ಪ್ರಸ್ತಾವಿತ ಲೋಕಪಾಲ್ ಮಸೂದೆಯ ಬಗ್ಗೆ ಲೇಖನ (ದಿನಾಂಕ ಜುಲೈ 1, 2011)
ನಮ್ಮ ದೇಶದಲ್ಲಿಂದು ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳಲ್ಲಿಯೂ ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿದೆ. ಅಣ್ಣಾ ಹಜಾರೆಯವರು ಈ ಪ್ರಶ್ನೆಯನ್ನು ಎತ್ತಿಕೊಂಡು ಅದನ್ನು ನಿಗ್ರಹಿಸಲು ಲೋಕಪಾಲ ಪ್ರಾಧಿಕಾರವೊಂದನ್ನು ಸ್ಥಾಪಿಸುವಂತೆ ಆಗ್ರಹಿಸುವ ಚಳುವಳಿಯನ್ನು ಸಂಘಟಿಸಿದರು ಮತ್ತು ಅದಕ್ಕೆ ವ್ಯಾಪಕ ಸಾರ್ವತ್ರಿಕ ಬೆಂಬಲವೂ ವ್ಯಕ್ತವಾಯಿತು. ಚಳುವಳಿಯ ಗಂಭೀರತೆಯನ್ನು ಕಂಡುಕೊಂಡ ಸರಕಾರವು ಹಜಾರೆಯವರೊಳಗೊಂಡು ಸರಕಾರಿ ಮತ್ತು ಗಣ್ಯ ನಾಗರಿಕರ ಒಂದು ಸಮಿತಿಯನ್ನು ರಚಿಸಿತು ಮತ್ತು ಆ ಸಮಿತಿ ರಚಿಸಿದ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಭರವಸೆಯನ್ನೂ ನೀಡಿತು. ಆದರೆ ಈಗ ಆ ಸಮಿತಿಯೊಳಗೆಯೇ ಮುಖ್ಯ ಪ್ರಶ್ನೆಗಳಿಗೆ ಒಮ್ಮತ ಮೂಡದೆ ಮಸೂದೆಯ ಉದ್ದೇಶವೇ ಮೂಲೆಗುಂಪಾಗುವಂತೆ ತೋರುತ್ತದೆ. ವಿಭಿನ್ನ ಹೇಳಿಕೆಗಳು ಕೇಳಿ ಬರುತ್ತಿವೆ. ಅಲ್ಲದೆ ಅಣ್ಣಾ ಹಜಾರೆಯವರು ಸತ್ಯಾಗ್ರಹವನ್ನು ಪುನರಾರಂಭಿಸುವುದು ಖಚಿತವೆಂಬ ಹೇಳಿಕೆಯು ನಮ್ಮೆಲ್ಲರ ದುಗುಡಕ್ಕೆ ಕಾರಣವಾಗಿದೆ. ಹಜಾರೆಯವರು ಆ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದುದನ್ನು ನಾವು ಸ್ವಾಗತಿಸುತ್ತೇವೆ. ಎಡ ಪಕ್ಷಗಳು ಈಗಾಗಲೇ ಅವರಿಗೆ ಬೆಂಬಲವನ್ನು ಸೂಚಿಸಿವೆ.
ಅಣ್ಣಾ ಹಜಾರೆಯವರ ಹಿಂದಿನ ಚಳುವಳಿಯಲ್ಲಿ ರಾಂ ದೇವ್ ಎಂಬ ಯೋಗ ಗುರು ಎಂದುಕೊಳ್ಳುವ ವ್ಯಕ್ತಿಯು ನುಸುಳಿ ಚಳುವಳಿಯ ದಿಕ್ಕುತಪ್ಪಿಸುವ ಸಂಚನ್ನು ರೂಪಿಸಿದ್ದು ಬಹಿರಂಗವಾಯ್ತು. ಚಳುವಳಿಯಲ್ಲಿ ತಮಗೆ ಪ್ರಾಮುಖ್ಯತೆ ದೊರಕದ್ದುದನ್ನು ಕಂಡು ಅವರನ್ನು ಪ್ರಯೋಜಿಸಿದ ವಾಣಿಜ್ಯೋದ್ಯಮಿಗಳು ವಿದೇಶೀ ಬೇಂಕುಗಳಲ್ಲಿ ಜಮೆಯಾಗಿರುವ ಕಪ್ಪು ಹಣದ ವಿಷಯದ ಬಗ್ಗೆ ಪ್ರಾಮುಖ್ಯತೆ ಕೊಟ್ಟು ಅದನ್ನು ಮುಟ್ಟುಗೋಲು ಹಾಕಿ ವಶಪಡಿಸಬೇಕೆಂಬ ಬೇಡಿಕೆಯನ್ನಿಟ್ಟು ಬೇರೆಯೇ ಒಂದು ಚಳುವಳಿಯನ್ನು ಪ್ರಾರಂಭಿಸಿದರು. ಅದರ ಪ್ರಹಸನವನ್ನು ನಾವು ಕಂಡಿದ್ದೇವೆ. ರಾಮ ಲೀಲಾ ಮೈದಾನದಲ್ಲಿ ನೆರೆದಿದ್ದ ಜನರನ್ನು ಚದುರಿಸಲು ಮಧ್ಯರಾತ್ರಿಯಲ್ಲಿ ನಡೆಸಿದ ಪೊಲೀಸ್ ಕಾರ್ಯಾಚರಣೆಯು ಖಂಡನೀಯವಾದರೂ, ಆ ಚಳುವಳಿಯ ಹಿಂದೆ ರೂಪಿತವಾದ ವಿನಾಶಕಾರಿ ಸಂಚು ನಮ್ಮೆಲ್ಲರನ್ನು ದಂಗುಬಡಿಸಿತು. ಆ ಸಂದರ್ಭದಲ್ಲಿ ಅವರು ವರ್ತಿಸಿದ ರೀತಿ, ಹೆಣ್ಣುವೇಷದಲ್ಲಿ ಪಲಾಯನಗೈದ ಅವರ ಹೇಡಿತನ ಮತ್ತು ಅವರನ್ನು ಮುಂದಿರಿಸಿ ಚಳುವಳಿಯನ್ನು ರೂಪಿಸಿದ ವಾಣಿಜ್ಯೋದ್ಯಮಿಗಳ ಸಂಚು ಅತ್ಯಂತ ವಿನಾಶಕಾರಿಯಾಗಿತ್ತು. ರಾಷ್ಟ್ರವ್ಯಾಪಿ ಅರಾಜಕತೆಯನ್ನು ಉಂಟು ಮಾಡಿ ಅಧಿಕಾರವನ್ನು ಕಸಿದುಕೊಳ್ಳುವ ಹುನ್ನಾರ ಅವರಲ್ಲಿ ಅಡಗಿದ್ದದ್ದು ಬಯಲಾಯ್ತು.
ಆದರೆ ರಾಂ ದೇವ್‌ರವರ ಪ್ರಹಸನಕ್ಕೂ ಹಜಾರೆಯವರ ಚಳುವಳಿಗೂ ಬಹಳ ವ್ಯತ್ಯಾಸವಿದೆ. ಅವರಿಬ್ಬರ ಚಳುವಳಿಗಳನ್ನು ತಳಕು ಹಾಕಕೂಡದು. ರಾಂ ದೇವ್‌ರವರು ವಾಣಿಜ್ಯೋದ್ಯಮಿಗಳ ಪ್ರತಿನಿಧಿಯಾದರೆ ಹಜಾರೆಯವರು ಜನಸಾಮಾನ್ಯರ ಪ್ರತಿನಿಧಿಯಾಗಿರುತ್ತಾರೆ. ಲೋಕಪಾಲ್ ಮಸೂದೆಯ ಸಮಿತಿಯಲ್ಲಿನ ಮುಖ್ಯ ಭಿನ್ನಾಭಿಪ್ರಾಯವು ಲೋಕಪಾಲರ ನೇಮಕ, ಅವರಿಗೆ ನೀಡುವ ಅಧಿಕಾರ, ಮತ್ತು ಅವರ ನಿಯಂತ್ರಣದ ಬಗ್ಗೆ ಮತ್ತು ಅವರಿಗೆ ಈಗಿನ ಬೇಡಿಕೆಯಂತೆ ಅಧಿಕಾರ ನೀಡಿದರೆ ಅವರು ಭಸ್ಮಾಸುರನಂತೆ ಅನಿಯಂತ್ರಿತರಾಗಿ ವಿನಾಶಕ್ಕೆ ದಾರಿಯಾದೀತು ಎಂಬ ಭೀತಿ ಕಾಡುವುದು ಸಹಜವಾಗಿದೆ. ಆದಕ್ಕೆ ನಾವು ಒಂದು ಸಲಹೆಯನ್ನು ಸೂಚಿಸಲು ಬಯಸುತ್ತೇವೆ.
ಲೋಕಪಾಲ ಸಂಸ್ಥೆಯನ್ನು ಕೇಂದ್ರ ಮಂತ್ರಿ ಮಂಡಲ, {ಪ್ರಧಾನ ಮಂತ್ರಿ} ವಿರೋಧ ಪಕ್ಷದ ನಾಯಕ ಮತ್ತು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಂಗ ಪೀಠವು ಜೊತೆಗೂಡಿ ರೂಪಿಸತಕ್ಕದ್ದು ಮತ್ತು ಅವರನ್ನು ನೇಮಿಸುವ, ನಿಯಂತ್ರಿಸುವ ಮತ್ತು ಉಚ್ಛಾಟಿಸುವ ಅಧಿಕಾರವೂ ಅವರಿಗೇ ಇರಬೇಕು ಮತ್ತು ಇದನ್ನು ರಾಷ್ಟ್ರಾಧ್ಯಕ್ಷರ ಮೂಲಕ ಕಾರ್ಯಗತಗೊಳಿಸುವಂತಿರಬೇಕು. ರಾಷ್ಟ್ರಾಧ್ಯಕ್ಷರನ್ನು ಹೊರತುಪಡಿಸಿ ಇತರ ಎಲ್ಲಾ ಕೇಂದ್ರ ಸರಕಾರದಿಂದ ಸಂಬಳ, ಗೌರವಧನ ಪಡೆಯುವ ಸರ್ವರಿಗೂ ವಿಚಾರಣೆಗೊಳಪಡಿಸಿ ಸರ್ವೋಚ್ಛ ನ್ಯಾಯಾಲಯದ ಅಡಿಯಲ್ಲಿ ಬರುವ ಪ್ರತ್ಯೇಕ ನ್ಯಾಯಾಲಯದಲ್ಲಿ ದಾವೆಯನ್ನು ಹೂಡುವ ಪೂರ್ಣ ಅಧಿಕಾರ ಲೋಕಪಾಲರಿಗೆ ಇರಬೇಕು. ವಿಚಾರಣೆ ನಡೆಸಿ ಶಿಕ್ಷಿಸುವ ಅಧಿಕಾರ ನ್ಯಾಯಾಲಯಗಳಿಗೆ ಮಾತ್ರ ಇರಬೇಕು. ಇದರಿಂದಾಗಿ ಲೋಕಪಾಲ್ ಸಂಸ್ಥೆಯು ಸಂವಿಧಾನದ ರೂಪು ರೇಷೆಗಳಿಗೆ ಹೊರತಾದುದು ಮತ್ತು ಅನಿಯಂತ್ರಿತವಾದುದು ಎಂಬ ಭೀತಿ ದೂರವಾಗುವುದಲ್ಲದೆ ಅದು ಖಂಡಿತವಾಗಿಯೂ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲುದು ಎಂಬುದಾಗಿ ನಮ್ಮ ನಂಬಿಕೆ.
No comments:
Post a Comment