತೊಲೊ. ಸೈನಿಕ್ ಸಮಾಜ್ ಸೇವಕ್ ಜಾವ್ನ್ ಲೋಕಾಕ್ ಕುಮಕ್ ಕರ್ತೆಲೆ. 

ಹ್ಯಾವಿಶಿಂ ರಾಷ್ಟ್ರ್ ಕವಿ ಕುವೆಂಪುನ್ ದಿಲ್ಲೊ ವ್ಯಾಖ್ಯಾನ್ ಅಸೊ ಕೋಚೋವ್ನ್, ವೋಂಪೋವ್ನ್, ಪಾಲನ್ ಕರಿನಾಶೆಂ ಬೆಳೆಂ ಲುವೊಂಕ್ ಏನಾ. ಘಾಮ್ ಪೀಳಿನಾಶೆಂ ದುಡು ಹಾತಿಂ ಸೆರ್‍ವಾನಾ. ಶಿಕ್ಪ್ಯಾಂಚ್ಯಾ ಲೋಕಾಂತ್ ಧನಿ ಜಾಂವ್ಕ್ ಚಲಿಸ್ ಉಪಾವ್ ನಾ. ಥೈಂ ಕೊಣಾಂಕೀ ಮೋಸ್ ಕರ್ನ್ ದಿರ್ವೆಂ ಪುಂಜಾಂವ್ಕ್ ಜಾಯ್ನಾ. ತಾಚ್ಯಾ ಕಾಮಾ ತಕೀತ್ ಮಜೂರಿ. ಫಟ್ಕಿರಿ ರುಜ್ವಾತೆಕ್ ಆನಿ ಚೊರ್ಯಂ ಕರ್ತ್ಯುವ್ಯಾಂಕ್ ಆವ್ಕಾಸ್ ಆಸಾಚೊನಾ. ಕೊಣ್ಂಚ್ ದಲ್ಲಾಳಿಪಣ್ ಕರ್ನ್ ಗ್ರೆಸ್ತ್ ಜಾಂವ್ಚೊನಾ. ಥೈಂ ಎಕಾ ಥರಾಚೆಂ ವಿಶಿಷ್ಠ್ ಮ್ಹಣ್ ದಿಸ್ಲ್ಯಾರೀ ಸಮತಾವಾದಚೊ ಅಧಿಪತ್ಯ್; ಕಾಮೆಲಿಂಕ್ ಮಾತ್ರ್ ಥೈಂ ಪ್ರವೇಶ್ ಜಲ್ಯಾರೀ ಕೊಣೆಂಯೀ ಥೈಂ ವೊಚೊನ್ ಕಾಮ್ ಕರ್‍ಯೆತ್. ಪ್ರವೇಶ್ ಜಾಲ್ಯಾ ಉಪ್ರಾಂತ್ ತೊ ಥೈಂ ಚಕ್ರವರ್ತಿಚ್ಹ್ ಕಿತ್ಯಾಕ್ ತಾಚಾ ಶಿವಾಯಿ ದುಸ್ರಿಂ ಬಸ್ಕಾಂ ಯಾ ಜಾಗೋ ಆಸಾಚೊನಾ

2) ಕಮ್ಯುನಿಸಂಕ್ ಆನಿ ಸಮಾಜವಾದೆಕ್ ಕಿತೆಂ ವ್ಯತ್ಯಾಸ್? 

ಸಮಾಜವಾದ್ ಕಮ್ಯುನಿಸಂಚೊ ಪಯ್ಲೊ ಭಾಗ್. ಸಮಾಜವಾದೆಂತ್ ಲೊಕಾ ಮದೆಂ ವರ್ಗ್ ಭೇದ್ ಸಂಪೂರ್ಣ್ ನಿವಾರಣ್ ಜಾಯ್ನಾ. ಪೂಣ್ ಭೇದ್  ಉಣೊ ಜಾತೊಲೊ.ಸಕ್ಡಾಂಕ್ ಕಾಮ್, ವಸ್ತಿ, ಶಿಕಾಪ್ ಆನಿ ಪಿಡೆಸ್ತಾಂಕ್ ಉಚಿತ್ ಚಿಕಿತ್ಸಾ ಲಾಬ್ತೆಲಿ. ಹರ್‍ಯೆಕ್ಲೊ ತಾಚ್ಯಾ ತಾಂಕಿ ಪರ್ಮಾಣೆ ಕಾಮ್ ಕರ್ನ್ ತಾಚ್ಯಾ ಕಾಮಾ ಪರ್ಮಾಣೆ ಪ್ರತಿಫಳ್ ಘೆತೊಲೊ. ಸಮಾಜೆಚೊ ಉತ್ಪನ್ನ್ ಆನಿ ವಿನಿಯೋಗ್ ಯೋಜನಾಭರಿತ್ ಆಸೊನ್ ಸಾರ್ವಜನಿಕ್ ಸವಲತ್ತೆ ಖಾತಿರ್ ಚಡ್ ಪ್ರಾಮುಖ್ಯತ ದಿತೆಲೆ.  ಹಿ ವ್ಯವಸ್ಥಾ ಮುಂದರ್ಸುನ್ ನಿಮಾಣ್ಯ್ ಘಟ್ಟಾಕ್ ಕಮ್ಯುನಿಸಂ ಮ್ಹಣ್ತಾತ್. 

3) ಕಮ್ಯುನಿಸಂತ್ ಪ್ರಜಾಪ್ರಭುತ್ವ್ ನಾಂ ಮ್ಹಣ್ತಾತ್ ನೀಜ್ ಗೀ?

ಕಮ್ಯುನಿಸಂ ವ್ಯವಸ್ಥೆಂತ್ ಭಂಡವಾಳ್ ಶಾಹಿ  ರೂಪಾಚಿ ಮಣ್ಜೆ ಆತಾಂಚಿ ಆಮ್ಚಿ ಆರ್ಥಿಕ್, ಸಾಮಾಜಿಕ್ ಆಡಳಿತೆಚಿ ರೀತ್ ಬದ್ಲುನ್  ವರ್ಗ್ ಭೇದ್ ನಾತ್`ಲ್ಲೊ ಸರ್ವ್ ಕಾಮೆಲಿಂಕ್ ಸಂಪೂರ್ಣ್ ರಿತಿನ್ ಆವ್ಕಾಸ್ ಲಾಬೊವ್ನ್ ಆಡಳಿತಾಂತ್ ತಾಣಿಂ ಪಾತ್ರ್ ಘೆಂವ್ಕ್ ವಾಟ್ ಕರ್ನ್ ದಿವ್ಚೊಂ ಮುಖ್ಯ ಶೆವೊಟ್ ಜಾವ್ನಾಸಾ. ಹೆಂ ಸಕ್ಕಡ್ ಕಮ್ಯುನಿಸ್ತ್ ರಾಷ್ಟ್ರಾಂನಿ  ಎಕ್ ಚ್ಹ್ ರಿತಿನ್ ಜಾಯ್ಜೆ ಯಾ ಜಾತಾ ಮ್ಹಣ್ ನಾಂ. ವಿವಿಂಗಡ್ ರಾಷ್ಟ್ರಾಂತ್ ತಾಂಚ್ಯಾ ಪರಿಗತಿಕ್ ಸರಿ ಜಾವ್ನ್ ತಾಂಚಿಚ್ಹ್ ರೀತ್ ವಾಪಾರ್ತಾಲೆ.  ಪೂಣ್ ತಿ ರೀತ್ ಸಂಪೂರ್ಣ್ ಥರಾನ್  ಲೋಕಾ ಥಾವ್ನ್ ಚುನಾಯಿತ್ ಜಾವ್ನ್ ಪ್ರಜಾಪ್ರಭುತ್ವಚಿ ಜಾವ್ನಾಸ್ತೆಲಿ. ಸಕ್ಡಾಂಕ್ ಮತದಾನೆಚೊ ಹಕ್ಕ್ ಆಸೊನ್ ಚುನಾಯಿತ್ ಪ್ರತಿನಿಧಿ ಸಾರ್ಕೊ ಮನಿಸ್ ನೈ ಮ್ಹಣ್ ದಿಸಾತ್ ತರ್ ತಾಕಾ ಉಚ್ಹಾಟನ್ ಕರ್ಚೆಂ ಹಕ್ಕ್`ಯೀ ಲೋಕಾಕ್ ಆಸ್ತೆಲೆಂ. ಲೊಕಾ ಥಾವ್ನ್, ಲೊಕಾ ಕಾಥಿರ್, ಆನಿ ಲೊಕಾನ್`ಚ್ಹ್  ಚುನಾಯಿತ್ ಕರ್ಚೆಂ ನೀಜ್ ಪ್ರಜಾಪ್ರಭುತ್ವ್ ತೆಂ ಜಾವ್ನಾಸ್ತೆಲೆಂ. ಪ್ರಜಾಪ್ರಭುತ್ವಚೊ ನೀಜ್ ಶೆವೊಟ್ ಮಣ್ಜೆ ಪ್ರಜೆ [ನಾಗರಿಕ್] ನೀಜ್ ಅರ್ಥಾನ್ ಪ್ರಭು ಜಾಂವ್ಕ್ ಪೌತೊಲೊ. ನೈ ಆತಾಂಚ್ಯಾ ಆಮ್ಚ್ಯಾ ರಿತಿಚೆ ಪರ್ಮಾಣೆ ಬಿರ್ಲಾಕ್ ಯೀ ಎಕ್`ಚ್ಹ್ ಓಟ್, ಕಾರ್ಮಿಲಾಕೀ ಎಕ್`ಚ್ಹ್ ಓಟ್ ಕಿತ್ಲೆಂ ಸಮಾನತ್! ಪೂಣ್ ಬಿರ್ಲಾ ಕೆದಿಂಕ್`ಚ್ಹ್ ಸಲ್ವಚೊನಾ ! ಮುಖ್ಯಜಾವ್ನ್.

4) ಕಮ್ಯುನಿಸಂ ದೇವ್ ಪಾತ್ಯೆಣಿಂಚ್ಯಾ ಲೋಕಾಚ್ಯಾ ವಿರೋದ್ ಮ್ಹಣ್ತಾತ್, ಹೆಂ ನೀಜ್ ಗೀ ? 

ಕಮ್ಯುನಿಸಂ ಏಕ್ ವೈಜ್ಞಾನಿಕ್ ಸಿದ್ದಾಂತ್. ತಾಂತುನ್ ಖಂಚಾಚ್ಹ್ ರಿತಿನ್, ಖಂಚ್ಯಾಯಿ ಧರ್ಮಾಂಚ್ಯಾ ವಿಸ್ವಾಸಾಕ್ ನಿಷೇದ್ ಯಾ ಧಮನ್ ಕರ್ಚೊ ಪ್ರಸ್ತಾಪ್ ನಾಂ. ಕಮ್ಯುನಿಸ್ತ್ ಆಡಳಿತಾ ಆಸ್ಚಾ ಖಂಚ್ಯಾ ರಾಷ್ಟ್ರಾತ್`ಯೀ ತಸೆಂ ಕೆಲ್ಲೆಂ ದೃಷ್ಟಾಂತ್ ನಾಂತ್, ಎಕ್`ಚ್ಹ್ ಏಕ್  ಇಗರ್ಜ್, ಮಂದಿರ್ ಯಾ ಪಳ್ಳಿ ನಾಸ್ ಕೆಲ್ಲೊ ಧಾಖ್ಲೊ ನಾ. ಸುಮಾರ್ 3 ದಶಕಾಂ ಆದಿಂ ರಷ್ಯಾಂತ್ ಜಾಗತಿಕ್ ಕ್ರಿಶ್ಚನ್ ಸಮ್ಮೇಳನ್ ಸಲ್`ಲ್ಲೆಂ. ಭಾರತಾಂತ್ಲೆ ಪ್ರತಿನಿಧಿಯೀ ತಾಕಾ ಹಾಜಾರ್ ಜಾಲ್ಲೆ. ಥೋಡೆ ಜಣ್ ಸಾಂಗಾತಾ ಮೆಳೊನ್ ಸ್ವ ಸಹಾಯ ಸಂಸ್ಥೊ ಘಡ್ನ್ ಸರ್ಕಾರಾಕ್ ಅರ್ಜಿ ದಿಲ್ಯಾರ್ ತಾಂಕಾಂ ದೇವ್ ಮಂದಿರ್ ಬಾಂದುಂಕ್ ಜಾಗೊ ಆನಿ ಖರ್ಚಾಕ್ ಗ್ರಾಂಟ್ ರುಪಾರ್ ದುಡ್ವಾಚಿ  ಕುಮಕ್ ಕರ್ಚಿ ವ್ಯವಾಸ್ಥಾಯೀ ಥೈಂ ಆಸಾ. ವಿಭಿನ್ನ್  ದೇವ್ ಪಾತ್ಯೆಣೆಚ್ಯಾ ಲೋಕಾಕ್ ತಾಂಚ್ಯಾ ಪಾತ್ಯೆಣೆ ಪರ್ಮಾಣೆ ದೈವಿಕ್ ಕಾರ್ಯಿಂ ಅಚರ್ಸುಂಚೆಂ ಸ್ವಾತಂತ್ರ್ ಆಸಾಂ. 

ಕ್ಯೂಬಾ ಏಕ್ ಕಮ್ಯುನಿಸ್ತ್ ಆಡಳಿತ ಆಸ್ಚೆಂ ರಾಷ್ಟ್ ಥೈಂಚೊ ಲೋಕ್ ಬಹು ಸಂಖ್ಯಾತ್ ಕ್ರಿಸ್ತಾಂವ್. ತಾಂಚ್ಯಾ ಭಕ್ತಿಕ್ ಕಾರ್ಯಾಂಕ್ ಆನಿ ತಾಂಚ್ಯಾ ಪಾತ್ಯೆಣೆಂಕ್ ಕಸಲಿಚ್ಹ್ ಅಡ್ಕಳ್ ಜಾಲ್ಲಿ ನಾ. ಜಾತಿಚೊ ಸಂಘರ್ಷ್ ಆನಿ ಧರ್ಮ್ ಏಕ್ ವ್ಯಾಪಾರಕ್ ವಾಪಾರುಂಕ್  ಆವ್ಕಾಸ್ ಅಸ್ಚೊನಾ. ಜೆಜು ಕ್ರಿಸ್ತಾನ್ ದೇವಾಳಾಂತ್ಲ್ಯಾ ವ್ಯಾಪಾರಿಸ್ತಾಂಕ್ ದಾಂವ್ಡಾಯಿಲ್ಲೆಂ ಉಡಾಚ್ ಕರಾ. ಆತಾಂ ಆಮ್ಚಾ ರಾಷ್ಟ್ರಾಂತ್  ವಿಭಿನ್ನ್  ದೇವ್ ಪಾತ್ಯೆಣೆಚ್ಯಾ ಲೋಕಾಕ್ ಕಿತ್ಲೆಂ ರಕ್ಷಣ್ ಆಸಾಂ? ಕಿತ್ಲ್ಯೊ ಇಗರ್ಜ್ಯೊ ಅನಿ ಪಳ್ಳ್ಯೊ  ಫಢುಂಕ್ ನಾಂತ್?  ಕೋಮು ಗಲಾಟೊ, ಧಂಗೆ ಜಾವ್ನ್ ಕಿತ್ಲೆ  ಜೀವ್  ನಾಸ್ ಜಾಂವ್ಕ್ ನಾಂತ್? ಅಸೆಂ ಬಿಲ್ಕುಲ್ ಕಮ್ಯುನಿಸ್ತ್ ರಾಷ್ಟ್ರಾಂನಿ   ಜಾಂವ್ಕ್ ಆವ್ಕಾಸ್ ಆಸ್ಚೊನಾ. 

5) ಕಮ್ಯುನಿಸ್ತ್ ಆಡಳಿತ್ ವ್ಯವಸ್ಥೆ ಆತಾಂಚ್ಯಾ ಆಮ್ಚಾ ವ್ಯವಸ್ಥೆ ವರ್ನಿ ಕಶಿ ವಿಂಗಡ್?  

ಕಮ್ಯುನಿಸ್ತ್ ಆಡಳಿತ ಮ್ಹಳ್ಯಾರ್ ಸೈನಿಕ್ ಆಡಳಿತ್ ಯಾ ಸರ್ವಾಧಿಕಾರಿ ಥರಾಚಿ ಆಡಳಿತ  ನೈ. ಕಮ್ಯುನಿಸ್ತ್ ಪಾಡ್ತಿಕ್ ಚುನಾವಣೆಂತ್ ಬಹುಮತ್ ಮಳೊನ್ ಅದಿಕಾರಾಕ್ ಏತ್ ಜಲ್ಲ್ಯಾರ್  ಲೋಕಾಚ್ಯಾ ಮೂಳ್ ಬೂತ್ ಹಾಕ್ಕಾಂಕ್, ಆನಿ ಸೌಕರ್ಯಾಂಕ್,  ತಾಂಚ್ಯಾ ಆರ್ಥಿಕ್ ಆನಿ ಸಾಮಾಜಿಕ್ ಸಮಾನತೆಕ್ ಗರ್ಜೆಚಿಂ ಕಾನುನಾಂ ರಚುನ್ ತಿಂ ಜಾರಿ ಕರ್ತೆಲೆ. ಆಡಳಿತ ಚುರುಕ್ ಆನಿ ಪಾರದರ್ಶಕ್ ಜಾಂವ್ಕ್ ಲೋಕಾ ಥಾಂವ್ನ್ ಚುನಾಯಿತ್ ಕೆಲ್ಲೆ ಸಂಘ್ ಸಂಸ್ಥೆ ತಾಂಚಿ ಉಸ್ತುವಾರಿ ಪಳೆತಾಲೆ. ಅಧಿಕಾರ್ ವಿಭಾಜಿತ್ ಕರ್ನ್ ತ್ಯಾ ಸಂಸ್ಥ್ಯಾಂಕ್ ಅಧಿಕ್ ಅಧಿಕಾರ್ ಲಾಬ್ತೊಲೊ. ಆತಾಂಚ್ಯಾ ಆಮ್ಚ್ಯಾ ಲೊಕಸಭಾ ಚುನಾಯಿತ್ ಕಮ್ಯುನಿಸ್ತ್ ಪಾಡ್ತಿಚೆ ಮಾತ್ರ್ ನೈಂ ಆಸ್ತಾಂ ಇತರ್  ಸಕ್ಕಡ್ ಪಾಡ್ತಿಚೆ   ಬಹು ಸಂಖ್ಯಾತ್  ಸದಸ್ಯ್  ಕರೋಡ್ ಪತಿ ಜಾವ್ನಾಸಾತ್, ದೇಶ್ಯಾಚೊ  80 ಕೊರೊಡ್ ಲೋಕ್ 20 ರುಪ್ಯಾಂ ವರ್ನಿ ಉಣ್ಯಾ ಜೋಡಿರ್ ದುಬ್ಲ್ಯಾಪಣಾರ್  ಜೀಯೆತಾ, ಅನಿ ತ್ಯಾಚ್ ವೆಳಾರ್ ಸಂಸಾರಾತ್ಲ್ಯಾ ಅತ್ಯಂತ್ ಗ್ರೆಸ್ತ್ 10 ಜಣಾಂ ಪಯ್ಕಿ 4 ಜಣ್ ಅಮ್ಚಾ ದೇಶಾಂತ್ಲೆ   ಮ್ಹಣ್ ಸರ್ಕಾರಿ ಅಧಿಕೃತ್ ವರ್ದಿ ತಿಳ್ಸಿತಾ.  ಅಶೆಂ ಬಹು ಸಂಖ್ಯಾಚಾ ದುಬ್ಲ್ಯಾ ಲೋಕಾಚೆ  ಥೊಡೆಚ್ಹ್  ಪ್ರತಿನಿಧಿ ಲೋಕಸಭೆಂತ್ ಅಲ್ಪ ಸಂಖ್ಯಾಚೆ ಜಾವ್ನ್ ತೆ  ಕಾಯಿಂಚ್ ಕರುಂಕ್ ಸಕಾನಾಂತ್. ಆನಿ ಕೊರೊಡ್ಪತಿ ಉಮೇದ್ವಾರಿಂ ಮುಕಾರ್ ಚುನಾವಣೆಂತ್ ಗರೀಬ್ ಲೋಕಾಕ್ ಜಿಕೊಂವ್ಕ್ ಅಸಾಧ್ಯ್. ಅತಾಂ ಅಮಿಂ ಪಾಳ್ಚೆಂ ಅಮ್ಚೆಂ ಪ್ರಜಾಪ್ರಭುತ್ವ್ ಶ್ರೇಶ್ಠ್, ಬಲಿಷ್ಠ್ ಆನಿ ಕಿತೆಂ ಅಶೆಂ ತಶೆಂ ಮ್ಹ`ಣ್ ಗಾಜ್ತಾತ್. ಪೂಣ್ ಬಹು ಸಂಖ್ಯಾತ್ ಪ್ರಜಾ ಕಸಿ ಜಿಯೆತಾ? ಪ್ರಜೆ ಪ್ರಭು ಜಾಂವ್ಕ್ ಸಕ್ತಾ? ತರ್ ಕಸಲೆಂ ಪ್ರಜಾಪ್ರಭ್`ತ್ವ್ ಹೆಂ? ಸರ್ಕಾರ್ ಗ್ರೆಸ್ತ್ ಲೋಕಾಕ್ ಪಸಂದ್ ಜಾಂವ್ಚೊ ಕಾನೂನ್ ಘಡ್ನ್ ತಾಂಕಾ ಜಾಯಿ ಜಾಂವ್ಚಿ ಸವಲತ್ತ್ ಚಡ್ ಕರಿತ್ತ್ ವೆತಾ. ಹಿ ಆಮ್ಚಾ ದೇಶಾಚಿ ಧಾರೂಣ್ ಸ್ಥಿಥಿ.

6) ಸೋವಿಯತ್ ಯೂನಿಯಾನಾಂತ್ ಕಮ್ಯುನಿಸಂ ಸಲ್ವಂಕ್ ಕಾರಾಣ್ ಕಿತೆಂ?  

ವಯ್ರ್ ತಿಳ್ಸಿಲ್ಯ್ಯಾ ಪ್ರಕಾರ್ ಥೈಂ ಕಮ್ಯುನಿಸಂ ಜಾರಿ ಜಾವ್ಕ್ ನಾತ್`ಲ್ಲೆಂ.  ಸಮಾಜವಾದಿ ವ್ಯವಸ್ತಾ ಮಾತ್ರ್ ರಚನ್ ಜಾಲ್ಲಿ ಥೊಡ್ಯಾಚ್ಹ್ ವರ್ಸಾನಿಂ ಅದ್ಭುತ್ ಪ್ರಗತಿ ಅನಿ ಯಶಸ್ವಿ ಲಾಬ್`ಲ್ಲಿ ತರೀ ಥೈಂಚಾ ಲೋಕಾಕ್ ತ್ಯಾ ಯಶಸ್ವಿಚೊ ಫಾಯ್ದೊ ಸಂಪೂರ್ಣ್ ಲಾಭ್ಹೊಂಕ್ನಾ. ಅಂತರಾಷ್ಟ್ರೀಯ್ ಶೀತಲ್ ಝುಜ್, ಸಾಮ್ರಾಜ್ಯವಾದಿ ರಾಷ್ಟ್ರಾಂಚೆಂ ಆರ್ಥಿಕ್ ಧಿಗ್ಬಂದನ್, ಝುಜಾ ಸಾಹೆತಿಚೊ ಸ್ಪರ್ದೊ, ಹೆರ್ ರಾಷ್ಟ್ರಾಂಚ್ಯಾ ಸ್ವಾತಂತ್ರ್ಯ ಖಾತಿರ್ ಅನಿ ಸ್ವತಂತ್ರ್ ಜಲ್ಲ್ಯಾ ರಾಷ್ಟ್ರಾಂಕ್ ಆರ್ಥಿಕ್ ಮಜತ್ ದಾರಾಳ್ ಮಾಪಾನ್ ತಾಣಿಂ ದಿಲ್ಲಿ. ದೃಷ್ಟಾಂತಕ್ ಭಾರತ್, ಚೀನಾ, ಕ್ಯುಬಾ, ವಿಯೆಟ್ನಾಂ, ಅಫಘಾನಿಸ್ಥಾನ್, ಲಾಟಿನ್ ಅಮೆರಿಕಾ, ಬೆಲ್ಜಿಯಂ, ಕಾಂಗೊ,ದ.ಆಪ್ರಿಕಾ.  ಇತ್ಯಾದಿ.

ಪ್ರಗತೆಚೊ ವೊಡ್ ವಾಂಟೊ ಇತರ್ ರಾಷ್ಟ್ರಾಂಚ್ಯಾ ಮಜತೆಕ್ ಆನಿ ರಕ್ಷಣೆಂಕ್ ವಿನಿಯೋಗ್ ಜಾಲ್ಲ್ಯಾನ್ ಥೈಂಚೊ ಲೋಕ್ ನಿರಾಸಿ ಜಾಲೊ. ತ್ಯಾ ಭಾಯ್ರ್ ಸಮಾಜವಾದಿ ವ್ಯವಾಸ್ಥೆಂತ್ ಅಂತರಾಷ್ಟ್ರೀಯ್ ಭಿನ್ನಾಭಿಪ್ರಾಯ್ ಉಬ್ಜೊವ್ನ್ ಸಮಾಜವಾದಿ ರಾಷ್ಟ್ರಾಂನಿಂ ವ್ಯತಿರಿಕ್ತ್ ಪರಿಣಾಮ್ ಘಡ್ಲೊ.  ಭಂಡವಾಳಿಶಾಹಿ ರಾಷ್ಟ್ರಾಂ ಕಮ್ಯುನಿಸಂ ಅನಿ ಸಮಾಜವಾದೆಚ್ಯಾ ಸಲ್ವಣೆಕ್ ನಿರಂತರ್ ವಾವುರ್ತಾತ್. ರಾಷ್ಟ್ರಾಂ ಮದೆಂಗಾತ್ ಝಗ್ಡೆಂ ಉಬ್ಜೈತಾತ್. ಅಸೆಂ ಸಾಮ್ರಾಜ್ಯವಾದಿ ಅನಿ ಭಂಡವಾಳಿಶಾಹಿ ರಾಷ್ಟ್ರಾಂಚ್ಯಾ  ಅಡ್ಕಳಿ ಅನಿ ವಿರೋದಿ ನಿಮ್ತಿ ಥೈಂ ಆಡಳಿತಾಕ್ ಸಲ್ವಣಿ ಜಾಲಿ. ಜಲ್ಯಾರ್ ಹಿ ಕಮ್ಯುನಿಸಂ ಅನಿ ಸಮಾಜವಾದೆಚಿ ಸಲ್ವಣಿ ನೈಂ. ಬಗಾರ್ ತಿ ಜಾರಿ ಕೆಲ್ಲ್ಯಾ ಅನನುಭವಿ ಮುಖೆಲಿನಿಂ ಜಾರಿ ಕೆಲ್ಲ್ಯಾ ರಿತಿಚಿ ಸಲ್ವಣಿ. ಸಲ್ವಣೆಂಚೆಂ ಕಾರಾಣ್ ಸಮ್ಜೊನ್ ಸರ್ವ್ ಮನ್ಶಾಕುಳಾಚ್ಯಾ ಅಭಿವೃದ್ದಿಕ್ ತಿ ಜಾರಿ ಜಾಂವ್ಕ್ ನಿರಂತರ್ ಪ್ರಯತ್ನ್ ಕರ್ಚೆಂ  ಗರ್ಜೆಚೆಂ. 

7) ಆಮ್ಚಿ ಸಂಸ್ಕೃತಿ  ಅತ್ಯಂತ್  ಶ್ರೇಷ್ಠ್ ಅನಿ ಆದರ್ಶ್ ಮ್ಹಣ್ತಾತ್, ತುಜಿ ಅಭಿಪ್ರಾಯಿ ಕಿತೆಂ ? 

ಸಂಸ್ಕೃತಿ ಮ್ಹಳ್ಯಾರ್ ಲೋಕಾನ್ ಜಿಯೆಂವ್ಚಿ ರೀತ್. ಆಮಿಂ ಕಿತೆಂ ಆತಾಂ ಭಾರತ್ ಮ್ಹಣ್ತಾಂವ್ ತಾಂತ್ಲೊ ಲೋಕ್ ಸಭಾರ್ ಕಾಳಾ ಆದಿಂ ಸಕ್ಕಡ್ ಸಾಂಗಾತಾ ಮೆಳೊನ್ ಉತ್ಪಾದನ್ ಅನಿ ಸಂರಕ್ಷಣ್  ಕರ್ನ್ ಜಿಯೆಂವ್ಚಿ ವ್ಯವಾಸ್ಥಾ ಆಸ್`ಲ್ಲಿ ಮ್ಹಣ್ ಚರಿತ್ರೆಂತ್ ಧಾಖ್ಲೆ ಆಸಾತ್. ಹಿ ವ್ಯವಾಸ್ಥಾ ಸುಮಾರ್ 5 ಹಜಾರ್ ವೊರ್ಸಾಂ ಆದಿಂಚ್ ಬದ್ಲೊನ್ ವರ್ಗ್ ಆಧಾರಿತ್ ಚಾತುರ್ವರ್ಣೀಯ ಧರ್ಮ ಮ್ಹಳ್ಳಿ ವ್ಯವಸ್ತಾ ಉಬ್ಜಾಲಿ.  ಊಂಚ್, ನೀಚ್, ಸ್ಪರ್ಶ್, ಅಸ್ಪರ್ಶ್, ಸೇವಕ್, ಮಾಲಿಕ್ ಅಸಲೊ ವರ್ಗ್ ಭೇದ್ ಆಚರಣೆಕ್ ಆಯ್ಲೊ. ಜಲ್ಮಾನ್ಚ್ ಊಂಚ್, ನೀಚ್, ಸ್ಪರ್ಶ್, ಅಸ್ಪರ್ಶ್ ಮ್ಹಣ್ ಭೇದ್ ಕರ್ಚಿ ಸಂಸ್ಕೃತಿ ಬಾರತಾಂತ್ ಮಾತ್ರ್ ಪಳೆಂವ್ಕ್ ಮೆಳ್ತಾ.  ತಸಲಿ ಅನಿಷ್ಠ್, ಅವ್ಮಾನಿಕ್, ಅಮಾನವೀಯ್  ಸಂಸ್ಕೃತಿ ಶ್ರೇಷ್ಠ್ ಯಾ ಆದರ್ಶ್ ಮ್ಹಣ್ಯೆತ್?

Friday 1 July 2011

ಲೋಕಪಾಲ್ ಚಳುವಳಿ ದಾರಿ ತಪ್ಪದಿರಲಿ

ಪ್ರಸ್ತಾವಿತ ಲೋಕಪಾಲ್ ಮಸೂದೆಯ ಬಗ್ಗೆ ಲೇಖನ (ದಿನಾಂಕ ಜುಲೈ 1, 2011)

ನಮ್ಮ ದೇಶದಲ್ಲಿಂದು ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳಲ್ಲಿಯೂ ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿದೆ. ಅಣ್ಣಾ ಹಜಾರೆಯವರು ಈ ಪ್ರಶ್ನೆಯನ್ನು ಎತ್ತಿಕೊಂಡು ಅದನ್ನು ನಿಗ್ರಹಿಸಲು ಲೋಕಪಾಲ ಪ್ರಾಧಿಕಾರವೊಂದನ್ನು ಸ್ಥಾಪಿಸುವಂತೆ ಆಗ್ರಹಿಸುವ ಚಳುವಳಿಯನ್ನು ಸಂಘಟಿಸಿದರು ಮತ್ತು ಅದಕ್ಕೆ ವ್ಯಾಪಕ ಸಾರ್ವತ್ರಿಕ ಬೆಂಬಲವೂ ವ್ಯಕ್ತವಾಯಿತು. ಚಳುವಳಿಯ ಗಂಭೀರತೆಯನ್ನು ಕಂಡುಕೊಂಡ ಸರಕಾರವು ಹಜಾರೆಯವರೊಳಗೊಂಡು ಸರಕಾರಿ ಮತ್ತು ಗಣ್ಯ ನಾಗರಿಕರ  ಒಂದು ಸಮಿತಿಯನ್ನು ರಚಿಸಿತು ಮತ್ತು ಆ ಸಮಿತಿ ರಚಿಸಿದ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಭರವಸೆಯನ್ನೂ ನೀಡಿತು. ಆದರೆ ಈಗ ಆ ಸಮಿತಿಯೊಳಗೆಯೇ ಮುಖ್ಯ ಪ್ರಶ್ನೆಗಳಿಗೆ ಒಮ್ಮತ ಮೂಡದೆ ಮಸೂದೆಯ ಉದ್ದೇಶವೇ ಮೂಲೆಗುಂಪಾಗುವಂತೆ ತೋರುತ್ತದೆ. ವಿಭಿನ್ನ ಹೇಳಿಕೆಗಳು ಕೇಳಿ ಬರುತ್ತಿವೆ. ಅಲ್ಲದೆ ಅಣ್ಣಾ ಹಜಾರೆಯವರು ಸತ್ಯಾಗ್ರಹವನ್ನು ಪುನರಾರಂಭಿಸುವುದು ಖಚಿತವೆಂಬ ಹೇಳಿಕೆಯು ನಮ್ಮೆಲ್ಲರ ದುಗುಡಕ್ಕೆ ಕಾರಣವಾಗಿದೆ. ಹಜಾರೆಯವರು ಆ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದುದನ್ನು ನಾವು ಸ್ವಾಗತಿಸುತ್ತೇವೆ. ಎಡ ಪಕ್ಷಗಳು ಈಗಾಗಲೇ ಅವರಿಗೆ ಬೆಂಬಲವನ್ನು ಸೂಚಿಸಿವೆ.

ಅಣ್ಣಾ ಹಜಾರೆಯವರ ಹಿಂದಿನ ಚಳುವಳಿಯಲ್ಲಿ ರಾಂ ದೇವ್ ಎಂಬ ಯೋಗ ಗುರು ಎಂದುಕೊಳ್ಳುವ ವ್ಯಕ್ತಿಯು ನುಸುಳಿ ಚಳುವಳಿಯ ದಿಕ್ಕುತಪ್ಪಿಸುವ ಸಂಚನ್ನು ರೂಪಿಸಿದ್ದು ಬಹಿರಂಗವಾಯ್ತು. ಚಳುವಳಿಯಲ್ಲಿ ತಮಗೆ ಪ್ರಾಮುಖ್ಯತೆ ದೊರಕದ್ದುದನ್ನು ಕಂಡು ಅವರನ್ನು ಪ್ರಯೋಜಿಸಿದ ವಾಣಿಜ್ಯೋದ್ಯಮಿಗಳು ವಿದೇಶೀ ಬೇಂಕುಗಳಲ್ಲಿ ಜಮೆಯಾಗಿರುವ ಕಪ್ಪು ಹಣದ ವಿಷಯದ ಬಗ್ಗೆ ಪ್ರಾಮುಖ್ಯತೆ ಕೊಟ್ಟು ಅದನ್ನು ಮುಟ್ಟುಗೋಲು ಹಾಕಿ ವಶಪಡಿಸಬೇಕೆಂಬ ಬೇಡಿಕೆಯನ್ನಿಟ್ಟು ಬೇರೆಯೇ ಒಂದು ಚಳುವಳಿಯನ್ನು ಪ್ರಾರಂಭಿಸಿದರು. ಅದರ ಪ್ರಹಸನವನ್ನು ನಾವು ಕಂಡಿದ್ದೇವೆ. ರಾಮ ಲೀಲಾ ಮೈದಾನದಲ್ಲಿ ನೆರೆದಿದ್ದ ಜನರನ್ನು ಚದುರಿಸಲು ಮಧ್ಯರಾತ್ರಿಯಲ್ಲಿ  ನಡೆಸಿದ  ಪೊಲೀಸ್ ಕಾರ್ಯಾಚರಣೆಯು ಖಂಡನೀಯವಾದರೂ, ಆ  ಚಳುವಳಿಯ ಹಿಂದೆ ರೂಪಿತವಾದ ವಿನಾಶಕಾರಿ ಸಂಚು ನಮ್ಮೆಲ್ಲರನ್ನು ದಂಗುಬಡಿಸಿತು. ಆ ಸಂದರ್ಭದಲ್ಲಿ ಅವರು ವರ್ತಿಸಿದ ರೀತಿ, ಹೆಣ್ಣುವೇಷದಲ್ಲಿ ಪಲಾಯನಗೈದ ಅವರ ಹೇಡಿತನ ಮತ್ತು ಅವರನ್ನು ಮುಂದಿರಿಸಿ ಚಳುವಳಿಯನ್ನು ರೂಪಿಸಿದ ವಾಣಿಜ್ಯೋದ್ಯಮಿಗಳ ಸಂಚು ಅತ್ಯಂತ ವಿನಾಶಕಾರಿಯಾಗಿತ್ತು. ರಾಷ್ಟ್ರವ್ಯಾಪಿ ಅರಾಜಕತೆಯನ್ನು ಉಂಟು ಮಾಡಿ ಅಧಿಕಾರವನ್ನು ಕಸಿದುಕೊಳ್ಳುವ ಹುನ್ನಾರ  ಅವರಲ್ಲಿ ಅಡಗಿದ್ದದ್ದು ಬಯಲಾಯ್ತು.

ಆದರೆ ರಾಂ ದೇವ್‌ರವರ ಪ್ರಹಸನಕ್ಕೂ ಹಜಾರೆಯವರ ಚಳುವಳಿಗೂ ಬಹಳ ವ್ಯತ್ಯಾಸವಿದೆ. ಅವರಿಬ್ಬರ ಚಳುವಳಿಗಳನ್ನು ತಳಕು ಹಾಕಕೂಡದು. ರಾಂ ದೇವ್‌ರವರು ವಾಣಿಜ್ಯೋದ್ಯಮಿಗಳ ಪ್ರತಿನಿಧಿಯಾದರೆ ಹಜಾರೆಯವರು  ಜನಸಾಮಾನ್ಯರ ಪ್ರತಿನಿಧಿಯಾಗಿರುತ್ತಾರೆ. ಲೋಕಪಾಲ್ ಮಸೂದೆಯ ಸಮಿತಿಯಲ್ಲಿನ ಮುಖ್ಯ ಭಿನ್ನಾಭಿಪ್ರಾಯವು ಲೋಕಪಾಲರ ನೇಮಕ, ಅವರಿಗೆ ನೀಡುವ ಅಧಿಕಾರ, ಮತ್ತು ಅವರ ನಿಯಂತ್ರಣದ ಬಗ್ಗೆ ಮತ್ತು ಅವರಿಗೆ ಈಗಿನ ಬೇಡಿಕೆಯಂತೆ ಅಧಿಕಾರ ನೀಡಿದರೆ  ಅವರು ಭಸ್ಮಾಸುರನಂತೆ ಅನಿಯಂತ್ರಿತರಾಗಿ ವಿನಾಶಕ್ಕೆ ದಾರಿಯಾದೀತು ಎಂಬ ಭೀತಿ ಕಾಡುವುದು ಸಹಜವಾಗಿದೆ. ಆದಕ್ಕೆ ನಾವು ಒಂದು ಸಲಹೆಯನ್ನು ಸೂಚಿಸಲು  ಬಯಸುತ್ತೇವೆ.

ಲೋಕಪಾಲ ಸಂಸ್ಥೆಯನ್ನು ಕೇಂದ್ರ ಮಂತ್ರಿ ಮಂಡಲ, {ಪ್ರಧಾನ ಮಂತ್ರಿ} ವಿರೋಧ ಪಕ್ಷದ ನಾಯಕ ಮತ್ತು  ಸರ್ವೋಚ್ಛ ನ್ಯಾಯಾಲಯದ ನ್ಯಾಯಾಂಗ ಪೀಠವು ಜೊತೆಗೂಡಿ ರೂಪಿಸತಕ್ಕದ್ದು ಮತ್ತು ಅವರನ್ನು ನೇಮಿಸುವ, ನಿಯಂತ್ರಿಸುವ ಮತ್ತು ಉಚ್ಛಾಟಿಸುವ  ಅಧಿಕಾರವೂ ಅವರಿಗೇ ಇರಬೇಕು ಮತ್ತು ಇದನ್ನು ರಾಷ್ಟ್ರಾಧ್ಯಕ್ಷರ ಮೂಲಕ ಕಾರ್ಯಗತಗೊಳಿಸುವಂತಿರಬೇಕು. ರಾಷ್ಟ್ರಾಧ್ಯಕ್ಷರನ್ನು ಹೊರತುಪಡಿಸಿ ಇತರ ಎಲ್ಲಾ ಕೇಂದ್ರ ಸರಕಾರದಿಂದ ಸಂಬಳ, ಗೌರವಧನ ಪಡೆಯುವ ಸರ್ವರಿಗೂ ವಿಚಾರಣೆಗೊಳಪಡಿಸಿ ಸರ್ವೋಚ್ಛ ನ್ಯಾಯಾಲಯದ ಅಡಿಯಲ್ಲಿ ಬರುವ ಪ್ರತ್ಯೇಕ ನ್ಯಾಯಾಲಯದಲ್ಲಿ ದಾವೆಯನ್ನು ಹೂಡುವ ಪೂರ್ಣ ಅಧಿಕಾರ ಲೋಕಪಾಲರಿಗೆ ಇರಬೇಕು. ವಿಚಾರಣೆ ನಡೆಸಿ ಶಿಕ್ಷಿಸುವ ಅಧಿಕಾರ ನ್ಯಾಯಾಲಯಗಳಿಗೆ ಮಾತ್ರ ಇರಬೇಕು.  ಇದರಿಂದಾಗಿ ಲೋಕಪಾಲ್ ಸಂಸ್ಥೆಯು ಸಂವಿಧಾನದ ರೂಪು ರೇಷೆಗಳಿಗೆ ಹೊರತಾದುದು ಮತ್ತು  ಅನಿಯಂತ್ರಿತವಾದುದು ಎಂಬ ಭೀತಿ ದೂರವಾಗುವುದಲ್ಲದೆ ಅದು ಖಂಡಿತವಾಗಿಯೂ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲುದು ಎಂಬುದಾಗಿ ನಮ್ಮ ನಂಬಿಕೆ.

ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಸಂವಿಧಾನಬಾಹಿರ

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಿಬ್ಬರ ಆಣೆ ಪ್ರಮಾಣ ಪ್ರಹಸನದ ಬಗ್ಗೆ ಲೇಖನ (ದಿನಾಂಕ ಜೂನ್ 23, 2011)

ಇದೇ ಜೂನ್ 27ರಂದು ಧರ್ಮಸ್ಥಳದಲ್ಲಿ ನಮ್ಮ ಹಾಲೀ ಮತ್ತು ಮಾಜೀ ಮುಖ್ಯಮಂತ್ರಿಗಳಾಗಿರುವ ಯೆಡ್ಯೂರಪ್ಪ ಮತ್ತು ಕುಮಾರಸ್ವಾಮಿಯವರು ಹಿಂದೆ ಜೊತೆಗಿದ್ದುಕೊಂಡು ತಮ್ಮೊಳಗೆ ಮಾಡಿಕೊಂಡ್ಡಿದ್ದ ಮತ್ತು ಬಹುಷಃ ತಮ್ಮಿಬ್ಬರಿಗೆ ಮಾತ್ರ ತಿಳಿದಿರುವ ತಮ್ಮ ತಮ್ಮ ದುರ್ವ್ಯವಹಾರಗಳ ಕುರಿತು ಪ್ರಮಾಣ ವಚನ ಸ್ವೀಕರಿಸುವ ಕಾರ್ಯ ನಡೆಯಲಿದೆ ಎಂಬ ಪ್ರಚಾರ ನಡೆದಿತ್ತು. ಈಗ ಅದರ ಬದಲು ಕೇವಲ ಮನಸ್ಸಾಕ್ಷಿಯಷ್ಟೇ ನಡೆಯುತ್ತದೆ ಎಂಬ ಹೇಳಿಕೆಗಳು ಬರತೊಡಗಿವೆ. ಅವರಿಬ್ಬರ ದುರ್ವ್ಯವಹಾರಗಳೆಲ್ಲವೂ ಬಯಲುಗೊಳ್ಳುವುದೆಂಬ ಭೀತಿಯಿಂದ ಅವರು ಈ ನೆವನವನ್ನು ಮುಂದೊಡ್ಡಿದ್ದಾರೆ ಎಂದು ತೋರುತ್ತದೆ. ಅದಕ್ಕೆ ಪೂರಕವಾಗಿ ಕೆಲವು ಮಠಾಧೀಶರು ತಮ್ಮ ಸಲಹೆಗಳನ್ನು ಕೊಟ್ಟಿರುವುದೂ ಪೂರ್ವ ಯೋಜಿತವೆಂಬಂತೆಯೇ ಭಾಸವಾಗುತ್ತದೆ.

ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದರ ಬಗ್ಗೆ ರಾಷ್ಟ್ರಕವಿ ಕುವೆಂಪುರವರು ಒಂದು ಸುಂದರವಾದ ಮತ್ತು ಅರ್ಥ ಪೂರ್ಣವಾದ ಕವನವನ್ನೇ ಬರೆದಿರುವರು. ಅದು ಪ್ರಸ್ತುತ ಸಂದರ್ಭದಲ್ಲಿ ನೆನಪಿಸುವುದು ಸೂಕ್ತವೆನಿಸುತ್ತಿದೆ. ಕುವೆಂಪುರವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ವೀರೇಂದ್ರ ಹೆಗ್ಡೆಯವರ ಹಿರಿಯರಾದ  ಮಂಜಯ್ಯ ಹೆಗ್ಡೆಯವರು ಆಡಳಿತೆಯನ್ನು ನಡೆಸುತ್ತಿದ್ದರು. ಇಂದಿಗಿಂತಲೂ ಅಂದು ಧರ್ಮಸ್ಥಳದ ಮಹತ್ವದ ಬಗ್ಗೆ ಜನರ ಭೀತಿ ಅಧಿಕವಿತ್ತು. ಧರ್ಮಸ್ಥಳದಲ್ಲಿ ಸಾಮಾನ್ಯ ಜನರು ಆಚರಿಸುತ್ತಿದ್ದ ಹರಕೆ ಸಂದಾಯಗಳ ರೀತಿ ನೀತಿಗಳನ್ನು ಖುದ್ದಾಗಿ ಕಂಡು ಅದು ಅಮಾನವೀಯವೆಂದು ಮನನೊಂದು ಧರ್ಮಸ್ಥಳ ಎಂಬ ಒಂದು ಕವನವನ್ನು ಸ್ಥಳದಲ್ಲೇ ರಚಿಸಿ ಅದನ್ನು ಇಕ್ಷು ಗಂಗೋತ್ರಿ ಎಂಬ ತನ್ನ ಕವನ ಸಂಕಲನದಲ್ಲಿ ಪ್ರಕಟಿಸಿದ್ದಾರೆ. ಅದರ ಕೆಲವು ಸಾಲುಗಳು ಹೀಗಿವೆ:

ಹೃದಯ  ಧರ್ಮಸ್ಥಳದಿ ನಿನ್ನಂತರಾತ್ಮನಿರೆ, ಅಂಜುತಿಹೆ ಏಕೆ?  ..   ..
ಅಲ್ಲಿ ದರ್ಮಸ್ಥಳದಿ ಹೇಳಿಗೆಯ ಹಾವಿನೊಲು, ದೇಗುಲಕೆ ವಶನೆ ಹೇಳ್ ಮಂಜುನಾಥ? 
[ನಿನ್ನ ಅಂತರಾತ್ಮದಲ್ಲಿ ನಿಜವಾಗಿಯೂ ಮಂಜುನಾಥನು ಇರುವುದಾದರೆ ಹಾವಾಡಿಗನ ಹೇಳಿಗೆಯಂತಿರುವ ಧರ್ಮಸ್ಥಳದ ದೇಗುಲದಲ್ಲಿ ಮಂಜುನಾಥ ಬಂಧಿಯಾಗಿರುವನೇನು?]

ನಿನ್ನ  ಭಯದ ಉರಿಗೊಳ್ಳಿ ನಿನಗೆ ಅದುವೇ ಪಂಜುರ್ಲಿ; ನಿನ್ನ ಅಳುಕೇ ನಿನಗೆ ಅಣ್ಣಪ್ಪ ಭೂತ!
[ನಿನ್ನ ಭಯವೆಂಬ ಉರಿಯುವ ಕೊಳ್ಳಿಯೇ ನಿನ್ನನ್ನು ಪಂಜುರ್ಲಿಯಂತೆ ಕಾಡುತ್ತದೆ, ನಿನ್ನ ಅಳುಕೇ ನಿನಗೆ ಅಣ್ಣಪ್ಪ ಭೂತದಂತೆ ಕಾಡುತ್ತದೆ.]

ಎಲ್ಲಿ ಮತ್ಸರವುಅಳಿದು ಮೈತ್ರಿ ಮೂಡುವಲ್ಲಿ ಮೂಡಿತೆಂದೇ ತಿಳಿಯೋ ಧರ್ಮಸ್ಠಳ. ಸುಲಿಗೆ ವಂಚನೆ ಕಳೆದವನ ಮನವೇ ಮಂಜುನಾಥನ ಮಂಚ, ಹೃದಯಕಮಲ!
[ಎಲ್ಲಿ ಮತ್ಸರವು ಆಳಿದು ಗೆಳೆತನವು ಮೂಡುವುದೋ ಅಲ್ಲಿ ನಿಜವಾದ ಧರ್ಮಸ್ಥಳ ಮೂಡುತ್ತದೆ ಎಂದು ತಿಳಿ. ಸುಲಿಗೆ, ವಂಚನೆ, ಹಿಂಸೆಗಳನ್ನು ಕಳೆದವನ ಮನಸ್ಸೇ ಮಂಜುನಾಥನ ಪೀಠ!]

ಮೂಢ ಹೃದಯದ ಗೂಢ ಗಾಢಾಂಧಕಾರವನು ಹೊರ ದೂಡದೆಯೆ ರೂಢಿ ಎಂಬ ನೆವನದಿ ಕಾಣಿಕೆಯ ಹೆಸರಿಟ್ಟು ಕಾಂಚನವನೆಳೆದುಕೊಳೆ ಜ್ಯೋತಿ ಮೂಡುವುದೆಂದೋ ಜಡದ ಜಗದಿ?
[ಮೂಢರ ಹೃದಯಗಳ ನಿಗೂಢ ಗಾಢಾಂಧಕಾರವನ್ನು ಕಾಣಿಕೆ ಎಂಬ ಹೆಸರಲ್ಲಿ ಕಾಂಚನವನ್ನು ಸೆಳೆಯುವ ತಂತ್ರಕ್ಕೆ ಪ್ರೋತ್ಸಾಹ ಕೊಟ್ಟರೆ ಜಗತ್ತಿನಲ್ಲಿ ಜ್ಞಾನ ಜ್ಯೊತಿ ಮೂಡುವುದು ಎಂದು?]

ಹೆಮ್ಮೆಯನು ಬಿಡು, ಹಿರಿಯ! ದಮ್ಮಯ್ಯನಿಡು ಜಿನಗೆ! ನಿನ್ನಂತೆ ಸಂಸ್ಥೆಯೂ ನಶ್ವರವದು!
[ಧರ್ಮಸ್ಥಳದ ಹಿರಿಯನೇ,  ಅಹಂಭಾವವನ್ನು ತೊರೆದು ಜಿನನಿಗೆ ಶರಣಾಗು, ನೀನಾಗಲಿ ನಿನ್ನ ಸಂಸ್ಥೆಯಾಗಲಿ ಶಾಶ್ವತವೇನಲ್ಲ!]

ಧರ್ಮಕ್ಕೆ ಧರ್ಮಸಂಸ್ಥೆಗೆ ನಿಂದೆ ನನದಲ್ಲ; ಧರ್ಮವೇಷದ ಅಧರ್ಮಕ್ಕೆ ಮುನಿದೆ, ನಿಜದ ಧರ್ಮಸ್ಥಳಕೆ ನಿಜದ ಧರ್ಮಕೆ ಇದೆಕೋ ಕೈ ಮುಗಿದೆ, ಮಣಿದೆ, ಹಿರಿದು ಕಿರಿದೆನ್ನದೆ!
[ಧರ್ಮ ಮತ್ತು ಧರ್ಮ ಸಂಸ್ಥೆಗಳಿಗೆ ನಾನು ನಿಂದಿಸುವುದಿಲ್ಲ, ಧರ್ಮದ ಹೆಸರಲ್ಲಿ ನಡೆಯುವ ಅಧರ್ಮಕ್ಕೆ ನನ್ನ ಮುನಿಸು, ನಿಜವಾದ ಧರ್ಮಕ್ಕೆ ನಾನು ತಲೆ ಬಾಗುತ್ತೇನೆ ಮತ್ತು ಕೈ ಮುಗಿಯುತ್ತೇನೆ]

ಇದು ಕುವೆಂಪುರವರ ಶ್ರೇಷ್ಠ ಕವನಗಳಲ್ಲೊಂದು ಎಂದೆನಿಸಿದೆ. ಧರ್ಮಸ್ಥಳದಲ್ಲಿ ಪ್ರಮಾಣ ವಚನ ಸ್ವೀಕರಿಸುವುದು, ಆಣೆ ಇಡುವುದು  ಧರ್ಮದ ಹೆಸರಲ್ಲಿ ನಡೆಯುವ ಅಧರ್ಮವೆಂದೂ, ಜನರನ್ನು ಮೌಡ್ಯಕ್ಕೆ ತಳ್ಳುವ ಕ್ರಿಯೆಯೆಂದೂ ಅರ್ಧ ಶತಮಾನಗಳ ಹಿಂದೆಯೇ ಕುವೆಂಪುರವರು ಸಾರಿದ್ದರು. ಹಾಗಿರುವಾಗ ಜನ ನಾಯಕರೆಂದೆನಿಸಿಕೊಂಡಿರುವ ಯೆಡ್ಯೂರಪ್ಪ ಮತ್ತು ಕುಮಾರಸ್ವಾಮಿಯವರ ಕುಕೃತ್ಯಕ್ಕೆ ಅಸಹ್ಯ ಪಡುತ್ತೇವೆ ಮತ್ತು ಅದನ್ನು ಖಂಡಿಸುತ್ತೇವೆ. ಏನಿದ್ದರೂ ಎಲ್ಲ ಅವ್ಯವಹಾರಗಳನ್ನು ಬಯಲು ಮಾಡುವುದು ಅವರ ಆದ್ಯ ಕರ್ತವ್ಯವಾಗಿದೆ. ಆದುದರಿಂದ ಅವುಗಳನ್ನು ನಮ್ಮ ಸಂವಿಧಾನಕ್ಕನುಗುಣವಾಗಿ ಶಾಸನ ಸಭೆಗಳಲ್ಲಿಯೋ, ನ್ಯಾಯಲಯಗಳಲ್ಲಿಯೋ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಅವರದ್ದಾಗಿರುತ್ತದೆ. ಮತ್ತು ಇವುಗಳ ಕುರಿತು ಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕು ನಾಗರಿಕರಿಗಿದೆ. ಇದಕ್ಕೆ ಅವರು ಬದ್ಧರಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಂಚನೆಯಿಂದ ಪಾಲಿಸುತ್ತಾರೆ ಎಂದು ಹಾರೈಸುತ್ತೇವೆ.

ಭಾರತದ ಕಮ್ಯೂನಿಸ್ಟ್ ಪಕ್ಷಗಳು ಮತ್ತೆ ಒಗ್ಗೂಡಲಿ

ಭಾರತದ ಕಮ್ಯೂನಿಸ್ಟ್ ಪಕ್ಷಗಳ ಪುನರೇಕೀಕರಣದ ಬಗ್ಗೆ ಸೀತಾರಂ ಯೆಚೂರಿಯವರ ಹೇಳಿಕೆಗೆ ಪ್ರತಿಕ್ರಿಯೆ
(ದಿನಾಂಕ ಜೂನ್ 18, 2011)

ಭಾರತ ಕಮ್ಯುನಿಸ್ಟ್ ಪಕ್ಷವು 1964 ರಲ್ಲಿ ವಿಭಜಿತವಾಗಿ 47 ವರ್ಷಗಳು ಕಳೆದುವು. 1940 ರಲ್ಲಿ ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಭಾರತ ಕಮ್ಯುನಿಸ್ಟ್ ಪಕ್ಷವನ್ನು ಸೇರಿದ್ದ ನಾನು ಪಕ್ಷದಲ್ಲಿ ಏಳು ದಶಕಗಳ ನಿರಂತರ ಮತ್ತು ಸಕ್ರಿಯ ಪಾತ್ರ ವಹಿಸಿದ್ದೇನೆ.  ಭಾರತೀಯ ರಾಜಕಾರಣದಲ್ಲಿ  ಕಮ್ಯುನಿಸ್ಟ್  ಪಕ್ಷವು ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿದರೆ 2ನೆಯ ಬಲಿಷ್ಠ ಪಕ್ಷವಾಗಿ ಬೆಳೆದು ನಿಂತಿತ್ತು. ಕಮ್ಯುನಿಸ್ಟ್  ಚಳುವಳಿಯು ವಿಭಜಿತವಾದ ಬಳಿಕ ಹಲವು ಏಳು ಬೀಳುಗಳನ್ನು ಕಂಡಿದೆ ಹಾಗೂ ತನ್ನ ಸ್ಥಾನ ಮಾನಗಳನ್ನೂ ಕಳೆದುಕೊಂಡಿದೆ. ಇದೀಗ ಹಿಂದೆಂದೂ ಕಾಣದ ಸೋಲನ್ನೂ ಅನುಭವಿಸಿದೆ. ಅಲ್ಲದೆ ಹಿಂದೆ ಲೆಕ್ಕಕ್ಕೇ ಇಲ್ಲ ಎಂಬ ಸ್ಥಾನದಲ್ಲಿದ್ದ ಬಲ ಪಂಥೀಯ ಕೋಮುವಾದಿ ಅರ್ ಎಸ್ ಎಸ್ ನೇತೃತ್ವದ ಭಾರತೀಯ ಜನತಾ ಪಕ್ಷವು ಇಂದು ಪ್ರಬಲವಾಗಿ ಬೆಳೆದು ದ್ವಿತಿಯ ಸ್ಥಾನಕ್ಕೆ ಏರಿ ನಿಂತಿದೆ. ಇದು ಕಮ್ಯುನಿಸ್ಟ್  ಪಕ್ಷದ ವಿಭಜನೆಯ ನೇರ ಪರಿಣಾಮ. ಈ ಒಡಕಿನ ದುರ್ಲಾಭವನ್ನು ಸಮಯ, ಸಂಧರ್ಭಸಾಧಕರು ಪಡೆದು ಸರಕಾರವು ಬಂಡವಾಳಶಾಹಿ ಧೋರಣೆಗಳನ್ನು ಹಮ್ಮಿಕೊಂಡು ತೀವ್ರಗತಿಯಲ್ಲಿ ಅವುಗಳನ್ನು ಅನುಷ್ಠಾನ ಗೊಳಿಸುತ್ತಿರುವುದನ್ನು ಕಾಣುತ್ತೇವೆ. ಸೇವಾ ಕ್ಷೇತ್ರಗಳಾದ ರಸ್ತೆ, ಸಂಚಾರ, ವಿದ್ಯುತ್, ನೀರು ಸರಬರಾಜು, ವಿಮೆ, ಅಂಚೆ, ದೂರವಾಣಿ, ದೂರದರ್ಶನ, ಆಕಾಶವಾಣಿ, ಇತ್ಯಾದಿಗಳನ್ನು ಸಹಾ ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡುವುದನ್ನು ಕಾಣುತ್ತೇವೆ. ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಮಣೆಹಾಕಿ ಸ್ವಾಗತಿಸುತ್ತಾ, ದೇಶದ ಅಮೂಲ್ಯ ಪ್ರಾಕೃತಿಕ ಸಂಪತ್ತೆಲ್ಲಾ ಸೂರೆಗೊಂಡು ಪರದೇಶಕ್ಕೆ ಕಳ್ಳಸಾಗಣೆಯಾಗುತ್ತಿರುವುದೂ ಕಂಡುಬರುತ್ತಿದೆ. ದುಡಿಯುವ ಕಾರ್ಮಿಕರು ಹಿಂದೆ ಹೋರಾಟ, ತ್ಯಾಗ ಮತ್ತು ಬಲಿದಾನಗಳನ್ನು ಮಾಡಿ ಪಡೆದಿದ್ದ ಸವಲತ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲಸದ ನಿಶ್ಚಿತತೆ, ಕಾಯಾಮಾತಿ ಇಲ್ಲದೆ ಗುತ್ತಿಗೆಯ ಆಧಾರದಲ್ಲಿ ನೌಕರರನ್ನು ನೇಮಿಸಿಕೊಂಡು ಅವರನ್ನು ಅನೇಕ ಸವಲತ್ತುಗಳಿಂದ ವಂಚಿಸಲಾಗುತ್ತಿದೆ. ನಮ್ಮ ದೇಶದ ಜನರಲ್ಲಿ ಶೇ 70ರಷ್ಟು ಜನರು ಕೃಷಿಯನ್ನೇ ಅವಲಂಬಿಸಿರುತ್ತಾರೆ. ಸರಕಾರದ ಕೆಟ್ಟ ಕೃಷಿ ನೀತಿಯಿಂದಾಗಿ ಅವರ ಬದುಕೇ ಚಿಂತಾಜನಕವಾಗಿದೆ. ಬೆಳೆದ ಬೇಳೆಗೆ, ದವಸ ಧಾನ್ಯಗಳಿಗೆ ಬೆಂಬಲ ಬೆಲೆ ಇಲ್ಲದೆ, ತೆಗೆದ ಸಾಲಗಳನ್ನು ಮರುಪಾವತಿಸಲಾಗದೆ ಹೊಲ ಗದ್ದೆಗಳನ್ನು ಕಳೆದುಕೊಂಡು ಲಕ್ಷಾಂತರ ರೈತರು ಆತ್ಮಹತ್ಯೆಗೈಯುತ್ತಿದ್ದಾರೆ. ಫಲವತ್ತಾದ ಕೃಷಿ ಯೋಗ್ಯ ಭೂಮಿಯನ್ನು ವಿಶೇಷ ಆರ್ಥಿಕ ವಲಯದ ಹೆಸರಲ್ಲಿ ಬಂಡವಾಳಶಾಹಿಗಳು ವಶೀಕರಿಸಿ ದುರ್ಲಾಭ ಪಡೆಯುತ್ತಿದ್ದಾರೆ. ಶಿಕ್ಷಣವು ಖಾಸಗೀಕರಣಗೊಡು ವ್ಯಾಪಾರದ ಸರಕಾಗಿ ಬಡ ಕಾರ್ಮಿಕರ ರೈತರ ಮಕ್ಕಳಿಗೆ ಮರೀಚಿಕೆ ಯಾಗಿದೆ. ಸರಕಾರದ ಕಾರ್ಯಕ್ರಮಗಳು ಇನ್ನೂ ತೀವ್ರಗತಿಯಲ್ಲಿ ಖಾಸಗೀಕರಣದತ್ತ ಸಾಗುತ್ತಿರುವುದನ್ನು ಕಾಣುವಾಗ ಭೀತಿ ಹುಟ್ಟುತ್ತದೆ. ಆಂತೆಯೇ ಸರ್ವ ಸವಲತ್ತುಗಳನ್ನು ಸರಕಾರದಿಂದ ಪಡೆದು ಸ್ಥಾಪಿತವಾದ ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ದುರ್ಲಾಭವನ್ನು ಪಡೆದು ಬಡವರನ್ನು ಸುಲಿಯುವ ಮತ್ತು ಬಡ ರೋಗಿಗಳನ್ನು ಪ್ರಯೋಗಾಲಯದ ಬಲಿ ಪಶು(ಗಿನಿ ಪಿಗ್) ಗಳಂತೆ ಹೊಸ ಮದ್ದುಗಳ ಮತ್ತು ಆವಿಷ್ಕಾರಗಳ ಪ್ರಯೋಗಕ್ಕೆ ಅವರನ್ನು ಬಳಸಲಾಗುತ್ತಿದ್ದರೆ, ಶ್ರೀಮಂತರಿಗೆ  ಅವು  ಐಷಾರಾಮಿ ವಿರಾಮ ಕೇಂದ್ರಗಳಾಗಿರುವುದನ್ನು ಕಾಣುತ್ತೇವೆ. ಮನೆ ಬಾಡಿಗೆ ನಿಯಂತ್ರಣಗಳಿಲ್ಲದೆ ಬಾಡಿಗೆ ವಸತಿದಾರರ ಬದುಕೇ ದುಸ್ತರವಾಗಿದೆ. ಲಂಚ, ಭ್ರಷ್ಟಾಚಾರಗಳು ಬಂಡವಾಳಿಗಳ ಶನಿ ಸಂತಾನಗಳಾಗಿ ದೇಶವನ್ನು ಕಾಡುತ್ತಿವೆ. ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ, ದುರ್ವ್ಯವಹಾರ ಮತ್ತು ವಿದೇಶೀ ಬೇಂಕುಗಳಲ್ಲಿ ಕಳ್ಳ ಕಪ್ಪು ಹಣದ ಶೇಖರಣೆಗಳು ಮುಗಿಲು ಮುಟ್ಟಿರುವ ವರದಿಗಳನ್ನು ನಾವು ಕಾಣುತ್ತೇವೆ. ಮೂಲಭೂತ ಜಾತಿವಾದಿಗಳು ದೇಶದಾದ್ಯಂತ ಭಯೋತ್ಪಾಧನೆ ಮತ್ತು ಅರಾಜಕತೆಯನ್ನು ಸೃಷ್ಟಿಸಿ ಅಧಿಕಾರವನ್ನು ಕಸಿದು ಕೊಳ್ಳುವ ಸಂಚಿನ ರಹಸ್ಯ ಬಯಲಾಗಿದ್ದನ್ನೂ ಕಾಣುತ್ತೇವೆ. 

ಇಂಥಾ ದುಸ್ಥಿತಿಯಲ್ಲಿ ಎಡ ಪಕ್ಷಗಳ ಏಕೀಕರಣವನ್ನು ಒಂದು ಆಶಾಕಿರಣವಾಗಿ ಭಾರತದ ಶ್ರಮ ಜೀವಿಗಳು ಎದುರು ನೋಡುತ್ತಿದ್ದಾರೆ. ಈ ವಿಷಮ ಪರಿಸ್ಥಿತಿಯನ್ನು ಮನಗಂಡು ಕಮ್ಯುನಿಸ್ಟ್(ಮಾ) ಪಕ್ಷದ ಮುಂದಾಳು ಸೀತಾರಾಂ ಯೆಚೂರಿಯವರು ಎರಡೂ ಪಕ್ಷಗಳ ಏಕೀಕರಣಕ್ಕೆ ಕರೆಕೊಟ್ಟಿದ್ದಾರೆ. ವಿಶ್ವದ ಇತರ ರಾಷ್ಟ್ರಗಳಲ್ಲಿಯೂ ಅಂತಹ ಸಂದಿಗ್ಧ ಪರಿಸ್ಥಿಯನ್ನು ಎದುರಿಸಿ ಬಳಿಕ ಒಂದುಗೂಡಿ ಚೇತರಿಸಿರುವುದನ್ನು ನಾವು ಕಂಡಿದ್ದೇವೆ.  ಕಮ್ಯುನಿಸ್ಟ್ ಪಕ್ಷಗಳು ಒಂದುಗೂಡಿದರೆ ಎಡ ಪ್ರಜಾಪ್ರಭುತ್ವವಾದಿ ಕ್ರಾಂತಿಕಾರಿ ಪಕ್ಷಗಳ ಪುನರೇಕೀಕರಣದ ಸಂಭವದ ಧ್ವನಿಯೂ ಉನ್ನತ ಮಟ್ಟದಲ್ಲಿ ಕೇಳಿಬರುತ್ತಿದೆ. ಅಂತಿರುವಾಗ ಇದು  ಖಂಡಿತವಾಗಿಯೂ ಒಂದು ಉತ್ತಮ ಸಲಹೆ ಹಾಗೂ ಸಂಧರ್ಬೋಚಿತವೂ ಅಗಿದೆ. ಅಂತೆಯೇ ನಾವೂ ಅದನ್ನು ಸ್ವಾಗತಿಸುತ್ತೇವೆ. ಸುಮಾರು 5 ದಶಕಗಳ ಕಾಲ ಬೇರೆ ಬೇರೆಯಾಗಿದ್ದ ಪಕ್ಷಗಳೆರಡು ಕೇವಲ ನಾಯಕರ ತೀರ್ಮಾನದಿಂದ ಮಾತ್ರವೇ ಒಂದಾಗಿಬಿಡುತ್ತವೆ ಎಂಬ ಭ್ರಮೆ ನಮಗಿಲ್ಲ. ಪ್ರತ್ಯ ಪ್ರತ್ಯೇಕ ವಾಗಿ ಬೆಳೆದ ಸಂಘಟನೆಗಳು ತಮ್ಮದೇ ಆದ ನಡವಳಿಕೆಗಳನ್ನು ಹೊಂದಿರುವುದು ಸಹಜ. ಆದುದರಿಂದ ಎರಡೂ ಪಕ್ಷಗಳು ಮುಂದಿನ ಮಹಾ ಅಧಿವೇಶನಗಳ ಸಿದ್ಧತೆ ಮಾಡುವ ಸಂದರ್ಭಗಳಲ್ಲಿ ಪಕ್ಷಗಳ ಪ್ರತೀಯೊಂದು ಘಟಕಗಳಲ್ಲಿ ಸಹಾ ಈ ಬಗ್ಗೆ ಗಂಭೀರವಾದ ಚರ್ಚೆ ನಡೆದು ಅಭಿಪ್ರಾಯ ಮತ್ತು ಸಮನ್ವಯತೆಯನ್ನು ಸಾಧಿಸಿ ಮುಂದಿನ ಮಹಾ ಅಧಿವೇಶನಗಳಲ್ಲಿ ಏಕಾಭಿಪ್ರಾಯಕ್ಕೆ ಬರುವ ಮೂಲಕ ಈ ಏಕೀಕರಣದ ಪ್ರಕ್ರಿಯೆಯು ಸಾರ್ವತ್ರಿಕವಾಗಿ ನಡೆಯಬೇಕೆಂದು ನಾವು ಹಾರೈಸುತ್ತೇವೆ. ಹಿಂದಿನ ಕಹಿ ಅನುಭವಗಳನ್ನು ತೊಡೆದು ಹಾಕಿ ಪುನರೇಕೀಕರಣ ಪ್ರಕ್ರಿಯೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಎಲ್ಲಾ ಹಂತಗಳಲ್ಲಿಯೂ ಭಾಗಿಗಳಾಗ ಬೇಕೆಂದು ನಮ್ಮ ಅಪೇಕ್ಷೆ. ಈ ಹಿಂದೆಯೇ ನಮ್ಮ ಪಕ್ಷದ ನಾಯಕರು ಅನೇಕ ಬಾರಿ ಏಕೀಕರಣದ ಕರೆಯನ್ನು ಕೊಟ್ಟಿದ್ದರೂ ಅದು ಕಾರ್ಯಗತವಾಗಿರಲಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಆರಂಭದಲ್ಲಿ ಪ್ರದಾನ ಕಾರ್ಯದರ್ಶಿಯಾಗಿದ್ದ ರಾಜೇಶ್ವರ ರಾಯರು, ಬಳಿಕ ಇಂದ್ರಜಿತ್ ಗುಪ್ತ, ಆ ಬಳಿಕ ಎ ಬಿ ಬರ್ಧನ್‌ರವರು ಪಕ್ಷಗಳ ಏಕೀಕರಣಕ್ಕೆ ಬಹಳಷ್ಟು ಪ್ರಯತ್ನಗಳನ್ನು ಮಾಡಿರುವುದನ್ನು ನೆನಪಿಸುತ್ತೇನೆ. ಅಲ್ಲದೆ ಪಕ್ಷದ ಪ್ರತಿಯೊಂದು ಮಹಾ ಅಧಿವೇಶನಗಳಲ್ಲಿಯೂ ಸಹಾ ಎರಡೂ ಪಕ್ಷಗಳ ಐಕ್ಯತೆಗೆ ಕರೆ ನೀಡುತ್ತಾ ಐಕ್ಯವು ಭಾರತೀಯ ರಾಜಕೀಯದಲ್ಲಿ  ಹೊಸ ತಿರುವನ್ನು ಉಂಟು ಮಾಡಲು ಆರಂಭದ ಹೆಜ್ಜೆಯಾಗಬೇಕೆಂದು ಪ್ರತಿಪಾದಿಸುತ್ತಾ ಬಂದಿದೆ. ಆದರೆ ಕಮ್ಯುನಿಸ್ಟ್(ಮಾ) ಪಕ್ಷದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗದೇ ಇದ್ದುದರಿಂದ ಏಕೀಕರಣದ ಕಾರ್ಯವು ದೂರದ ಕನಸಾಗಿಯೇ ಉಳಿದಿತ್ತು. ಈಗಲಾದರೂ ಕಮ್ಯುನಿಸ್ಟ್ ಪಕ್ಷಗಳ ಸೋಲಿನ ಅನುಭವದಿಂದ ಏಕೀಕರಣದ ಕರೆಯ ಧ್ವನಿಯು ಆ ಪಕ್ಷದ ನಾಯಕ ಸೀತಾರಾಂ ಯೆಚೂರಿಯವರಿಂದಲೇ ಮೊಳಗಿದ್ದನ್ನು ನಾವು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ. ದೂರದರ್ಶನದಲ್ಲಿ ಪ್ರಸಾರಗೊಂಡ ಅವರ ಹೇಳಿಕೆಯಲ್ಲಿ ವಿಲೀನದ ಅಗತ್ಯವನ್ನು ಬಹಳ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ ಮತ್ತು ಅದು ಉನ್ನತ ಮಟ್ಟದಲ್ಲಿ ಮಾತ್ರ ಆದರೆ ಸಾಲದು, ಅದು ಪಕ್ಷಗಳ ಎಲ್ಲ ಹಂತ ಗಳಲ್ಲಿಯೂ ನಡೆಯ ಬೇಕೆಂಬ ಅವರ ಸಲಹೆಯು ಅತ್ಯುತ್ತಮವಾಗಿದೆ. ಆದರೆ ಇದರ ಬಗ್ಗೆ  ಕೆಲವು ನಾಯಕರು ಕಹಿ ಪ್ರತಿಕ್ರಿಯೆ ನೀಡಿರುವುದು ಒಡಕು ದನಿಗಳ ಸಂಕೇತವಾಗಿದೆ. ಇದು ಪಕ್ಷಗಳೊಳಗಿನ ಚರ್ಚೆಯಿಂದ ಸಮನ್ವಯಗೊಂಡು ಪರಿಹಾರವಾಗುವುದೆಂದು ನಾವು ನಿರೀಕ್ಷಿಸುತ್ತೇವೆ. ಇದು ಕಾಲದ ಅವಶ್ಯಕತೆಯಾಗಿದೆ. 

ಎರಡೂ ಪಕ್ಷಗಳ ಮಹಾ ಅಧಿವೇಶನಗಳು ಮುಂದಿನ ತಿಂಗಳುಗಳಲ್ಲಿ ನಡೆಯಲಿವೆ. ಕಮ್ಯುನಿಸ್ಟ್ ಪಕ್ಷಗಳ ಕ್ರಮದಂತೆ ಮಹಾ ಅಧಿವೇಶನಗಳ ಮೊದಲು ಪಕ್ಷಗಳ ರಾಜ್ಯ, ಜಿಲ್ಲೆ, ಹಾಗೂ ಕೆಳ ಮಟ್ಟದ ಎಲ್ಲಾ ಘಟಕಗಳಲ್ಲಿ ಅಧಿವೇಶನದ ಮುಂದೆ ಬರಲಿರುವ ಮುಖ್ಯ ನಿರ್ಣಯಗಳನ್ನು ಚರ್ಚಿಸಿ ಅಭಿಪ್ರ್ರಾಯ ವನ್ನು ಕ್ರೋಢೀಕರಿಸಿ ಕೆಳಗಿನಿಂದ ಮೇಲಿನ ಹಂತದ ಏಕಾಭಿಪ್ರಾಯವನ್ನು ಮೂಡಿಸುವಂತಾಗಬೇಕು. ಕಮ್ಯುನಿಸ್ಟ್ ಚಳುವಳಿಯಲ್ಲಿ ಏಳು ದಶಕಗಳ ಸಕ್ರಿಯ ಅನುಭವವುಳ್ಳ ನಾನಂತೂ ಈ ಬಗ್ಗೆ ಬಹಳ ಆಶಾ ಭಾವನೆ ತಳೆದಿದ್ದೇನೆ. ಇದು ಕೇವಲ ನನ್ನ ಆಶೆ ಮಾತ್ರವಲ್ಲ, ನಮ್ಮ ಪಕ್ಷದ, ಅದರ ನೇತೃತ್ವದಲ್ಲಿರುವ ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನ, ಮಹಿಳಾ ಹಾಗೂ ಇತರ ಎಲ್ಲಾ ಸಾಮೂಹಿಕ ಸಂಘಟನೆಗಳ ಹಾಗೂ ಪಕ್ಷದ ಬಗ್ಗೆ ಸದಭಿಪ್ರಾಯವುಳ್ಳ  ಮತ್ತು ಪಕ್ಷವನ್ನು ಬೆಂಬಲಿಸುವ ಎಡ ಅಭಿಪ್ರಾಯವುಳ್ಳ ಬುದ್ಧಿ ಜೀವಿಗಳು ಸಹಾ ಇದೇ ಅಭಿಪ್ರಾಯವನ್ನು ತಳೆದಿದ್ದಾರೆ ಎಂದು ತಿಳಿದಿದ್ದೇನೆ. ಅಂತೂ ಯೆಚೂರಿಯವರ ಏಕೀಕರಣದ ಕರೆಯು ಕಾರ್ಯ ರೂಪಕ್ಕೆ ಬರಲಿ ಮತ್ತು ಕಮ್ಯುನಿಸ್ಟ್  ಪಾರ್ಟಿಯು ತನ್ನ ಹಿಂದಿನ ವರ್ಚಸ್ಸನ್ನು ಪಡೆದು ದೇಶದ ಆಡಳಿತವೇ ಎಡ ಪ್ರಜಾಪ್ರಭುತ್ವವಾದಿ ದಿಸೆಯಲ್ಲಿ ರೂಪುಗೊಳ್ಳಲಿ ಎಂದು ಒಬ್ಬ ಹಿರಿಯ  ಕಮ್ಯುನಿಸ್ಟ್ ಕಾರ್ಯಕರ್ತನಾಗಿ ನಾನು ನಿವೇದಿಸಿಕೊಳ್ಳುತ್ತೇನೆ ಮತ್ತು ಇದು ನನ್ನ ಜೀವಿತಾವಧಿಯಲ್ಲೇ ಜರಗಲಿ ಎಂದು ನನ್ನ ಜೀವಿತದ ಕೊನೆಯ ಹಂತದಲ್ಲಿರುವ ನಾನು ಹಾರೈಸುತ್ತೇನೆ.

ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸುವುದು ಒಳ್ಳೆಯದೇ

ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸುವ ಬಗ್ಗೆ ಪೇಜಾವರ ಸ್ವಾಮಿಗಳ ಆಕ್ಷೇಪಕ್ಕೆ ಪ್ರತಿಕ್ರಿಯೆ (ದಿನಾಂಕ ಜೂನ್ 12, 2011)

ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿರುವ ಬಗ್ಗೆ ಉಡುಪಿ ಪೇಜಾವರ ಮಠದ ಶ್ರೀಪಾದರು ಮತ್ತು ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಇವರುಗಳ ಮದ್ಯೆ ಇತ್ತೀಚೆಗೆ ಒಂದು ಸ್ವಾರಸ್ಯಕರ ಚರ್ಚೆ ನಡೆದಿರುವುದನ್ನು ನಾವು ಗಮನಿಸಿದ್ದೇವೆ. ಇವರ ವಾದವಿವಾದಗಳು ತೀರಾ ವ್ಯತಿರಿಕ್ತವಾಗಿದ್ದು, ಸ್ವಾಮಿಗಳು ಶತಮಾನಗಳಿಂದ ಚಾತುರ್ವರ್ಣೀಯ ಅಧಾರದ ಮೇಲೆ ನಿಂತಿರುವ ಹಿಂದೂ ಸಮಾಜವನ್ನು ಚಂದಗಾಣಿಸುವ ಮತ್ತು ಅದರಿಂದ ಶತಮಾನಗಳಿಂದ ನೋವುಂಡು ತುಳಿತಕ್ಕೂ, ದಮನಕ್ಕೂ ಒಳಪಟ್ಟು ಸಮಾಜದಿಂದ ಬಹಿಷ್ಕೃತರಾಗಿ ನರಳುತ್ತಿರುವ ದಲಿತರನ್ನು ಸಾಂತ್ವನಗೊಳಿಸಲು ಪ್ರಯತ್ನಿಸುತ್ತಿರುವುದು ಗೋಚರಿಸುತ್ತದೆ. ಸ್ವಾಮಿಗಳು ಅಸ್ಪೃಶ್ಯತೆಯನ್ನು ನಿವಾರಿಸುವ ಮಟ್ಟಿಗೆ ಆಸಕ್ತಿ ಹೊಂದಿರಬಹುದು. ಆದರೆ ಅವರ ಪ್ರಯತ್ನಗಳು ಯಾವುದೇ ಫಲ ನೀಡಿಲ್ಲ. ಚಾತುರ್ವರ್ಣೀಯ ಕರ್ಮ ಸಿದ್ದಾಂತವನ್ನು ಪ್ರತಿಪಾದಿಸುವವರು ವೈಷ್ಣವ ದೀಕ್ಷೆ ಕೊಟ್ಟ ಮಾತ್ರಕ್ಕೆ ಯಾವ ಬದಲಾವಣೆಗಳನ್ನು ಮಾಡಿಸಲು ಸಾಧ್ಯ?  ಶ್ರೀಗಳು ಈ ಹಿಂದೆ ಮೂರು ಬಾರಿ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಅಧಿಕಾರವನ್ನು ಸ್ವೀಕರಿಸಿದ್ದರೂ ಅವರ ಆ ಕಾಲಾವಧಿಯಲ್ಲಿ ಮಠದಲ್ಲಿ ಯಾವುದೇ ರೀತಿಯ ಸುಧಾರಣೆಯನ್ನಾಗಲಿ, ವರ್ಣ ಬೇಧವನ್ನು ತೊಡೆದು ಹಾಕುವ ಪ್ರಯತ್ನಗಳಾಗಲಿ ನಡೆಸಿರುವುದು ಕಂಡು ಬಂದಿಲ್ಲ. ಅವರ ಸಂಪ್ರದಾಯ ಬದ್ಧತೆ ಅವರಿಗೆ ಅವಕಾಶ ನೀಡಲಿಲ್ಲ ಹಾಗೂ ಸಂಪ್ರದಾಯವನ್ನು ಮುರಿದು ಸುಧಾರಣೆಯನ್ನು ತರುವ ಮನೋಧರ್ಮವನ್ನೂ ಅವರು ಪ್ರದರ್ಶಿಸಲಿಲ್ಲ. ಪುತ್ತಿಗೆ ಮಠದ ಶ್ರೀಪಾದರು ಅಮೆರಿಕಕ್ಕೆ ಹೋಗಿ ತನ್ನ ಭಕ್ತಾದಿಗಳನ್ನು ಕಂಡು ಬಂದರು ಎಂಬ ಒಂದೇ ಕಾರಣದಿಂದ ಅವರು ಪರ್ಯಾಯ ಪೀಠ ಸ್ವೀಕರಿಸುವ ದಿನ ಅವರ ವಿರುದ್ದ ಸತ್ಯಾಗೃಹ ಹೂಡಿದ್ದರು. ತಮ್ಮ ಅಷ್ಠ ಮಠದ ಯತಿಗಳೊಳಗೆಯೇ ಸಮನ್ವಯವನ್ನು ಮೂಡಿಸಲು ಅಸಮರ್ಥರಾದ ಶ್ರೀಗಳು ಅನಾದಿ ಕಾಲದಿಂದಲೂ ಶ್ರೇಣೀಕೃತ ಸಮಾಜದಲ್ಲಿ ದಮನಿತರಿಗಾಗುವ ಶೋಷಣೆಗಳನ್ನೂ ಅನಾಚಾರಗಳನ್ನೂ ತೊಡೆದುಹಾಕುವರೆಂದು ನಂಬಲು ಸಾಧ್ಯವೇ? ಚಾತುರ್ವರ್ಣೀಯವು ಹಿಂದೂ ಧರ್ಮದ ಒಂದು ಅಖಂಡ ಅಂಗವೆಂದು ಶ್ರೀಗಳಂಥವರು ಪ್ರತಿಪಾಧಿಸುವುದು ನಿಜವಲ್ಲವೇನು? ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ರಿಯೆಯಲ್ಲಿ ಕೂಡಾ ಪುರುಷ ಸೂಕ್ತದ ಪಠಣ ಕಡ್ಡಾಯವಲ್ಲವೇನು? ಹಿಂದೂಗಳ ಯಾವುದೇ ಪಂಥದವರು ಸಹಾ ಚಾತುರ್ವಣ್ಯವನ್ನು ತಮ್ಮ ಧರ್ಮದ ಮೂಲಭೂತ ಆಧಾರವಾಗಿ ಪ್ರತಿಪಾದಿಸುವುದಿಲ್ಲವೇನು? ಈ ವೈದಿಕ ಧರ್ಮಗಳಲ್ಲಿರುವ ಅನಾಚಾರಗಳನ್ನು ಸಂಪೂರ್ಣವಾಗಿ ತೊರೆದಿರುವ ಬೌದ್ಧ ಧರ್ಮವನ್ನು ಸ್ವೀಕರಿಸುವವರಿಗೆ ಹಿಂದುತ್ವದ ಕಟ್ಟುಪಾಡುಗಳನ್ನು ಮೀರಿ ನಡೆಯುವ ಸ್ವಾತಂತ್ರ್ಯಲಭಿಸುವುದಿಲ್ಲವೇನು? ಇದಕ್ಕಾಗಿ ಅಲ್ಲವೇ ಬಾಬಾ ಸಾಹೇಬ್ ಅಂಬೆಡ್ಕರ್‌ರವರು ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿ ಸಾಯಲಾರೆ ಎಂದು ಸಾರಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು?  ಅವರ ಹಾದಿಯನ್ನು ಇತರ ದಲಿತರು ಅನುಸರಿಸಿದರೆ ಏಕೆ ಶ್ರೀಗಳು ಚಿಂತಿತರಾಗಬೇಕು? ಅವರ ಬಿಡುಗಡೆಯ ದಾರಿಯನ್ನು ಅವರೇ ಕಂಡುಕೊಳ್ಳಲಿ.  

ಶ್ರೀಗಳು  ಇತರ ಧರ್ಮವನ್ನು ಹೆಸರಿಸಿ ಅವರಲ್ಲಿ ದಲೈಲಾಮವಾಗಲಿ, ಪೋಪ್ ಆಗಲು ಸಾಧ್ಯವೇ ಎಂಬ ವಿತಂಡವಾದವನ್ನು ಮುಂದಿರಿಸಿರುವರು. ಬೇರೆ ಯಾವುದೇ ಧರ್ಮದಲ್ಲಿಯೂ ಧರ್ಮದೊಳಗಿನ ಹುಟ್ಟು ಅವನು ಯಾವ ಸ್ಥಾನವನ್ನು ಹೊಂದುವುದಕ್ಕೂ ಅಡ್ಡಿ ಬರುವುದಿಲ್ಲ ಎನ್ನುವುದು ಶ್ರೀಗಳಿಗೆ ತಿಳಿಯದಿರುವುದು ವಿಷಾದನೀಯ. ಹಿಂದೂ ಧರ್ಮದಲ್ಲಿ ಪ್ರತಿಪಾದಿಸಿದಂತೆ ಪುರುಷಸೂಕ್ತನ ಪಾದದಿಂದ ಹುಟ್ಟಿದ ಶೂದ್ರನು ಆತನ ಮುಖ, ಭುಜ, ತೊಡೆಗಳಿಂದ ಜನಿಸಿದವರ ಸೇವೆಯನ್ನು ಸದಾ ಸಲ್ಲಿಸುವ ಕರ್ತವ್ಯವನ್ನು ಹೊತ್ತುಕೊಂಡೇ ಜನಿಸುತ್ತಾನೆ. ಪಾದ ಧೂಳಿಯಿಂದ ಜನಿಸಿದ ಪಂಚಮನು, ಅಂದರೆ ದಲಿತನು, ಸಮಾಜದಿಂದಲೇ ಹೊರಗುಳಿದು ಇತರರೆಲ್ಲರಿಂದ ಬಹಿಷ್ಕೃತನಾಗಿ ತ್ಯಾಜಗಳನ್ನಷ್ಟೇ ಉಂಡು ಬದುಕುವುದಕ್ಕೆ ಮಾತ್ರ ಅರ್ಹನಾಗಿರುತ್ತಾನೆ. ಇದನ್ನು ಒಪ್ಪಿಕೊಂಡು ಅಂತಹ ನಿಕೃಷ್ಟ, ಅಮಾನವೀಯ ಸ್ಥಿತಿಯನ್ನು ಹೊತ್ತುಕೊಂಡೇ ಬಾಳಬೇಕೇನು? ಈ ಪರಿಯ ಅಸಹ್ಯ ಮತ್ತು ಅನಿಷ್ಠತೆಯನ್ನು ಪ್ರತಿಪಾದಿಸುವ ದುರ್ಗುಣಗಳು ಅತ್ಯಂತ ಶ್ರೇಷ್ಠ ಎಂದು ಬೊಗಳೆ ಬಿಡುವ ಹಿಂದೂ ಧರ್ಮದಲ್ಲಿ ಮಾತ್ರ ಅಲ್ಲದೆ  ಪ್ರಪಂಚದ ಇತರ ಯಾವುದೇ ಧರ್ಮಗಳಲ್ಲಿ ಶತಮಾನಗಳಿಂದಲೂ ಕಾಣಸಿಗುವುದಿಲ್ಲ ಹಾಗೂ ಅದನ್ನು ಸಮರ್ಥಿಸುವವರು ಶಿಕ್ಷಿಸಲ್ಪಡುವರು. ಆದರೆ ನಮ್ಮಲ್ಲಿ ಅದನ್ನು ಪ್ರತಿಪಾದಿಸುವವರು ಸಂತರೆಣಿಸಿಕೊಳ್ಳುವುದು ನಮ್ಮ ದುರಂತ. ಇಂತಹ ಧರ್ಮಾವಲಂಬಿಯಾಗಿ ಹೆಮ್ಮೆಪಟ್ಟು ತಾನು ಹಿಂದೂ ಎಂದು ಗರ್ವದಿಂದ ಹೇಳಲು ಕರೆ ಕೊಡುವವರನ್ನು ಏನೆನ್ನಬೇಕು? ಕುವೆಂಪುರವರಂಥ ಮಹಾನ್ ಜ್ಞಾನವಂತ ರಾಷ್ಟ್ರಕವಿಯವರು ಪ್ರತಿಪಾದಿಸುವ ವಿಶ್ವ ಮಾನವ ಧರ್ಮವು ಹಿಂದೂ ಧರ್ಮಕ್ಕೆ ಹೊರತಾದುದೇ? ಠಾಗೋರ್‌ರವರ ಸಮಸ್ತ ಮಾನವ ಕುಲದ ಏಕತೆಯ ಭಾವನೆಯು ಹಿಂದೂ ಧರ್ಮಕ್ಕೆ ವಿರೋಧವಾದುದೇ? ಅವುಗಳನ್ನು ಹಿಂದೂಗಳಿಗೆ ಒಂದು ಆದರ್ಶವೆಂದು ಶ್ರೀಗಳು ಯಾಕೆ ಹೇಳುತ್ತಿಲ್ಲ? ಉದಾತ್ತ ಭಾವನೆಗಳೆಲ್ಲವನ್ನೂ ತಿರಸ್ಕರಿಸಿ ಕೇವಲ ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರದ ಕಾರ್ಯ ಸೂಚಿಯಾದ ಅನ್ಯ ಧರ್ಮ ದ್ವೇಷ, ಸ್ವಧರ್ಮ ಶ್ರೇಷ್ಠತೆಯನ್ನು ಏಕೆ ತನ್ನದನ್ನಾಗಿಸಿಕೊಂಡಿದ್ದಾರೆ? ಈ ರೀತಿಯ ಘೋಮುಖ ವ್ಯಾಘ್ರದಂತಹ ಕಪಟ ಮುಖವಾಡವನ್ನು ತೊಟ್ಟುಕೊಂಡು ದಲಿತರನ್ನು ದಾರಿ ತಪ್ಪಿಸುವ ಪ್ರಕ್ರಿಯೆಗಳನ್ನು ತೊರೆದು ತಾನು ಪಡೆದ ದೀಕ್ಷೆಗನುಗುಣವಾಗಿ ಪೂಜೆ ಪುರಸ್ಕಾರಗಳನ್ನು ಕ್ರಮದಂತೆ ಮುಂದುವರಿಸಿಕೊಂಡು ಬಂದರೆ ಶ್ರೇಯಸ್ಕರವೆಂದು ಭಾವಿಸುತ್ತೇವೆ.

ಚಾತುರ್ವರ್ಣೀಯ ಜಾತ್ಯಾಧಾರಿತ ಉಚ್ಛ, ನೀಚ ಜಾತಿಗಳ ಪರಿಗಣನೆ ಇತ್ಯಾದಿಗಳ ವಿರುದ್ಧ ದಮನಕ್ಕೊಳಗಾದವರು ಪ್ರತಿಭಟನೆ ಮಾಡತೊಡಗಿದ್ದಾರೆ. ಸ್ವಾತಂತ್ರ್ಯವನ್ನು ಘೋಷಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಪರಿವರ್ತನೆ ಮತ್ತು ಪ್ರತಿಭಟನೆ ಎಲ್ಲೇ ಆರಂಭವಾಗಲಿ, ಯಾರೇ ಪ್ರಾರಂಭಿಸಲಿ, ಅದನ್ನು ನಾವು ಸ್ವಾಗತಿಸುತ್ತೇವೆ. ಬೌದ್ಧ ಧರ್ಮದ ದೀಕ್ಷೆ ತಳೆಯುವುದು ಅವುಗಳಲ್ಲೊಂದು. ಜಾತ್ಯಾಧಾರಿತ ವರ್ಗೀಕೃತ ಸಮಾಜದ ಸಮರ್ಥಕರ, ದಲಿತರ ದಮನವನ್ನು ನ್ಯಾಯೀಕರಿಸುವ ಸಂತರೆಣಿಸಿಕೊಳ್ಳುವವರ ವಾದಗಳನ್ನು ಸೈದ್ಧಾಂತಿಕವಾಗಿಯೂ, ನಡೆವಳಿಕೆಗಳಲ್ಲೂ ಪ್ರತಿಭಟಿಸುವುದು ಸಮಾಜದ ಒಳಿತನ್ನು ಬಯಸುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅಂತೆಯೇ ದಲಿತ ಸಂಘರ್ಷ ಸಮಿತಿಯವರು ಹಮ್ಮಿಕೊಂಡ ಚಳುವಳಿಗೆ ನಮ್ಮ ಶುಭಕಾಮನೆಗಳು.

ಸಾರ್ವಜನಿಕ ಇಲಾಖೆಗಳಲ್ಲಿ ಕನ್ನಡದ ಬಳಕೆ ಹೆಚ್ಚಲಿ

ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ 2011 ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಮೇ 30, 2011)

ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ 2011 ರ 'ಸಾರ್ವಜನಿಕ ವಲಯದಲ್ಲಿ ಕನ್ನಡ ಭಾಷಾ ಬಳಕೆ' ಗೋಷ್ಟಿಯಲ್ಲಿ ರಾ.ನಂ.ಚಂದ್ರಶೇಖರ್ ರವರು ನೀಡಿದ ಉಪನ್ಯಾಸವು ಬಹಳ ಅರ್ಥಪೂರ್ಣವೂ ಸಂದರ್ಭೋಚಿತವೂ ಆಗಿರುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಕನ್ನಡವೇ ಕಳೆದು ಕೊಳ್ಳುವಂತಹ ಪ್ರಕ್ರಿಯೆಯೊಂದು ನಡೆಯುತ್ತಿರುವುದು ಗೋಚರಿಸುತ್ತಿದೆ.  ಸಿಂಡಿಕೇಟ್ ಬೇಂಕ್, ಕೆನರಾ ಬೇಂಕ್, ಕಾರ್ಪೋರೇಷನ್ ಬೇಂಕ್, ವಿಜಯಾ ಬೇಂಕ್, ಮೊದಲಾದುವುಗಳು ಆರಂಭದಿಂದಲೂ ಅಖಿಲ ಭಾರತ ವಾಣಿಜ್ಯ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಿವೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಈ ರಾಷ್ಟ್ರೀಕೃತ ಬೇಂಕುಗಳಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸ್ಥಾನವೇ ಇಲ್ಲವಾಗಿದೆ. ಭಾರತ ದೇಶವು ಹಲವು ಭಾಷೆಗಳುಳ್ಳ ರಾಜ್ಯಗಳ ಒಂದು ಒಕ್ಕೂಟವಾಗಿರುವುದರಿಂದ ಕನ್ನಡ ಭಾಷೆಗೂ ಕನ್ನಡಿಗರಿಗೂ ಸಮಾನ ಸ್ಥಾನಮಾನಗಳು ಸಂವಿಧಾನಬದ್ದವಾಗಿ ದೊರಕಬೇಕಿವೆ. ಒಂದು ಕಾಲದಲ್ಲಿ ಈ ಬೇಂಕುಗಳಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದಿದ್ದ  ಕನ್ನಡ ಭಾಷೆಗೆ ಇಂದು ಸ್ಥಾನವೇ ಇಲ್ಲದಂತಾಗಿದೆ. ಹಾಗೆಯೇ ರಾಜ್ಯದ ರೈಲ್ವೇ, ಅಂಚೆ, ವಿಮೆ, ಆದಾಯ ತೆರಿಗೆ, ಸೇವಾ ತೆರಿಗೆ, ವಿವಿಧ ನಿಗಮಗಳು ಇತ್ಯಾದಿಗಳಲ್ಲಿ ಕನ್ನಡದ ಬಳಕೆಗೆ ಅವಕಾಶವೇ ಇಲ್ಲವಾಗಿದೆ. ಈ ಬಗ್ಗೆ ರಾಜ್ಯ ಸರಕಾರವು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕಿದೆ. ರಾಜ್ಯದಲ್ಲಿನ ಕನ್ನಡ ಹಿತರಕ್ಷಣಾ ಸಂಘ ಸಂಸ್ಥೆಗಳು ಈ ವಿಷಯಕ್ಕೆ ಆದ್ಯತೆಯನ್ನು ಕೊಡುವಂತೆ ಚಳುವಳಿಯನ್ನು ಹಮ್ಮಿಕೊಂಡು ಒತ್ತಡ ಹೇರಬೇಕೆಂದು ಜನರು ಅಪೇಕ್ಷಿಸುತ್ತಾರೆ. ಅಂತೆಯೇ ಕನ್ನಡ ಸಂಸ್ಕೃತಿ ಮತ್ತು ಅಭಿವೃದ್ದಿ ಪ್ರಾಧಿಕಾರವು ಈ ವಿಚಾರಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟು ರಾಜ್ಯದ ಎಲ್ಲಾ ಸಾರ್ವಜನಿಕ ಇಲಾಖೆಗಳಲ್ಲಿ ಕನ್ನಡದ ಬಳಕೆಯನ್ನು ಕಡ್ಡಾಯಗೊಳಿಸುವಂತಾಗುವಂತೆ ತನ್ನ ಕರ್ತವ್ಯವನ್ನು ನಿರ್ವಹಿಸುವರೆಂದು ಜನರು ನಿರೀಕ್ಷಿಸುತ್ತಾರೆ.

ಬಿನಾಯಕ್ ಸೇನ್ ಶಿಕ್ಷೆ ಖಂಡನಾರ್ಹ

ಡಾ. ಬಿನಾಯಕ್ ಸೇನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ನೀಡಿದ ಪತ್ರಿಕಾ ಪ್ರಕಟಣೆ (ದಿನಾಂಕ: ಜನವರಿ 7, 2011)
ಚತ್ತೀಸಗಡ ನ್ಯಾಯಾಲಯವು ಇದೇ ಡಿ.24ರಂದು ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಹೋರಾಟಗಾರ ಡಾ.ಬಿನಾಯಕ ಸೇನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಭಾರತದ ಘನತೆಗೆ ಮತ್ತು ಪ್ರಜಾಪ್ರಭುತ್ವವಾದಿ ನಿಲುಮೆಗೆ ಕಳಂಕ ತರುವಂಥಾದ್ದು ಮತ್ತು ಮಾನವ ಹಕ್ಕು ವಂಚಿತರಾಗಿರುವ ಲಕ್ಷಾಂತರ ಭಾರತೀಯ ಬಡ ಜನರ ಮೇಲೆ ಸರ್ವಾಧಿಕಾರಿ ದಮನ ಕಾರ್ಯ ನಡೆಸುವ ಆಡಳಿತಾಂಗದ ಕ್ರಮಗಳನ್ನು ನ್ಯಾಯಾಂಗವು ಸಹಾ ಸಮರ್ಥಿಸುವಂಥಾಹದ್ದಾಗಿದೆ. ಇದು ಪ್ರಪಂಚದಲ್ಲೇ ಭಾರತದ ಘನತೆ ಗೌರವಗಳಿಗೆ ಕುಂದು ತರುವಂಥದ್ದಾಗಿದೆ. ಇದನ್ನು ನಾವು ಬಲವಾಗಿ ಖಂಡಿಸಬೇಕಾಗಿದೆ.

ಕಮ್ಯುನಿಸ್ಟ್ ಪಕ್ಷದ ಹಿರಿಯ ಸದಸ್ಯ, ಸ್ವಾತಂತ್ರ್ಯ ಹೋರಾಟಗಾರ, ಮತ್ತು ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರ ಮತ್ತು ಕಾರ್ಮಿಕರ ಒಕ್ಕೂಟದ ಹಿರಿಯ ಉಪಾಧ್ಯಕ್ಷನ ನೆಲೆಯಲ್ಲಿ ಈ ಜೀವಾವಧಿ ಶಿಕ್ಷೆಯನ್ನು ನಾನು  ಖಂಡಿಸುತ್ತೇನೆ. ಈ ಬಗ್ಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರ ಮತ್ತು ಕಾರ್ಮಿಕರ ಒಕ್ಕೂಟದ ಕೇಂದ್ರ ಕಾರ್ಯಕಾರಿ ಸಮಿತಿಯು ಒಕ್ಕೊರಳಿನ  ನಿರ್ಣಯವನ್ನು  ಅಂಗೀಕರಿಸಿ ಸರ್ವೋಚ್ಹ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಈಗಾಗಲೇ ಮನವಿಯೊಂದನ್ನು ಅರ್ಪಿಸಿದೆ. ಅಲ್ಲದೆ ಭಾರತದ ಎಲ್ಲ ವಿಚಾರವಾದಿಗಳು ಬಿನಾಯಕ ಸೇನರ ಬಿಡುಗಡೆಯಾಗುವುದು ಭಾರತದ ಪ್ರಜಾಪ್ರಭುತ್ವವಾದಿ ನಿಲುಮೆಗೆ ತಕ್ಕುದ್ದಾಗಿದೆ ಎಂದು ಅಭಿಪ್ರಾಯ ಪ್ರಕಟಿಸುತ್ತಿದ್ದಾರೆ. ಇದೇ ದಿ.21.1.2011 ರಂದು ದ.ಕ.ಜಿಲ್ಲಾಧಿಕಾರಿಯ ಕಛೇರಿಯ ಮುಂದೆ ಸಾರ್ವಜನಿಕ ಸಂಘ ಸಂಸ್ಥೆಗಳ ಸೇರುವಿಕೆಯಿಂದ ನಡೆಯುವ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗಿಗಳಾಗಬೇಕೆಂದು ಎಲ್ಲ ಮಾನವತಾದಿಗಳಿಗೆ ನಾನು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ಮತ್ತು ನನ್ನ ಆರೋಗ್ಯ ಅನುವು ಮಾಡಿಕೊಟ್ಟಲ್ಲಿ ನಾನು ಸಹಾ ಅದರಲ್ಲಿ ಭಾಗಿಯಾಗಲು ಅಪೇಕ್ಷಿಸುತ್ತೇನೆ.

ಪೇಜಾವರ ಶ್ರೀಗಳವರಲ್ಲಿ ಒಂದೆರಡು ಪ್ರಶ್ನೆಗಳು

ಪೇಜಾವರ ಮಠಾಧೀಶರ ಅಸ್ಪೃಶ್ಯತಾ ನಿರ್ಮೂಲನ ಯೋಜನೆಯ ಬಗ್ಗೆ ಬಹಿರಂಗ ಪತ್ರ (ದಿನಾಂಕ ಸೆಪ್ಟೆಂಬರ್ 29, 2010)

ವಿಶ್ವ ಹಿಂದು ಪರಿಷತ್ತಿನ ಸಂಸ್ಥಾಪಕ, ವರಿಷ್ಠ ನಾಯಕ ಹಾಗೂ 'ಹಿಂದುಗಳು ಎಲ್ಲಾ ಒಂದು' ಎಂದು ಪ್ರತಿಪಾದಿಸುತ್ತಿರುವ ಉಡುಪಿ ಅಷ್ಠ ಮಠಗಳಲ್ಲೊಂದಾದ  ಪೇಜಾವರ ಶ್ರೀಗಳವರಲ್ಲಿ ನನ್ನ ಒಂದೆರಡು ಪ್ರಶ್ನೆಗಳು.

ಶ್ರೀಗಳು ದೀಕ್ಷೆ ಮತ್ತು ಪೇಜಾವರ ಮಠದ ಅಧಿಕಾರ ವಹಿಸಿಕೊಂಡ ಸಮಯದಿಂದಲೇ ನನಗೆ ಪರಿಚಯ ಉಳ್ಳವರಾಗಿದ್ದಾರೆ.  ಎಷ್ಟೋ ಬಾರಿ ನಮ್ಮ ಹಿರಿಯರ ಮನೆಯಲ್ಲಿ ಪಾದ ಪೂಜೆ ಮಾಡಿಸಿ ಕೊಂಡಿದ್ದಾರೆ.  ಆಗ ಅವರು ಬಾಲ ಯತಿಗಳಾಗಿದ್ದರು. ಅಂದರೆ ಕಾನೂನು ಪ್ರಕಾರ ಅಪ್ರಾಪ್ತ ವಯಸ್ಕರಾಗಿದ್ದರು. ಬಿಂದ್ರನ್ ವಾಲೆಯ ಖಲಿಸ್ಥಾನ ಬೇಡಿಕೆಯನ್ನೂ,  ಭಾರತದ ಸಂವಿಧಾನಕ್ಕಿಂತಲೂ ಧರ್ಮವು ಶ್ರೇಷ್ಠ ಮತ್ತು ಮತ ಧರ್ಮಗಳ ಮೇಲೆ ಸಂವಿಧಾನವು ನಿಯಂತ್ರಣ ಹೊಂದಲಾಗದು ಎಂಬ ಅವನ ಪರಿಕಲ್ಪನೆಯನ್ನೂ ಶ್ರೀಗಳು  ಪ್ರೋತ್ಸಾಹಿಸಿ ಸಮರ್ಥಿಸಿ ಅಮೃತ್ ಸರದಲ್ಲಿ ಬಹಿರಂಗ ಭಾಷಣ ಮಾಡಿದ್ದುದ್ದನ್ನು ಪತ್ರಿಕೆಗಳಲ್ಲಿ ಓದಿದ ಬಳಿಕ ನಾವು ಅವರನ್ನು ದೂರವಿಟ್ಟೆವು.

ಭಾರತದ ಮತ ಧರ್ಮ ನಿರಪೇಕ್ಷೆ,  ಜಾತಿ ಬೇಧ ರಹಿತ ಚಾತುರ್ವರ್ಣದ ಕಟ್ಟು ಪಾಡು ಇಲ್ಲದ ಹಾಗೂ ಅಸ್ಪೃಶ್ಯತೆ, ದಲಿತ ಶೋಷಣೆ-ಮರ್ದನ ಇತ್ಯಾದಿಗಳಿಗೆ ಅವಕಾಶ ಇಲ್ಲದೆ ಮಾನವರಾಗಿ ಬಾಳುವ ಅವಕಾಶ ಇದೆ ಎಂಬುವುದನ್ನು ಶ್ರೀ ಗಳು ಒಪ್ಪಲಿ ಬಿಡಲಿ,  ಈ ದೇಶದ ಸರ್ವ ಧರ್ಮಿಯರೂ ಎಲ್ಲ ಜಾತಿಗಳವರೂ ಮೇಲು ಕೀಳು ಎಂಬ ಭಾವನೆ ಇಲ್ಲದೆ ಸರ್ವ ಸಮಾನತೆ ಯಲ್ಲಿ ಬಾಳುತ್ತಿರುವುದನ್ನು ನಾವು ಬೆಂಬಲಿಸುತ್ತೇವೆ. ಅದಕ್ಕೆ ಶ್ರೀಗಳಂಥವರ ಪಾದ ಯಾತ್ರೆ ಬೇಕಾಗಿಲ್ಲ. ಕೀಳು ಜಾತಿ ಮತ್ತು ದಲಿತರು ಎಂಬ ಶತಮಾನಗಳ ತುಳಿತಕ್ಕೆ ಒಳಗಾದವರಲ್ಲಿ ಒಬ್ಬನ ಸನ್ಯಾಸ ಸ್ವೀಕಾರವೋ, ಮೇಲ್ಜಾತಿಯವರ ಜೊತೆಗೆ ಸಹಭೋಜನವೂ ಅದಕ್ಕೆ ಪರಿಹಾರವಲ್ಲ.

ಕುವೆಂಪು ರವರ ಒಂದು ಕವನವನ್ನು ಶ್ರೀಗಳ ಅವಗಾಹನೆಗೆ ತರಬಯಸುತ್ತೇನೆ:
“ವಿಜಯ ನಗರ ಸಾಮ್ರಾಜ್ಯ ವಾದರೇನು? ಮೊಗಲರಾಳ್ವಿಕೆಯಾದರೇನು? ಬ್ರಿಟಿಷರ ಆಡಳಿತವೇನು? ನಮ್ಮವರ ಕಬ್ಬಿಣದ ಸಲಾಖೆಯ ತಿವಿತ ಹೂ ಗೊಂಚಲೇನು?”

ಶ್ರೀ ಕೃಷ್ಣನು ಬೋಧಿಸಿರುವ, ಶ್ರೀಗಳು ಸಮರ್ಥಿಸುವ ಚಾತುರ್ವರ್ಣ ಶ್ರೇಣಿ ಪದ್ದತಿಯಿಂದ ದಲಿತ ಸಮುದಾಯವು ದಮನ, ತುಳಿತ ಮತ್ತು ತಿವಿತಗಳಿಂದ ಘಾಸಿ ಗೊಂಡಿರುವುದು ನಿಜವಲ್ಲವೇನು? ನಿಜವಾದರೆ ನಿರ್ಮೂಲನೆ ಮಾಡಲು ಶ್ರೀಗಳು ಇನ್ನಾದರೂ ಸನ್ನದ್ಧರಾಗುವರೇ? ಮಠದಲ್ಲಿ ಮಾಡಲಾಗುವ ಶ್ರೀಕೃಷ್ಣನ ಭೋಧನೆಯ ಪ್ರವಚನ ..” ಚಾತುರ್ವಣ್ಯಂ ಮಯಾ ಶ್ರೇಷ್ಠ ಗುಣಕರ್ಮ ವಿಭಾಗಶಃ” ಎಂಬ ದುರ್ಗುಣಗಳ ಭೋಧನೆಗಳನ್ನು ಕೈ ಬಿಟ್ಟು “ಸಹನಾ ವವತು, ಸಹನೌ ಭುನಕ್ತು, ಸಹ ವೀರ್ಯಂ ಕರವಾವಹೈ, ತೇಜಸ್ವೀ ನಾವದೀತ ಮಸ್ತು ಮಾ  ಒಂ ಶಾಂತಿಃ, ಶಾಂತಿಃ, ಶಾಂತಿಃ ..   ಎಂದರೆ ಎಲ್ಲರೂ ಜೊತೆಗೂಡಿ ನಡೆಯೋಣ, ಜೊತೆಗೂಡಿ ದುಡಿಯೋಣ, ಜೊತೆಗೂಡಿ ಉಂಡು ಜೊತೆಗೂಡಿ ಬಾಳೋಣ, ವಿದ್ವೇಶ ಸಲ್ಲದು, ಎಲ್ಲರೂ ತೇಜಸ್ವಿಗಳಾಗೋಣ, ವಿಶ್ವದಲ್ಲೆಡೆ ಶಾಂತಿ ನೆಲೆಗೊಳ್ಳಲಿ ಎಂದು ಸರ್ವರಿಗೂ ಸಮಾನತೆಯನ್ನು ಭೋಧಿಸುವ ಸರ್ವ ಶ್ರೇಷ್ಠ ಭೋಧನೆ ಗಳು ಉಳ್ಳ ಮಂತ್ರಗಳನ್ನು ಭೋಧಿಸಿ ಆಚರಿಸಲು ಶ್ರೀಗಳು ಒಪ್ಪುವರೇ?

ನಾನು ತಿಳಿದಂತೆ ಒಬ್ಬ ಸಜ್ಜನನಿಗೆ 4 ಧರ್ಮಗಳು ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಾಗಿವೆ. ಅವುಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ.

1ನೇಯದ್ದು ಧರ್ಮ - ಇಲ್ಲಿ ಧರ್ಮವೆಂದರೆ ಸನಾತನ ಧರ್ಮ. ನಮ್ಮ ಸಂವಿಧಾನದ್ದು ಮತ ಧರ್ಮ ನಿರಪೇಕ್ಷಣೀಯ ಬದುಕು.

2ನೇಯದ್ದು ಅರ್ಥ – ಅಂದರೆ ದುಡಿದು ಶೋಷಣೆಗೆ ಎಡೆಕೊಡದೆ ಅರ್ಥವನ್ನು ಸಂಪಾದಿಸಿ ಅದರ ಸದ್ವಿನಿಯೋಗ ಮಾಡುವ ಆರ್ಥಿಕತೆ,

3ನೇಯದ್ದು ಸಂತಾನ – ಅಂದರೆ ಸಮಾಜಗಳ ಅಭಿವೃದ್ಧಿಯ ಮಾರ್ಗವನ್ನು ಅನುಸರಿಸುವುದು.

4ನೇಯದ್ದು ಪುನರ್ಜನ್ಮ – ಅಂದರೆ ಸಂಸಾರ ಎಲ್ಲವುಗಳಿಂದಲೂ ಬಿಡುಗಡೆಗೊಂಡು ಚಿರ ಶಾಂತಿ ಸಾಧಿಸುವುದು.

ಶ್ರೀಗಳಾಗಲಿ, ಈಗೀಗ ಅವತರಿಸುತ್ತಿರುವ ನಾನಾ ಸನ್ಯಾಸಿಗಳಾಗಲಿ ಧರ್ಮ ಎಂದರೆ ಸನಾತನ ಧರ್ಮ ಪಾಲಿಸುವುದರ ಜೊತೆಗೆ ಮೋಕ್ಷವನ್ನು ಸಾಧಿಸುವ ಕುರಿತು ಯೋಚಿಸುವುದು ಮತ್ತು ಭೋಧಿಸುವುದು ಮಾತ್ರವಾಗಿದೆ. ಉಳಿದೆರಡನ್ನು ಅಂದರೆ ಅರ್ಥ ಮತ್ತು ಕಾಮಗಳನ್ನು ನಿಷೇಧಿಸಲಾಗಿದೆ ಅಲ್ಲವೇ?  ನಮ್ಮ ಸನ್ಯಾಸಿಗಳಿಂದ, ಮಠಾಧಿಪತಿ, ಪೀಠಾಧಿಪತಿ, ಧರ್ಮಾಧಿಕಾರಿ, ಜಗದ್ಗುರು ಎಂಬಿತ್ಯಾದಿ ಬಿರುದಾಂಕಿತರವರಿಂದೆಲ್ಲ ಮೇಲೆ ಉಲ್ಲೇಖಿಸಿದ ಧರ್ಮ ಭೋಧನೆ ಗಳನ್ನು ನಿರೀಕ್ಷೀಸುತ್ತೇವೆ. ಇದು ಕಾರ್ಯಗತವಾದರೆ ಪಾದ ಯಾತ್ರೆ, ಸಹಯೋಗ, ಸಹಭೋಜನ .. ಇತ್ಯಾದಿಗಳು ಮಹತ್ವ ಕಳೆದುಕೊಂಡು ನೈಜ ಸಮಾನತೆ ಸ್ಥಾಪನೆಯಾಗಲು ಸಹಕಾರಿಯಾಗಬಲ್ಲವು. ಈ ಬಗ್ಗೆ ಗಂಬೀರವಾಗಿ ಚಿಂತಿಸಿ ಇದನ್ನು ಕಾರ್ಯಗತಗೊಳಿಸಲು ಶ್ರೀಗಳಲ್ಲಿ ನನ್ನ ವಿನಮ್ರ ಅರಿಕೆ.

47ರ ಸ್ವಾತಂತ್ರ್ಯ

63ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಆಗಸ್ಟ್ 13, 2010)

ನಮ್ಮ 63ನೆಯ ಸ್ವಾತಂತ್ರ್ಯ ದಿನಾಚರಣೆ ಇದೇ ಆಗಸ್ಟ್ 15ನೇ ತಾರೀಕಿಗೆ ಜರಗುತ್ತದೆ. ‘ಎಲ್ಲಿಗೆ ಬಂತು ಯಾರಿಗೆ ಬಂತು 47ರ ಸ್ವಾತಂತ್ರ್ಯ’  ಎಂದು ದಲಿತ ಕವಿ ಸಿದ್ದಲಿಂಗಯ್ಯನವರು ಸ್ವಾತಂತ್ರ್ಯ ನಂತರದ ಬೆಳವಣಿಗೆಗಳನ್ನು ಕಂಡು ರೋಸಿ ಹೋಗಿ ಕೇಳಿದ್ದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವರೀಗ ಎಲ್ಲಿಯೇ ಇರಲಿ ಯಾರ ಕೊಡೆಯೊಳಗೇ ಸೇರಿಕೊಳ್ಳಲಿ ನಮ್ಮನ್ನು ಆಳುವವರು ಆ ಪ್ರಶ್ನೆಗೆ ವಕ್ರ ಉತ್ತರ ನೀಡುತ್ತಿದ್ದಾರೆ. ಕಾಂಗ್ರೆಸ್, ಭಾಜಪ, ಮತ್ತು ಸಂಘಪರಿವಾರಗಳ ಸಂದರ್ಭ ಸಾಧಕ ಎಡ ಬಿಡಂಗಿಗಳು, ವಿವಿಧ ಕೋಮುವಾದಿಗಳು ಎಲ್ಲರೂ 1947 ಆ 15 ರಂದು ದೊರಕಿದ ಸ್ವಾತಂತ್ರ್ಯವನ್ನು ವಿಕೃತಗೊಳಿಸಿದ್ದಾರೆ.   ಭವಿತವ್ಯದೊಂದಿಗೆ ಮುಖಾಮುಖಿ ಎಂಬ ಇತಿಹಾಸ ಪ್ರಸಿದ್ಧ ಭಾಷಣದೊಂದಿಗೆ ಜವಾಹರಲಾಲ್ ನೆಹರೂ ರವರು ಆರಂಭಿಸಿದ ಎಲ್ಲ ಪ್ರಗತಿಪರ ಭವಿಷತ್ತನ್ನು ನಿಜಗೊಳಿಸುವತ್ತಣ ಮೊದಲ ಹೆಜ್ಜೆಗಳನ್ನು ತ್ಯಜಿಸಿ ನಮ್ಮನ್ನು ಆಳುವವರು ನಮ್ಮ ದೇಶವನ್ನು  ಪರಾಧೀನಕ್ಕೆ, ದಾರಿದ್ರ್ಯಕ್ಕೆ ಮತ್ತು ಸರ್ವಾಧಿಕಾರಕ್ಕೆ ಗುರಿಪಡಿಸುವ ದಾರಿಯಲ್ಲಿ ಮುನ್ನುಗ್ಗುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಪ್ರತಿಯಾಗಿ ನಮ್ಮ ಸಂವಿಧಾನಬದ್ಧವಾದ ಪ್ರಜಾಪ್ರಭುತ್ವದ ಹಾದಿಯಲ್ಲಿ ಗುರಿಯನ್ನು ಸಾಧಿಸುವತ್ತ ಹೇಗೆ ಸಫಲವಾದ  ಹೆಜ್ಜೆಗಳನ್ನು ಮುಂದಿಡಬಹುದು ಎನ್ನುವುದನ್ನು ಕಮ್ಯುನಿಸ್ಟ್ ಮತ್ತು ಅವರ ಜೊತೆಗಾರರಾದ ಎಡ ಶಕ್ತಿಗಳು ಕಾರ್ಯಥಾ ತೋರಿಸಿಕೊಟ್ಟಿದ್ದಾರೆ. ಈ ಎರಡರ ನಡುವಿನ ಆಯ್ಕೆ ಇಂದು ನಮ್ಮ ಅನುಭವಸ್ಥ ಮತ್ತು ಪ್ರಭುದ್ದ ಜನತೆಯ ಕೈಯಲ್ಲಿದೆ.

ದೇಶಾದ್ಯಂತ ಲಕ್ಷಾಂತರ ರೈತರ ಆತ್ಮಹತ್ಯೆ ಎಂದು ಕರೆಯಲಾಗುವುದರಲ್ಲಿ ನಿಜಾರ್ಥದಲ್ಲಿ ಆಡಳಿತಗಾರರು ನಡೆಸುವ ಮಾನವ ಸಂಪತ್ತಿನ ಕೊಲೆಯ ಮತ್ತು ಪೀಡನೆಯ ಚಿತ್ರಣ ಕಂಡುಬರುತ್ತಿದೆ. ಬಹು ರಾಷ್ಟ್ರೀಯ ಸಂಸ್ಥೆಗಳ, ಸಾಮ್ರಾಜ್ಯವಾದಿಗಳ ಆರ್ಥಿಕ ಶಕ್ತಿಯ ವರ್ಧನೆಗೆ ಕಾರಣವಾಗಿರುವ ಉದಾರೀಕರಣ, ಜಾಗತೀಕರಣ, ಖಾಸಗೀಕರಣಗಳನ್ನು ನಮ್ಮ ದೇಶವನ್ನು ಆಳುವ ನಮ್ಮ ಈಗಿನ ಪ್ರಭುತ್ವವಾದಿಗಳು ತೀವ್ರಗಳಿಸುತ್ತಿದ್ದಾರೆ. ಇದನ್ನು ಕೊನೆಗೊಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.
ಈ ಸಮಸ್ಯೆಗಳಿಗೆ ಉತ್ತರ ಒಂದೇ: ಸಾಮ್ರಾಜ್ಯವಾದಿಗಳ, ಬಹು ರಾಷ್ಟ್ರೀಯ ಸಂಸ್ಥೆಗಳ ಪರವಾಗಿರುವವರನ್ನು ಅಧಿಕಾರದಿಂದ ತೊಲಗಿಸುವ ‘2ನೆಯ ಕ್ವಿಟ್ ಇಂಡಿಯಾ’ - ಅಧಿಕಾರ ಬಿಟ್ಟು ತೊಲಗಿ - ಎಂಬ ಹೊಸ ಚಳುವಳಿಗೆ ಎಲ್ಲ ದೇಶ ಪ್ರೇಮಿಗಳು,  ಜನಪರ ಶಕ್ತಿಗಳು, ಯುವಕರು, ಯುವತಿಯರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ರೈತರು ಒಟ್ಟಿನಲ್ಲಿ ಸಮಸ್ತ ಜನರು ಒಂದಾಗಿ ಹೋರಾಟ ರೂಪಿಸಬೇಕಾಗಿದೆ. ಈ ಹೋರಾಟದ ಆರಂಭಕ್ಕೆ ಇಂದು ದೇಶದ ಸಂಸತ್ತಿನಲ್ಲಿ ಮತ್ತು ಗುಜರಾತ್, ಕರ್ನಾಟಕ, ಪ.ಬಂಗಾಲ, ಮೊದಲಾದ ಪ್ರಜಾಪ್ರಭುತ್ವದ ದೇಗುಲಗಳಲ್ಲಿ ನಡೆಯುತ್ತಿರುವ ಗೊಂದಲಗಳನ್ನು ಉದಾಹರಣೆಗಳಾಗಿ ನಾವು ಕಂಡು ತಿಳಿಯಬೇಕಾಗಿದೆ.

ಬೆಲೆ ಏರಿಕೆಯ ಪ್ರಶ್ನೆ ಸಮಸ್ತ ಜನತೆಯನ್ನು ಕಾಡುತ್ತಿರುವಾಗ ವಿವಿಧ ಪಕ್ಷಗಳು ಬೆಲೆ ಏರಿಕೆಯ ಮುಂದುವರಿಕೆಯನ್ನು ತಕ್ಷಣ ನಿಲ್ಲಿಸಬೇಕೆಂದು ಹತ್ತು ಹಲವು ಸೂಚನೆಗಳನ್ನು ಸರಕಾರದ ಮುಂದಿಟ್ಟು ಸಂಸತ್ತಿನಲ್ಲಿ ಧ್ವನಿ ಎತ್ತಿದಾಗ ಮನಮೋಹನ್ ಸಿಂಗ್ ಹಾಗೂ ಅವರನ್ನು ಬೆಂಬಲಿಸುವ ಆಳುವ ಒಕ್ಕೂಟವು ಪ್ರತಿಪಕ್ಷಗಳೊಳಗಿನ ಭಿನ್ನಾಭಿಪ್ರಾಯವನ್ನು ಲೇವಡಿ ಮಾಡಿ ತಲೆ ತಪ್ಪಿಸಿಕೊಳ್ಳುವ ಮಾರ್ಗ ಹಿಡಿದಿರುವುದು ಪ್ರಜಾತಂತ್ರದ ಲೇವಡಿಯಲ್ಲದೆ ಮತ್ತೇನಲ್ಲ. ಸಂಸತ್ತಿನಲ್ಲಿ ಚರ್ಚೆ ಮಾಡಿ ಪರಿಹಾರವನ್ನು ಕಂಡುಕೊಳ್ಳುವುದರ ಬದಲು ಸಂಸತ್ತನ್ನೇ ಕಡೆಗಾಣಿಸಿ ತೈಲೋತ್ಪನ್ನಗಳ ಬೆಲೆಯನ್ನು ಮತ್ತೆ ಏರಿಸಿರುವುದು ಅಕ್ಷಮ್ಯವಾಗಿದೆ.

ನಮ್ಮ ರಾಜ್ಯದಲ್ಲಿ ನೋಡಿದರೆ ವಿಧಾನ ಮಂಡಲದಲ್ಲಿ ಗಣಿಗಾರಿಕೆ ಮತ್ತಿತರ ಬಹಿರಂಗಗೊಂಡಿರುವ ಭ್ರಷ್ಟಾಚಾರಗಳ ಬಗ್ಗೆ ಮತ್ತು ಲೋಕಾಯುಕ್ತರ ದಿಟ್ಟ ಕ್ರಮಗಳ ಬಗ್ಗೆ  ಚರ್ಚಿಸಿ ಭ್ರಷ್ಟ ಮಂತ್ರಿವರ್ಯರೊಳಗೊಂಡ ಅಧಿಕಾರಿಗಳನ್ನು ಶಿಕ್ಷಿಸುವುದರ ಬದಲು ಆ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವ ಕ್ರಮಗಳು ನಡೆದುವು. ಹಿಂದೆ ಆಳುತ್ತಿದ್ದವರು, ಈಗ ಆಳುತ್ತಿರುವವರು ಕೊಳ್ಳೆ ಹೊಡೆಯುವ ಭ್ರಷ್ಟಾಚಾರಕ್ಕೆ ವಿರುದ್ದವಾಗಿ ಯಾವ ಹೆಜ್ಜೆಯನ್ನೂ ಇರಿಸದೆ ಇದೀಗ ಪಾದ ಯಾತ್ರೆ, ಸಮಾವೇಶ, ಅತ್ತಿತ್ತ ಕೆಸರಾಟಗಳಲ್ಲಿ ಎರಡೂ ಕಡೆಯ ವರಿಷ್ಟರು ಭಾಗವಹಿಸಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಕೇಂದ್ರ ಸರಕಾರವು ಸಹಾ ಸಂಪತ್ತಿನ ಕೊಳ್ಳೆ ಹಾಗೂ ಭೂಮಿ, ಜನ ಅರಣ್ಯಗಳನ್ನೆಲ್ಲ ದೋಚಿ ತಮ್ಮದಾಗಿಸಿಕೊಳ್ಳುವವರ ವಿರುದ್ದ ಕ್ರಮವಹಿಸುವ ಬದಲಾಗಿ ತೋರಿಕೆಗೆ ವಿರೋಧ ವ್ಯಕ್ತಪಡಿಸಿ ಕಾರ್ಯಥಾ ಕಿರುಬೆರಳನ್ನೂ ಎತ್ತದಿರುವ ಸೋಗಲಾಡಿತನವನ್ನು ತೋರಿಸುತ್ತಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕದ ಲೋಕಾಯುಕ್ತರು, ರಾಜ್ಯಪಾಲರು, ಬುದ್ಧಿ ಜೀವಿಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಉಳ್ಳ ಪ್ರಮುಖರು ಎಲ್ಲರೂ ಈ ಹಗರಣದ ವಿರುದ್ದ ಧ್ವನಿ ಎತ್ತಿದ್ದರೂ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಮ್ಮನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಆ 15, 2010 ರಂದು ಕೆಂಪು ಕೋಟೆಯ ಸ್ವಾತಂತ್ರ್ಯ ಸಮಾರಂಭದ ಕಟಕಟೆಯಲ್ಲಿ ಅಶೋಕ ಚಕ್ರ ಹೊತ್ತ ತ್ರಿವರ್ಣ ದ್ವಜ ಅರಳುತ್ತದೆ. ‘ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿದಾತ ..   .. ಜನ ಗಣ ಮಂಗಳದಾಯಕ ಜಯ ಹೇ ಭಾರತ ಭಾಗ್ಯ ವಿದಾತ ..   ..’ ರಾಷ್ಟಗೀತೆ ಮೊಳಗುತ್ತದೆ. ಪ್ರಧಾನ ಮಂತ್ರಿಗಳು ತಮ್ಮ ಅಪ ಸಾಧನೆಗಳನ್ನು ಬಚ್ಚಿಟ್ಟು ಸಾಧನೆಗಳ ಕನಸುಗಳನ್ನು ಬಿತ್ತರಿಸುತ್ತಾರೆ. ಅದೇ ಸಮಯದಲ್ಲಿ ಕರ್ನಾಟಕ, ಗುಜರಾತ್ ಹಾಗೂ ಇನ್ನಿತರ ರಾಜ್ಯಗಳ ರಾಜಧಾನಿಗಳಲ್ಲಿ ಅದೇ ಬಾವುಟ, ಅದೇ ರಾಷ್ಟ್ರಗೀತೆ ಮೊಳಗಿದರೂ ಕೆಳಗೆ ನಿಂತು ಧ್ವಜ ವಂದನೆ ಸ್ವೀಕರಿಸುವವರು ಅವುಗಳನ್ನು ಕಾರ್ಯಥಾ ಗೌರವಿಸದೆ ಇರುವುದು ನಮ್ಮ ದುರಂತ. ಮೊದಲನೆಯ ಸ್ವಾತಂತ್ರ್ಯ ದಿನದಂದು ರಾಷ್ಟ್ರದ ವಸಾಹತುಶಾಹಿ ಆಡಳಿತದ ವ್ಯವಸ್ಥೆಯ ಸಂಪೂರ್ಣ ನಿರ್ಮೂಲನೆ, ಸ್ವಾವಲಂಬನೆ, ಔಧ್ಯಮೀಕರಣ, ವೈಜ್ಞಾನಿಕ ಶಿಕ್ಷಣದ ವ್ಯವಸ್ಥೆ, ಭೂಸುಧಾರಣೆ, ರಾಜ ನವಾಬರುಗಳ ಆಡಳಿತ ಮತ್ತು ರಾಜಧನ ರದ್ದತಿ, ಜೀವ ವಿಮೆಗಳ ರಾಷ್ಟ್ರೀಕರಣ, ಉಳುವವನಿಗೆ ಕೃಷಿ ಭೂಮಿ ಮತ್ತು ಕೃಷಿಗೆ ಆಧ್ಯತೆಯ ನೆಲೆಯಲ್ಲಿ ಸಹಾಯ, ಕೃಷಿ ಉತ್ಪನ್ನಗಳಿಗೆ ಸುವ್ಯಸ್ಥಿತ ಮಾರುಕಟ್ಟೆ ಮತ್ತು ಲಾಭದಾಯಕ ಬೆಲೆ, ಉತ್ತಮ ಗೊಬ್ಬರಗಳ ಪೂರೈಕೆ, ವಿದ್ಯುತ್ ಶಕ್ತಿ ಮತ್ತು ನೀರಾವರಿ ಸೌಲಬ್ಯಗಳ ವಿಸ್ತರಣೆ, ದುಡಿವ ಜನರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮತ್ತು ವೈಜ್ಞಾನಿಕ ಶಿಕ್ಷಣ, ವಿದ್ಯಾಸಂಸ್ಥೆಗಳನ್ನು ಧಾರ್ಮಿಕ ಹಾಗೂ ಲಾಭಬಡುಕ ಖಾಸಗಿಯವರ ಕಪಿ ಮುಷ್ಟಿಯಿಂದ ಬಿಡಿಸಿ ಅರ್ಹತೆಯ ಆಧಾರದಲ್ಲಿ ಶಿಕ್ಷಣದ ವ್ಯವಸ್ಥೆ, ಇತ್ಯಾದಿಗಳ ಗುರಿಯನ್ನು ಇಟ್ಟುಕೊಂಡು ಪ್ರತಿಜ್ಞೆಯನ್ನು ಕೈಗೊಂಡಿದ್ದೆವು. ಆದರೆ ಈಗ ಅವುಗಳನ್ನು ಸಂಪೂರ್ಣವಾಗಿ ತೊರೆದು ದುಡಿದು ತಿನ್ನುವ ಬಹು ಸಂಖ್ಯಾತ ಜನರ ದಾರಿದ್ರ್ಯಕ್ಕೆ ಗುರಿಪಡಿಸುವ ದಾರಿಯಲ್ಲಿ ಆಳುವವರು  ಸಾಗುತ್ತಿರುವುದನ್ನು ನಾವಿಂದು ಕಾಣುತ್ತೇವೆ.

ಪರಮಾಣು ಅಸ್ತ್ರದ ಕೊಡೆಹಿಡಿಯುವ ಟೊಳ್ಳು ಆಸ್ವಾಸನೆಗೆ ಮರುಳಾಗಿ ದೇಶದ ವಿದೇಶಾಂಗ ನೀತಿಯ ಅಪಾಯಕಾರಿ ಬದಲಾವಣೆಗಳನ್ನು ತರಲು ಪಡುವ ಪ್ರಯತ್ನವನ್ನಂತೂ ಕೊನೆಗಾಣಿಸಬೇಕೆಂದು ಭವಿಷತ್ತಿನ ಬಗ್ಗೆ ಕಾಳಜಿ ಇರುವವರೆಲ್ಲರೂ ಅಪೇಕ್ಷಿಸುತ್ತಾರೆ. ಇದಕ್ಕೆ ನಮ್ಮ ಸಂಸತ್ತು ಮತ್ತು ವಿಧಾನ ಸಭೆಗಳು ಬದಲಾಗಬೇಕು. ಕೋಟ್ಯಾಧಿಪತಿಗಳು, ಭೂಕಬಳಿಕೆದಾರರು, ಗಣಿಗಳ್ಳರು, ಅರಣ್ಯ ಲೂಟಿಗಾರರು ಮತ್ತು ಅವರ ಪ್ರತಿನಿಧಿಗಳು ಅವುಗಳಲ್ಲಿ ತುಂಬಿಕೊಂಡಿದ್ದಾರೆ.
ದಿನದಿಂದ ದಿನಕ್ಕೆ ಬಹುಸಂಖ್ಯಾತ ದುಡಿದು ತಿನ್ನುವ ಜನರ ಬದುಕು ದುಸ್ತರವಾಗುತ್ತಿದೆ. ಈ ವೈಪರೀತ್ಯಗಳನ್ನು ಕೊನೆಗಾಣಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು, ಪ್ರಜ್ಞಾವಂತರು ಒಂದುಗೂಡಿ ಸಮಾಲೋಚನೆ ಮಾಡಿ ಒಂದು ಹೊಸ ಅಭಿಯಾನ ಆರಂಭಿಸುವತ್ತ ಹೆಜ್ಜೆ ಇಡುವ ಪ್ರತಿಜ್ಞೆ ಮಾಡೋಣ ಮತ್ತು ಅದಕ್ಕೆ ಕಾರ್ಯ ಸಿದ್ದತೆ ನಡೆಸೋಣ.