ಮಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಜನವರಿ 29, 2010)
ಜನವರಿ 28, 2010 ರ ಪತ್ರಿಕೆಗಳಲ್ಲಿ ಪ್ರಕಟ ಆಗಿರುವ ಕರ್ನಾಟಕ ಗೃಹ ಸಚಿವ ಮಾನ್ಯ ವಿ ಎಸ್ ಆಚಾರ್ಯರವರ ಹೇಳಿಕೆಯು ಹೊಣೆಗಾರಿಕೆಯಿಂದಲೂ ಪಕ್ಷಪಾತರಹಿತವಾಗಿಯೂ ವರ್ತಿಸುವ ತನ್ನ ಜವಾಬ್ದಾರಿಕೆಯಿಂದ ತಪ್ಪಿಸಿಕೊಳ್ಳುವಂಥಾದ್ದು ಎಂದು ತೋರುತ್ತದೆ. ಈ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಿಗೆ ಸದಾ ರಕ್ಷಣೆ ಮತ್ತು ಕಾನೂನು ಬದ್ಧ ನಿರ್ವಹಣೆಗೆ ಅನುಕೂಲ ಮಾಡಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ. ಗೊಂದಲ ಸೃಷ್ಟಿಸುವ ಒಳ ಇಂಗಿತ ಇರುವವರು ಮಾತನಾಡುವಂತೆ ಗೃಹಸಚಿವರು ಮಾತನಾಡುವುದು ಖೇದಕರವಾಗಿದೆ. ಹಿಂದೂ ಸಮಾಜೋತ್ಸವ ಎಂಬ ಹೆಸರಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮಗಳಿಗೆ ಮೂರೂವರೆ ಸಾವಿರಕ್ಕಿಂತಲೂ ಹೆಚ್ಹು ಪೋಲಿಸು ಸಿಬ್ಬಂದಿಯ ರಕ್ಷಣೆಯನ್ನು ಒದಗಿಸಿದ ಆಚಾರ್ಯರು ಅನ್ಯ ಧರ್ಮಗಳ ಕಾನೂನು ಬದ್ಧ ಪೂಜೆ, ಪ್ರಾರ್ಥನೆ, ಇತ್ಯಾದಿ ಚಟುವಟಿಕೆಗಳಿಗೆ ರಕ್ಷಣೆ ಒದಗಿಸುವ ಹೊಣೆಗಾರಿಕೆ ಮತ್ತು ಶಕ್ತಿ ಸರಕಾರಕ್ಕೆ ಇಲ್ಲ ಎಂದು ಬಹಿರಂಗವಾಗಿ ಹೇಳಿರುವುದು ಖಂಡನಾರ್ಹ. ಪಕ್ಷಪಾತ ಇಲ್ಲದೆ ಎಲ್ಲ ಜನ ವಿಭಾಗಗಳ ಸಾಂವಿಧಾನಿಕ ಕಾನೂನು ಬದ್ದ, ಶಾಂತಿಯುತ ಚಟುವಟಿಕೆಗಳಿಗೆ ರಕ್ಷಣೆ ಕೊಡಲು ಶಕ್ತಿ ಇಲ್ಲದ ಸರಕಾರ ಅಧಿಕಾರದಲ್ಲಿರಲಾಗದು.
ಇಂದು ನಮ್ಮ ದೇಶದ ಮೇಲೆ ನಡೆಯಬಹುದಾದ ಆಕ್ರಮಣ, ಪ್ರಚೋದನೆ, ಉಗ್ರಗಾಮಿ ಕೃತ್ಯಗಳೇ ಮೊದಲಾದವುಗಳ ಹಿನ್ನೆಲೆಯಲ್ಲಿ ಎಲ್ಲಾ ಪ್ರಮುಖ ಸಾರ್ವಜನಿಕ ಸ್ಥಳಗಳಿಗೂ, ಕ್ಷೇತ್ರಗಳಿಗೂ ಅಪಾಯ ಬಾರದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಎಲ್ಲಾ ರಾಜ್ಯ ಸರಕಾರಗಳು ಸಹಾ ತೆಗೆದುಕೊಳ್ಳಬೇಕೆಂದು ಕೇಂದ್ರ ಸರಕಾರವು ಪದೇ ಪದೇ ನೀಡುತ್ತಿರುವ ಎಚ್ಚರಿಕೆ ಮತ್ತು ಆದೇಶವನ್ನು ಆಚಾರ್ಯರು ಗಮನಿಸಬೇಕೆಂದು, ಜಾತಿ, ಮತ, ಧರ್ಮ ಇತ್ಯಾದಿಗಳಿಂದೆಲ್ಲ ಹೊರತಾಗಿ ನಾವು ಸಾಮಾನ್ಯ ಪ್ರಜೆಗಳಾಗಿ ಗೃಹ ಸಚಿವರನ್ನು ಒತ್ತಾಯಿಸುತ್ತೇವೆ. ಅಧಿಕಾರ ವಹಿಸಿ ಕೊಂಡಾಗ ಕೈಗೊಂಡಿರುವ ಪ್ರತಿಜ್ಞೆಗೆ ಭಂಗ ತರುವ ಆಚಾರ್ಯರಂತಹ ಸಚಿವರನ್ನು ಹದ್ದು ಬಸ್ತಿಗೆ ತರಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳನ್ನು ಕೇಳಿಕೊಳ್ಳುತೇವೆ. ಅವರಿಂದಲೂ ಅದು ಅಸಾದ್ಯವಾದರೆ ನ್ಯಾಯಾಲಯದ ಮೊರೆ ಹೋಗಲೂ ಕ್ರಮಕೈಗೊಳ್ಳಬೇಕಾಗಬಹುದೆಂದು ನಮ್ಮ ಜಿಲ್ಲೆಯವರೇ ಆದ ಆಚಾರ್ಯರಿಗೆ ಕಿವಿ ಮಾತು ಹೇಳಲು ಬಯಸುತ್ತೇವೆ.
No comments:
Post a Comment