ಪೇಜಾವರ ಮಠಾಧೀಶರ ಅಸ್ಪೃಶ್ಯತಾ ನಿರ್ಮೂಲನ ಯೋಜನೆಯ ಬಗ್ಗೆ ಬಹಿರಂಗ ಪತ್ರ (ದಿನಾಂಕ ಸೆಪ್ಟೆಂಬರ್ 29, 2010)
ವಿಶ್ವ ಹಿಂದು ಪರಿಷತ್ತಿನ ಸಂಸ್ಥಾಪಕ, ವರಿಷ್ಠ ನಾಯಕ ಹಾಗೂ 'ಹಿಂದುಗಳು ಎಲ್ಲಾ ಒಂದು' ಎಂದು ಪ್ರತಿಪಾದಿಸುತ್ತಿರುವ ಉಡುಪಿ ಅಷ್ಠ ಮಠಗಳಲ್ಲೊಂದಾದ ಪೇಜಾವರ ಶ್ರೀಗಳವರಲ್ಲಿ ನನ್ನ ಒಂದೆರಡು ಪ್ರಶ್ನೆಗಳು.
ಶ್ರೀಗಳು ದೀಕ್ಷೆ ಮತ್ತು ಪೇಜಾವರ ಮಠದ ಅಧಿಕಾರ ವಹಿಸಿಕೊಂಡ ಸಮಯದಿಂದಲೇ ನನಗೆ ಪರಿಚಯ ಉಳ್ಳವರಾಗಿದ್ದಾರೆ. ಎಷ್ಟೋ ಬಾರಿ ನಮ್ಮ ಹಿರಿಯರ ಮನೆಯಲ್ಲಿ ಪಾದ ಪೂಜೆ ಮಾಡಿಸಿ ಕೊಂಡಿದ್ದಾರೆ. ಆಗ ಅವರು ಬಾಲ ಯತಿಗಳಾಗಿದ್ದರು. ಅಂದರೆ ಕಾನೂನು ಪ್ರಕಾರ ಅಪ್ರಾಪ್ತ ವಯಸ್ಕರಾಗಿದ್ದರು. ಬಿಂದ್ರನ್ ವಾಲೆಯ ಖಲಿಸ್ಥಾನ ಬೇಡಿಕೆಯನ್ನೂ, ಭಾರತದ ಸಂವಿಧಾನಕ್ಕಿಂತಲೂ ಧರ್ಮವು ಶ್ರೇಷ್ಠ ಮತ್ತು ಮತ ಧರ್ಮಗಳ ಮೇಲೆ ಸಂವಿಧಾನವು ನಿಯಂತ್ರಣ ಹೊಂದಲಾಗದು ಎಂಬ ಅವನ ಪರಿಕಲ್ಪನೆಯನ್ನೂ ಶ್ರೀಗಳು ಪ್ರೋತ್ಸಾಹಿಸಿ ಸಮರ್ಥಿಸಿ ಅಮೃತ್ ಸರದಲ್ಲಿ ಬಹಿರಂಗ ಭಾಷಣ ಮಾಡಿದ್ದುದ್ದನ್ನು ಪತ್ರಿಕೆಗಳಲ್ಲಿ ಓದಿದ ಬಳಿಕ ನಾವು ಅವರನ್ನು ದೂರವಿಟ್ಟೆವು.
ಭಾರತದ ಮತ ಧರ್ಮ ನಿರಪೇಕ್ಷೆ, ಜಾತಿ ಬೇಧ ರಹಿತ ಚಾತುರ್ವರ್ಣದ ಕಟ್ಟು ಪಾಡು ಇಲ್ಲದ ಹಾಗೂ ಅಸ್ಪೃಶ್ಯತೆ, ದಲಿತ ಶೋಷಣೆ-ಮರ್ದನ ಇತ್ಯಾದಿಗಳಿಗೆ ಅವಕಾಶ ಇಲ್ಲದೆ ಮಾನವರಾಗಿ ಬಾಳುವ ಅವಕಾಶ ಇದೆ ಎಂಬುವುದನ್ನು ಶ್ರೀ ಗಳು ಒಪ್ಪಲಿ ಬಿಡಲಿ, ಈ ದೇಶದ ಸರ್ವ ಧರ್ಮಿಯರೂ ಎಲ್ಲ ಜಾತಿಗಳವರೂ ಮೇಲು ಕೀಳು ಎಂಬ ಭಾವನೆ ಇಲ್ಲದೆ ಸರ್ವ ಸಮಾನತೆ ಯಲ್ಲಿ ಬಾಳುತ್ತಿರುವುದನ್ನು ನಾವು ಬೆಂಬಲಿಸುತ್ತೇವೆ. ಅದಕ್ಕೆ ಶ್ರೀಗಳಂಥವರ ಪಾದ ಯಾತ್ರೆ ಬೇಕಾಗಿಲ್ಲ. ಕೀಳು ಜಾತಿ ಮತ್ತು ದಲಿತರು ಎಂಬ ಶತಮಾನಗಳ ತುಳಿತಕ್ಕೆ ಒಳಗಾದವರಲ್ಲಿ ಒಬ್ಬನ ಸನ್ಯಾಸ ಸ್ವೀಕಾರವೋ, ಮೇಲ್ಜಾತಿಯವರ ಜೊತೆಗೆ ಸಹಭೋಜನವೂ ಅದಕ್ಕೆ ಪರಿಹಾರವಲ್ಲ.
ಕುವೆಂಪು ರವರ ಒಂದು ಕವನವನ್ನು ಶ್ರೀಗಳ ಅವಗಾಹನೆಗೆ ತರಬಯಸುತ್ತೇನೆ:
“ವಿಜಯ ನಗರ ಸಾಮ್ರಾಜ್ಯ ವಾದರೇನು? ಮೊಗಲರಾಳ್ವಿಕೆಯಾದರೇನು? ಬ್ರಿಟಿಷರ ಆಡಳಿತವೇನು? ನಮ್ಮವರ ಕಬ್ಬಿಣದ ಸಲಾಖೆಯ ತಿವಿತ ಹೂ ಗೊಂಚಲೇನು?”
ಶ್ರೀ ಕೃಷ್ಣನು ಬೋಧಿಸಿರುವ, ಶ್ರೀಗಳು ಸಮರ್ಥಿಸುವ ಚಾತುರ್ವರ್ಣ ಶ್ರೇಣಿ ಪದ್ದತಿಯಿಂದ ದಲಿತ ಸಮುದಾಯವು ದಮನ, ತುಳಿತ ಮತ್ತು ತಿವಿತಗಳಿಂದ ಘಾಸಿ ಗೊಂಡಿರುವುದು ನಿಜವಲ್ಲವೇನು? ನಿಜವಾದರೆ ನಿರ್ಮೂಲನೆ ಮಾಡಲು ಶ್ರೀಗಳು ಇನ್ನಾದರೂ ಸನ್ನದ್ಧರಾಗುವರೇ? ಮಠದಲ್ಲಿ ಮಾಡಲಾಗುವ ಶ್ರೀಕೃಷ್ಣನ ಭೋಧನೆಯ ಪ್ರವಚನ ..” ಚಾತುರ್ವಣ್ಯಂ ಮಯಾ ಶ್ರೇಷ್ಠ ಗುಣಕರ್ಮ ವಿಭಾಗಶಃ” ಎಂಬ ದುರ್ಗುಣಗಳ ಭೋಧನೆಗಳನ್ನು ಕೈ ಬಿಟ್ಟು “ಸಹನಾ ವವತು, ಸಹನೌ ಭುನಕ್ತು, ಸಹ ವೀರ್ಯಂ ಕರವಾವಹೈ, ತೇಜಸ್ವೀ ನಾವದೀತ ಮಸ್ತು ಮಾ ಒಂ ಶಾಂತಿಃ, ಶಾಂತಿಃ, ಶಾಂತಿಃ .. ಎಂದರೆ ಎಲ್ಲರೂ ಜೊತೆಗೂಡಿ ನಡೆಯೋಣ, ಜೊತೆಗೂಡಿ ದುಡಿಯೋಣ, ಜೊತೆಗೂಡಿ ಉಂಡು ಜೊತೆಗೂಡಿ ಬಾಳೋಣ, ವಿದ್ವೇಶ ಸಲ್ಲದು, ಎಲ್ಲರೂ ತೇಜಸ್ವಿಗಳಾಗೋಣ, ವಿಶ್ವದಲ್ಲೆಡೆ ಶಾಂತಿ ನೆಲೆಗೊಳ್ಳಲಿ ಎಂದು ಸರ್ವರಿಗೂ ಸಮಾನತೆಯನ್ನು ಭೋಧಿಸುವ ಸರ್ವ ಶ್ರೇಷ್ಠ ಭೋಧನೆ ಗಳು ಉಳ್ಳ ಮಂತ್ರಗಳನ್ನು ಭೋಧಿಸಿ ಆಚರಿಸಲು ಶ್ರೀಗಳು ಒಪ್ಪುವರೇ?
ನಾನು ತಿಳಿದಂತೆ ಒಬ್ಬ ಸಜ್ಜನನಿಗೆ 4 ಧರ್ಮಗಳು ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಾಗಿವೆ. ಅವುಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ.
1ನೇಯದ್ದು ಧರ್ಮ - ಇಲ್ಲಿ ಧರ್ಮವೆಂದರೆ ಸನಾತನ ಧರ್ಮ. ನಮ್ಮ ಸಂವಿಧಾನದ್ದು ಮತ ಧರ್ಮ ನಿರಪೇಕ್ಷಣೀಯ ಬದುಕು.
2ನೇಯದ್ದು ಅರ್ಥ – ಅಂದರೆ ದುಡಿದು ಶೋಷಣೆಗೆ ಎಡೆಕೊಡದೆ ಅರ್ಥವನ್ನು ಸಂಪಾದಿಸಿ ಅದರ ಸದ್ವಿನಿಯೋಗ ಮಾಡುವ ಆರ್ಥಿಕತೆ,
3ನೇಯದ್ದು ಸಂತಾನ – ಅಂದರೆ ಸಮಾಜಗಳ ಅಭಿವೃದ್ಧಿಯ ಮಾರ್ಗವನ್ನು ಅನುಸರಿಸುವುದು.
4ನೇಯದ್ದು ಪುನರ್ಜನ್ಮ – ಅಂದರೆ ಸಂಸಾರ ಎಲ್ಲವುಗಳಿಂದಲೂ ಬಿಡುಗಡೆಗೊಂಡು ಚಿರ ಶಾಂತಿ ಸಾಧಿಸುವುದು.
ಶ್ರೀಗಳಾಗಲಿ, ಈಗೀಗ ಅವತರಿಸುತ್ತಿರುವ ನಾನಾ ಸನ್ಯಾಸಿಗಳಾಗಲಿ ಧರ್ಮ ಎಂದರೆ ಸನಾತನ ಧರ್ಮ ಪಾಲಿಸುವುದರ ಜೊತೆಗೆ ಮೋಕ್ಷವನ್ನು ಸಾಧಿಸುವ ಕುರಿತು ಯೋಚಿಸುವುದು ಮತ್ತು ಭೋಧಿಸುವುದು ಮಾತ್ರವಾಗಿದೆ. ಉಳಿದೆರಡನ್ನು ಅಂದರೆ ಅರ್ಥ ಮತ್ತು ಕಾಮಗಳನ್ನು ನಿಷೇಧಿಸಲಾಗಿದೆ ಅಲ್ಲವೇ? ನಮ್ಮ ಸನ್ಯಾಸಿಗಳಿಂದ, ಮಠಾಧಿಪತಿ, ಪೀಠಾಧಿಪತಿ, ಧರ್ಮಾಧಿಕಾರಿ, ಜಗದ್ಗುರು ಎಂಬಿತ್ಯಾದಿ ಬಿರುದಾಂಕಿತರವರಿಂದೆಲ್ಲ ಮೇಲೆ ಉಲ್ಲೇಖಿಸಿದ ಧರ್ಮ ಭೋಧನೆ ಗಳನ್ನು ನಿರೀಕ್ಷೀಸುತ್ತೇವೆ. ಇದು ಕಾರ್ಯಗತವಾದರೆ ಪಾದ ಯಾತ್ರೆ, ಸಹಯೋಗ, ಸಹಭೋಜನ .. ಇತ್ಯಾದಿಗಳು ಮಹತ್ವ ಕಳೆದುಕೊಂಡು ನೈಜ ಸಮಾನತೆ ಸ್ಥಾಪನೆಯಾಗಲು ಸಹಕಾರಿಯಾಗಬಲ್ಲವು. ಈ ಬಗ್ಗೆ ಗಂಬೀರವಾಗಿ ಚಿಂತಿಸಿ ಇದನ್ನು ಕಾರ್ಯಗತಗೊಳಿಸಲು ಶ್ರೀಗಳಲ್ಲಿ ನನ್ನ ವಿನಮ್ರ ಅರಿಕೆ.
No comments:
Post a Comment