Tuesday, 27 September 2011

ಚುನಾವಣಾ ನಿಯಮಗಳ ಪರಿಷ್ಕರಣೆಯಾಗಲಿ


ಭ್ರಷ್ಟಾಚಾರದ ವಿರುದ್ಧ ದೇಶದಾದ್ಯಂತ ಜನರು ರೊಚ್ಚಿಗೆದ್ದಿದ್ದಾರೆ ಮತ್ತು ಅದಕ್ಕೆ ಮೂಲ ಕಾರಣ ನಮ್ಮ ಚುನಾವಣಾ ನಿಯಮಗಳು ಎಂಬುದು ದೃಡಪಟ್ಟಿದೆ. ದೇಶದ  ಸಂಪತ್ತನ್ನು ಕೆಲವೇ ವ್ಯಕ್ತಿಗಳು ಭ್ರಷ್ಟಾಚಾರದ ಮೂಲಕ ಕೊಳ್ಳೆ ಹೊಡೆದು ಅದರ ಪ್ರಭಾವದಿಂದ ನಮ್ಮ  ಸರಕಾರ ಹಾಗೂ ಸಮಸ್ತ ಅಧಿಕಾರವನ್ನು ವಶಪಡಿಸಿ ದೇಶದ ಬಹುಪಾಲು ಜನರ ಬದುಕನ್ನೇ ದುಸ್ತರಗೊಳಿಸಿ ಅವರು ಕನಿಷ್ಟ ಜೀವನಾವಶ್ಯಕತೆಗಳಿಗೂ ಪರದಾಡುವ  ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡವಾಳಶಾಹಿಗಳು ಕೋಟ್ಯಾಂತರ ರೂಪಾಯಿಗಳನ್ನು ಭ್ರಷ್ಟಾಚಾರದ ರೂಪದಲ್ಲಿ ಚುನಾವಣೆಗಳಲ್ಲಿ ಖರ್ಚುಮಾಡಿ, ಅವರ ಪ್ರತಿನಿಧಿಗಳೇ ಚುನಾಯಿತರಾಗಿ ಬರುವಂತೆ ಮಾಡಲು ಸಮರ್ಥರಾಗುತ್ತಾರೆ. ಅವರ ಎದುರು ಸಭ್ಯ ಉಮೇದುವಾರನಿಗೆ ಗೆಲ್ಲುವ ಸಾಧ್ಯತೆಗಳು ನಗಣ್ಯ. ನಮ್ಮ ರಾಜ್ಯದ ಭ್ರಷ್ಟ ರಾಜಕಾರಣಿಗಳು ಹೇಗೆ ದೇಶದ ಸಂಪತ್ತನ್ನು ದರೋಡೆ ಮಾಡಿ  ಅದನ್ನು ದೇಶ ವಿದೇಶಗಳಲ್ಲಿ  ಬಚ್ಚಿಟ್ಟು  ನಮ್ಮ ರಾಜ್ಯದ ರಾಜಕೀಯದಲ್ಲಿ ಅದರ ಪ್ರಭಾವ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ನಾವು ಪ್ರತ್ಯಕ್ಷ ಕಾಣುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿಭಿನ್ನ ಪಕ್ಷಗಳ ತಿಕ್ಕಾಟ, ಜಗ್ಗಾಟದಿಂದಾಗಿ ಮಾತ್ರ ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಯ್ತು ಎಂಬುದನ್ನು ನಾವು ಗಮನಿಸಬೇಕು.  ಅಪರೇಷನ್ ಕಮಲದ ಮೂಲಕ ಅನ್ಯ ಪಕ್ಷಗಳ ಸದಸ್ಯರನ್ನು ಸೆಳೆದು ಮರು ಚುನಾವಣೆಗೆ ನಿಲ್ಲಿಸಿ ಅವರನ್ನು ಗೆಲ್ಲಿಸಲು ಬೇಕಾಬಿಟ್ಟಿ ಭ್ರಷ್ಟಾಚಾರದ ಹಣವನ್ನು ಚೆಲ್ಲಿ ರಾಜ್ಯ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ್ದ ಪ್ರಹಸನವು ನಮ್ಮ ಮುಂದಿದೆ. ಓಟಿಗಾಗಿ ನೋಟಿನ ಪ್ರಹಸನದ ಕಂತೆ ಕಂತೆ ನೋಟುಗಳ ಪ್ರದರ್ಶನವು ಲೋಕಸಭಾ ಸದನದಲ್ಲೇ ಏರ್ಪಟ್ಟಿದ್ದನ್ನು ನಾವು ಕಂಡಿದ್ದೇವೆ. 2-ಜಿ ಸ್ಪೆಕ್ಟಂ ಗುತ್ತಿಗೆ ನೀಡುವ  ಕಾಮಗಾರಿ ಒಂದರಲ್ಲೇ 1,76,000 ಕೋಟಿ ರೂಪಾಯಿಗಳ ಅವ್ಯವಹಾರ ಗೈದ ಮಂತ್ರಿವರ್ಯರು ಜೈಲು ಸೇರಿದ ಪ್ರಸಂಗವೂ ಹಸಿರಾಗಿಯೇ ಇದೆ. ಇವುಗಳು ಬೆಳಕಿಗೆ ಬರುವುದೇ ಅಪರೂಪಕ್ಕೊಂದೆರಡು. ನಮ್ಮ ಪ್ರಸ್ತುತ ಸಂಸತ್ತಿನ ಸದಸ್ಯರಲ್ಲಿ ಬಹುತೇಕ ಮಂದಿ ಕೋಟ್ಯಾಧಿಪತಿಗಳೇ ಆಗಿರಲು ಕಾರಣ ಇದುವೇ ಅಗಿರುತ್ತದೆ.  ಆದುದರಿಂದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರು ಚುನಾವಣಾ ನೀತಿ ಸಂಹಿತೆಯಲ್ಲಿನ ನಿಯಮಗಳ ಸುಧಾರಣೆಗೆ ಪ್ರಥಮ ಆಧ್ಯತೆಯನ್ನು ನೀಡಬೇಕಾಗಿದೆ. ಅಣ್ಣಾ ಹಜಾರೆಯವರ ತಂಡದವರೂ ಇದನ್ನು ತಿಳಿದು ಅದನ್ನು ಕೈಗೆತ್ತಿಕ್ಕೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದನ್ನು ಹೇಗೆ ಮತ್ತು ಯಾವ ರೂಪದಲ್ಲಿ  ರ್ಕಾರ್ಯಗತಗೋಳಿಸಬೇಕೆಂಬ ಬಗ್ಗೆ ಬಹಳಷ್ಟು ವಿಚಾರ ಗೋಷ್ಠಿಗಳು ಮತ್ತು ಸಾರ್ವಜನಿಕ ಚರ್ಚೆಗಳು ನಡೆಸಿ ಸಲಹೆ ಸೂಚನೆಗಳನ್ನು ಆಹ್ವಾನಿಸುವ  ಅವಶ್ಯಕತೆ ಇದೆ. 

ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ವಿವಿಧ ಚುನಾವಣಾ ವ್ಯವಸ್ಥೆಗಳು ಜಾರಿಯಲ್ಲಿದ್ದು ಅವುಗಳಲ್ಲಿ ಅನುಪಾತ ವ್ಯವಸ್ಥೆಯು ಪ್ರಮುಖವಾಗಿದೆ.  93 ರಾಷ್ಟ್ರಗಳಲ್ಲಿ ಅದು ಜಾರಿಯಲ್ಲಿದ್ದು  ಕೆಲವು ರಾಷ್ಟಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಹೊಂದಿದೆ. ಒಟ್ಟು ಸದಸ್ಯರ ಪೈಕಿ ಅರ್ಧಾಂಶ ಸದಸ್ಯರನ್ನು ಅನುಪಾತ ಮತದ ಪ್ರಕಾರ ಪಕ್ಷಗಳು ನೇಮಿಸಿ ಉಳಿದ ಅರ್ಧಾಂಶ ಸದಸ್ಯರನ್ನು ನೇರ ಬಹುಮತದಿಂದ ಚುನಾಯಿಸುವ ವ್ಯವಸ್ಥೆ ಸಹಾ ಜಾರಿಯಲ್ಲಿದೆ. ಫ್ರಾನ್ಸ್ ಇದಕ್ಕೆ ಒಂದು ಉತ್ತಮ ಮಾದರಿಯಾಗಿದೆ. ದ್ವಿತಿಯ ಮಹಾಯುದ್ಧದ ನಂತರ ಬ್ರಿಟನ್ ಹಾಗೂ ಇನ್ನಿತರ ದೇಶಗಳಲ್ಲಿರುವಂತೆ ನೇರ ಮತದಾನದ ಮೂಲಕ ಸಂಸತ್ತನ್ನು ಚುನಾಯಿಸುವ ಕ್ರಮವು ಅಲ್ಲಿ ಬಳಕೆಯಲ್ಲಿತ್ತು. ಅನೇಕ ವರ್ಷಗಳ ಕಾಲದ ಅಸ್ಥಿರತೆಯಿಂದಾಗಿ ದೇಶದ ರಾಜಕೀಯವು ದುರ್ಬಲಗೊಂಡು ಬಳಿಕ ಅನುಪಾತ ಮಾದರಿಯ ಚುನಾವಣಾ ವ್ಯವಸ್ಥೆ ಜಾರಿಗೊಂಡಿತು. ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿ ತಮಗೆ ದೊರೆತ ಮತಗಳ ದಾಮಾಶಯದಲ್ಲಿ ಸಂಸತ್ತಿನಲ್ಲಿ ಸದಸ್ಯರನ್ನು ಹೊಂದಿ ಸರಕಾರದಲ್ಲಿಯೂ ಸಹಭಾಗಿಯಾಗುವ ಅವಕಾಶವನ್ನು ಪಡೆದು ಪ್ರಜಾಪ್ರಭುತ್ವವನ್ನು ಯತಾರ್ಥಗೊಳಿಸುವ ಸ್ಥಿತಿ  ನಿರ್ಮಾಣವಾಯಿತು. ನಮ್ಮ ದೇಶದಲ್ಲೂ ಈ ಅನುಪಾತ ವ್ಯವಸ್ಥೆಯನ್ನು ಜಾರಿಗೊಳಿಸಲು ಕಮ್ಯುನಿಷ್ಟ್ ಪಕ್ಷಗಳು ಮುಂಚಿನಿಂದಲೂ ಒತ್ತಾಯಿಸುತ್ತಿದ್ದು ವಾಜಪಾಯಿ ಸರ್ಕಾರವು 1996ರಲ್ಲಿ ಅದಕ್ಕೆ ಬೆಂಬಲ ಸೂಚಿಸಿತ್ತು ಮತ್ತು ಭಾರತದ ಕಾನೂನು ಆಯೋಗವು ಅದನ್ನು1999ರಲ್ಲಿ ಶಿಫಾರಸು ಮಾಡಿತು. ಅಲ್ಲದೆ ಅಕಾಲಿದಳ, ಶಿವಸೇನೆ, ಡಿಯಂಕೆ ಪಕ್ಷಗಳೂ ಅದಕ್ಕೆ ಬೆಂಬಲ ಸೂಚಿಸಿವೆ ಎಂಬುವುದನ್ನು ನಾವು ಇಲ್ಲಿ ಸ್ಮರಿಸಬಹುದು.

1930 ರ ದಶಕದಲ್ಲಿ ಯುರೋಪಿನಲ್ಲಿ ಫ್ರಾನ್ಸ್, ಇಟೆಲಿ, ಜರ್ಮನಿ ಮುಂತಾದ ಕಡೆಗಳಲ್ಲಿ ಮುಖ್ಯವಾಗಿ ಕಮ್ಯುನಿಸ್ಟ್ ಮತ್ತು ಪ್ರಜಾಪ್ರಭುತ್ವವಾದಿ ಸಮಾಜವಾದಿ ಪಕ್ಷಗಳು ಪ್ರಭಲವಾಗಿದ್ದ ಸಂದರ್ಭದಲ್ಲಿ ಅವರೊಳಗಿನ ಕಚ್ಚಾಟದಿಂದ ಪ್ರಜಾಪ್ರಭುತ್ವವನ್ನೇ ಧಿಕ್ಕರಿಸಿ ಫಾಸಿಸ್ಟ್ ಸರ್ವಾಧಿಕಾರವನ್ನು ಹೇರಲು ಸಾಧ್ಯವಾಯಿತು ಎನ್ನುವುದನ್ನು ನಾವು ಮನಗಾಣಬೇಕು. ಅಂಥಾ ಕರಾಳ ಯುಗದ ಅನುಭವವನ್ನು ನಾವು ಪರಿಗಣಿಸಿ ಅದು ಮತ್ತೆಲ್ಲಿಯೂ ತಲೆ ಎತ್ತದಂತೆ ನೋಡಿಕೊಳ್ಳುವ ಅಗತ್ಯವಿದೆ.  ನಮ್ಮ ರಾಜ್ಯದಲ್ಲಿಯೂ ಜೆಡಿಯಸ್ ಮತ್ತು ಬಿಜೆಪಿ ಪಕ್ಷಗಳ 20:20 ರ ಒಡಂಬಡಿಕೆ  ಹೆಚ್ಚು ಕಡಿಮೆ ಯುರೋಪಿನ ಫಾಸಿಸ್ಟ್ ವಿಧಾನವನ್ನೇ ಹೋಲುತ್ತಿದ್ದು ಅಂತೆಯೇ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದಿರುವುದನ್ನೂ ಕಾಣಬಹುದು. ಬಂಡವಾಳಶಾಹಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರವನ್ನು ಕಬಳಿಸಲು ಪೈಪೋಟಿ ನಡೆಸುತ್ತಿರುವ ಈ ಸಂಧರ್ಭದಲ್ಲಿ ನಮ್ಮ ದೇಶದ ಎಲ್ಲಾ ಎಡ ಮತ್ತು ಪ್ರಜಾಪ್ರಭುತ್ವವಾದಿ ಸಮಾಜವಾದಿ ಪಕ್ಷಗಳು ಸಂದರ್ಭವಾದಿ ಸಾಧ್ಯತೆಗಳನ್ನು ತೊರೆದು ಅನುಪಾತ ವ್ಯವಸ್ಥೆಯ ಚುನಾವಣಾ ರೀತಿಯನ್ನು ಜಾರಿಗೊಳ್ಳುವಂತೆ ಮಾಡಿದರೆ ಪ್ರಜಾಪ್ರಭುತ್ವವನ್ನು ಈ ದೇಶದಲ್ಲಿ ಸುಸ್ಥಿರಗೊಳಿಸಬಹುದು ಮತ್ತು ಬಹುಪಾಲು ಜನರನ್ನು ನಿರ್ಗತಿಕರನ್ನಾಗಿ ಮಾಡಿ ಲಕ್ಷಾಂತರ ರೈತರು  ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಬಂಡವಾಳಶಾಹಿ ಧೋರಣೆಯನ್ನು ತೊಡೆದು ದೇಶವನ್ನು ಕೊಳ್ಳೆಹೊಡೆಯಲು ಅನುಕೂಲ ಮಾಡಿಕೊಡುತ್ತಿರುವ ಜಾಗತೀಕರಣ ವ್ಯವಷ್ಥೆಯನ್ನು ಹದ್ದು ಬಸ್ತಿನಲ್ಲಿ ಇಡಬಹುದು. ಅದಕ್ಕಾಗಿ ಅನುಪಾತ ವ್ಯವಸ್ಥೆಯ ಚುನಾವಣಾ  ರೀತಿಯು ಜಾರಿಗೊಳ್ಳುವಂತೆ  ಕೆಲವು ಸೂಚನೆಗಳನ್ನು ನೀಡಬಯಸುತ್ತೇವೆ.
  1. ಕ್ಷೇತ್ರಗಳಲ್ಲಿ ಪಡೆದ ಮತಗಳ ದಾಮಾಶಯಗಳ ಅಧಾರದಲ್ಲಿ ಪಕ್ಷಗಳೇ ಚುನಾವಣೆಯ ಬಳಿಕ ತಮ್ಮ ಅಭ್ಯರ್ಥಿಯನ್ನು ಸೂಚಿಸುವಂತಾಗಬೇಕು.
  2. ಪಕ್ಷಾತೀತ ಅಭ್ಯರ್ಥಿಗಳು ಚುನಾವಣೆಯ ಬಳಿಕ ಯಾವುದೇ ಪಕ್ಷಕ್ಕೂ ಸೇರಲಿಕ್ಕೆ ಅವಕಾಶವಿರಬಾರದು.
  3. ಪ್ರಾನ್ಸ್ ಹಾಗೂ ಮತ್ತಿತರ  ಕೆಲವು ದೇಶಗಳಲ್ಲಿ ಇರುವಂತೆ ಅಭ್ಯರ್ಥಿಯು ಆತನನ್ನು ಬೆಂಬಲಿಸುವ ಪಕ್ಷದ ಶಿಸ್ತಿಗೆ ಒಳಪಡುವಂತಿರಬೇಕು
  4. ಪಕ್ಷಾಂತರ ಮಾಡುವವರು ಮತ್ತು ಅದಕ್ಕೆ ಪ್ರೇರೇಪಣೆ ನೀಡುವ, ಹಣ ಒದಗಿಸುವ ಎಲ್ಲರೂ ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆಗೆ ಒಳಪಟ್ಟು ಮುಂದೆ ಚುನಾವಣೆಗೆ ಅನರ್ಹರಾಗುವಂತಾಗಬೇಕು.     
  5. ದಂಡ ಸಂಹಿತೆಯಲ್ಲಿ ಅಪರಾಧಿ ಎಂದೆಣಿಸಲ್ಪಟ್ಟವರು ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಬೇಕು
  6. ಅಭ್ಯರ್ಥಿಗಳು ತಮ್ಮ ಮತ್ತು ಕುಟುಂಬಿಕರ ಆಸ್ತಿ ಪಾಸ್ತಿಗಳ ದೃಢೀಕೃತ ವಿವರಗಳನ್ನು ಸ್ಪರ್ಧಿಸುವಾಗ ಮತ್ತು  ಗೆದ್ದ ಬಳಿಕ  ವರ್ಷಂಪ್ರತಿ ನೀಡುವುದನ್ನು ಕಡ್ಡಾಯಗೊಳಿಸಬೇಕು. ನೀಡದೇ ಇದ್ದರೆ ಅವರ ಸದಸ್ಯತ್ವವನ್ನು ರದ್ದುಗೊಳಿಸುವ ಅಧಿಕಾರವು ಸಂಬಂಧಪಟ್ಟ ಅಧಿಕಾರಿಗೆ ಇರಬೇಕು.
  7. ಪ್ರಸ್ತುತ ಕರ್ನಾಟಕದ ವಿಧಾನ ಪರಿಷತ್ತಿನ ಆಯ್ಕೆಯ ನಿಯಮಗಳನ್ನು ಶಾಸನ ಸಭೆಗೂ, ಸಂಸತ್ ಸಭೆಗೂ ಅನ್ವಯಗೊಳಿಸಬಹುದು.

Friday, 16 September 2011

ಅದ್ವಾನಿಯ ರಥಯಾತ್ರೆಯ ಪ್ರಹಸನ


ಆಪರೇಶನ್ ಕಮಲದ ಮೂಲಕ ಅಧಿಕಾರದ ಪೀಠವನ್ನೇರಿದ ಮಾನ್ಯ ಯೆಡ್ಯೂರಪ್ಪನವರು ಏರಿದ್ದ ಪೀಠವನ್ನು ಉಳಿಸಿಕೊಳ್ಳುವುದು ತಮ್ಮ ಹಕ್ಕು ಎಂಬಂತೆ ವರ್ತಿಸುತ್ತಾ ರಾಜ್ಯಪಾಲರು, ಲೋಕಾಯುಕ್ತರು, ನ್ಯಾಯಾಲಯಗಳು ಮುಂತಾದವರನ್ನೆಲ್ಲಾ ಕಡೆಗಣಿಸಿ, ತಮ್ಮ ಅಧಿಕಾರಕ್ಕೆ ಏನೆಲ್ಲಾ ಒಳಪಟ್ಟಿದೆಯೋ ಆ ಎಲ್ಲ ಕ್ರಮಗಳನ್ನು ಕೈಗೊಂಡರೂ ಸಹಾ ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಇದೀಗ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ತನ್ನ ವರ್ತನೆಗೆ ತಕ್ಕ ಉತ್ತರ ನೀಡಬೇಕಾಗಿದೆ. ಅವರ ಜೊತೆಯಲ್ಲೇ ಅವರ ಮಂತ್ರಿಮಂಡಲದಲ್ಲಿ ಮುಖ್ಯ ಖಾತೆಗಳನ್ನು ವಹಿಸಿಕೊಂಡಿದ್ದ  ಜನಾರ್ಧನ ರೆಡ್ಡಿ ಮತ್ತವರ ಸಂಬಂಧಿ ಶ್ರೀನಿವಾಸ ರೆಡ್ಡಿಯವರು ಕರ್ನಾಟಕದಲ್ಲಿ ಎಷ್ಟು ಹಾರಾಡಿ ಕಣ್ಣ ಮುಚ್ಚಾಲೆ ಆಡಿದರೂ ಆಂಧ್ರ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಅವ್ಯವ್ಯವಹಾರಗಳ ತನಿಖೆಗೆ ನೇಮಿಸಲ್ಪಟ್ಟ ಸಿಬಿಐ ತನಿಖಾ ತಂಡದ ಕ್ಷಿಪ್ರ ಕಾರ್ಯಾಚರಣೆಯಿಂದ ಅಕ್ರಮಗಳನ್ನು ಅಡಗಿಸಲಾಗದೆ ಬಂದನಕ್ಕೆ ಒಳಗಾಗಬೇಕಾಯ್ತು. ಅವರ  ಮೇಲಿರುವ ಆರೋಪಗಳು ಗಂಬೀರ ಸ್ವರೂಪದವುಗಳೂ, ಅಪಾರ ಮೊತ್ತದ ಅಂತರರಾಷ್ಟ್ರೀಯ ಅವ್ಯವಹಾರ, ಹವಾಲ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಭಂದಪಟ್ಟವುಗಳೂ ಆದುದರಿಂದ ಜಾಮೀನು ಕೂಡಾ ನಿರಾಕರಿಸಲ್ಪಟ್ಟು ಜೈಲಲ್ಲೇ ಬಹುಕಾಲ  ಬಂದನದಲ್ಲಿರಬೇಕಾಗಿ ಬಂದಿದೆ. ದೇಶದ ಸಂಪತ್ತನ್ನು ದರೋಡೆ ಮಾಡಿ ಚೈನಾ, ಪಾಕಿಸ್ಥಾನ, ಮುಂತಾದ ವಿದೇಶಗಳಿಗೆ ವಿವಿಧ ಬಂದರುಗಳ ಮೂಲಕ ರಫ್ತು ಮಾಡಿ ಆ ಹಣವನ್ನು ವಿವಿಧ ದೇಶಗಳಲ್ಲಿ ಬಚ್ಚಿಡಲಾಗಿದೆ. ಮಾರಿಷಸ್ ಹಾಗೂ ವರ್ಜಿನ್ ದ್ವೀಪ ಸಹಿತ 6 ವಿದೇಶಿ ಕಂಪೆನಿಗಳನ್ನು ಹೊಂದಿರುವುದು ತಿಳಿದುಬಂದಿದೆ. ಕರ್ನಾಟಕದಲ್ಲೂ ಅಪಾರ ಮೊತ್ತದ ನೈಸರ್ಗಿಕ ಸಂಪತ್ತಿನ ಲೂಟಿ, ಅಕ್ರಮ ಗಣಿಗಾರಿಕೆ, ಅರಣ್ಯ ಕಬಳಿಕೆ, ಜಲ ಸಂಪನ್ಮೂಲದ ದುರುಪಯೋಗ, ಬಡವರ ಆಸ್ತಿಗಳ ಕೊಳ್ಳೆ ಇತ್ಯಾದಿಗಳು ನಡೆದಿರುವುದು ಬೆಳಕಿಗೆ ಬಂದಿದೆ. ಬಳ್ಳಾರಿಯಲ್ಲಿ ನಿರ್ಮಿಸಲ್ಪಟ್ಟ ಅರಮನೆಯಂಥಾ ಭವ್ಯ ಬಂಗಲೆ ಮತ್ತು ಅದರೊಳಗೆ ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವ ಸ್ವರ್ಣ ಖಚಿತ ಆಸನಗಳು, ಚಿನ್ನ ಬೆಳ್ಳಿ ಒಡವೆ, ಪಾತ್ರೆ ಪಗಡಿಗಳು, ಅನೇಕ ವಿದೇಶಿ ನಿರ್ಮಿತ ಐಷರಾಮೀ ಹೆಲಿಕಾಪ್ಟರು, ಕಾರುಗಳು ಇದ್ದವುಗಳನ್ನು ಸ್ವಾಧೀನಪಡಿಸಲಾಗಿವೆ. ಒಬ್ಬ ಸಾದಾ ಪೋಲೀಸ್ ಪೇದೆಯ ಮಗನಾಗಿದ್ದು ಸೈಕಲಿನಲ್ಲಿ ಓಡಾಡುತ್ತಿದ್ದ ಮತ್ತು ಕೇವಲ ಹೈಸ್ಕೂಲ್ ವಿದ್ಯೆಯನ್ನಷ್ಟೇ ಹೊಂದಿದ ಜನಾರ್ಧನ ರೆಡ್ಡಿ ಮತ್ತು ಅವನ ಸಹೋದರರು ಆರೇಳು ವರ್ಷಗಳ ಅವಧಿಯೊಳಗೆ ಇಷ್ಟೊಂದು ಸಂಪತ್ತನ್ನು ಸಂಪಾದಿಸಿದ್ದುದ್ದಾದರೂ ಹೇಗೆ ಎನ್ನುವುದರ ವಿವರಣೆಯನ್ನು ಅವರು ಕೊಡಬೇಕಿದೆ. ಮಾಜೀ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡುರವರು ಮತ್ತು ಅವರ ಸುಪುತ್ರ ಕಟ್ಟಾ ಜಗದೀಶ್ ಕೂಡಾ ಭೂ ಹಗರಣದಲ್ಲಿ ಸದ್ಯಕ್ಕೆ ಜೈಲಲ್ಲೇ ನೆಲೆಯೂರ ಬೇಕಾಗಿದೆ. ಅರಣ್ಯ ಸಚಿವ ಯೋಗೇಶ್ವರ್ ರವರು ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ. ಯೆಡ್ಯೂರಪ್ಪನವರೂ ಬಂಧನದ ಸರದಿಯಲ್ಲಿದ್ದಾರೆ. ಇಷ್ಟೆಲ್ಲಾ ಅವ್ಯವಹಾರಗಳು ಬೆಳಕಿಗೆ ಬಂದರೂ ಅವರ ರಕ್ಷಣೆಗೆ ಬಿಜೆಪಿಯ ವರಿಷ್ಠರು ಮುಂದಾಗುತ್ತಿರುವುದು  ಆ ಪಕ್ಷದ ನೀತಿ ನಿಯಮಗಳಿಗೆ ಹಿಡಿದ ಕನ್ನಡಿಯಾಗಿದೆ.

ರಾಂ ದೇವ್‘ರವರನ್ನು ಮುಂದಿರಿಸಿ ವಿದೇಶಿ ಬೇಂಕುಗಳಲ್ಲಿರುವ ಹಣವನ್ನು ವಶ ಪಡಿಸಿಕೊಳ್ಳುವ ನೆಪದಲ್ಲಿ ದೇಶದಾದ್ಯಂತ ಅಶಾಂತಿ ಹುಟ್ಟಿಸಿ ಜನಜೀವನ ಅಸ್ತವ್ಯಸ್ತಗೊಳಿಸಿ ಅಧಿಕಾರವನ್ನು ಕಬಳಿಸುವ ಹುನ್ನಾರವನ್ನು ಬಿಜೆಪಿ ಹೊಂದಿತ್ತು ಎಂಬುದು ಅವರನ್ನು ಬಂಧಿಸಿದ ಪ್ರಹಸನದಲ್ಲಿ ಬಹಿರಂಗವಾಗಿತ್ತು. ಆ ಬಳಿಕ ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ದದ ಚಳುವಳಿಯಲ್ಲಿ ನುಸುಳಿಕೊಂಡು ಅವಕಾಶಕ್ಕಾಗಿ ಹವಣಿಸುತ್ತಿದ್ದುದೂ ಬೆಳಕಿಗೆ ಬಂತು. ಅಧಿಕಾರವಿರುವಲ್ಲೆಲ್ಲ ಮಂತ್ರಿವರ್ಯರ ಮತ್ತು  ಅಧಿಕಾರಿಗಳ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ಪಕ್ಷ ಇದೀಗ ಭ್ರಷ್ಟಾಚಾರವನ್ನು ತೊಲಗಿಸುವ ನೆಪದಲ್ಲಿ ಅಧ್ವಾನಿಯವರ ನೇತೃತ್ವದಲ್ಲಿ ರಥಯಾತ್ರೆ ಪ್ರಾರಂಭಿಸುವುದಾಗಿ ಹೇಳುತ್ತಿದೆ. ಅಣ್ಣಾ ಹಜಾರೆಯವರು ಈ ಯಾತ್ರೆಯನ್ನು ಬರೇ ರಾಜಕೀಯ ಗಿಮಿಕ್ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹೊರತು ಪಡಿಸಿ ಇತರ ಯಾವುದೇ ಭ್ರಷ್ಟಾಚಾರ ರಹಿತ ಪಕ್ಷಗಳಿಗೆ ತಾನು ಬೆಂಬಲ ನೀಡುವೆನು ಎಂಬ ಅಣ್ಣಾ ಹಜಾರೆಯವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಅವರಿಗೆ ಕಮ್ಯುನಿಷ್ಟ್ ಪಕ್ಷಗಳು ಮತ್ತು ಎಡ ಪಕ್ಷಗಳು ಸಹಕರಿಸಿ ಜನಜಾಗೃತಿಯನ್ನು ಉಂಟುಮಾಡುವ ಅಗತ್ಯವಿದೆ. ಜನಜಾಗೃತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡು ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಾ ನಮ್ಮ ದೇಶವನ್ನು ಇಂದು ಕಾಡುತ್ತಿರುವ ಭ್ರಷ್ಟಾಚಾರ ಮತ್ತು ಕೋಮುವಾದ ಪ್ರೇರಿತ ಬಲ ಪಂಥೀಯ ದಾಳಿ ದಬ್ಬಾಳಿಕೆಗಳನ್ನು ವಿಫಲಗೊಳಿಸಲು ಮುಂದಾಗಬೇಕೆಂದು ಅಪೇಕ್ಷಿಸುತ್ತೇವೆ.

Monday, 22 August 2011

ಜನ ಲೋಕಪಾಲ್ ಒಂದೇ ಸಾಲದು; ಸರ್ವರಿಗೂ ನೈಜ ಅಧಿಕಾರ ದೊರೆಯಲಿ


ನಾವಿಂದು ಬಹು ದೊಡ್ಡ ಜನಾಂದೋಲನವನ್ನು ಕಾಣುತ್ತಿದ್ದೇವೆ. ಇದು ಪೂರ್ಣ ಸ್ವಾತಂತ್ರ್ಯದ ಎರಡನೇ ಆಂದೋಲನ ಎಂದು ಈಗಾಗಲೇ ಕರೆಯಲ್ಪಟ್ಟಿದೆ. ಈ ಆಂದೋಲನಕ್ಕೆ ದುರಾಳಿತ ನಡೆಸಿದ ಕಾಂಗ್ರೆಸ್ ಪಕ್ಷವು  ಕಾರಣವಾಗಿದ್ದರೆ ಅದರ ದುರ್ಲಾಭವನ್ನು ಪಡೆಯಲು ಅದಕ್ಕಿಂತಲೂ ಭ್ರಷ್ಠವಾದ, ಬಂಡವಾಳವಾದಿ ಪ್ರತಿಗಾಮಿ ಪಕ್ಷಗಳಾದ ಭಾಜಪ ಮತ್ತು ಸಂಘಪರಿವಾರಗಳು ಹೊಂಚುಹಾಕುತ್ತಿರುವುದನ್ನು ಕಾಣುತ್ತೇವೆ. ಅಣ್ಣಾ ಹಜಾರೆಯವರ ತಂಡದವರು ಸಚ್ಚಾರಿತ್ರರು ಎಂದಾದರೂ ಜನಾಂದೋಲನವು ಯಶಸ್ವಿಯಾಗಿ ಅಧಿಕಾರವು ಪ್ರತಿಗಾಮಿ ಪಕ್ಷಗಳ ಹಿಡಿತಕ್ಕೊಳಗಾದರೆ  ಜನರಿಗೆ ಜನಲೋಕಪಾಲ ಮಸೂದೆಯಿಂದ  ಎಷ್ಟು ಒಳಿತು ಆಗಬಲ್ಲುದೋ ಅದರ ಶತ ಪಾಲು ಸಂಕಷ್ಟಗಳು ಬಂದೊದಗಿ ಸರಿಮಾಡಲಾಗದ ದುಃಸ್ಥಿತಿಯು ಬಂದೊದಗಬಹುದೆಂದು ಈ ಸಂದರ್ಭದಲ್ಲಿ ಜನರಿಗೆ ಮನಗಾಣಿಸುವುದು ಅವಶ್ಯವಾಗಿದೆ.  ಇತ್ತೀಚೆಗೆ ರಾಮ್‌ದೇವ್ ರವರ ಸತ್ಯಾಗ್ರಹದ ಪ್ರಹಸನವನ್ನು  ನಾವು ಕಂಡಿದ್ದೇವೆ. ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ಅಧಿಕಾರವನ್ನು ಕಸಿಯುವ ಸಂಚನ್ನು ಸಂಘಪರಿವಾರದವರು ರೂಪಿಸಿದ್ದದ್ದು ಬಯಲಾದುದನ್ನು ನಾವು ಅರಿತಿದ್ದೇವೆ. ಆ ಸಂಚಿನ ರೂವಾರಿಗಳಾದ ಅರೆಸ್ಸೆಸ್ ಮತ್ತು ಸಂಘಪರಿವಾರದವರು ಅಣ್ಣಾ ಹಜಾರೆಯವರ ಗುಂಪಿನೊಳಗೂ ನುಸುಳುವ ಪ್ರಯತ್ನವಾಗಿ ತಮ್ಮ ಸಹಕಾರವನ್ನು ಈಗಾಲೇ ಪ್ರಕಟಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಾಂತಿಪ್ರಿಯ ನಾಗರಿಕರು ಜಾಗೃತರಾಗಿದ್ದು ಅಂತಹ ವಿನಾಶಕಾರಿ ದುಃಶ್ಶಕ್ತಿಗಳನ್ನು ದೂರವಿಟ್ಟು ಶಾಂತ ರೀತಿಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುವ ಅಗತ್ಯವು ಬಹಳವಿದೆ.

ದೇಶದ ಸ್ವಾತಂತ್ರ್ಯದ 'ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು' ಎಂಬ ಆದರ್ಶವು ನಿಜವಾಗಬೇಕಿದ್ದರೆ ದೇಶದ ಸರ್ವ ಸಂಪತ್ತು, ನೆಲ, ಜಲ, ಉತ್ಪಾದನೆ, ರವಾನೆ, ವಿತರಣೆಗಳೆಲ್ಲವೂ ಸಂಪೂರ್ಣವಾಗಿ ಜನರ ನಿಯಂತ್ರಣಕ್ಕೆ ಒಳಪಡಬೇಕು. ಇವುಗಳ ಖಾಸಗೀಕರಣವನ್ನು ಕೈಬಿಟ್ಟು ಉತ್ಪತ್ತಿಯಾಗುವ ಸಂಪತ್ತಿನ ವಿತರಣೆಯು ಸಮಾನವಾಗಬೇಕು. ಆಡಳಿತಾಧಿಕಾರವನ್ನು ವಿಕೇಂದ್ರೀಕರಣಗೊಳಿಸಿ ಜನಹಿತ ಸಹಕಾರಿ ಸಂಘ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು. ಆಗ ಮಾತ್ರ ಬಡತನವು ಇಲ್ಲವಾಗಿ ಭ್ರಷ್ಟಾಚಾರವು ಸಂಪೂರ್ಣವಾಗಿ ತೊಲಗುವುದು. ನಮ್ಮ ಸ್ವಾತಂತ್ರ್ಯದ ಗುರಿ ಅದಾಗಬೇಕು. ಆ ಗುರಿಯನ್ನಿಟ್ಟುಕೊಂಡು ಸರ್ವಸಮಾನತೆಯ ಸ್ವಾತಂತ್ರ್ಯ ಗಳಿಸುವವರೆಗೆ ಚಳುವಳಿಯನ್ನು ಮುನ್ನಡೆಸೋಣ. ವ್ಯತಿರಿಕ್ತವಾಗಿ ದೇಶದ ಉತ್ಪಾದನೆಯ ಸಂಪತ್ತಿನ ಬಹು ಪಾಲು  ಕೆಲವೇ ಜನರ ಸೊತ್ತಾಗುತ್ತಾ ಬಹು ಜನರ ಪಾಲಿಗೆ ಅಲ್ಪಾಂಶವೇ ದೊರಕಿ ಶ್ರೀಮಂತರ ಮತ್ತು ಬಡವರ ಅಂತರವು ಬಹು ವೇಗದಿಂದ ಹೆಚ್ಚುತ್ತಾ ಹೋದುದೇ ಭ್ರಷ್ಟಾಚಾರವು ತಾರಕಕ್ಕೇರುವುದಕ್ಕೂ, ಬಹು ಸಂಖ್ಯಾತ ಬಡ ಜನರ ಸಂಕಷ್ಟಗಳಿಗೂ ಕಾರಣವಾಯಿತು. ಇದು ಉದಾರಿಕರಣದ ಮತ್ತು ಜಾಗತೀಕರಣದ ಆರ್ಥಿಕ ನೀತಿಯಿಂದಾಗಿ ತೀವ್ರವಾಗಿ ವೃದ್ಧಿಯಾಯಿತು. ಭ್ರಷ್ಟಾಚಾರ ತಡೆ ಕಾನೂನುಗಳು ಎಷ್ಟೇ ಕಠಿಣವಾಗಿದ್ದರೂ ಬಡವರನ್ನು ಹಾಗೂ ನಿರ್ಗತಿಕರನ್ನು ಮಣಿಸಲು ಉಳ್ಳವರಿಗೆ ದಾರಿಗಳು ಹಲವಾರಿವೆ. ಕೋಟ್ಯಾಧೀಶರ ಎದುರು ಜನ ಸಾಮಾನ್ಯನಿಗೆ ಸ್ಪರ್ಧಿಸಲು ಕಾರ್ಯಥಾ ಅಸಾಧ್ಯ  ಕಳ್ಳತನ ಮತ್ತು ಭ್ರಷ್ಟಾಚಾರಕ್ಕೆ ಶಿಕ್ಷೆ ಎಷ್ಟು ಮುಖ್ಯವೋ ಅದಕ್ಕಿರುವ ಅವಕಾಶಗಳನ್ನು ಮತ್ತು ಅವಶ್ಯಕತೆಗಳನ್ನು ಇಲ್ಲವಾಗಿಸುವುದು ಅದಕ್ಕಿಂತಲೂ ಮುಖ್ಯವಾದುದು.

ಎಲ್ಲಿಯವರೆಗೆ ಸಮಾಜದಲ್ಲಿ ಅಸಮಾನತೆ ನೆಲೆಗೊಂಡಿರುವುದೋ ಅಲ್ಲಿಯವರೆಗೆ ಭ್ರಷ್ಟಾಚಾರ ಒಂದಲ್ಲ ಒಂದು ರೂಪದಲ್ಲಿ ಮುಂದುವರಿಯುವುದು. ಇದನ್ನು ಶ್ರಮಜೀವಿಗಳು, ವಿದ್ಯಾರ್ಥಿಗಳು, ಯುವಜನರು,  ರೈತರು, ಸಾರ್ವಜನಿಕರೆಲ್ಲರೂ ಮನಗಂಡು ಕಾರ್ಯೋನ್ಮುಖರಾಗಬೇಕು. ಸರ್ವ ಸಮಾನತೆಯ ಸ್ವಾತಂತ್ರ್ಯದ ಆದರ್ಶವನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಧೋರಣೆ ಮತ್ತು ಬದ್ದತೆ ಉಳ್ಳ ಪಕ್ಷಗಳೆಂದರೆ ಕಮ್ಯುನಿಸ್ಟ್ ಪಕ್ಷಗಳು ಮಾತ್ರ. ದುರದೃಷ್ಟವಶಾತ್ ಇವುಗಳು ಆ ಧೋರಣೆಗಳನ್ನು ಅನುಷ್ಠಾನಗೊಳಿಸುವ ಕಾರ್ಯತಂತ್ರಗಳಲ್ಲೇ ಭಿನ್ನಾಭಿಪ್ರಾಯ ಹೊಂದಿ ವಿಭಜನೆಗೊಂಡು ಬಳಿಕ ನಿಶ್ಶಕ್ತಗೊಂಡದ್ದು ನಮ್ಮ ದುರಂತ. ಈಗಿನ ಈ ಅಪಾಯಕಾರಿ ವಿಷಮಯ ಪರಿಸ್ಥಿತಿಯಲ್ಲಿ ಆ ಪಕ್ಷಗಳು ಕಾರ್ಯೋನ್ಮುಖರಾಗಬೇಕಾಗಿದೆ ಮತ್ತು ಪ್ರಭುತ್ವವನ್ನು ದುಷ್ಟ ಶಕ್ತಿಗಳು ಷಡ್ಯಂತ್ರಗಳ ಮೂಲಕ ವಶಪಡಿಸಿಕೊಳ್ಳುವ ಅಪಾಯವನ್ನು ತಡೆಯುವ ಪ್ರಯತ್ನವನ್ನು ಮಾಡಬೇಕಾಗಿದೆ. ವಿಭಜನೆಗೊಂಡ ಕಮ್ಯುನಿಸ್ಟ್ ಪಕ್ಷಗಳು ವಿಲೀನಗೊಂಡು ಪ್ರಜಾಪ್ರಭುತ್ವವಾದಿ ಮತ್ತು  ಸಮಾಜವಾದಿ ಪಕ್ಷಗಳ ಒಕ್ಕೂಟವನ್ನು ರಚಿಸಿ ಜನಪರ ಸರಕಾರದ  ರಚನೆಗೆ ಕಾರ್ಯತಂತ್ರಗಳನ್ನು ರೂಪಿಸಬೇಕಾಗಿದೆ ಮತ್ತು ಈ ಜನಾಂಧೋಲನದಲ್ಲಿ ಭಾಗವಹಿಸಿ ಅದರ ದಿಕ್ಕು ಸರಿದಾರಿಯಲ್ಲಿ ಸಾಗುವಂತೆ ಪ್ರಯತ್ನಿಸಿ ಜನಲೋಕಪಾಲ್ ಮಸೂದೆಯು ಲೋಕ ಸಭೆಯಲ್ಲಿ ಮಂಡನೆಯಾಗಿ ಅದು ಶಾಸನವಾಗುವಂತೆ ಸರ್ವ ಪ್ರಯತ್ನವನ್ನು ಮಾಡುವುದರೊಂದಿಗೆ ಸರ್ವಜನರಿಗೆ ಸರ್ವಸಮಾನತೆ ದೊರಕುವವರೆಗೆ ವಿರಮಿಸದಿರಲಿ ಎಂದು  ನಾವು ಹಾರೈಸುತ್ತೇವೆ.

Thursday, 18 August 2011

ಉರುಳು ಸೇವೆಯ ಬದಲಿಗೆ ಜನಸೇವೆ ಮಾಡಿ


ಕಾಂಗ್ರೆಸ್ ಅಧ್ಯಕ್ಷೆ  ಶ್ರೀಮತಿ ಸೋನಿಯಾ ಗಾಂಧಿ, ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಪರಿಣತ ತಜ್ಞರ ಚಿಕಿತ್ಸೆಯನ್ನು ಪಡೆಯುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರಲ್ಲಿ ಸದ್ಭಾವನೆಯುಳ್ಳವರೆಲ್ಲರೂ ಅವರು ಶೀಘ್ರ ಗುಣಮುಖರಾಗಲಿ ಎಂಬ ಕಳಕಳಿಯನ್ನು ಹೊಂದಿರುವುದೂ ಪ್ರಕಟವಾಗಿದೆ. ಅದು ಸಹಜವೂ ಹೌದು. ಅಮೆರಿಕಾದ ತಜ್ಞ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಮತಿ ಸೋನಿಯಾ ಗಾಂಧಿಯವರಾಗಲಿ, ಚಿಕಿತ್ಸೆಯನ್ನು ನೀಡುವ ವೈದ್ಯರಾಗಲಿ ಯಾವುದೇ ದೇವಾಲಯಗಳಲ್ಲಿ, ಇಗರ್ಜಿ, ಮಸೀದಿಗಳಲ್ಲಿ ಯಾವುದೇ ತರದ ಹರಕೆಯನ್ನಾಗಲೀ ಪ್ರಾರ್ಥನೆಯನ್ನಾಗಲೀ ಮಾಡಿಕೊಂಡ ವರದಿ ಪ್ರಕಟವಾಗಲಿಲ್ಲ. ವೈದ್ಯರು ವೈಜ್ಞಾನಿಕ ಚಿಕಿತ್ಸಾ ಕ್ರಮಗಳನ್ನು ಮಾತ್ರ ಅನುಸರಿಸಿ ಸೋನಿಯಾ ಗಾಂಧಿಯವರನ್ನು ಗುಣಪಡಿಸಲು ತಮ್ಮ ಶಕ್ತಿ ಮೀರಿ ವೈಜ್ಞಾನಿಕ ಕ್ರಿಯೆಗಳಲ್ಲಿ ಮಗ್ನರಾಗಿದ್ದಾರೆ.

ಆದರೆ ಸೋನಿಯಾ ಗಾಂಧಿಯವರು ಗುಣಮುಖರಾಗುವಂತೆ ನಮ್ಮಲ್ಲಿಯ ಕೆಲವು ದೇವಾಲಯಗಳಲ್ಲಿ ಉರುಳು ಸೇವೆ ನಡೆಸುವ ಹಾಸ್ಯಾಸ್ಪದ ಮತ್ತು ನಾಟಕೀಯ ಕ್ರಿಯೆಗಳು ನಡೆಯುತ್ತಿವೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಮುಖ್ಯವಾಗಿ ಮಾಜೀ ಸಂಸತ್ ಸದಸ್ಯ ಮತ್ತು ಚುನಾವಣೆಗಳಲ್ಲಿ ಸೋತು ಈಗ ಬಹುತೇಕ ಮೂಲೆಗುಂಪಾಗಿರುವ ಜನಾರ್ಧನ ಪೂಜಾರಿಯವರು ನಗರದ ಕುದ್ರೋಳಿ ಗೋಕರ್ಣನಾಥೇಶ್ವರ ಹಾಗೂ ಇತರ ದೈವದೇವರುಗಳಿಗೆ ಪ್ರಾರ್ಥಿಸಿ, ಉರುಳು ಸೇವೆಯನ್ನು ಆರಂಭಿಸಿದ್ದಾರೆ. ಇದರ ಹಿಂದೆ ಸೋನಿಯಾ ಗಾಂಧಿಯವರು ಗುಣಮುಖರಾಗಬೇಕೆಂಬ ಕಾಳಜಿಗಿಂತಲೂ ತಮ್ಮ ರಾಜಕೀಯ ಪುನರುಜ್ಜೀವನಕ್ಕೆ ಈ ಸಂದರ್ಭವನ್ನು  ಬಳಸಿಕೊಳ್ಳುವ ಪ್ರಯತ್ನವು ಕಾಣುತ್ತಿದೆ. ಇವರಿಗೆ ಹಿಂದೆ ಜೆಡಿಯಸ್‌ನಲ್ಲಿ ಇದ್ದು ಅಲ್ಲಿ ಬೇಳೆ ಬೇಯಿಸಲಾಗದೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಸೇರಿಕೊಂಡು ಗುರುತಿಸಿಕೊಳ್ಳಲು ಹವಣಿಸಿ ಪ್ರಚಾರ ಮತ್ತು ಒಲವು ಗಳಿಸಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿರುವ ಐವನ್ ಡಿಸೋಜರೂ ಸಾಥ್ ನೀಡಿದ್ದಾರೆ. ಅಲ್ಲದೆ ಇತರ ಕೆಲವು ಚೇಲಗಳನ್ನೂ ಸೇರಿಸಿ ಉರುಳಿದ್ದಾರೆ. ಶಾಸಕ ಯುಟಿ ಖಾದರ್‌ರವರೂ ಜತೆಗಿದ್ದು ಕಾರ್ಯಗಳಿಗೆ ಮೆರಗು ನೀಡಿದ್ದಾರೆ. ರಾಜಕಾರಣವನ್ನು ಯಾವುದೇ ಧರ್ಮದ ಹರಕೆಯಿಂದ ಸಾಧಿಸುವ ಮನೋಧರ್ಮವನ್ನು ಅನ್ಯಧರ್ಮೀಯರು ಹೇಗೆ ಸಮರ್ಥಿಸುವರೋ ತಿಳಿಯದು.


ಮೂಢನಂಬಿಕೆಗಳನ್ನು ಇನ್ನೂ ಪ್ರಮಾಣಿಕವಾಗಿ ಬಳಕೆಮಾಡುವ ಅವಿದ್ಯಾವಂತ, ಬಡ ಜನ ಸಮುದಾಯದವರು ಅನುಸರಿಸಿದರೆ ಅಂಥವರನ್ನು ಕ್ಷಮಿಸಬಹುದು. ಆದರೆ ವಿದ್ಯಾವಂತರು, ರಾಜಕೀಯ ಕಾರ್ಯಕರ್ತರು ತಮ್ಮ ಮಹತ್ವಾಕಾಂಕ್ಷೆಗಳನ್ನು ಮೂಢ ಕಾರ್ಯಾಚರಣೆಗಳ ಮೂಲಕ ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣುವಾಗ ಅಸಹ್ಯವೆನಿಸುತ್ತದೆ, ಅದು ಅಕ್ಷಮ್ಯವಾಗುತ್ತದೆ. ಜನಾರ್ಧನ ಪೂಜಾರಿಯವರ ಮೊದಲನೆಯ ಪಾರ್ಲಿಮೆಂಟರಿ ಚುನಾವಣೆಯಿಂದ ತೊಡಗಿ ಕೊನೆಯ ಸೋಲಿನ ತನಕ ಕೂಲಂಕಶವಾಗಿ ಅಧ್ಯಯನ ಮಾಡಿ ತಿಳಿದುಕೊಂಡಿರುವ ನಮ್ಮಂಥವರಂತೂ ಅವರ ಈ ವರ್ತನೆಯನ್ನು ಖಂಡಿಸದೆ ಬಿಟ್ಟರೆ, ಮೂಢನಂಬಿಕೆಗೆ ಚಾಲನೆ ನೀಡುವ ಇಂತಹ ಆಟಗಳನ್ನು ಕಂಡೂ ಕಾಣದಂತೆ ಸುಮ್ಮನಿದ್ದರೆ ಅದಕ್ಕೆಲ್ಲ ಪರೋಕ್ಷ ಪ್ರೋತ್ಸಾಹ ನೀಡಿದಂತಾದೀತು. ಇನ್ನಾದರೂ ಇಂಥಾ ಮೂಢ ಕಾರ್ಯಾಚರಣೆಗಳ ಮೂಲಕ ಪ್ರಚಾರಪ್ರಿಯತೆಗೆ ಹವಣಿಸದೆ, ನೇರ ಮಾರ್ಗಗಳಲ್ಲಿ ಜನಪರ ಕಾರ್ಯಗಳನ್ನು ಕೈಗೆತ್ತಿ ಬಡಜನರ ಮೌಢ್ಯತೆಯನ್ನು ಹೋಗಲಾಡಿಸುವಂಥಾ ಕಾರ್ಯ ವೈಖರಿಯನ್ನು ರೂಪಿಸಿಕೊಂಡು ಕಾರ್ಯನಿರತರಾಗುವರೆಂದು  ಹಾರೈಸುತ್ತೇವೆ.

ಬಿನಾಯಕ್ ಸೆನ್ ಅವರನ್ನು ಬೆಂಬಲಿಸಿ

ಮಾನವ ಹಕ್ಕುಗಳ ಹೋರಾಟಗಾರ ಡಾ. ಬಿನಾಯಕ್‌ಸೇನ್ ಅವರಿಗೆ ಚತ್ತೀಸ್‌ಘಡ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದುದಕ್ಕೆ ವಿರುದ್ದವಾಗಿ ದೇಶದಾದ್ಯಂತ ಖಂಡನೆಗಳು ವ್ಯಕ್ತವಾಗಿವೆ. ಈ ಶಿಕ್ಷೆಯ ವಿರುದ್ಧ ಅವರ ಮೇಲ್ಮನವಿಯನ್ನು ಉಚ್ಛ ನ್ಯಾಯಾಲಯವೂ ತಿರಸ್ಕರಿಸಿತ್ತು. ಆ ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಅವರು ನೀಡಿದ್ದ ಜಾಮೀನು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡು ಅವರಿಗೆ ಜಾಮೀನು ನೀಡಿದೆ ಮಾತ್ರವಲ್ಲದೆ ಅವರು ಯಾವುದೇ ದೇಶದ್ರೋಹದ ಕೆಲಸವನ್ನು ಮಾಡಿರುವುದು ತೋರುವುದಿಲ್ಲ ಎಂದು ಪರಿಗಣಿಸಿ ಅವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಆಜ್ಞಾಪಿಸಿರುವುದು ಮಾನವ ಹಕ್ಕುಗಳ ಹೋರಾಟಗಾರರೆಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಿನಾಯಕ್‌ಸೇನ್ ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸಿದ್ದಕ್ಕೆ ಮತ್ತು ತನ್ನ ಬಿಡುಗಡೆಗೆ ಮಾನವ ಹಕ್ಕುಗಳ ಸಂರಕ್ಷಣೆಗೆ ತಾವು ನಡೆಸಿದ ಹೋರಾಟದ ಸಲುವಾಗಿ ತನಗೆ ದ.ಕೋರಿಯಾ ಸರಕಾರವು ನೀಡಿದ  ಪ್ರತಿಸ್ಠಿತ ಗ್ವಾಂಗ್ಜು ಪ್ರಶಸ್ತಿಯನ್ನು ಸ್ವೀಕರಿಸುವ ಸಂಧರ್ಭದಲ್ಲಿ ಅವರು ಭಾರತದಲ್ಲಿ ನಡೆಯುತ್ತಿರುವ ನರಮೇಧ ಹಾಗೂ ಮಾನವ ಹಕ್ಕುಗಳ ದಮನದ ಬಗ್ಗೆ ತನ್ನ ಅನುಭವದ ಕಹಿ ಅನಿಸಿಕೆಗಳನ್ನು ವಿವರಿಸುತ್ತಾ ಮಾಡಿದ್ದ ಭಾಷಣವು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ನಾವು ಓದಿರುವೆವು.

ಅವರು ಮಾಡಿದ್ದಾದರೂ ಏನು? ರಾಜ್ಯಕ್ಕೆ ವಿದೇಶಿ ಬಂಡವಾಳ ಹರಿದು ಬರುವ ಹಾಗೆ ಮಾಡಲು ಪ್ರಭುತ್ವವು ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಕೈಜೋಡಿಸಿ ಗಣಿಗಾರಿಕೆಗೆ ಅರಣ್ಯಭೂಮಿಯನ್ನು ನೀಡಿ ಶತಮಾನಗಳಿಂದ ಅಲ್ಲಿ ವಾಸಮಾಡಿಕೊಂಡಿದ್ದ  ಆದಿವಾಸಿಗಳ ಬದುಕುವ ಹಕ್ಕನ್ನು ಕಸಿದುಕೊಂಡು ನಿರ್ವಸಿತರನ್ನಾಗಿ ಮಾಡಿರುವುದನ್ನು ವಿರೋಧಿಸುವವರೊಡನೆ ಕೈ ಜೋಡಿಸಿದ್ದಾಗಿದೆ. ನಗರದಲ್ಲಿ ಸಿಗಬಹುದಾದ ಐಶಾರಾಮಿ ಬದುಕನ್ನು ನಿರ್ಲಕ್ಷಿಸಿ ಎಲ್ಲಾ ನಾಗರಿಕ ಸೌಕರ್ಯಗಳಿಂದ ವಂಚಿತರಾದ ಅರಣ್ಯವಾಸಿಗಳಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಾ ಅವರ ಸಾವು ನೋವುಗಳಿಗೆ ಸ್ಪಂದಿಸುತ್ತಾ ಅವರ ಹಕ್ಕುಗಳ ಅರಿವನ್ನು ಅವರಿಗೆ ನೀಡುತ್ತಾ ಅವರೊಂದಿಗೆ ಬದುಕಿರುವುದೇ ಅಗಿದೆ. ಅವರ ಆ ಉದಾತ್ತ ಸೇವೆಗೆ ಪ್ರಭುತ್ವದಿಂದ  ಅವರಿಗೆ ದಕ್ಕಿದ ಪುರಸ್ಕಾರ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಮಾವೋವಾದಿ, ದೇಶದ್ರೋಹಿ ಎಂದು ಪರಿಗಣಿಸಿ ಜೀವಾವಧಿ ಜೈಲು ಶಿಕ್ಷೆ! ಇಂತಹ ಉದಾತ್ತ ಕಾರ್ಯಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳನ್ನು ದೇಶದ್ರೋಹಿಗಳೆಂದು ಬಣ್ಣಿಸಿ ದಮನಿಸುವ ಕಾರ್ಯ ವೈಖರಿಯನ್ನು ಭಾರತದಿಂದ ತೊಡೆದು ಹಾಕಬೇಕೆಂದು ದೇಶದಾದ್ಯಂತ ಪ್ರಗತಿಪರ ಸಾರ್ವಜನಿಕ ಸಂಘಸಂಸ್ಥೆಗಳು, ಎಡಪಕ್ಷಗಳು ಚಳುವಳಿಯನ್ನು ಕೈಗೆತ್ತಿಗೊಳ್ಳಬೇಕೆಂದು ನಾವು ಹಾರೈಸುತ್ತೇವೆ.

Wednesday, 17 August 2011

ಬೀದಿ ನಾಯಿಗಳ ಕಾಟ


ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯೊಳಗೆ ಮಾನವರಿಗಿಲ್ಲದ ರಕ್ಷಣೆಯನ್ನು ಬೀದಿ ನಾಯಿಗಳಿಗೆ ಪ್ರಾಣಿದಯೆಯ ಹೆಸರಲ್ಲಿ ನಗರಾಡಳಿತವು ನೀಡುತ್ತಿರುವುದು ಕೂಲಿನಾಲಿ ಮಾಡಿಕೊಂಡು ಬದುಕುತ್ತಿರುವ ಕಡು ಬಡವರ ಪಾಲಿಗೆ ಮಾರಕವಾಗಿದೆ. ಇವರ ಮಕ್ಕಳಿಗೆ ಯಾರ ದಯೆಯೂ ಇಲ್ಲ, ಯಾರ ರಕ್ಷಣೆಯೂ ಇಲ್ಲ, ಯಾರ ಪೋಷಣೆಯೂ ಇಲ್ಲ ಎಂದಾಗಿರುವುದು ಆಡಳಿತದ ಧೋರಣೆಯ ಪರಿಣಾಮವಾಗಿದೆ. ಹಳ್ಳಿಗಾಡುಗಳಿಂದ ಹೊಟ್ಟೆಹೊರೆಯಲು ನಗರ ವ್ಯಾಪ್ತಿಯೊಳಗೆ ಬಂದು ಕೂಲಿ ನಾಲಿಯ ಕೆಲಸ ಮಾಡಿಕೊಂಡು ಅಂಗಡಿ ಮುಂಗ್ಗಟ್ಟುಗಳಲ್ಲಿಯೋ ರಸ್ತೆ ಬದಿಗಳಲ್ಲಿಯೋ ಅರೆ ಬರೆ ನಿರ್ಮಾಣವಾಗಿರುವ ಕಟ್ಟಡಗಳ ಇಟ್ಟಿಗೆ ರಾಶಿಗಳೊಳಗೋ ಆಶ್ರಯ ಪಡೆಯುವ ಬಡ ಕೂಲಿ ಕಾರ್ಮಿಕರು ಬೀದಿ ನಾಯಿಗಳ ಕಾಟಗಳಿಗೆ ಬಲಿಯಾಗುತ್ತಿದ್ದಾರೆ, ಅವರ ಹಸುಳೆಗಳನ್ನು ನಾಯಿಗಳು ಎಳೆದೊಯ್ದು ಭಕ್ಷಿಸುತ್ತವೆ. ಇದೇ ಜನೆವರಿ 19ರ ವರದಿಯಂತೆ ಕೆಲವು ನಾಯಿಗಳು ಯಲಹಂಕ ಶಾಲೆಯೊಂದರ ಒಳ ಹೊಕ್ಕು ಅಲ್ಲಿದ್ದ ಕೆಲವು ವಿದ್ಯಾರ್ಥಿಗಳನ್ನೂ  ಶಿಕ್ಷಕರನ್ನೂ ಕಚ್ಚಿ ಘಾಸಿಗೊಳಿಸಿವೆ. ಇಂತಹ ವರದಿಗಳು ಪದೇ ಪದೇ ಪ್ರಕಟವಾಗುತ್ತಲೇ ಇರುತ್ತವೆ. ಜನರು ಪ್ರತಿಭಟನೆ ನಡೆಸಿ ನಗರ ಪಾಲಿಕೆಗೆ ಛೀಮಾರಿ ಹಾಕಿ ತಣ್ಣಗಾಗುತ್ತಾರೆ. ಆದರೆ ಇಂತಹ ಅರಕ್ಷಿತ ಸ್ಥಿತಿಯನ್ನು ಕೊನೆಗಾಣಿಸಲು ಕೈಗೊಳ್ಳುವ ಕ್ರಮಗಳಾವುವೂ ಕಳೆದ ಕೆಲವು ವರ್ಷಗಳಿಂದ ನಮಗೆ ಕಾಣುತ್ತಿಲ್ಲ. ಶ್ರೀಮತಿ ಮೇನಕಾ ಗಾಂಧಿಯವರ ಕಾರುಬಾರಿನಲ್ಲಿ ಅನುಷ್ಠಾನಗೊಂಡ ಬೀದಿ ನಾಯಿಗಳ ಪ್ರಾಣಿ ದಯೆಯ ಕಾನೂನಿನಡಿಯಲ್ಲಿ, ಮಾನವರ ಪಾಲಿಗೆ ಕನಿಷ್ಠ ರಕ್ಷಣೆಯನ್ನೂ, ದುಡಿದು ಬದುಕುವ ಹಕ್ಕನ್ನೂ ಕೊಡಲಾಗದ ನಮ್ಮ ರಾಜ್ಯದಲ್ಲಿ ಬೀದಿ ನಾಯಿಗಳ ಮೇಲೆ ಪ್ರೀತಿ, ಮಮಕಾರವನ್ನು ತೋರಲು ಆಳುವವರು ಗುತ್ತಿಗೆದಾರರನ್ನು ನೇಮಿಸಿ ಅವರನ್ನು ಕೊಬ್ಬಿಸಿ ತಮ್ಮ ಪಾಲನ್ನು ದೃಢೀಕರಿಸಿ ಸಂತುಷ್ಠರಾಗಿರುತ್ತಾರೆ.

ಈಗ ಹೇಗೂ ಮೇನಕಾ ಗಾಂಧಿಯವರನ್ನು ಜನರು ಅಧಿಕಾರದಿಂದ ತೊಲಗಿಸಿದ್ದಾರೆ. ಅವರ ಸುಪುತ್ರನೂ ಮೂಲೆ ಗುಂಪಾಗಿದ್ದಾನೆ. ಆದರೆ ಅವರು ರೂಪಿಸಿದ ಕಾನೂನಿನ ಲಾಭ ಪಡೆಯಲು ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಮುಖ್ಯವಾಗಿ ರೇಬಿಸ್ ರೋಗದ ಚುಚ್ಚುಮದ್ದನ್ನು ಉತ್ಪಾದಿಸುವ  ಕಂಪೆನಿಗಳು ಹವಣಿಸುತ್ತಿದ್ದಾರೆ. ರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿಯಾದಂತೆ ವರ್ಷವೊಂದರಲ್ಲಿ ಲಕ್ಷಾಂತರ ಮಂದಿ ಹುಚ್ಚು ನಾಯಿ ಕಡಿತಕ್ಕೊಳಗಾಗುತ್ತಾರೆ. ತಮ್ಮ ದಂಧೆಯ ಶ್ರೇಯಸ್ಸಿಗಾಗಿ ಗಣಿ ಧಣಿ ಗಳಂತೆ ಲಾಬಿ ಮಾಡಿಕೊಂಡು ಆ ಕಂಪೆನಿಗಳು ಸಾಕಷ್ಟು ಹಣವನ್ನು ನಾಯಿ ಪ್ರಿಯ ಸಂಘ ಸಂಸ್ಥೆಗಳ ಮುಖಂಡರಿಗೆ ಒಪ್ಪಿಸುತ್ತಾರೆ. ನಾಯಿಗಳ ಸಂಖ್ಯೆ ಹೆಚ್ಚಿದಷ್ಠು ಅವರಿಗೆ ಲಾಭ ಹೆಚ್ಚುತ್ತದೆ. ಆದುದರಿಂದ ಅದರ  ಬಾಧಕಗಳೇನೇ ಇರಲಿ ಆ ಕಾನೂನನ್ನು ಬದಲಾಯಿಸದಂತೆ ಅವರು ಬಲವಾಗಿ ಪ್ರತಿಭಟಿಸುತ್ತಾರೆ. ಈಗಿನ ವ್ಯವಸ್ಥೆಯಂತೆ ಬೀದಿನಾಯಿಗಳನ್ನು ಹಿಡಿದು ಕೊಂಡೊಯ್ದು ಸಂತಾನ ಹರಣ ಚಿಕಿತ್ಸೆಗೈದು ಅದೇ ಜಾಗಕ್ಕೆ ಮರಳಿ ಬಿಡಲಾಗುವುದು. ಅವರ ಲೆಕ್ಕಾಚಾರ ಪ್ರಕಾರ ಅವುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬಂದು ಕೊನೆಗೆ ಶೂನ್ಯವಾಗಬೇಕು. ಆದರೆ ಈಗಿನ ಅನುಭವದ ಪ್ರಕಾರ ಮತ್ತು ಅಧಿಕಾರಿಗಳೇ ಇತ್ತೀಚೆಗೆ ಕೊಟ್ಟ ಲೆಕ್ಕದ ಪ್ರಕಾರ ಅವುಗಳ ಸಂಖ್ಯೆ ದಿನೇ ದಿನೇ ಅಧಿಕಗೊಳ್ಳುತ್ತಾ  ದ್ವಿಗುಣ ಗೊಂಡಿದೆಯಂತೆ. ಜನರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದರೂ ನಾಯಿಗಳು ಬಲಿಷ್ಠಗೊಂಡು  ಸಂಖ್ಯೆಯಲ್ಲಿ ಅಧಿಕಗೊಳ್ಳುತ್ತಾ ಜನಸಾಮಾನ್ಯರಿಗೆ, ಮುಖ್ಯವಾಗಿ ದುರ್ಬಲ ವರ್ಗದ ಕೂಲಿ ಕಾರ್ಮಿಕರಿಗೆ, ದುಸ್ವಪ್ನವಾಗಿ ಕಾಡುತ್ತಿವೆ. ಅವುಗಳಿಂದಾಗಿ ಹಲವಾರು ದುರ್ಘಟನೆಗಳು ಸಂಭವಿಸಿದವು, ಕೆಲವು ಜೀವಗಳು ಬಲಿಯಾದವು. ಜನರು ತಾಳ್ಮೆ ಕಳೆದುಕೊಳ್ಳುವ ಮುನ್ನ ಎಚ್ಚೆತ್ತು ತುರ್ತು ಕ್ರಮಕೈಗೊಳ್ಳುವ ಅಗತ್ಯವಿದೆ. ಯಾವುದೋ ಕಾರಣ ಹುಡುಕಿ ಯಾರ ಮೇಲೆಯೋ ಗೂಬೆ ಕೂರಿಸುವುದು ಬೇಡ. ನಾಯಿಗಳ ಜೀವ ಅಮೂಲ್ಯವಲ್ಲ. ಅದೂ ಒಂದು ಪ್ರಾಣಿ ಅಷ್ಟೇ. ಪ್ರಾಣಿ ಹಿಂಸೆ ಮಾಡುವುದು ಬೇಡ. ಆದರೆ ಅವುಗಳಿಗಿಂತ ಮನುಷ್ಯರ ಜೀವ ಅಮೂಲ್ಯ ಅವರ ಬದುಕುವ ಮತ್ತು ದುಡಿಯುವ ಹಕ್ಕುಗಳನ್ನು ಗೌರವಿಸ ಬೇಕಿದೆ. ಐಷರಾಮಿ ಬದುಕು ನಡೆಸುತ್ತಿರುವ ಮತ್ತು  ತಮ್ಮ ಮೋಜಿಗೆ ಸಂಘಗಳನ್ನು ಕಟ್ಟಿಕೊಂಡಿರುವ ಪ್ರಾಣಿದಯಾ ಸಂಘದವರಿಗೆ ಬಾಗಿಲು ರಹಿತ ಕೊಂಪೆಗಳಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕರ ಬವಣೆ ಅರ್ಥವಾಗದು  ತಮಗಿರುವ ಪ್ರಾಣಿದಯೆ ಯನ್ನು ಕಾರ್ಯ ರೂಪಕ್ಕೆ ತರುವ ಜವಾಬ್ದಾರಿ ತಮಗೆ ಇದೆ ಎಂದು ಭಾವಿಸುವುದಾದರೆ ತಮ್ಮ ಸಂಘದ ಮೂಲಕ ತಮ್ಮದೇ ಒಂದು ನಿವೇಶನವನ್ನು ನಿರ್ಮಿಸಿ ಸಾಧ್ಯವಾದಷ್ಟು ಸಂಖ್ಯೆಯ ನಾಯಿಗಳನ್ನು ದತ್ತು ಪಡೆದು ತಮ್ಮ ಅಧೀನದಲ್ಲಿರಿಸಿ ಸಾಕಲಿ. ಮಿಕ್ಕವುಗಳನ್ನು ದಯಾ ಮರಣಕ್ಕೆ ಒಳಪಡಿಸಲಿ.  ಎಷ್ಟು ಮಾತ್ರಕ್ಕೂ ಬೀದಿಗಳಲ್ಲಿ ನಾಯಿಗಳನ್ನು ಬಿಡುವುದನ್ನು ವಿರೋಧಿಸಬೇಕಾಗುತ್ತದೆ.

Tuesday, 26 July 2011

ಭಗವತ್ ಗೀತೆಯನ್ನು ಶಾಲಾಮಕ್ಕಳಿಗೆ ಬೋಧಿಸುತ್ತಿರುವ ಪ್ರಸ್ತಾಪದ ಕುರಿತು ಒಂದು ಅವಲೋಕನ


ಭಗವತ್ ಗೀತೆಯು ಒಂದು ಉತ್ತಮ ಸಾಹಿತ್ಯಿಕ ಕೃತಿ ಎನ್ನುವುದು ನಿಜ ಮತ್ತು ಅದು ಯಾರನ್ನಾದರೂ ಮನ ಮೆಚ್ಚಿಸುವ ಸಾಮರ್ಥ್ಯವಿರುವ ಒಂದು ಸುಂದರ ಕವನ ಗುಚ್ಛವಾಗಿದೆ. ಆದರೆ ಅದರಲ್ಲಿ ಪರಸ್ಪರ ವೈರುಧ್ಯದ ಹಲವು ಆಶಯಗಳು ಮತ್ತು ಉಪದೇಶಗಳು ಅಡಕವಾಗಿವೆ.  ಈ ಗೀತೆಯು ಒಂದು ಧರ್ಮದ ಸಲುವಾಗಿ ನಡೆದ ಧರ್ಮಯುದ್ಧದ ಭಾಗವಾಗಿದೆ ಎಂಬ ಭಾವನೆಯನ್ನು ಹುಟ್ಟಿಸುವುದಕ್ಕೆ ಆರಂಭದಿಂದಲೇ ತಂತ್ರಗಳು ನಡೆದಿದ್ದುದನ್ನು ನಾವು ಕಾಣಬಹುದು. ಇದರಲ್ಲಿ ನಮ್ಮ ನಿಮ್ಮೆಲ್ಲರನ್ನು ಆಕರ್ಷಿಸುವ ಕೃಷ್ಣನು ಬೋಧಿಸುವ ಧರ್ಮ ಯುದ್ಧವು ಅಧರ್ಮದ ವಿರುದ್ಧದ ಯುದ್ದ ಅಲ್ಲ, ಬದಲಿಗೆ ವರ್ಗ ಸಂಘರ್ಷಗಳನ್ನು ವರ್ಣ ಸಂಘರ್ಷಗಳನ್ನಾಗಿ ಚಿತ್ರಿಸಿ ಅದನ್ನು ತೊಡೆದು ಹಾಕುವುದು ಧರ್ಮವೆಂದು ಬೋಧಿಸುವುದು ಮತ್ತು ಒಂದು ವ್ಯವಸ್ಥೆಯನ್ನು ದೃಢಗೊಳಿಸುವ ತಂತ್ರವು ಅದರಲ್ಲಿ ಒಳಗೊಂಡಿರುವುದು ಎನ್ನುವುದನ್ನು  ವಿವೇಚನಾಶೀಲರು ಅರ್ಥೈಸಬಲ್ಲರು.

ತನ್ನ ರಥವು ಯುದ್ಧ ಭೂಮಿಯ ಮದ್ಯೆ ನಿಂತಿರಲು ಅರ್ಜುನನು, ತನ್ನ ಬಾಂಧವರನ್ನು, ಗುರು ಹಿರಿಯರನ್ನು, ಅಣ್ಣ ತಮ್ಮಂದಿರನ್ನು, ಸ್ವಜಾತಿಬಾಂಧವರನ್ನು ಕೊಂದು ರಾಜ್ಯವನ್ನು ಗೆಲ್ಲುವ ಯುದ್ದಕ್ಕೆ ಹೊರಟಿದ್ದೇವೆ, ಈ ಕೆಲಸ ನನ್ನಿಂದಾಗದು ಎನ್ನಲು ಕೃಷ್ಣನು ಅರ್ಜುನನನ್ನು ಯುದ್ದಕ್ಕೆ ಹುರಿದುಂಬಿಸುತ್ತಾನೆ ಮತ್ತು ಅದು ಅವನ ಕರ್ತವ್ಯವೆಂದು ತಿಳಿಸುತ್ತಾ ಅನೇಕ ಧರ್ಮ, ಅಧರ್ಮಗಳ ಬೋಧನೆಗಳನ್ನು ಮಾಡುತ್ತಾನೆ. ಅವುಗಳ ಕೆಲವು ಸಾಲುಗಳು ಇಂತಿವೆ:

ಅಥ ಚೇತ್ತ್ವಮಿಮಂ ದರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ |
ತತ: ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ||

ಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ: |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮೀ ಯುಗೇ ಯುಗೇ ||

ಶ್ರೇಯಾನ್ ಸ್ವಧರ್ಮೋ ವಿಗುಣ್: ಪರಧರ್ಮಾತ್ಸ್ವ್ನುಷ್ಠ್ತಾತಾತ್|
ಸ್ವಧರ್ಮೇ ನಿಧನಂ ಶ್ರೇಯ: ಪರಧರ್ಮೋ ಭಯಾವಹ: ||

ಕರ್ಮಣೈಯವ ಅಧಿಕಾರಸ್ಠೇ ಮಾಫಲೇಷು ಕದಾಚನ:
ಮಾ ಕರ್ಮ ಫಲ ಹೇತುರ್‘ಭು ಮಾತೇ ಸಂಗೋಪ ಕರ್ಮಣಿ ||

ಸರ್ವಧರ್ಮಾನ್ ಪರಿತ್ಯಜ ಮಾಮೇಕಂ ಶರಣಂವೃಜಾ
ಅಹಂ ತವ ಸರ್ವಪಾಪೇಬ್ಸೇ ಮೋಕ್ಷ‘ಇಷ್ಯಾಮಿ ಮಾಶುಜಾ ||

ಶ್ರೀ ಕೃಷ್ಣನು ಅರ್ಜುನನಿಗೆ ಹೇಳುವುದಿದು:

ಒಂದು ವೇಳೆ ನೀನು ಈ ಧರ್ಮಯುದ್ಧವನ್ನು ಮಾಡದೇ ಹೋದರೆ ನೀನು ಸ್ವಧರ್ಮವನ್ನೂ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನು ಗಳಿಸುತ್ತೀ.

ಚಾತುರ್ವರ್ಣ್ಯವೆಂಬ ವರ್ಗಗಳನ್ನು ಸೃಷ್ಠಿಸಿದವನು ನಾನು. ಗುಣ ಕರ್ಮಗಳನ್ನು ನೋಡಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವೆಂಬ ನಾಲ್ಕು ವರ್ಗಗಳಾಗಿ ಈ ಮನುಷ್ಯ ಕುಲವನ್ನು ವಿಂಗಡಿಸಿದವನು ನಾನು ಮತ್ತು ಅದರ ಒಂದು ವಿಭಾಗಕ್ಕೆ ಸೇರಿದವನು ನೀನು ಮತ್ತು ಯುದ್ಧವನ್ನು ಮಾಡುವುದು ನಿನ್ನ ಧರ್ಮ ಅಲ್ಲದೆ ಈಗ ಯುದ್ಧ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ ಮತ್ತು ಯಾವಾಗಲೆಲ್ಲ [ಚಾತುರ್ವರ್ಣ್ಯ] ಧರ್ಮಕ್ಕೆ ಹಾನಿ ಉಂಟಾಗಿ ಅಧರ್ಮವು ಮೇಲೇಳುವುದೋ ಆವಾಗಲೆಲ್ಲಾ ಅದಕ್ಕೆ ಬಲಿಯಾದವರನ್ನೆಲ್ಲಾ ರಕ್ಷಿಸಲಿಕ್ಕೆ ಮತ್ತು ದುಷ್ಕರ್ಮಿಗಳನ್ನು ನಾಶಗೊಳಿಸಲಿಕ್ಕೆ ನಾನು ಕಾಲ ಕಾಲಕ್ಕೆ ಹುಟ್ಟಿ ಬರುತ್ತೇನೆ ಎನ್ನುತ್ತಾನೆ.

ಅಂದರೆ ಶ್ರೀ ಕೃಷ್ಣನೇ ಸೃಷ್ಠಿಸಿದ ಚಾತುರ್ವರ್ಣ್ಯಗಳಲ್ಲಿರುವ ಅಸಮಾನತೆ ಮತ್ತು ಬೇಧಗಳನ್ನು ವಿರೋಧಿಸಿ ಸಮಾನತೆ,  ಸೌಹಾರ್ಧತೆಗಾಗಿ ಸಂಘರ್ಷಿಸುತ್ತಿರುವ ದಲಿತರು, ಹಿಂದುಳಿದವರು, ಅಹಿಂದುಗಳು ಮತ್ತಿತರರನ್ನು ನಾಶಗೊಳಿಸಲಿಕ್ಕೆ ಈಗ ಮತ್ತೆ ಹುಟ್ಟಿಬರಲು ಕಾಲ ಸನ್ನಿಹಿತವಾಗಿದೆ. ಮಹಾಭಾರತ ಯುದ್ಧ ನಡೆದದ್ದೇ ಚಾತುರ್ವರ್ಣ್ಯಗಳ ಧರ್ಮ ಆಧಾರಿತ ಸಮಾಜ ವ್ಯವಸ್ಥೆಯನ್ನು ಸಂರಕ್ಷಿಸುವುದಕ್ಕೇ ಎಂದು ಭಗವತ್ ಗೀತೆಯಲ್ಲಿನ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು.

ಎಲೇ ಅರ್ಜುನ ಎಲ್ಲಾ ಧರ್ಮಗಳನ್ನೂ ನಂಬಿಕೆಗಳನ್ನೂ, ಕರ್ತವ್ಯಗಳನ್ನೂ ಮರೆತು ನನಗೆ ಶರಣಾಗತನಾಗಿ ನಾನು ಬೋಧಿಸಿದಂತೆ ಮಾಡು, ನಾನು ನಿನ್ನನ್ನು ಎಲ್ಲಾ ಪಾಪಗಳಿಂದಲೂ, ಅಧರ್ಮ ವರ್ತನೆಗಳಿಂದಲೂ ವಿಮುಕ್ತಿಗೊಳಿಸುತ್ತೇನೆ ಎನ್ನುತ್ತಾ ಆತನನ್ನು ಕೇವಲ ತನ್ನ  ಆಜ್ಞಾನಿಷ್ಠನನ್ನಾಗಿಸಿಕೊಳ್ಳುತ್ತಾನೆ.

ಪರ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ, ಗುಣವಿಲ್ಲದ ತನ್ನ ಧರ್ಮವೇ ಶ್ರೇಷ್ಠ ಮತ್ತು ಅದರಲ್ಲಿಯೇ ಸಾಯುವುದೂ ಶ್ರೇಯಸ್ಕರ ಎಂಬ ಉಲ್ಲೇಖಗಳನ್ನು ಮತಾಂತರ ವಿರೋಧಿಗಳು, ಸಂಘಪರಿವಾರದವರು ಮನನ ಮಾಡಿಕೊಂಡರೆ ನಡೆಯುತ್ತಿರುವ ದೊಂಬಿ, ಘರ್ಷಣೆಗಳು ತಕ್ಕ ಮಟ್ಟಿಗಾದರೂ ಕಡಿಮೆಯಾಗಬಹುದು.

ಮಾತಿನ ಮೋಡಿಯಿಂದ ಕೃಷ್ಣನು ಮೂಢ ನಂಬಿಕೆಯನ್ನೇ ಅರ್ಜುನನಲ್ಲಿ ಸೃಷ್ಠಿಸುತ್ತಾನೆ. ಒಟ್ಟಿನಲ್ಲಿ ಭಗವತ್ ಗೀತೆಯು ಮೂಢರ ಅಂಧ ವಿಶ್ವಾಸಕ್ಕೆ ಮಾತ್ರ ಸೀಮಿತವಾಗಿದ್ದು,  ಕುರುಡು ನಂಬಿಕೆಯವರಿಗೆ ಮಾತಿನ ಮೋಡಿಯ ಬಲೆ ಬೀಸುತ್ತದೆ ಎನ್ನುವುದು ಕೃಷ್ಣನು ನೀಡುವ ನಾನಾ ತರದ ವಿವರಣೆಗಳಿಂದ ಸ್ಪಷ್ಟವಾಗುತ್ತದೆ  ಅಲ್ಲದೆ ವಿಚಾರವಂತರಿಗೆ ಯಾವುದೇ ಮಾರ್ಗದರ್ಶನ ನೀಡುವುದಿಲ್ಲ. ಬೇರೊಬ್ಬರು ಆಜ್ಞಾಪಿಸುವ ಕಾರ್ಯವನ್ನು ಜಾರಿ ಮಾಡುವ ಅರ್ಹತೆ ಮಾತ್ರವೇ  ಅವನಿಗಿದ್ದು ಅದಕ್ಕೆ ಫಲವನ್ನು ಅಪೇಕ್ಷಿಸುವ ಅಧಿಕಾರವೂ ಇಲ್ಲ ಎನ್ನುವುದರಲ್ಲಿ ಅಡಗಿದೆ ಗುಲಾಮಗಿರಿಯ ಪರಕಾಷ್ಟೆ.

ಭಗವತ್ ಗೀತೆಯು ರಾಷ್ಟೀಯ ಸ್ವಾತಂತ್ರ ಸಂಗ್ರಾಮದ ರಾಷ್ಟ್ರೀಯ ಐಕ್ಯತೆಯ ಸ್ಪೂರ್ತಿಯ ಸೆಲೆಯಾಗಿ ರಾಷ್ಟ್ರೀಯ ನಾಯಕರು ಅದನ್ನು ಬಳಸಿಕೊಂಡಿದ್ದಾರೆ ಎಂಬ ಗೀತಾ ಸಮರ್ಥಕರ ವಾದವು ಸತ್ಯಕ್ಕೆ ದೂರವಾದುದು ಮತ್ತು ಅಂತಹವರು ರಾಷ್ಟೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪೂರಕವಾಗಿದ್ದ ಕುವೆಂಪು, ರವಿಂದ್ರನಾಥ್ ಠಾಗೂರ್ ಮತ್ತಿತರ ಪ್ರಗತಿಪರರ ಕೃತಿಗಳನ್ನು ಮನನ ಮಾಡದಿರುವುದು ವಿಷಾದನೀಯ.

ಲೋಕಮಾನ್ಯ ತಿಲಕರ ಗೀತಾ ರಹಸ್ಯವೆಂಬ ಉತ್ಕೃಷ್ಟ ಕೃತಿಯು ಗೀತೆಯ ಭೋಧನೆಗಿಂತ ಭಿನ್ನವಾದ ರಾಷ್ಟ್ರೀಯ ಪರಿಕಲ್ಪನೆಯದ್ದಾಗಿದೆ. ಮಹತ್ಮಾಗಾಂಧಿಯವರು ಸ್ವಾತಂತ್ರ್ಯ ಮತ್ತು ಸಮಾನತೆಯ ಹಾಗೂ ಪ್ರತ್ಯೇಕವಾಗಿ ಚಾತುರ್ವಣ್ಯದ ಅಸ್ಪೃಶ್ಯತೆಯನ್ನು ಸಾರಾಸಗಟಾಗಿ ತಿರಸ್ಕರಿಸಿದವರು.  ಇಂದು  ನಮ್ಮ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ  ಸಾರ್ವಜನಿಕ ಭಾವೈಕ್ಯ ಸಾಧನೆ ಮುಖ್ಯವೇ ಹೊರತು ಭಗವತ್ ಗೀತೆಯನ್ನು ಭೋಧಿಸುವಂಥಾ ಪ್ರತ್ಯೇಕತಾವಾದವು ಅಪಾಯಕಾರಿಯಾಗಿದೆ. ಭಗವತ್ ಗೀತೆ ಮಾತ್ರವಲ್ಲ ಇತರ ಎಲ್ಲ ಧರ್ಮ ಗ್ರಂಥಗಳು ಸಹಾ ವೈಜ್ಞಾನಿಕ ವೈಚಾರಿಕತೆಗೆ ಮತ್ತು ಬೆಳವಣಿಗೆಗೆ ಸಲ್ಲದ ಅಂಶಗಳನ್ನೊಳಗೊಂಡಿವೆ ಎಂಬುದನ್ನು ಎಲ್ಲರೂ ಒಪ್ಪಬೇಕಾಗುತ್ತದೆ.

ಒಟ್ಟಿನಲ್ಲಿ ಇದು ಸ್ವಾತಂತ್ರ್ಯ ಅಪಹರಣದ, ವರ್ಣಭೇಧ, ಜಾತಿಭೇಧ, ಇತ್ಯಾದಿಗಳನ್ನು ಪ್ರತಿಪಾದಿಸುವ ಭಾಷೆಯನ್ನುಳ್ಳ, ಸಾಹಿತ್ಯದ ಮೆರಗನ್ನು ನೀಡಲ್ಪಟ್ತಿರುವ ವಿಷ ಲೇಪಿತ ಮಾತ್ರೆಯಾಗಿದೆ. ಇಂತಹ ಭಗವತ್ ಗೀತೆಯನ್ನು ಶಾಲಾಮಕ್ಕಳಿಗೆ ಬೋಧಿಸುವ ಪ್ರಯತ್ನವನ್ನು ದೇಶಪ್ರೇಮಿಗಳು, ಸಮಾನತೆ ಸೌಹಾರ್ದತೆ ಬಯಸುವ ಎಲ್ಲರೂ ವಿರೋಧಿಸಬೇಕು. ನಮ್ಮದು ಜನತಾಂತ್ರಿಕ ಜಾತ್ಯಾತೀತ ಆಡಳಿತೆಯ  ಸಂವಿಧಾನಬದ್ಧ ಪ್ರಭುತ್ವವುಳ್ಳ ದೇಶವಾಗಿದ್ದು, ನಮ್ಮ ಸಂವಿಧಾನದ ಪರಿಪಾಲನೆಯನ್ನು ಅನುಲ್ಲಂಘನೀಯ ನಿಯಮವನ್ನಾಗಿ ಅಂಗೀಕರಿಸಿದೆ. ಇಲ್ಲಿ ರಾಷ್ಟ್ರೀಯ ಐಕ್ಯತೆ ಉಳಿಯಬೇಕಾದರೆ ಧರ್ಮ ಬೋಧನೆ, ಧರ್ಮಾಚರಣೆಗಳನ್ನು ಸಾರ್ವಜನಿಕ ಜೀವನದಿಂದ ಮುಕ್ತಗೊಳಿಸಬೇಕಾಗಿದೆ ಮತ್ತು ವಿದ್ಯಾಲಯಗಳು, ಆರೋಗ್ಯ ಮತ್ತಿತರ ಸಾರ್ವಜನಿಕ ಸೇವಾ ಸಂಸ್ಥೆಗಳು ಎಲ್ಲವೂ ಸಂವಿಧಾನ ಬದ್ಧವಾಗಿ ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಲೇಬೇಕಾಗಿದೆ.